ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ‘ಕಲ್ಪ ನ್ಯೂಸ್ ಲೋಕಾ ಯಾತ್ರೆ’ ಎಂಬ ಹೆಸರಿನ ಅಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುವ ಸಾಹಸಕ್ಕೆ ಕೈಹಾಕಿದೆ.
ಚುನಾವಣಾ ನೀತಿ ಸಂಹಿತೆಯಿರುವ ಹಿನ್ನೆಲೆಯಲ್ಲಿ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಎಷ್ಟು ಶೇಕಡಾವಾರು ಮತ ಬೀಳಬಹುದು, ಒಟ್ಟಾರೆ ಯಾರ ಗೆಲುವು ನಿಶ್ಚಿತ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುವುದಿಲ್ಲ. ಇಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಸಮೀಕ್ಷೆ ನಡೆಸದೇ, ಸದರಿ ಭಾಗದ ಸಮಸ್ಯೆಗಳು, ಜನರ ಮನದಾಳದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಂತ್ರವಾಗಿ ವಾಸ್ತವ ಸಮೀಕ್ಷೆಯನ್ನು ನಡೆಸಲಾಗಿದೆ. ಪ್ರತಿನಿತ್ಯ ನಮ್ಮ ತಂಡ ನೂರಾರು ಮತದಾರರನ್ನು ಮಾತನಾಡಿಸುತ್ತಿದ್ದು, ಇದರಲ್ಲಿ ಆಯ್ದ ಕೆಲವರ ಅನಿಸಿಕೆಗಳನ್ನು ಮಾತ್ರ ಪ್ರಕಟಿಸಿ, ಒಟ್ಟಾರೆಯಾಗಿ ಸದರಿ ಭಾಗದಲ್ಲಿನ ಒಲವು ಯಾರಿಗಿದೆ ಎಂಬುದನ್ನು ಓದುಗರಿಗೆ ತಿಳಿಸಿ, ನಿರ್ಧಾರವನ್ನೂ ಅವರಿಗೇ ಬಿಡುತ್ತೇವೆ.
ಮಾಸೂರು, ಕಾನಲೆ, ಸೈದೂರು ಭಾಗಗಳಲ್ಲಿ ಒಲವು-ನಿಲುವು ಹೀಗಿದೆ:
ಸೊರಬ ತಾಲೂಕು ಮತ್ತು ಸಾಗರ ತಾಲೂಕು ಪರಸ್ಪರ ಒಂದಲ್ಲ ಒಂದು ಗ್ರಾಮವನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಕೊಂಡಿವೆ. ಸಾಗರ ತಾಲೂಕಿನ ಕಾನಲೆ ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಸೇರಿದರೆ ಅವರ ಕಂದಾಯ ಇಲಾಖಾ ಕೆಲಸವೆಲ್ಲಾ ಸಾಗರ ತಾಲೂಕು ಕಚೇರಿ ವ್ಯಾಪ್ತಿಗೆ ಬರುತ್ತದೆ.
ಇಲ್ಲಿ ಈಗ ನೋಡಿದರೆ 50:50 ಇದೆ. ಬಿಜೆಪಿ ಸ್ವಲ್ಪ ಕೆಲಸ ಮಾಡಿದೆ. ಜಾತಿ ವಿಷಯ ಬಂದಾಗ ಮೆಜಾರಿಟಿ ಇರುವ ಈಡಿಗರಲ್ಲೂ ಬಿಜೆಪಿ ಮತ್ತು ಮೈತ್ರಿ ಪಕ್ಷದ ಒಲವಿದ್ದರಿದ್ದಾರೆ. ಸದ್ಯ ಮೋದಿ ಅಲೆ ಕೂಡ ಇದೆ. ನಾವು ತಾಳಗುಪ್ಪ ಹೋಬಳಿಯವರು ತ್ರಿಶಂಕುಗಳಾಗಿದ್ದೇವೆ. ಇಬ್ಬರು ಶಾಸಕರು. ಒಮ್ಮೊಮ್ಮೆ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು ಗೊಂದಲವಾಗಿ ಬಿಡುತ್ತದೆ. ಈ ಕಡೆ ಮುಂಚೆ ಜೆಡಿಎಸ್ ಇರಲಿಲ್ಲ. ಕಾಂಗ್ರೆಸ್ ಇತ್ತು, ಈಗ ಆ ಪಕ್ಷದ ಒಲವಿನ ಮತ ಯಾವ ಕಡೆ ಕಾದು ನೋಡಬೇಕಿದೆ.
ಏಳು ಗ್ರಾಮಗಳ ಗ್ರೂಪ್ ಪಂಚಾಯತ್, ಕಾನಲೆ ಕೇಂದ್ರ ಸ್ಥಳ. ಸುಮಾರು ಐದು ಸಾವಿರ ಮತದಾರರಿದ್ದಾರೆ. ನಮ್ಮದೆಲ್ಲ ಬಿಜೆಪಿಗೆ ಸರ್.
ಬದಲಾವಣೆ ಬೇಕರೀ. ಯಡ್ಯೂರಪ್ಪ ಅವರಿಗೆ ಒಂದು ಚಾನ್ಸ್ ಕೊಟ್ವಿ. ಬಿಜೆಪಿಯವರಲ್ಲೇ ಕಚ್ಚಾಟ ಶುರುವಾಯಿತು. ಈಗ ಮೋದಿ ಅಂತೀರಿ ಅವರಿಗೂ ಒಂದು ಚಾನ್ಸ್ ಕೊಟ್ವಿ. ಆದರೆ ಈಗ ಸಾಕು. ಈಗ ಮೈತ್ರಿ ಪಕ್ಷಕ್ಕೆ ಕೊಡ್ತೀವಿ.
ನಮ್ಮಲ್ಲಿನ ಸುಮಾರು ಆರುನೂರು ಓಟುಗಳಲ್ಲಿ ನಾನ್ನೂರು ಬಿವೈಆರ್’ಗೆ ಚಲಾವಣೆಯಾಗುವುದರಲ್ಲಿ ಸಂದೇಹ ಬೇಡ. ಕಾರ್ಯಕರ್ತರು ಇಲ್ಲಿಗೆ ಭೇಟಿ ನೀಡಬೇಕು ಎಂದು ಹೇಳುವುದನ್ನು ಮರೆಯಲಿಲ್ಲ.
ಈ ಸಾರಿ ಇಲ್ಲಿ ಸಮ ಸಮ ಕಾದಾಟ. ಮೈತ್ರಿಪಕ್ಷ ಲೀಡ್ ಪಡೆಯುತ್ತದೆ. ಆದರೆ ಮೋದಿ ಅಲೆಯಿಂದ ಈ ಶೇಕಡಾವಾರು ಹೆಚ್ಚಾಗಬಹುದು.
ಈಗ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಮಾತು ನಡೆಯಲ್ಲ. ಆದರೂ ಇಲ್ಲಿ ಯಾರು ಯಾವ ಕಡೆ ಅಂತ ಹೇಳೋದು ಓಟು ನೀಡುವ ದಿನವೇ.
ಹಾಲಪ್ಪ ಅವರು ಅಡ್ಡಿಯಿಲ್ಲ ಕೆಲಸವಂತ. ಕಳಸವಳ್ಳಿ ಸೇತುವೆ ಶಂಕುಸ್ಥಾಪನೆ ಇತ್ಯಾದಿ ಗುರುತಿಸುವಂತಹ ಕೆಲಸ ಮಾಡಿದ್ದಾರೆ. ಈ ಸಲ ದೇಶದ ರಕ್ಷಣೆ ದೃಷ್ಟಿಯಿಂದ ನಮ್ಮ ಓಟು ಎಂದವರು ಮೋದಿಯ ಹೆಸರು ಹೇಳದೇ ಮೂಗುಮ್ಮಾಗಿ ಮಾತಾಡಿದರು.
ಇಲ್ಲಿ ಶೇ. 99ರಷ್ಟು ಮತ ಚಲಾವಣೆ ಆಗುವಂತೆ ಮಾಡುತ್ತೇವೆ. ಬಿಜೆಪಿಗೆ ಶೇ.60ರಷ್ಟು ಲೀಡ್ ಕೊಡುತ್ತೇವೆ.
ಇಲ್ಲಿನ ಆರುನೂರು ಓಟುಗಳಲ್ಲಿ ನಾನ್ನೂರು ಬಿವೈಆರ್’ಗೆ ಸಿಗುತ್ತವೆ.
ಇಲ್ಲಿ ನಾನ್ನೂರು ಓಟುಗಳು ಮೈತ್ರಿಪಕ್ಷಕ್ಕೆ ಬೀಳುತ್ತವೆ. ನಮ್ಮಲ್ಲಿ ಮೈತ್ರಿ ಅಭ್ಯರ್ಥಿಗೇ ಲೀಡ್ ಕೊಡುತ್ತೇವೆ.
ಸೈದೂರು ಪಂಚಾಯತ್’ನಲ್ಲಿ ಏಳು ಹಳ್ಳಿಗಳಿವೆ. ಸದ್ಯ ಈಗ ಸಮಸಮ ಎನಿಸುತ್ತದೆ. ಪ್ರಯತ್ನಪಟ್ಟರೆ ಬಿಜೆಪಿಯವರಿಗೇ ಇಲ್ಲಿ 70:30 ಮಾಡುವ ಸಾಧ್ಯತೆಯಿದೆ.
ನಮಗೆ ಯಾರೂ ಒಳ್ಳೇದು ಮಾಡಿಲ್ಲ. ಬ್ಯಾಂಕಿನಾಗೆ ಎಂಬತ್ತು ಸಾವಿರ ಸಾಲ ಐತೆ ಮನ್ನಾ ಮನ್ನಾ ಅಂತಾರೆ. ಈವರೆಗೂ ನಮಗೆ ಏನೂ ಆಗಿಲ್ಲ. ನಾವ್ಯಾರೂ ಓಟು ಕೊಡಾದೇ ಇಲ್ಲ.
ಸೈದೂರಿನ ಎಸ್’ಸಿ ಕಾಲನಿಗೆ ಹೊಸದಾಗಿ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದೆ.
ಇಲ್ಲಿ ಸಾವಿರ ಓಟುಗಳಿವೆ. ನಮಗೆ ಮೋದಿ ಪಿಎಂ ಆಗಬೇಕು. ಇನ್ನು ಹತ್ತು ವರ್ಷ ಅವರೇ ಇರಬೇಕು. ಇಲ್ಲಿಗೆ ಪ್ರಚಾರಕ್ಕೆ ಬಿವೈಆರ್ ಬಂದಿದ್ರು. ಮತ್ತೇನು ಬರಬೆರಕಿಲ್ಕ. ಇಲ್ಲಿ ನಾವು ಮಾಡುತ್ತಿರೋ ರಸ್ತೆ ಕಾಮಗಾರಿ ಸುಮಾರು ಏಳು ಲಕ್ಷ ರೂ. ಅಂದಾಜಿನದು.
ಇಲ್ಲಿನ ಪರಿಸ್ಥಿತಿ ಸಮಸಮ ಇದೆ. ಮೈತ್ರಿ ಪಕ್ಷದ ಅಭ್ಯರ್ಥಿಗೆ ಅನುಕಂಪದಿಂದ ಲಾಭ ಆಗಲಿದೆ.
ಸುರೇಶ್, ಅಣ್ಣಪ್ಪ ಅವರು ನಮಗೆ ದೇಶ ಮುಖ್ಯ. ದೇಶ ರಕ್ಷಣೆ ಬಗ್ಗೆ ಯಾರು ಗಮನ ಹರಿಸುತ್ತಾರೋ ಅವರಿಗೆ ನಾವು ಓಟು ನೀಡುತ್ತೇವೆ.
ಈ ಭಾಗದ ಸಮೀಕ್ಷೆ ಕುರಿತಾಗಿ ನಮ್ಮ ಒಟ್ಟಾರೆ ಅಭಿಪ್ರಾಯ:
ಈ ಭಾಗದ ಹಲವು ಪ್ರದೇಶಗಳು ಸಾಗರ ಹಾಗೂ ಸೊರಬ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಹೋಗಿದೆ. ಅದರಲ್ಲಿ ತಾಳಗುಪ್ಪ ಹೋಬಳಿಗೆ ಸೇರಿಕೊಂಡಿರುವ ಗ್ರಾಮಗಳಿಗೆ ಇಬ್ಬಿಬ್ಬರು ಶಾಸಕರು. ಹೀಗಾಗಿ, ಇಲ್ಲಿನ ನಾಗರಿಕರು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವುದು ಎನ್ನುವ ಗೊಂದಲದಲ್ಲೇ ಇರಬೇಕಿದೆ.
ಇನ್ನು, ಒಟ್ಟಾರೆಯಾಗಿ ಈ ಭಾಗದಲ್ಲಿ ನೋಡುವುದಾದರೆ, ಬಿಜೆಪಿಗೆ ಭದ್ರ ನೆಲೆ ಇದೆ ಎನ್ನಬಹುದಾಗಿದ್ದು, ಮೈತ್ರಿ ಪಕ್ಷಕ್ಕೆ ಅದರಲ್ಲೂ ಜೆಡಿಎಸ್’ಗೂ ಸಹ ಉತ್ತಮ ಬೆಂಬಲವಿದ್ದು, ಫೈಟ್ ನೀಡಲಿದೆ.
ಆದರೆ, ಇಲ್ಲಿನ ತೀರಾ ಒಳಗಿನ ಪ್ರದೇಶಗಳನ್ನು ನೋಡುವುದಾದರೆ, ಸಣ್ಣ ಸಣ್ಣ ಗ್ರಾಮಗಳಲ್ಲೂ ಸಹ ಮೋದಿ ಅಲೆ ಇದೆ. ಇದು ನಿಜಕ್ಕೂ ಮತವಾಗಿ ಬದಲಾವಣೆಯಾದರೆ ಬಿಜೆಪಿಗೆ ಇಲ್ಲಿ ಲೀಡ್ ನಿಶ್ಚಿತ. ಹಲವು ವಿಚಾರಗಳನ್ನು ಹಂಚಿಕೊಂಡಂತೆ ಕಂಡರೂ, ಇಲ್ಲಿನ ಮತದಾರ ಮಾತ್ರ ಮಗುಮ್ಮಾಗಿಯೇ ಇರುತ್ತಾರೆ ಎನಿಸಿತು.
-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಟೀಂ
ವಿಶೇಷ ಸೂಚನೆ: ಈ ಚುನಾವಣಾ ಸಮೀಕ್ಷಾ ವರದಿ ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಯ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ನಮ್ಮ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಪ್ರತಿನಿಧಿಗಳು ಜನಸಾಮಾನ್ಯರನ್ನು ಖುದ್ದು ಸಂಪರ್ಕಿಸಿ, ಅವರ ಕಷ್ಟ-ಸುಖ ಹಾಗೂ ಚುನಾವಣೆ ಕುರಿತಾಗಿನ ಅವರ ಮನದಾಳದ ಭಾವನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ, ಓದುಗರಿಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಾಮಾಣಿಕ ಸೇವಾ ಕಾರ್ಯವನ್ನಷ್ಟೇ ಮಾಡಿದೆ.
Discussion about this post