ಕಲ್ಪ ಮೀಡಿಯಾ ಹೌಸ್
ಕಡೂರು: ಬೈಕ್ ಅಪಘಾತಕ್ಕೀಡಾಗಿ ಇಂದು ನಸುಕಿನಲ್ಲಿ ಕೊನೆಯುಸಿರೆಳೆದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಅಂತ್ಯ ಸಂಸ್ಕಾರ ಅವರ ಹುಟ್ಟೂರು ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಇಂದು ನೆರವೇರಿತು.
ಶನಿವಾರ ಬೈಕ್ ಅಪಘಾತಕ್ಕೀಡಾಗಿದ್ದ ವಿಜಯ್ ಅವರನ್ನು ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರ ಮೆದುಳು ನಿಷ್ಕೀಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ 3:45ರ ವೇಳೆಗೆ ಕೊನೆಯುಸಿರೆಳೆದರು.
ಇಂದು ಬೆಳಗ್ಗೆ 8ಗಂಟೆಯಿಂದ 10ಗಂಟೆಯವರೆಗೂ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಾಗೂ ಮಧ್ಯಾಹ್ನ ವೇಳೆಗೆ ಪಾರ್ಥಿವ ಶರೀರವನ್ನು ಪಂಚನಹಳ್ಳಿಗೆ ತಂದು ಕೆಲ ಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.
ಮಧ್ಯಾಹ್ನ 3:45ರ ವೇಳೆಗೆ ಲಿಂಗಾಯತ ಸಂಪ್ರದಾಯದಂತೆ ಕುಟುಂಬಸ್ಥರು, ಚಿತ್ರರಂಗದ ವಿಜಯ್ ಸ್ನೇಹಿತರು ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ರಾಜ್ಯ ಸರ್ಕಾರದ ಆದೇಶದಂತೆ ಅಂತ್ಯ ಸಂಸ್ಕಾರಕ್ಕೂ ಮುನ್ನ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಪೊಲೀಸರು ಮೂರು ಸುತ್ತು ಕುಶಾಲತೋಪು ಹಾರಿಸಿ ರಾಷ್ಟ್ರಗೀತೆ ನುಡಿಸುವ ಮೂಲಕ ಅಗಲಿದ ನಟನಿಗೆ ಗೌರವ ಸಲ್ಲಿಸಲಾಯಿತು.
ವಿಜಯ್ ಆಪ್ತ ನಟ ನೀನಾಸಂ ಸತೀಶ್ ಹಾಗೂ ಕುಟುಂಬಸ್ಥರು, ಚಿಕ್ಕಮಗಳೂರು ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post