ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ‘ಕಲ್ಪ ನ್ಯೂಸ್ ಲೋಕಾ ಯಾತ್ರೆ’ ಎಂಬ ಹೆಸರಿನ ಅಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುವ ಸಾಹಸಕ್ಕೆ ಕೈಹಾಕಿದೆ.
ಚುನಾವಣಾ ನೀತಿ ಸಂಹಿತೆಯಿರುವ ಹಿನ್ನೆಲೆಯಲ್ಲಿ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಎಷ್ಟು ಶೇಕಡಾವಾರು ಮತ ಬೀಳಬಹುದು, ಒಟ್ಟಾರೆ ಯಾರ ಗೆಲುವು ನಿಶ್ಚಿತ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುವುದಿಲ್ಲ. ಇಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಸಮೀಕ್ಷೆ ನಡೆಸದೇ, ಸದರಿ ಭಾಗದ ಸಮಸ್ಯೆಗಳು, ಜನರ ಮನದಾಳದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಂತ್ರವಾಗಿ ವಾಸ್ತವ ಸಮೀಕ್ಷೆಯನ್ನು ನಡೆಸಲಾಗಿದೆ. ಪ್ರತಿನಿತ್ಯ ನಮ್ಮ ತಂಡ ನೂರಾರು ಮತದಾರರನ್ನು ಮಾತನಾಡಿಸುತ್ತಿದ್ದು, ಇದರಲ್ಲಿ ಆಯ್ದ ಕೆಲವರ ಅನಿಸಿಕೆಗಳನ್ನು ಮಾತ್ರ ಪ್ರಕಟಿಸಿ, ಒಟ್ಟಾರೆಯಾಗಿ ಸದರಿ ಭಾಗದಲ್ಲಿನ ಒಲವು ಯಾರಿಗಿದೆ ಎಂಬುದನ್ನು ಓದುಗರಿಗೆ ತಿಳಿಸಿ, ನಿರ್ಧಾರವನ್ನೂ ಅವರಿಗೇ ಬಿಡುತ್ತೇವೆ.
ಹೊಳೆಹೊನ್ನೂರು ಸನಿಹದ ಸಿದ್ಲಿಪುರ, ನಾಗಸಮುದ್ರ, ಮಂಗೋಟೆ, ಅರಹತೊಳಲು, ಮಾರಶೆಟ್ಟಿಹಳ್ಳಿಗಳಲ್ಲಿ ಮತದಾರರ ಒಲವು-ನಿಲುವು ಹೀಗಿದೆ:
ಪುರದಾಳ್ ಗ್ರಾಮ ಪಂಚಾಯತ್ ಗೆ ಸೇರಿರುವ ಅನುಪಿನ ಕಟ್ಟೆ, ಕಲ್ಲೂರು, ಗೋವಿಂದಪುರ ಹಳ್ಳಿಗಳನ್ನ ಕೂಡಿದೆ. ಪ್ರಸ್ತುತ ಜೆಡಿಎಸ್ ಹಿಡಿತ ಈ ಗ್ರಾಮದಲ್ಲಿದೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಸುಮಾರು 1200 ಮತಗಳಲ್ಲಿ ಸಾವಿರ ಮತಗಳು ಚಲಾವಣೆಯಾಗಿವೆ. ಅದರಲ್ಲಿ 600 ಮೈತ್ರಿ ಪಕ್ಷದ ಅಭ್ಯರ್ಥಿಗೆ ಸಂದಿದ್ದರೆ, ಉಳಿದವು ಮತಗಳು ಬಿಜೆಪಿಯ ಪಾಲಾಗಿದ್ದವು. ಸಹಜವಾಗಿಯೇ ಹಿಂದಿನ ಶಾಸಕಿಯಾಗಿ ಸೇವೆ ಸಲ್ಲಿಸಿದ ಶಾರದಾ ಪೂರ್ಯಾನಾಯ್ಕ್ ಅವರ ಕೆಲಸದ ಬಗ್ಗೆ ಅವರ ತೃಪ್ತಿ ಇದೆ.
-ಶ್ರೀನಿವಾಸ್, ಸ್ಥಳೀಯ ಕೃಷಿಕ
“““““““““““““`
ಸಾಲಮನ್ನಾ ಘೋಷಣೆ ತುಸು ಇಲ್ಲಿನ ರೈತರಿಗೆ ನೆರವಾಗಿದೆ. ಈಗಿನ ಟ್ರೆಂಡ್ ಪ್ರಕಾರ ಶೇ.75ರಷ್ಟು ಜೆಡಿಎಸ್ ಕಡೆ ಮತ್ತು ಶೇ.25ರಷ್ಟು ಬಿಜೆಪಿ ಕಡೆಗೆ. ಜೊತೆಗೆ ಯುವಜನ ಮೋದೀಜಿ ಪರ.
-ಶ್ರೀನಿವಾಸ್
“““““““““““““`
ನಾವು ಏನನ್ನೂ ಇದುವರೆಗೆ ನಿರ್ಧರಿಸಿಲ್ಲ. ಮತದಾನದ ಹಿಂದಿನ ದಿನ ನಮ್ಮ ಊರಿನ ಮುಖಂಡರು ಯಾರಿಗೆ ಓಟು ನೀಡಬೇಕು ಅಂತ ಸಲಹೆ ನೀಡುತ್ತಾರೋ ಅವರಿಗೆ ನಾವು ಓಟು ಕೊಡುತ್ತೇವೆ. ಊರಂತೆ ನಾವು.
“““““““““““““`
ಶಿವಮೊಗ್ಗದಿಂದ ಅಲ್ಲಿಗೆ ಸರಿಯಾದ ಸಂಪರ್ಕ ರಸ್ತೆಯಿಲ್ಲ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಚಲಾವಣೆಯಾದ ಸಾವಿರ ಮತಗಳಲ್ಲಿ ಆರುನೂರು ಜೆಡಿಎಸ್’ಗೆ ಬಿದ್ದವು. ಮಿಕ್ಕ ನಾನೂರು ಬಿಜೆಪಿಗೆ. ಕಾರ್ಪೋರೇಷನ್’ನಿಂದ ಕುಡಿಯುವ ನೀರು ಸರಬರಾಜಾಗಿಲ್ಲ. ಇಲ್ಲಿ ಜೆಡಿಎಸ್ ಬಲವಾಗಿದೆ. ಸಮಸ್ಯೆಗಳಲ್ಲಿ ವಿದ್ಯುತ್ ಖೋತಾ ಈಗಲೂ ದಿನದಲ್ಲಿ ಎಂಟು ಗಂಟೆಯಷ್ಟಿದೆ.
“““““““““““““`
ಜೆಡಿಎಸ್-ಬಿಜೆಪಿ ಸಮಸಮ. ಹಿಂದಿನ ಚುನಾವಣೆಯಲ್ಲೂ ಹೀಗೇ ಆಗಿತ್ತು. ಈಗಲೂ ಹಾಗೆ ಆಗತ್ತೆ.
-ಪ್ರಶಾಂತ್ ಮತ್ತು ಅಜಯ್
“““““““““““““`
ಮಂಗೋಟೆ ಪಂಚಾಯತ್‌ಗೆ ಸೇರಿದ ನಾಗಸಮುದ್ರ ಎಂಬ ಗ್ರಾಮ. ಇಲ್ಲಿನ ಪಂಚಾಯತ್ ಕಾಂಗ್ರೆಸ್ ವಶವಾಗಿದೆ. ಅವರಿಂದ ಏನೂ ಪ್ರಗತಿಯಾಗಿಲ್ಲ. ಒಳರಸ್ತೆಗಳು ಸರಿಯಿಲ್ಲ. ಪಕ್ಕದ ಹೊಳೆಗೆ ತಡೆಗೋಡೆ ನಿರ್ಮಿಸಿಲ್ಲ. ಎಲ್ಲ ಜನನಾಯಕರು, ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು… ಇತ್ಯಾದಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಈವರೆವಿಗೂ ಯಾವುದೇ ನಿಖರ ಯೋಜನೆ ಸಿದ್ಧವಾಗಿಲ್ಲ. ನಿವೇಶನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಆದರೂ ಯಡ್ಯೂರಪ್ಪನವರ ಕಾಲದಲ್ಲಿ ಅಲ್ಲಿಂದ ಹೊಳಲೂರಿಗೆ ಒಂದು ಜಬರ್ದಸ್ತ್ ಸೇತುವೆ ಆಗಿದೆ. ಹೀಗಾಗಿ ನಾಗಸಮುದ್ರ ಯಡ್ಯೂರಪ್ಪನವರ ಭದ್ರಕೋಟೆ. ಯಾವಾಗ ಬಂದರೂ ಇಲ್ಲಿಗೆ ಭೇಟಿ ನೀಡದೇ ಹೋಗುವುದು ಅಪರೂಪ. ಬಿಜೆಪಿ ಇಲ್ಲಿ ನಿರಾಯಾಸವಾದ ಲೀಡ್ ಪಡೆಯುತ್ತದೆ.
“““““““““““““`
ಮೋದಿಯಿಂದಾಗಿ ದೇಶದ ಉದ್ದಾರ ಆಗುವ ಜೊತೆಯಲ್ಲಿ ಹಳ್ಳಿಗಳೂ ಉದ್ದಾರ ಆಗುತ್ತಿವೆ. ಕೇಂದ್ರದ ಯೋಜನೆಗಳು ಮನಸ್ಸಿಗೆ ಮುಟ್ಟುತ್ತಿವೆ. ಮೋದಿಯೇ ಮತ್ತೆ ಪ್ರಧಾನಿಯಾಗಬೇಕು.
-ವಿಜಯ್ ಕುಮಾರ್, ರಾಮು ಹಾಗೂ ಶರತ್,
ಮಾರಶೆಟ್ಟಿಹಳ್ಳಿ, ಕಲ್ಲಿಹಾಳ್ ಪಂಚಾಯತ್‌ಗೆ ಸೇರಿದ ಗ್ರಾಮದ ಯುವಕರು
ಈ ಭಾಗದ ಸಮೀಕ್ಷೆ ಕುರಿತಾಗಿ ನಮ್ಮ ಒಟ್ಟಾರೆ ಅಭಿಪ್ರಾಯ:
ಹೊಳೆಹೊನ್ನೂರು ಸನಿಹದ ಸಿದ್ಲಿಪುರ ಒಂದುರೀತಿ ಅಸಡ್ಡೆಗೊಳಗಾದಂತಿದೆ. ಡಣಾಯಕಪುರದ ತನಕ ಸಂಪರ್ಕ ರಸ್ತೆ ಚೆನ್ನಾಗಿದೆ. ಅಲ್ಲಿಂದ ಸಿದ್ಲಿಪುರಕ್ಕೆ ಕಚ್ಚಾಹಾದಿಯಂತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಅರಹ ತೊಳಲು ಸ್ಥಿತಿವಂತ ಕೃಷಿಕರೂ ಇರುವ ಗ್ರಾಮ. ಏಳು ಗ್ರಾಮಗಳ ಪಂಚಾಯತ್ ಇಲ್ಲಿ ಯಾವಾಗಲೂ ಕಾಂಗ್ರೆಸ್ ಮುಂದೆ. ಮೈತ್ರಿ ಪಕ್ಷಕ್ಕೆ ಸುಲಭದ ತುತ್ತಾಗಿದ್ದು, ಲೀಡ್ ಪಡೆಯಬಹುದು. ಇಲ್ಲಿ ಬಿಜೆಪಿಗೆ ಮೋದಿಯನ್ನು ಮೆಚ್ವುವ ಯುವಜನರೇ ಸ್ವಲ್ಪ ಆಶಾಕಿರಣ ಎನ್ನಬಹುದು.
ಮಂಗೋಟೆ ಪಂಚಾಯತ್ ವಿಚಾರದಲ್ಲಿ ನೋಡುವುದಾದರೆ ಅಲ್ಲಿನ ನದಿ ತಡೆಗೋಡೆ ನಿರ್ಮಾಣವಾಗದಿದ್ದರೆ ಗ್ರಾಮಸ್ಥರು ಬಹಳ ಎಲ್ಲ ಪಕ್ಷಗಳ ರಾಜಕಾರಣಿಗಳೂ ಸ್ಥಳೀಯರ ಕೋಪಕ್ಕೆ ತುತ್ತಾಗುವುದು ಗ್ಯಾರೆಂಟಿ. ಇದರ ನಡುವೆಯೇ ಯಡ್ಯೂರಪ್ಪನವರು ಮುಖ್ಯಮಂತ್ರಿಯಾದಾಗ ನಡೆಸಿದ ಕೆಲವು ಕಾಮಗಾರಿಯಿಂದಾಗಿ ಇಲ್ಲಿ ಬಿಜೆಪಿ ಬಗ್ಗೆ ಒಲವಿದೆ ಎಂದು ಹೇಳಬಹುದು.
-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಟೀಂ
ವಿಶೇಷ ಸೂಚನೆ: ಈ ಚುನಾವಣಾ ಸಮೀಕ್ಷಾ ವರದಿ ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಯ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ನಮ್ಮ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಪ್ರತಿನಿಧಿಗಳು ಜನಸಾಮಾನ್ಯರನ್ನು ಖುದ್ದು ಸಂಪರ್ಕಿಸಿ, ಅವರ ಕಷ್ಟ-ಸುಖ ಹಾಗೂ ಚುನಾವಣೆ ಕುರಿತಾಗಿನ ಅವರ ಮನದಾಳದ ಭಾವನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ, ಓದುಗರಿಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಾಮಾಣಿಕ ಸೇವಾ ಕಾರ್ಯವನ್ನಷ್ಟೇ ಮಾಡಿದೆ.
Discussion about this post