ಬೆಂಗಳೂರು: ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯ ಅನನ್ಯ ಸಾಧಕಿ ಕಲಾಕಸ್ತೂರಿ ಮೀರಾಕುಮಾರ್ ಅವರ ಸಾಧನೆ ಸಮಾಜಕ್ಕೆ ಮಾದರಿ ಎಂದು ಮಾಜಿ ಸಚಿವೆ ರಾಣಿ ಸತೀಶ್ ಹೇಳಿದರು.
ಆರ್’ಎಂ’ವಿ ಎರಡನೆಯ ಹಂತದಲ್ಲಿ ಶ್ರೀವಿಶ್ವಂಭರ ವಿಶ್ವಕಲಾ ಅಕಾಡೆಮಿ ಆಯೋಜಿಸಿದ್ದ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರಚಿಸಿರುವ ಡಾ. ಮೀರಾಕುಮಾರ್ ಕಲಾಕಥನ ಕಲಾ ಬದುಕಿಗೆ ಸುವರ್ಣ ಸಂಭ್ರಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಶ್ಚಾತ್ಯ ಅಲೆಗಳ ಪ್ರಭಾವ ವಲಯದಿಂದ ಹೊರಕ್ಕೆ ನಿಂತು ತಾಯಿ ನಾಡಿನ ಮಣ್ಣಿನ ವಾಸನೆಯಿಂದ ಹಳೆಯ ರೂಪಗಳಲ್ಲೆ ಹೊಸತನದ ಹುಡುಕಾಟದಲ್ಲಿ ತೊಡಗಿ ಉತ್ಸಾಹದಿಂದ ಕಲಾಸೇವೆ ಮಾಡುತ್ತಿರುವ ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯ ಅನನ್ಯ ಸಾಧಕಿ ಕಲಾಕಸ್ತೂರಿ ಮೀರಾಕುಮಾರ್ ಅವರ ಸಾಧನೆ ಅಪೂರ್ವವಾದುದು ಎಂದರು.
ಹಿರಿಯ ಚಿತ್ರ ಕಲಾವಿದ ಕುಂಚ ಬ್ರಹ್ಮ ಡಾ.ಬಿ.ಕೆ.ಎಸ್. ವರ್ಮ ಮಾತನಾಡಿ, ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ನೈಪುಣ್ಯತೆ ಪಡೆದಿರುವ ಇವರ ಕಲಾಕೃತಿಗಳು ಜನಮನವನ್ನು ಸೂರೆಗೊಂಡಿವೆ. ಅಪಾರ ಜೀವನ ಪ್ರೀತಿ ಮತ್ತು ಆಧ್ಯಾತ್ಮಿಕ ಚಿಂತನದಿಂದ ಮೂಡಿ ಬಂದ ಇವರ ಕಲಾಕೃತಿಗಳು ಕಲಾಪ್ರಪಂಚಕ್ಕೆ ನೀಡಿದ ಕೊಡುಗೆ ಅಪಾರ ಎಂದರು.
ತಮ್ಮ ಚಿತ್ರಗಳಲ್ಲಿ ಅಧ್ಯಾತ್ಮದ ಧ್ವನಿಯನ್ನು ಸಮರ್ಥವಾಗಿ ಚಿತ್ರಿಸುವ ಇವರ ಕಲಾಕೃತಿಗಳೆ ಅಲ್ಲದೆ ಇವರ ಮನೆಯು ಕೂಡ ಒಂದು ಆರ್ಟ್ ಗ್ಯಾಲರಿಯಂತಿದೆ. ಇವರ ಕೃತಿಗಳಲ್ಲಿ ಪ್ರೌಢತೆ, ದೈವಿಕತೆ ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ಚಿತ್ರಕಲೆಯಲ್ಲಿ ತಾನ್ನಿನ್ನೂ ವಿದ್ಯಾರ್ಥಿ ಎಂಬ ವಿನಮ್ರ ಭಾವ ಇವರ ಅಧ್ಯಯನಾಸಕ್ತಿಯನ್ನು ತಿಳಿಯಪಡಿಸುತ್ತದೆ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದ ಲೇಖಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಶಶಿಧರ ಕೋಟೆ, ರಂಗಕರ್ಮಿ ಡಾ.ಕೆಂಚನೂರು ಶಂಕರ್, ಸಾಂಸ್ಕೃತಿಕ ಸಂಘಟಕ ನೀಲಕಂಠ ಅಡಿಗ ಇದ್ದರು. ಕಲಾವಿದ ಗೋವಿಂದರಾಜು ಜೀಯರ್ ಅವರಿಗೆ ಗುರುವಂದನೆ ಅರ್ಪಿಸಲಾಯಿತು . ಅನನ್ಯ ಕಿಣಿ ಪ್ರಾರ್ಥಿಸಿ, ಕನ್ನಡ ಪ್ರಾಧ್ಯಾಪಕಿ ಕೆ.ವಿ. ಪದ್ಮಾವತಿ ನಿರೂಪಿಸಿದರು.
Discussion about this post