ಕಲ್ಪ ಮೀಡಿಯಾ ಹೌಸ್ | ರಘುರಾಮ, ಶಿವಮೊಗ್ಗ |
ರಾಜಧಾನಿ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಎರಡನೇ ಹಂತದ ವಿಕ್ರಮ ನಗರದಲ್ಲಿರುವ ನಟನ ತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆ ಕೊಡಮಾಡುತ್ತಿರುವ ಪ್ರತಿಷ್ಠಿತ ‘ಕಲಾಶ್ರಯ’ ಪ್ರಶಸ್ತಿಗೆ ಮಲೆನಾಡಿನ ತವರು ಶಿವಮೊಗ್ಗದ ಹಿರಿಯ ಸಂಗೀತ ಸಂಘಟಕ, ಕಲಾ ಕೈಂಕರ್ಯ ಧುರೀಣ ಸುಬ್ರಮಣ್ಯ ಶಾಸ್ತ್ರಿ ಅವರು ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಜಯನಗರ 8ನೇ ಬಡಾವಣೆಯ ಶ್ರೀ ಜಯರಾಮ ಸೇವಾ ಮಂಡಳಿ ಸಭಾಂಗಣದಲ್ಲಿ ಜು. 7ರ ಸಂಜೆ 6ಕ್ಕೆ ಹಮ್ಮಿಕೊಂಡಿರುವ ನಟನ ತರಂಗಿಣಿ-ಸಂಸ್ಥೆ 20ನೇ ವರ್ಷದ ಸಂಭ್ರಮೋತ್ಸವದಲ್ಲಿ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುವುದು ಎಂದು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ, ನಾಡಿನ ಹಿರಿಯ ವಿದುಷಿ ಡಾ.ವೈ.ಜಿ. ಪರಿಮಳಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿವಿಧ ಸಂಘ, ಸಂಸ್ಥೆಗಳೊಂದಿಗೆ ಸುಮಧುರ ಬಾಂಧವ್ಯ ಹೊಂದಿರುವವರು. ಗಾಯನ, ವಾದನ ಕಛೇರಿಗಳಿಗೆ ಖುದ್ದು ಹಾಜರಾಗಿ, ಅಂತ್ಯದವರೆಗೂ ಉಪಸ್ಥಿತರಿದ್ದು, ಕಲಾ ಕೈಂಕರ್ಯ ಸಲ್ಲಿಸುವ ವಿಶಾಲ ಮನದವರು. ಗಮಕ ಕಲಾ ಪರಿಷತ್ ಜಿಲ್ಲಾ ಕಾರ್ಯದರ್ಶಿಯಾಗಿಯೂ ಇವರು ಇತ್ತೀಚೆಗೆ ಆಯ್ಕೆಯಾಗಿರುವುದು ಬಹು ವಿಶೇಷ. ಸಂಗೀತ ಕಛೇರಿಗಳ ಆಯೋಜನೆ, ಸಂಘಟನೆ ಮತ್ತು ಕಲಾ ಪೋಷಣೆ ಮಾಡುವ ಶಾಸ್ತ್ರಿ ಅವರಿಗೆ ಕಲಾಶ್ರಯ ಪ್ರಶಸ್ತಿ ಅರಸಿ ಬಂದಿರುವುದು ಸಂತೋಷದ ವಿಷಯವಾಗಿದೆ.

ಶಾಸ್ತ್ರಿಗಳ ಸೇವೆ ಅನನ್ಯ
ಮಲೆನಾಡಿನ ವಿನಮ್ರ ಮತ್ತು ಹಿರಿಯ ಸಂಗೀತ ಸೇವಕ ಎಚ್.ಆರ್. ಸುಬ್ರಮಣ್ಯ ಶಾಸ್ತ್ರಿ ಅವರು ಮೂಲತಃ ಹೊಸೂಡಿಯವರು.
ತಾತ ಹೊಸೂಡಿ ವೆಂಕಟಶಾಸ್ತ್ರಿಗಳು ವಿದ್ವತ್ತಿನೊಂದಿಗೆ ದಾನಿಗಳಾಗಿಯೂ ಪ್ರಖ್ಯಾತರಾದವರು. ಶಿವಮೊಗ್ಗೆಯ ಪ್ರತಿಷ್ಠಿತ ಕರ್ನಾಟಕ ಸಂಘಕ್ಕೆ ಶತಮಾನದ ಹಿಂದೆಯೇ ಸ್ಥಳದಾನ ಮಾಡಿದವರು. ಅಂಥಾ ವಂಶದಲ್ಲಿ ಜನಿಸಿದ ಸುಬ್ರಮಣ್ಯ ಶಾಸ್ತ್ರಿ ಮೂಲತಃ ಕೃಷಿಕ ಮನೆತನದವರಾದರೂ ವೃತ್ತಿಯಲ್ಲಿ ವ್ಯಾಪಾರ-ಉದ್ದಿಮೆದಾರರು. ಸಂಗೀತ- ಸಾಹಿತ್ಯ ಎಂಬುದು ಅವರ ವಂಶಕ್ಕೇ ಅಂಟಿದ ವಿಶೇಷ ನಂಟು.

ಸಂಗೀತ ಶಿಕ್ಷಣ ವ್ಯಕ್ತಿತ್ವಕ್ಕೆ ಸಂಸ್ಕಾರ ರೂಢಿಸಿ ಬದುಕನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಮನಸ್ಸಿನ ಕಲಾತ್ಮಕ ಭಾಗವನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ. ವ್ಯಕ್ತಿಯ ಭಾವನಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದ ನಡುವೆ ಸಮತೋಲನವನ್ನು ತರುತ್ತದೆ. ಸಂಗೀತವು ಆತ್ಮಕ್ಕೆ ಲಯ, ಮಾಧುರ್ಯ ಮತ್ತು ಸಾಮರಸ್ಯವನ್ನು ತಂದುಕೊಡುತ್ತದೆ. ಸಂಗೀತ ಕಲಿಕೆ ಒಂದು ಸೌಹಾರ್ದ ಮತ್ತು ಸುಂದರ ಸಮಾಜದ ಬೆಳವಣಿಗೆಗೆ ಅತ್ಯಗತ್ಯ. ನಾನು ನಾಟ್ಯ ತರಂಗಿಣಿ – ಕಲಾ ಶಾಲೆಯನ್ನು ಪ್ರಾರಂಭಿಸಲು ಇದೇ ಸ್ಫೂರ್ತಿ. 20 ವರ್ಷದಿಂದ ಭಗವಂತನ ಸೇವೆ ಎಂದೇ ಭಾವಿಸಿ ಸಾವಿರಾರು ಮಕ್ಕಳಿಗೆ ಬೋಧನೆ ಮಾಡಿದ್ದು, ಈ ಕೈಂಕರ್ಯ ನನಗೆ ಧನ್ಯತೆ ನೀಡಿದೆ.
-ವಿದುಷಿ ಪರಿಮಳ, ನಟನ ತರಂಗಿಣಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ
ಬಾಲ್ಯದಲ್ಲಿಯೇ ಸರೋದ್ ವಾದನ ಕಲಿಕೆಗೆ ಒಲವು ತೋರಿದ ಶಾಸ್ತ್ರಿ ಅವರಿಗೆ ಸಂಗೀತವೆಂದರೆ ಪ್ರಾಣ. ವಿವಿಧ ರಾಗ, ತಾಣಗಳ ಬಗ್ಗೆ ಅವರಿಗೆ ಆಳವಾದ ಪ್ರೀತಿ ಇರುವ ಕಾರಣ ಅವರ ಅಂತರಂಗದಲ್ಲಿ ಸಂಗೀತ ಸರಸ್ವತಿಯಂತೆ ಗುಪ್ತಗಾಮಿನಿಯಾಗಿ ಹರಿಯುತ್ತಲೇ ಇದ್ದಾಳೆ. ಕಾನೂನು ಪದವೀಧರರಾದರೂ ಶಾಸ್ತ್ರಿ ಅವರು ಸಂಗೀತಾಸಕ್ತಿ ಬಿಡಲಿಲ್ಲ.

ಕಾಯಂ ಶ್ರೋತೃ
ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಸೇರಿದಂತೆ ಮಲೆನಾಡು, ಕರಾವಳಿ ವ್ಯಾಪ್ತಿಯಲ್ಲಿ ಸಂಗೀತ ಕಚೇರಿ ಎಲ್ಲೇ ನಡೆದರೂ ಅಲ್ಲಿ ಶಾಸ್ತ್ರಿಗಳ ಹಾಜರಾತಿ ಇರಲೇಬೇಕು. ಕಾರ್ಯಕ್ರಮದ ಅಂತ್ಯದವರೆಗೂ ಗಾನ ಸುಧೆ ಸವಿದು ಕಲಾವಿದರನ್ನು ಬೆನ್ನು ತಟ್ಟಿ ಬೆಂಬಲ ನೀಡುವುದು ಶಾಸ್ತ್ರಿಗಳ ಹಿರಿಯಗುಣ.
ತಮ್ಮ ಪರಿಸರದಲ್ಲಿ ಶಾಸ್ತ್ರೀಯ ಸಂಗೀತ ಪಾಲನೆ, ಪೋಷಣೆ ಮಾಡಿ ಕಲೆ ಪಲ್ಲವಿಸಲು ಸ್ಫೂರ್ತಿ ನೀಡುವ ಕ್ರಿಯಾಶೀಲ ವ್ಯಕ್ತಿತ್ವವೇ ಆಗಿರುವ ಶಾಸ್ತ್ರಿ ಯಾವುದೇ ಸನ್ಮಾನ, ಪ್ರಶಸ್ತಿ, ವೇದಿಕೆ ಇತ್ಯಾದಿಗಳ ಹಿಂದೆ ಹೋದವರಲ್ಲ. ನನ್ನನ್ನು ಗೌರವಿಸಿ ಎಂದು ಕೇಳಿದವರೇ ಅಲ್ಲ. ಕಲಾವಿದರಿಗೆ ಮನ್ನಣೆ ಸಿಕ್ಕರೆ ಅದು ತನಗೇ ಸಿಕ್ಕಿತು ಎಂದು ಹಿರಿಹಿರಿ ಹಿಗ್ಗುವ ಹಿರಿಯ ಜೀವ.

ಶ್ರೀನಿವಾಸರಿಗೆ ನಾದಶ್ರೀ ಪ್ರಶಸ್ತಿ
ಮೃದಂಗ ಮತ್ತು ತಬಲಾ ತಯಾರಿಕೆಯಲ್ಲಿ ಅಗ್ರಗಣ್ಯರಾದ ಬೆಂಗಳೂರಿನ ವಿದ್ವಾನ್ ಶ್ರೀನಿವಾಸ ಅನಂತ ರಾಮಯ್ಯ ಅವರಿಗೆ ಇದೇ ಸಂದರ್ಭ ಸಂಸ್ಥೆ ‘ನಾದ ಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿದೆ.
ಕಲೆ ಬೆಳೆಯಲು, ನೂರ್ಕಾಲ ಬೆಳಗಲು ತೆರೆಹಿಂದೆ ಬಹು ಮುಖ್ಯ ಪಾತ್ರ ವಹಿಸುವವರನ್ನು ನಟನ ತರಂಗಿಣಿ ಸಂಸ್ಥೆ ಕಳೆದ ಎರಡು ವರ್ಷಗಳಿಂದ ಗೌರವಿಸುತ್ತಿರುವುದು ಒಂದು ಮಾದರಿ ಕಾರ್ಯವಾಗಿದೆ. ಈ ಮೂಲಕ ಸಂಸ್ಥೆಯ ಹೆಸರು ಮತ್ತು ಕೀರ್ತಿ ನೂರ್ಮಡಿಸುತ್ತಿದೆ. ತಾಯಿ ಪರಿಮಳಾ ಕಟ್ಟಿ ಬೆಳೆಸಿದ ಸಂಸ್ಥೆಗೆ ವಿದುಷಿ ಶ್ರೀಲತಾ ನಿಕ್ಷಿತ್ ಹೊಸ ಹೊಸ ಆಯಾಮ ನೀಡುತ್ತಿರುವುದು‘ ಹಾಲಿನ ತೊರೆಯಂತಿರುವ ಕಲಾ ಲೋಕಕ್ಕೆ ಬೆಲ್ಲದ ಕೆಸರು, ಸಕ್ಕರೆಯ ಮರಳು’ ಸೇರಿಸಿದಂತಾಗಿದೆ ಎಂಬುವುದೇ ಸುಕೃತ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post