ಭುವನದ ಭಾಗ್ಯವೇ ಮೂರ್ತರೂಪಗೊಂಡಂತೆ ಭುವನಗಿರಿಯಲ್ಲಿ ಶ್ರೀವೇಂಕಟೇಶನ ವರಪ್ರಸಾದದಿಂದ, ವಾಯುದೇವರ ಸನ್ನಿಧಾನ ವಿಶೇಷದಿಂದ ಯುಕ್ತರಾಗಿ ವೇಂಕಟನಾಥಾಭಿಧಾನದಿಂದ, ಹಿಂದೆ ಪ್ರಹ್ಲಾದ, ಬಾಹ್ಲೀಕ, ವ್ಯಾಸತೀರ್ಥರಾಗಿ ಅವತರಿಸಿ, ವಿಷ್ಣು ಪಾರಮ್ಯವನ್ನು ಪ್ರತಿಷ್ಠಾಪಿಸಿದ ಶಂಖುಕರ್ಣರು ಅವತರಿಸಿದ ಪರಮಪವಿತ್ರವಾದ ದಿನ ಫಾಲ್ಗುಣ ಶುದ್ಧ ಸಪ್ತಮೀ.
ವರಾಹನಂದಿನಿಯ ತೀರದ ಬೃಂದಾವನದಲ್ಲಿ ಆಶ್ರಿತಾಮರ ಕಲ್ಪಭೂಜರಾಗಿ ವಿರಾಜಮಾನರಾಗಿರುವ ಶ್ರೀಗುರುರಾಜರ ಮಹಿಮಾತಿಶಯಗಳನ್ನು ಸಾಕಲ್ಯೇನ ವರ್ಣಿಸುವುದು ಅತ್ಯಂತ ದುಷ್ಕರವಾದ ಸಂಗತಿ.
ಸಿರಿ ಸಹಿತನಾದ ಹರಿ ಅನೇಕರೂಪಗಳಿಂದ, ವಿಶ್ವಗುರು ಮಧ್ವಮುನಿಗಳು ಅವತಾರತ್ರಯೋಪೇತರಾಗಿ ಗುರುರಾಜರ ಬೃಂದಾವನದಲ್ಲಿ ಸದಾ ಸನ್ನಿಹಿತರಾಗಿ ತಮ್ಮ ಅನಂತವಿಭವನ್ನು ರಾಯರ ಮೂಲಕ ಪ್ರಕಟಗೊಳಿಸುತ್ತಿರುವುದನ್ನು ಕಂಡಾಗ ಗುರುರಾಜರಲ್ಲಿ ಶ್ರೀಹರಿಯ, ಮುಖ್ಯಪ್ರಾಣನ ಕಾರುಣ್ಯವೆಂತಹುದು ಎಂಬುದು ಕಿಂಚಿತ್ತಾದರೂ ಗೋಚರವಾಗದಿರದು.
ಮೂಲರಾಮನ, ಮಧ್ವಗುರುಗಳ ಮನದಿಚ್ಛೆಯಂತೆ ತುರೀಯಾಶ್ರಮವನ್ನು ಸ್ವೀಕರಿಸಿ, ವೇದವ್ಯಾಸ-ಮಧ್ವರ ಸಿದ್ಧಾಂತವನ್ನು ಪ್ರತಿಷ್ಠಾಪಿಸಿ, ಆರ್ತರ ಬವಣೆಯನ್ನು ಕಳೆಯುತ್ತಾ ತಮ್ಮ ಪುಣ್ಯಫಲಿತವನ್ನು ಜಗತ್ತಿನ ಉದ್ಧಾರಕ್ಕಾಗಿ ಧಾರೆಯೆರೆಯುತ್ತಿರುವ ಗುರುರಾಜರು ಮಾಧ್ವ ವಾಙ್ಮಯಕ್ಕೆ ನೀಡಿದ ಕೊಡುಗೆಯನ್ನು ನೋಡಿದರೆ ಶ್ರೀವಾದೀಂದ್ರತೀರ್ಥರು ‘ಫ್ರೌಢಾನೇಕ ಪ್ರಬಂಧಪ್ರವಚನಾಲಬ್ಧವಿಸ್ರಬ್ಧಕೀರ್ತೇ’ ಎಂದು ಗುರುಗುಣಸ್ತವನದಲ್ಲಿ ಸ್ತುತಿಸಿರುವುದು ಖಂಡಿತವಾಗಿಯೂ ಅತಿಶಯೋಕ್ತಿಯಲ್ಲ.
ಸುಮಾರು ನಲವತ್ತು ಗ್ರಂಥಗಳನ್ನು ರಚಿಸಿರುವ ಶ್ರೀಗುರುರಾಜರ ಬಹಳಷ್ಟು ಕೃತಿಗಳು -ಶ್ರೀಮಧ್ವ, ಜಯತೀರ್ಥ, ವ್ಯಾಸತೀರ್ಥರ ಕೃತಿಗಳಿಗೆ ಬರೆದ ವ್ಯಾಖ್ಯಾನಗಳಾಗಿವೆ. ಟೀಕಾರಾಯರ ಮೇರುಕೃತಿ ’ನ್ಯಾಯಸುಧಾ’ ಗ್ರಂಥಕ್ಕೆ ಬರೆದ ಅಪೂರ್ವವಾದ ಟಿಪ್ಫಣಿ’ ಪರಿಮಳ’ದಿಂದಾಗಿ ’ಪರಿಮಳಾಚಾರ್ಯ’ರೆಂದೇ ಮಾನಿತರಾದ ಮಹಾ ಮನೀಷಿಗಳು ಶ್ರೀರಾಘವೇಂದ್ರರು.
ಚಂದ್ರಿಕಾಚಾರ್ಯರ ’ಚಂದ್ರಿಕಾ’ ಕೃತಿಗೆ ರಾಯರು ರಚಿಸಿದ ’ಚಂದ್ರಿಕಾಪ್ರಕಾಶ’ವೂ ಸರ್ವವಿದ್ವನ್ಮಾನ್ಯವಾಗಿದೆ. ಟಿಪ್ಪಣ್ಣ್ಯಾಚಾರ್ಯ ಚಕ್ರವರ್ತಿಗಳೆಂದೇ ಖ್ಯಾತರಾದ ಶ್ರೀರಾಘವೇಂದ್ರರು- ’ಮಂತ್ರಾರ್ಥ ಮಂಜರೀ’,’ಗೀತಾವಿವೃತಿ’ ’ತಂತ್ರದೀಪಿಕಾ’. ’ಬ್ರಹ್ಮಸೂತ್ರ ಭಾಷ್ಯ ತತ್ತ್ವಪ್ರಕಾಶಿಕಾ ಭಾವದೀಪ’ ’ಶ್ರೀರಾಮಚಾರಿತ್ರ್ಯಮಂಜರೀ’ ಶ್ರೀಕೃಷ್ಣಚಾರಿತ್ರ್ಯಮಂಜರೀ’ ತರ್ಕತಾಂಡವವ್ಯಾಖ್ಯಾನ, ಪ್ರಾತಃಸಂಕಲ್ಪ ಗದ್ಯ, ಮೊದಲಾದ ಕೃತಿಗಳಿಂದ ತಮ್ಮ ವಿದ್ವದ್ವಿಭವನ್ನು ಮೆರೆದಿದ್ದಾರೆ.
’ಧೀರವೇಣುಗೋಪಾಲ’ ಅಂಕಿತದಲ್ಲಿ ಕನ್ನಡ ಕೃತಿಯನ್ನೂ ರಚಿಸಿರುವ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರು ತಮ್ಮ ಪೂರ್ವಾವತಾರ ವ್ಯಾಸರಾಜರಂತೆ ದಾಸಸಾಹಿತ್ಯ ಪರಂಪರೆಗೂ ಮಹಾಪೋಷಕರಾಗಿದ್ದಾರೆ.
ಕರೆದಲ್ಲಿಗೆ ಬರುವ ಕರುಣಾಳು ರಾಯರ ಕಾರುಣ್ಯದ ಬಗ್ಗೆ ಪ್ರತಿಯೊಬ್ಬರ ಅನುಭವವೇ ಸಾಕ್ಷಿ. ಭಕ್ತರನ್ನು ಸದಾ ಪೊರೆಯುವೆ ಎಂದು ಮಂತ್ರಾಲಯದ ಮಹಾಮುನಿ ಮಾಡಿರುವ ಮಹಾಸಂಕಲ್ಪಕ್ಕೆ ಶ್ರೀಹಯಾಸ್ಯನೇ ಸಾಕ್ಷಿ.
ಧೀರವೇಣುಗೋಪಾಲ
ಫೇಸ್’ಬುಕ್ ಸೌಜನ್ಯ
Discussion about this post