ಭದ್ರಾವತಿ: ಹಳೇನಗರದ ಶ್ರೀಲಕ್ಷ್ಮೀನರಸಿಂಹ ದೇವಸ್ಥಾನ ಮುಂಭಾಗ ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಯೋಜನೆಯಿಂದ ಪ್ರೇರಿತಗೊಂಡಿರುವ ಕಲ್ಪ ನ್ಯೂಸ್ ಡಿಜಟಲ್ ಮೀಡಿಯಾ ಕಚೇರಿಯನ್ನು ಶ್ರೀನಿವಾಸ ಆಚಾರ್ ಹಾಗೂ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದ ಮುಖ್ಯಸ್ಥ ಶೇಷಗಿರಿ ಆಚಾರ್ ಭಾನುವಾರ ಧಾರ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆಕಾಶವಾಣಿ ನಿವೃತ್ತ ಹಿರಿಯ ಅಧಿಕಾರಿ ಡಾ.ಸುಧೀಂದ್ರ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಕ್ಷಣ ಕ್ಷಣದ ಸುದ್ದಿಗಳನ್ನು ಮೊಬೈಲ್‌ಗಳಲ್ಲಿ ಸಿಗಲಾರಂಭಿಸಿರುವ ದಿನಗಳಲ್ಲಿ ಯುವ ಜನತೆ ಐಟಿ, ಬಿಟಿಗಳತ್ತ ಮುಖಮಾಡಿ ತನ್ನದೆ ಆದ ಪ್ರಪಂಚವನ್ನು ಕಂಪ್ಯೂಟರ್, ಮೊಬೈಲ್ ನಂತಹ ಡಿಜಿಟಲ್ ಯುಗದಲ್ಲಿ ಕಾಲಹರಣ ಮಾಡುತ್ತಿರುವ ಉದ್ದೇಶದಿಂದ ಮುದ್ರಣ ಮಾಧ್ಯಮಗಳ ಕಡೆ ಒಲವು ಕಡಿಮೆಯಾಗಿದೆ ಎಂದರು.
ಶ್ರೀಲಕ್ಷ್ಮೀನರಸಿಂಹ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀರಂಗನಾಥ ಶರ್ಮಾ ಮಾತನಾಡಿ, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಮುಂದಿನ ತಂತ್ರಜ್ಞಾನವಾಗಿ ಡಿಜಿಟಲ್ ಮಾಧ್ಯಮ ಬಂದಿರುವುದು ಸುದ್ದಿಗಳನ್ನು ವೇಗವಾಗಿಯೇ ಪಡೆಯಲು ಸಹಕಾರಿಯಾಗಿದೆ. ಇಂತಹ ಡಿಜಿಟಲ್ ಮಾಧ್ಯಮ ಕಲ್ಪ ನ್ಯೂಸ್ ಕಚೇರಿ ಭದ್ರಾವತಿಯಲ್ಲಿ ಆರಂಭವಾಗಿರುವುದು ಸಂತೋಷದ ಸಂಗತಿ. ಈ ಮಾಧ್ಯಮ ವಿಶ್ವವ್ಯಾಪಿಯಾಗಿ ಪಸರಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ತಹಶೀಲ್ದಾರ್ ಮಂಜುನಾಥ ಶರ್ಮಾ, ಖ್ಯಾತ ಆರ್ಯುವೇದ ವೈದ್ಯ ಸುದರ್ಶನ್ ಕೆ. ಆಚಾರ್, ಕಲ್ಪ ನ್ಯೂಸ್ ಪ್ರಧಾನ ಸಂಪಾದಕ ಎಸ್.ಆರ್. ಅನಿರುದ್ಧ ವಸಿಷ್ಠ, ಪತ್ರಕರ್ತರಾದ ಆರ್.ವಿ. ಕೃಷ್ಣ, ಕೆ.ಎಸ್. ಸುಧೀಂದ್ರ, ಬಸವರಾಜ್, ಶೈಲೇಶ್ ಕೋಠಿ ಸೇರಿದಂತೆ ಮತ್ತಿತರರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post