ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಜಗತ್ತಿಗೆ ದ್ವೈತ ಮತ ಸಿದ್ಧಾಂತದ ದಿವ್ಯ ಬೆಳಕನ್ನು ಬೀರಿದ ಶ್ರೀಮನ್ ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆ-ಟಿಪ್ಪಣಿಗಳನ್ನು ಬರೆದ ಮಹಾನ್ ಯತಿ ಶ್ರೀಜಯತೀರ್ಥರ ಮೂಲ ಸ್ಥಾನವಾದ ಮಳಖೇಡದಲ್ಲಿ ಮಾರ್ಚ್ 10, 11 ಮತ್ತು 12ರಂದು ಶ್ರೀಮನ್ ನ್ಯಾಯಸುಧಾ ಮಂಗಳಮಹೋತ್ಸವ ಸಂಪನ್ನಗೊಳ್ಳಲಿದೆ.
ಶ್ರೀಮದ್ ಅಕ್ಷೋಭ್ಯತೀರ್ಥರ, ಶ್ರೀ ಜಯತೀರ್ಥರ, ಶ್ರೀ ವಿದ್ಯಾಮೂರ್ತಿತೀರ್ಥರ, ಶ್ರೀ ವ್ಯಾಸತೀರ್ಥರ, ಶ್ರೀ ರಘುನಾಥತೀರ್ಥರ, ಶ್ರೀ ಸತ್ಯಾನಂದತೀರ್ಥರ ಹಾಗೂ ಶ್ರೀ ರಘುಕಾಂತತೀರ್ಥರ ಪರಮಪಾವನ ಮೂಲವೃಂದಾವನಗಳ ದಿವ್ಯ ಸನ್ನಿಧಾನವೂ ಆಗಿರುವ ಕಾಗಿಣಾ ನದಿ ತೀರದ ಮಳಖೇಡದಲ್ಲಿ ಮೂರು ದಿನಗಳ ಕಾಲ ಹತ್ತಾರು ಪ್ರಮುಖ ಪೀಠಗಳ ಯತಿಗಳ ಸಾನ್ನಿಧ್ಯದಲ್ಲಿ ಸುಧಾ ಮಂಗಳ ಮಹೋತ್ಸವ ವಿಜೃಂಭಿಸಲಿದೆ. ರಾಜ್ಯ, ಹೊರ ರಾಜ್ಯದ ಸಾವಿರಾರು ವಿದ್ವಾಂಸರು ಹಾಜರಿದ್ದು ಧನ್ಯತೆ ಮೆರೆಯಲಿದ್ದಾರೆ.
‘ಸುಧೆ ಉದಿಸಿದ ಕಡಲಿಗೊಂದು ಸುಧೆಯ ಬಿಂದು ಸಮರ್ಪಣೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಪರಮ ಪವಿತ್ರವಾದ ಧಾರ್ಮಿಕ ಸಮಾರಂಭ ಸಂಪನ್ನಗೊಳ್ಳಲಿರುವುದು ಅಹೋಭಾಗ್ಯ.
Also Read: ಸಜ್ಜನ ರಾಜಕಾರಣಿ, ಎಂಎಲ್’ಸಿ ಡಿ.ಎಸ್. ಅರುಣ್’ಗೆ ಬೆದರಿಕೆ: ದೂರು ದಾಖಲು
ಸಾನ್ನಿಧ್ಯ ವಹಿಸಲಿರುವ ಪೀಠಾಧೀಶರು
ಕೂಡಲಿ ಆರ್ಯ ಅಕ್ಷೋಭ್ಯತೀರ್ಥಮಠದ ಶ್ರೀ ರಘುವಿಜಯತೀರ್ಥ ಸ್ವಾಮೀಜಿ, ಮಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯನಿಧಿತೀರ್ಥರು, ಶ್ರೀವಿದ್ಯಾಧೀಶತೀರ್ಥರು ಪಲಿಮಾರು ಮಠ, ಶ್ರೀ ವಿಶ್ವಪ್ರಸನ್ನತೀರ್ಥರು ಪೇಜಾವರ ಮಠ, ಶ್ರೀ ವಿದ್ಯೇಶತೀರ್ಥರು ಭಂಡಾರ ಕೇರಿ ಮಠ, ಶ್ರೀ ವಿದ್ಯಾವಲ್ಲಭ ತೀರ್ಥರು ಕಾಣಿಯೂರು ಮಠ, ಶ್ರೀ ವಿದ್ಯಾಪ್ರಸನ್ನತೀರ್ಥರು ಸುಬ್ರಹ್ಮಣ್ಯ ಮಠ, ಶ್ರೀ ಈಶ ಪ್ರಿಯತೀರ್ಥರು ಅದಮಾರು ಮಠ, ಶ್ರೀ ರಘು ವರೇಂದ್ರತೀರ್ಥರು ಭೀಮನಕಟ್ಟೆ ಮಠ, ಶ್ರೀ ವಿದ್ಯಾರಾಜೇಶ್ವರ ತೀರ್ಥರು ಪಲಿಮಾರು ಕಿರಿಯ ಯತಿ. ಶ್ರೀ ಲಕ್ಷ್ಮೀಂದ್ರತೀರ್ಥರು ಕುಂದಾಪುರ ವ್ಯಾಸರಾಜಮಠ, ಶ್ರೀ ವಿದ್ಯಾಶ್ರೀಷ ತೀರ್ಥರು ಸೋಸಲೆ ವ್ಯಾಸರಾಜಮಠ, ಶ್ರೀ ಸುವಿದ್ಯೇಂದ್ರತೀರ್ಥರು, ಬೆಂಗಳೂರು.
ನವ- ಯುವ ವಿದ್ವಾಂಸರಿಂದ ಸುಧಾ ಗ್ರಂಥದ ವ್ಯಾಖ್ಯಾನ, ಪಂಡಿತರಿಂದ ಅದಕ್ಕೆ ಮೆಚ್ಚುಗೆ, ಗುರುಗಳಿಂದ ಉತ್ತೇಜನ- ಇವೆಲ್ಲವನ್ನು ಸಮೃದ್ಧವಾಗಿ ಆಲಿಸುವುದು, ಅನುಭವಿಸುವುದು, ಅಂತರ್ಗತ ಮಾಡಿಕೊಳ್ಳುವುದು. ತನ್ಮೂಲಕ ಆತ್ಮಾನಂದ ಅನುಭವಿಸುವುದೇ ಒಂದು ಅಹೋಭಾಗ್ಯ.
| ಶ್ರೀ ರಘುವಿಜಯ ತೀರ್ಥ ಸ್ವಾಮೀಜಿ
ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಹಾಸಂಸ್ಥಾನ
ಮೂರು ದಿನ ವೈವಿಧ್ಯಮಯ ಚಟುವಟಿಕೆಗಳು
ಮೂರು ದಿನಗಳ ಕಾಲವೂ ಬೆಳಗಿನಿಂದ ರಾತ್ರಿವರೆಗೆ ವೈವಿಧ್ಯಮಯ ಚಟುವಟಿಕೆಗಳು ನೆರವೇರಲು ವೇದಿಕೆ ಈಗಾಗಲೇ ಸಿದ್ಧವಾಗಿದೆ. ಬೆಳಗಿನ ಅವಧಿಯಲ್ಲಿ ಶ್ರೀಶ್ರೀಗಳಿಂದ ಸಂಸ್ಥಾನ ಮಹಾಪೂಜೆ, ವಿದ್ಯಾರ್ಥಿಗಳಿಂದ ಸುಧಾನುವಾದ, ವಿಚಾರಗೋಷ್ಠಿ, ತೀರ್ಥಪ್ರಸಾದ, ಸಂಜೆ ವಿದ್ವಾಂಸರ ಉಪನ್ಯಾಸ, ವಿವಿಧ ಮಠಾಧೀಶರ ಅಮೃತ ಸಂದೇಶಗಳು, ನಾಡಿನ ಖ್ಯಾತ ಸಂಗೀತ ವಿದ್ವಾಂಸರಿಂದ ದೇವರ ನಾಮದ ವಿಶೇಷ ಗಾಯನದ ಸುಧೆಯೂ ಹರಿಯಲಿದೆ.
ಬನ್ನಿ ಭಕ್ತರೇ… ಪವಿತ್ರವಾದ ಕಾಗಿಣಾ ನದಿ ತೀರದಲ್ಲಿ ಸುಧಾ ಅಲೆಗಳ ಬಿಂದುಗಳಲ್ಲಿ ಮಿಂದು ಪಾವನರಾಗೋಣ. ಆ ಮೂಲಕ ಭಾರತೀಯ ಸನಾತನ ಪರಂಪರೆಗೆ ನಾವೆಲ್ಲರೂ ಸಾಕ್ಷೀಭೂತರಾಗೋಣ.
ಸುಧಾ ಪಂಡಿತರಾಗಲಿರುವವರು
ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದಲ್ಲಿ ಗುರುಕುಲ ವಾಸ ಪದ್ಧತಿಯಲ್ಲಿ ದಶಕಗಳ ಕಾಲ ವೇದ ಶಾಸ್ತ್ರಗಳನ್ನು ಅಧ್ಯಯನ ಮಾಡಿ, ಶ್ರೀ ಸತ್ಯಾತ್ಮ ತೀರ್ಥರಲ್ಲಿ ಎರಡು ವರ್ಷಗಳ ಕಾಲ ಸುಧಾ ಗ್ರಂಥದ ಪಾಠಗಳನ್ನು ಕೇಳಿ, ಈಗಾಗಲೇ ವಿದ್ವಜ್ಜನರ ಸಮ್ಮುಖ ಪರೀಕ್ಷೆಯನ್ನು ಎದುರಿಸಿ ಉತ್ತಮೋತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುವ ಯುವ ವಿದ್ವಾಂಸರು ಈ ಮಂಗಳ ಮಹೋತ್ಸವದಲ್ಲಿ ‘ಸುಧಾ ಪಂಡಿತರು’ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.
ಅವರುಗಳೆಂದರೆ, ದೇವೇಂದ್ರ ಶರ್ಮಾ ಗೋದಾವರಿ, ಪವನ, ಪ್ರಭಂಜನ ವಿದ್ಯಾಪತಿ, ಪ್ರಹ್ಲಾದ ಮಣ್ಣೂರು, ಪುರುಷೋತ್ತಮ, ಪೂರ್ಣಪ್ರಜ್ಞ, ಪೂರ್ಣಪ್ರಜ್ಞ, ಮಕರಂದ ಕುಲಕರ್ಣಿ, ವಿದ್ಯಾಧೀಶ ಕುಲಕರ್ಣಿ, ಶ್ರೀಕಾಂತ ಮಾಳೂರ, ಶ್ರೀಹರಿ ಗುಡಿ, ಸತ್ಯಪ್ರಮೋದ, ಸರ್ವಜ್ಞ, ಸುಮೇಧ ಕಲ್ಲಾಪುರ, ಹೃಷೀಕೇಶ, ಭಾರತೀರಮಣ, ರಘೂತ್ತಮ, ಕೇಶವ, ರಾಘವೇಂದ್ರ. ಹೃಷಿಕೇಶ ಜೋಷಿ.
Also Read: ಶಿವಮೊಗ್ಗ: ವಿನೋಬನಗರದಲ್ಲಿ ಹೊತ್ತಿ ಉರಿದ ಪುಸ್ತಕದ ಅಂಗಡಿ
ಶ್ರೀಮನ್ ನ್ಯಾಯಸುಧಾ ಎಂದರೇನು?
(ಶ್ರೀ ಸತ್ಯಾತ್ಮ ತೀರ್ಥರ ವ್ಯಾಖ್ಯಾನ )
ಶ್ರೀಮನ್ ನ್ಯಾಯಸುಧಾ ಗ್ರಂಥ ಎಂದರೇನು, ಅದರ ಮಹತ್ವವೇನು ಎಂದು ಶ್ರೀಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ತಮ್ಮದೇ ಆದ ಶೈಲಿಯಲ್ಲಿ ಸರಳ ಮತ್ತು ಸುಂದರವಾಗಿ ನಿರೂಪಿಸಿ ಮಾಧ್ಯಮಗಳಿಗೆ ನೀಡಿದ್ದಾರೆ. ಅದರ ಪೂರ್ಣಪಾಠ ಇಂತಿದೆ….
‘ಭಗವಾನ್ ವೇದವ್ಯಾಸ ದೇವರು ವೇದಾದಿ ಸಕಲ ಸತ್‌ಶಾಸ್ತ್ರಗಳ ನಿರ್ಣಯವನ್ನು ಮಾಡುವುದಕ್ಕೋಸ್ಕರ ಬ್ರಹ್ಮಸೂತ್ರಗಳ ರಚನೆಯನ್ನು ಮಾಡಿದ್ದಾರೆ. ಅಂತಹಾ ಬ್ರಹ್ಮಸೂತ್ರಗಳಿಗೆ ಶ್ರೀಮನ್ ಮಧ್ವಾಚಾರ್ಯರು ಅಣುವ್ಯಾಖ್ಯಾನ ಎಂಬ ಗ್ರಂಥವನ್ನು ರಚನೆ ಮಾಡಿ ಅದರ ವಿವರಣೆಯನ್ನು ಮಾಡಿದ್ದಾರೆ. ಆ ಅಣುವ್ಯಾಖ್ಯಾನ ಎಂಬ ಗ್ರಂಥದ ವಿವರಣೆಯನ್ನು ಮಾಡುವುದಕ್ಕೋಸ್ಕರ ಶ್ರೀಮದ್ ಟೀಕಾಕೃತ್ಪಾದರು (ಶ್ರೀಶ್ರೀ ಜಯತೀರ್ಥರು) ‘ಶ್ರೀಮನ್ ನ್ಯಾಯಸುಧಾ’ ಎಂಬ ಗ್ರಂಥವನ್ನು ರಚನೆ ಮಾಡಿದರು.
ಬ್ರಹ್ಮಸೂತ್ರ, ಅಣು ವ್ಯಾಖ್ಯಾನ ಮತ್ತು ‘ಶ್ರೀಮನ್ ನ್ಯಾಯಸುಧಾ’ ಎಂಬ ಗ್ರಂಥಗಳಲ್ಲಿ ಎಲ್ಲ ತತ್ವಗಳ ನಿರ್ಣಯಗಳನ್ನು ತಿಳಿಸಿದ್ದಾರೆ. ದೇವರ ಮಹಿಮೆ, ನಾವು ಕಾಣುವ ಈ ಸಮಸ್ತ ಜಗತ್ತನ್ನು ಸೃಷ್ಟಿ ಮಾಡಿದ ಆ ಭಗವಂತನ ಮಹಿಮೆ ಏನು, ಆ ದೇವರು ನಮಗೆ ಮಾಡುವ ಉಪಕಾರವೇನು?, ಯಾವ ರೀತಿ ನಾವು ಆ ಭಗವಂತನನ್ನು ತಿಳಿಯಬೇಕು, ಯಾವ ಸಾಧನೆಯನ್ನು ಮಾಡಿದರೆ ನಾವು ಆ ಭಗವಂತನನ್ನು ಹೊಂದುವುದಕ್ಕೆ ಸಾಧ್ಯ, ಇವುಗಳ ಬಗ್ಗೆ ಚೆನ್ನಾಗಿ ನಿರೂಪಣೆ ಮಾಡಿ ನಮಗೆ ಉಪದೇಶ ಮಾಡಿದ್ದಾರೆ. ಅನೇಕಾನೇಕ ದಾರ್ಶನಿಕರು ಈ ವಿಚಾರಗಳ ಬಗ್ಗೆ ತಮ್ಮ ತಮ್ಮ ಚಿಂತನೆ ಮತ್ತು ಅಭಿಪ್ರಾಯಗಳನ್ನು ಮಂಡಿಸಿದ್ದರೂ ಕೂಡ ಅವುಗಳೆಲ್ಲವನ್ನೂ ಸಮಗ್ರವಾಗಿ ವಿಮರ್ಶೆ ಮಾಡಿ, ತತ್ವದ ನಿರ್ಣಯವನ್ನು ‘ಶ್ರೀಮನ್ ನ್ಯಾಯಸುಧಾ’ ಗ್ರಂಥದ ಮೂಲಕ ಮಾಡಿಕೊಟ್ಟವರು ಶ್ರೀಮನ್ ಜಯತೀರ್ಥರು.
Also Read: ಎನ್‌ಇಎಸ್ ಅಮೃತ ಮಹೋತ್ಸವ ಸಂಭ್ರಮ: ಮಾ.10ರಂದು ವಿಶೇಷ ಅಂಚೆ ಲಕೋಟೆ ಬಿಡುಗಡೆ
ಆ ನ್ಯಾಯಸುಧಾ ಎಂಬ ಗ್ರಂಥ ಭಗವಂತನ ಮಹಿಮೆಯನ್ನು ನಿರ್ಣಯಿಸಲು ಹೊರಟಿದ್ದರಿಂದ ಆ ಗ್ರಂಥದ ಅಧ್ಯಯನವನ್ನು ಮಾಡಿದವರಿಗೆಲ್ಲಾ ಪರಮ ಮಂಗಳವೇ ಉಂಟಾಗುತ್ತದೆ. ಲೌಕಿಕ, ಅಕೌಕಿಕ ಮತ್ತು ಎಲ್ಲ ವಿಧವಾದ ಸಂಪತ್ತನ್ನೂ ನೀಡುವ ಗ್ರಂಥ. ಎಲ್ಲ ಕಷ್ಟಗಳನ್ನೂ ನಿವಾರಣೆ ಮಾಡುವ ಗ್ರಂಥ. ಉತ್ತಮೋತ್ತಮ ಸ್ಥಾನವನ್ನು ನೀಡುವ ಗ್ರಂಥ ‘ಶ್ರೀಮನ್ ನ್ಯಾಯಸುಧಾ’. ತತ್ವಜ್ಞಾನ ಕ್ಷೇತ್ರಕ್ಕೆ ಇದು ಬಹುದೊಡ್ಡ ಕೊಡುಗೆ. ವಿವಿಧ ದಾರ್ಶನಿಕರು ಮಂಡಿಸಿದ ವಿವಿಧ ವಿಚಾರಗಳ ಬಗ್ಗೆ ಕೂಲಂಕಷವಾಗಿ ಆಲೋಚನೆ ಮಾಡಿ ‘ಇದಮಿತ್ಥಂ’ ಎಂಬುದಾಗಿ ನಿರ್ಣಯವನ್ನು ಹೇಳಿದ ಗ್ರಂಥವೇ ‘ಶ್ರೀಮನ್ ನ್ಯಾಯಸುಧಾ’.
ಅಂತಹ ಗ್ರಂಥದ ಬಗ್ಗೆ ಸಮಗ್ರ ಅಧ್ಯಯನ ಮಾಡಿ, ಅದರ ಮಂಗಳ ಮಹೋತ್ಸವವನ್ನು ಶ್ರೀಶ್ರೀ ಜಯತೀರ್ಥರ ಮೂಲ ವೃಂದಾವನ ಸ್ಥಳವಾದ ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ ಸಂಪನ್ನಗೊಳ್ಳುತ್ತಿರುವುದು ಯೋಗಗಳಲ್ಲಿ ಮಹಾಯೋಗ, ಭಾಗ್ಯಗಳಲ್ಲಿ ಮಹಾಭಾಗ್ಯ. ಈ ಸಂದರ್ಭದಲ್ಲಿ ಅನೇಕ ಪೀಠಾಧಿಪತಿಗಳು, ನೂರಾರು ವಿದ್ವಾಂಸರು ಶ್ರೀ ಜಯತೀರ್ಥರ ಮೂಲ ವೃಂದಾವನ ಕ್ಷೇತ್ರದಲ್ಲಿ ಈ ಮಂಗಳ ಕಾರ್ಯಕ್ರಮಕ್ಕೆ ಶೋಭೆಯನ್ನು ತರುವವರಿದ್ದಾರೆ. ಭಕ್ತರೆಲ್ಲರೂ ಮಾರ್ಚ್ 10, 11 ಮತ್ತು 12ರಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕು. ಶ್ರೀ ಕೃಷ್ಣಾರ್ಪಣ ಮಸ್ತು.
ಸುಧಾಮೃತ ಪ್ರಿಯ ಯತಿ:
ಧರ್ಮ, ದಾನ, ಔದಾರ್ಯ, ಶ್ರದ್ಧೆ, ಸದಾಚಾರ, ಚಾರಿತ್ರೃ, ಪಾಠ ಪ್ರವಚನ, ಪ್ರಖರ ಉಪನ್ಯಾಸ – ಈ ಶಬ್ದಗಳಿಗೆ ಚೈತನ್ಯ ತುಂಬಿದ ತರುಣ ಸನ್ಯಾಸಿ ಶ್ರೀಶ್ರೀಸತ್ಯಾತ್ಮತೀರ್ಥರು. ಪ್ರತಿಭೆ-ಪಾಂಡಿತ್ಯಕ್ಕೆ ಪರ್ಯಾಯ ಹೆಸರು. ಇವರು ಹೋದಲ್ಲೆಲ್ಲಾ ಭಕ್ತಿಯ ಮಹಾಪೂರ. ಬಂದಲ್ಲೆಲ್ಲ ಜನಜಾತ್ರೆ. ಹಿಂದೆ ಜನರ ಹಿಂಡು, ಮುಂದೆ ವಿದ್ಯಾರ್ಥಿಗಳ ದಂಡು. ಎಲ್ಲ ಸಭೆಗಳಲ್ಲಿ ಜಾತಿ, ಮತ ಮರೆತು ಮಾತು ಆಲಿಸುವ ಶ್ರೋತೃವರ್ಗ. ಜೀವನದಲ್ಲಿ ಪರಿವರ್ತನೆ ತರುವ ಉಪದೇಶ. ಎಲ್ಲರ ಹೃದಯಕ್ಕೆ ಮುಟ್ಟುವ ಸಂದೇಶ. ಗುರುವಾಗಿ ನೀಡುವ ನಿಶ್ಚಿತ ಆದೇಶ. ಮಾನವತೆಯನ್ನು ಅರಳಿಸುವ ಮಾತಿನ ಕಂಪು. ಎಲ್ಲರ ಬದುಕನ್ನು ಹಸನಗೊಳಿಸುವ ಕಳಕಳಿ. ಮನುಕುಲವನ್ನು ಮೇಲಕ್ಕೆತ್ತುವ ಹಂಬಲವಿರುವ ಸಂತರಾದ ಇವರು ಸದಾ ಶ್ರೀ ಜಯತೀರ್ಥ ಮಹಾಮುನಿಗಳ ಸುಧಾಗ್ರಂಥ ಪಾಠ ಪ್ರವಚನ ಪ್ರಿಯರು. ಶಿಷ್ಯರಿಗೆ ಇದನ್ನು ನಿತ್ಯವೂ ಬೋಧಿಸುವುದು ಎಂದರೆ ಇವರಿಗೆ ಪಂಚ ಪ್ರಾಣ.
ತೀರ್ಥರೆಂದರೆ ಶ್ರೀ ಸತ್ಯಾತ್ಮತೀರ್ಥರಯ್ಯಾ …
ಅಸ್ಖಲಿತ ಮಾತುಗಾರಿಕೆ, ಪರಿಪಕ್ವ ಭಾಷಾಸಂಪತ್ತು, ತಿಳಿಯಾದ ನಿರೂಪಣೆ, ವಿಚಾರಗಳಲ್ಲಿ ಹೊಸತನ, ಸಂದರ್ಭ ಸೂಕ್ತತೆ, ಆಧುನಿಕ ವಿಜ್ಞಾನ, ವಿಚಾರಗಳ ಅಧಿಕೃತ ವಿಮರ್ಶೆ, ಮಾತಿನ ಮೋಡಿ ವಿಶ್ವಕ್ಕೆ ವಿಸ್ಮಯವಾಗಿವೆ. ಭಕ್ತಿಯ ಪರಿಸರ, ಅಧ್ಯಾತ್ಮಿಕ ಹಿನ್ನೆಲೆ, ಶಾಸನದ ಇತಿಮಿತಿಯಲ್ಲಿ ಸಾಮಾಜಿಕ ಪರಿವರ್ತನೆ ಸಾಧಿಸುವ ಉತ್ಕಟ ಬಯಕೆ ಈ ತರುಣ ಸನ್ಯಾಸಿಗಿದೆ. ಸಂಪ್ರದಾಯ ನಿಷ್ಠರಾದರೂ ಸಮಕಾಲೀನ ಸಮಾಜಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ವೇದ-ಪುರಾಣ- ಉಪ ನಿಷತ್ತುಗಳ ಸಾರಸಂಗ್ರಹವನ್ನು ಹದವಾಗಿ ಉಣಬಡಿಸುವ ಶ್ರೀಸತ್ಯಾತ್ಮ ತೀರ್ಥರ ವಾಣಿಗೆ ಮುಗಿಬೀಳದವರೇ ಇಲ್ಲ. ಹಾಗಾಗಿಯೇ ಭಕ್ತ ಜನಮಾನಸದಲ್ಲಿ ಅರಳಿ ಅಭಿಮಾನಿಗಳ ಬಾಯಲ್ಲಿ ನಿಂತ ಮಾತು ಎಂದರೆ ‘ತೀರ್ಥರೆಂದರೆ ಶ್ರೀ ಸತ್ಯಾತ್ಮತೀರ್ಥರಯ್ಯಾ…’
ವಿಶೇಷ ಲೇಖನ: ವಾರುಣಿ ಹೊನ್ನಾಳಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post