`ಬಿಡೆನೋ ನಿನ್ನಂಘ್ರಿ ಶ್ರೀನಿವಾಸ, ನನ್ನ ದುಡಿಸಿಕೊಳ್ಳೆಲೋ ಶ್ರೀನಿವಾಸ’ ಈ ನಲ್ಮೆಯ ಕೀರ್ತನೆಯ ಮೂಲಕ ಭಕ್ತಜನರ ಸಲುವಾಗಿ ಮತ್ತು ಪರವಾಗಿ ತಿರುಪತಿಯ ತಿಮ್ಮಪ್ಪನನ್ನು ಕೈಹಿಡಿದು ಜಗ್ಗಿದವರು ಶ್ರೀಪ್ರಸನ್ನ ವೆಂಕಟದಾಸರು.
ಕರ್ನಾಟಕ ದಾಸಸಾಹಿತ್ಯ ಪರಂಪರೆಯಲ್ಲಿ ದಾಸಚತುಷ್ಟರ ನಂತರ ಸಮಾಜದಲ್ಲಿ ಕನ್ನಡ ವಾಙ್ಮಯ ಸೇವಾಪುರುಷ ಎಂಬ ಹೆಗ್ಗಳಿಕೆ ಪಡೆದವರು ಯಾರಾದರೂ ಇದ್ದಾರೆ ಎನ್ನುವುದಾದಲ್ಲಿ ಇಂತಹ ಅಗ್ರಪೂಜೆಗೆ ಪಾತ್ರರಾಗುವವರು ಪ್ರಸನ್ನ ವೆಂಕಟದಾಸರು. ದಾಸರ ಕೀರ್ತನೆಗಳೆಂದರೆ ಭಕ್ತಿಯ ಭಾವಗೀತೆ. ಉಳಿದ ದಾಸರಲ್ಲಿ ಹೇಗೋ ಹಾಗೆ ಪ್ರಸನ್ನ ವೆಂಕಟದಾಸರ ಕೃತಿಗಳಲ್ಲಿಯೂ ಭಕ್ತಿಗೇ ಪ್ರಾಧಾನ್ಯತೆ.
ಸಾಮಾಜಿಕ ಜೀವನವನ್ನು ಯಾವ ದಾಸರೂ ನೇರವಾಗಿ ವರ್ಣಿಸಿಲ್ಲ. ಅದು ಅವರ ಗುರಿಯಲ್ಲ. ಆಯಾ ಕಾಲದ ಪರಿಸ್ಥಿತಿ, ಜನಜೀವನ ಎಲ್ಲ ದಾಸರಲ್ಲಿಯೂ ಪರ್ಯಾಯವಾಗಿ ವರ್ಣಿತವಾಗಿದೆ. ಇವರಲ್ಲಿ ಕನಕದಾಸರು ಮಾತ್ರ ಅದನ್ನು ಕೊಂಚ ವಿಶದವಾಗಿ ವರ್ಣಿಸಿದವರು. ಹೀಗಾಗಿ ರಾಜಕೀಯ ಪರಿಸ್ಥಿತಿಯ ವರ್ಣನೆಯಲ್ಲಿ ಪ್ರಸನ್ನ ವೆಂಕಟದಾಸರೇ ಮೊದಲಿಗರು ಮತ್ತು ಅವರೇ ಕೊನೆಯವರು ಎಂದು ಹೇಳಬಹುದು.
ದಾಸರಾಯರ ಕಾಲವು ಯುದ್ಧಕಲಹ, ಪುಂಡಾಟಿಕೆಗಳಿಂದ ಪ್ರಕ್ಷುಬ್ಧವಾಗಿತ್ತೆಂಬ ಅಂಶ ಎದ್ದುಕಾಣುತ್ತದೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಪ್ರಸನ್ನ ವೆಂಕಟದಾಸರು ಆಂತರಿಕ ಶತ್ರುಗಳಾದ ಕಾಮಕ್ರೋಧಾದಿ ಷಡ್ರಿಪುಗಳನ್ನು ಬಾಹ್ಯಶತ್ರುಗಳಾದ ಪುಂಡರನ್ನೂ ಪ್ರತಿಭಟಿಸುವಂತೆ ಯುದ್ಧ ಭಾಷೆಯಲ್ಲಿ ಬರೆದಿದ್ದಾರೆ.
“ಶ್ರೀಲೋಲನಂಘ್ರಿ ಸಂಬಂಧ ಕೈಗೂಡಿ
ತಾಳ ದಂಡಿಗೆ ಗೀತಾಯುಧಗಳಿಂದ
ಕಾಲಕಾಲಕ್ಕೆ ನಿಮ್ಮ ಮೇಳವ ಮುರಿದಾಡಿ
ಕಾಳು ಮಾಡುವೆ ಕೈಯಲ್ಲಿ ಕಡ್ಡಿ ಕೊಡುವೆ’’
ಹೀಗೆ ಸ್ಥೈರ್ಯ, ಧೈರ್ಯದಿಂದ ಹರಿದಾಸದೀಕ್ಷೆಯ ಮಹಿಮೆಯನ್ನು ವಿವರಿಸುತ್ತಾರೆ.
ದ್ವಿತೀಯ ಘಟ್ಟದ ಶ್ರೀವಿಜಯದಾಸರ ಸಮಕಾಲೀನರಾದ ಹರಿದಾಶ ಶ್ರೇಷ್ಠರು ಕಾಖಂಡಕಿ ವೆಂಕಪ್ಪ (ವೆಂಕಟೇಶ) ಇದು ಪ್ರಸನ್ನ ವೆಂಕಟದಾಸರ ಮೂಲಹೆಸರು. ಬಾಗಲಕೋಟೆಯ ವೈದಿಕ ವಂಶಸ್ಥ ಕಾಖಂಡಕಿ ನರಸಪ್ಪಯ್ಯಾ ಇವರ ತಂದೆ, ತಾಯಿ ಲಕ್ಷ್ಮೀಬಾಯಿ. ಇವರ ಚರಿತ್ರೆಯು ಮಿಕ್ಕ ಅನೇಕ ದಾಸರ ಚರಿತ್ರೆಗಳಂತೆಯೇ ಗೂಢವಾಗಿ ಉಳಿದಿದೆ. ಶ್ರೀಹರಿಚರಿತ್ರೆಯನ್ನು ಬಣ್ಣಿಸುವಲ್ಲಿ ತೊಡಗಿದವರಿಗೆ ತಮ್ಮ ಆತ್ಮಚರಿತ್ರೆಯನ್ನು ಪ್ರಕಟಿಸುವ ಅವಕಾಶವೆಲ್ಲಿ? ಬಾಲಕನು ಎಳೆಯವನಾಗಿದ್ದರಿಂದಲೇ ತಂದೆ- ತಾಯಿಗಳನ್ನು ಕಳೆದುಕೊಂಡನು, ವೆಂಕಪ್ಪನಿಗೆ ವಿದ್ಯಾಭ್ಯಾಸವು ಇರಲಿಲ್ಲ. ತ್ರಿಸಂಧ್ಯಗಳಲ್ಲೂ ನಿಯಮದಿಂದ ಸಂಧ್ಯಾವಂದನ ಗಾಯತ್ರೀ ಜಪವನ್ನು ಮಾಡುವುದು ಶ್ರೀವೆಂಕಟೇಶಸ್ತೋತ್ರ ಹೇಳಿಕೊಳ್ಳುವುದು ಅವರ ನಿತ್ಯ ದಿನಚರಿಯಾಗಿತ್ತು.
ಒಂದು ದಿನ ಬಿಸಿಲಿನ ತಾಪಕ್ಕೆ ಬಾಯಾರಿಕೆ ನೀಗಲು ಅತ್ತಿಗೆಗೆ ಮಜ್ಜಿಗೆಯನ್ನು ಕೇಳಿದ್ದೇ ರಾದ್ಧಾಂತವಾಗಿ ಆಕೆಯಿಂದ ತಿರಸ್ಕøತನಾದ ವೆಂಕಪ್ಪನು ಮನೆಬಿಟ್ಟು ತಿರುಪತಿ ವೆಂಕಟೇಶನ ದರುಶನಕ್ಕಾಗಿ ಹೋಗುವೆನೆಂದು ಹೇಳಿ ಹೊರಟನು.
ಶ್ರೀನಿವಾಸನಿಗೆ ಶರಣಾಗಿ ಇಹವನ್ನು ಮರೆತು ಕುಳಿತ ವೆಂಕಟಪ್ಪನ ನಾಲಿಗೆಯ ಮೇಲೆ ಅಲೌಕಿಕ ಚೇತನವು `ಶ್ರೀನಿವಾಸ’ ಎಂದು ಬರೆದಂತೆ ಭಾಸವಾಗುತ್ತದೆ. ಇಷ್ಟದೈವದ ಪರಮಾನುಗ್ರಹ ಎಂದು ತಿಳಿದು ವೆಂಕಟೇಶ ಆ ಘಳಿಗೆಯಿಂದ ಹರಿದಾಸನಾಗುತ್ತಾನೆ. ಶ್ರೀನಿವಾಸ ತನಗೆ ಪ್ರಸನ್ನನಾದ ಕಾರಣ “ಪ್ರಸನ್ನ ವೆಂಕಟೇಶ’’ ಅಂಕಿತವು ದಾಸರ ಭಗವದನುಗ್ರಹ ಅಭಿವ್ಯಕ್ತಿ ಸಂಕೇತವಾಗುತ್ತದೆ.
ಕೆಲವು ಕಾಲ ತಿರುಪತಿಯಲ್ಲಿಯೇ ನೆಲೆಸಿದರು. ಅವರ ಬಾಳಿನ ಕತ್ತಲೆ ಸರಿಯಿತು. ಅವರಿಗೆ ವಿದ್ಯಾಭ್ಯಾಸ ಮಾಡಬೇಕೆನಿಸಿತು. ಆಗ ಬಾಗಲಕೋಟೆಯ ಮುದ್ಗಲ ಜನಾರ್ಧನಾಚಾರ್ಯರು ಗುರುಗಳಾಗಿ ಮರ್ಗದರ್ಶನ ನೀಡುತ್ತಾರೆ.
ದಾಸರು ತಮ್ಮ ವ್ಯಕ್ತಿತ್ವದಿಂದ ಮತ್ತು ತಮ್ಮ ಕೃತಿಗಳಿಂದಾಗಿ ಬಹಳ ಬೇಗ ಕೀರ್ತಿ ಶಿಖರಕ್ಕೇರಿದರು. ಇವರು ಅವರಿಗೆ ದಾನ-ದತ್ತಿಗಳನ್ನು ನೀಡಿ ಗೌರವಿಸಿದರು. ಇದರಿಂದಾಗಿ ಅವರ ಆರ್ಥಿಕ ಸ್ಥಿತಿ ಸುಧಾರಿಸಿತು.
ಅಂಗಾರದ ಆಚಾರ್ಯರು
ಶ್ರೀ ಪ್ರಸನ್ನ ವೆಂಕಟರು ಊರಿಂದೂರಿಗೆ ಹೋಗುವಾಗ ಕಾಡಿನ ಮಧ್ಯದಲ್ಲಿ ಹುಲಿ ಎದುರಾದರೆ ಅದರ ಮೂಗು ಚಪ್ಪರಿಸಿ ಅದರ ಮೇಲೆ ದೇವರ ಕಂಟಲಿಯನ್ನು ಹೇರಿ ತಮ್ಮೊಡನೆ ಊರು ಸಿಕ್ಕುವವರೆಗೂ ಕರೆದೊಯ್ಯುತ್ತಿದ್ದಂತೆ. ಊರು ಸಿಕ್ಕಿದ ಕೂಡಲೇ ಗೋವುಗಳನ್ನು ಬಾಧಿಸಬೇಡವೆಂದು ಹೇಳಿ ಅದರ ಹಣೆಗೆ ಅಂಗಾರ ಹಚ್ಚಿ ಹಿಂದಕ್ಕೆ ಕಳುಹಿಸುತ್ತಿದ್ದರಂತೆ. ದಾಸರು ಅಂಗಾರ ಹಚ್ಚಿದ ಹುಲಿಗಳು ಹಸುಗಳ ತಂಟೆಗೆ ಹೋಗುತ್ತಿರಲಿಲ್ಲವಂತೆ. ಈ ಕಾರಣದಿಂದ ಹತ್ತಿರದ ಗ್ರಾಮಗಳ ಜನರು ಅವರನ್ನು ಕರೆದುಕೊಂಡು ಹೋಗುತ್ತಿದ್ದರಂತೆ. ಹೀಗೆ ಹುಲಿಗಳಿಗೆ ಅಂಗಾರ ಹಚ್ಚುತ್ತಿದ್ದ ದಾಸರಿಗೆ ಜನ “ಅಂಗಾರದ ಆಚಾರ್ಯರು’’ ಎಂದು ಹೆಸರಿಟ್ಟಿದ್ದರು.
ಶ್ರೀಪ್ರಸನ್ನ ವೆಂಕಟದಾಸರ ಹಾಡುಗಳಲ್ಲಿ ದಾಸಶ್ರೇಷ್ಠ ಪುರಂದರದಾಸರ ಶೈಲಿ ಮತ್ತು ಸರಣಿಯನ್ನು ಕಾಣಬಹುದು. ಅವರದು ಬೆಳದಿಂಗಳಂತಹ ಮಾಧುರ್ಯ ತುಂಬಿದ ಭಾಷೆ. ಕನ್ನಡ, ಮರಾಠಿ, ಉರ್ದು, ಭಾಷೆಗಳ ಸಹಮೇಳ ಇವರ ಕೃತಿ. ಇವುಗಳಲ್ಲಿ ಕಾಣಬರುವ ವೈವಿಧ್ಯ, ವೃತ್ತ, ಬಂಧ, ಅಲಂಕಾರ ರಸಗಳು ಪಂಡಿತರನ್ನು ಬೆರಗುಗೊಳಿಸುವಷ್ಟು ಬಂಧುರವೂ, ಬಗೆಯುಳ್ಳದ್ದೂ ಆಗಿದೆ..
“ತೊಲ ತೊಲಗೆಲೋ ಕಲಿಯೆ ನಿಲ್ಲರಿಲ್ಲಿ
ತೊಲ ತೊಲಗೆಲೋ ಕಲಿಯ ಸೆರೆ ಸಲಿಗೆಯ ಬಿಡು
ಸಲಿಲಜ್ಞಾನದ ದಾಸರಾ’’
ಹೀಗೆಯೇ ಉದ್ಗಾರ ತೆಗೆದ ದಾಸರ ಕಲಿಯನ್ನು ಕಾಲಿನಿಂದ ಮೆಟ್ಟುವ ಹರಿಭುಟ ಗಂಡುಗಲಿ; ಅಪ್ರತಿಮ ದೈತ್ಯದಾಸ, ಅಚ್ಚಗನ್ನಡ ಶಬ್ದಪ್ರಯೋಗ ಪ್ರವೀಣ, ಭಕ್ತಿ ಚಿಂತನೆಯ ಕೃತಿ ಬ್ರಹ್ಮ, ಅದ್ಭುತ ರಮ್ಯ ಕಥೆಗಾರ. ದಾಸರ ಪದಗಳಲ್ಲಿ ಭಾರತದಲ್ಲಿನ ಭಕ್ತಿ ಬೆಳವಣಿಗೆಯನ್ನು ಕಾಣಬಹುದು. ದಾಶಕೂಟದ ಸಂಕ್ಷಿಪ್ತ ಚರಿತ್ರೆಯನ್ನು ನೋಡಬಹುದು. ಮಧ್ವಮತದ ದರ್ಶನ ಇಲ್ಲಿದೆ. ಜ್ಞಾನ, ಭಕ್ತಿ, ವೈರಾಗ್ಯಗಳ ಹಿತೋಪದೇಶ ನಮ್ಮನ್ನು ಆನಂದಲೋಕಕ್ಕೆ ಕರೆದೊಯ್ಯುತ್ತದೆ.
ದಾಸರು ಸುಮಾರು 500ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರಬೇಕೆಂದು ಸಂಶೋಧಕರು ಅಂದಾಜು ಮಾಡಿದ್ದಾರೆ. ಸತ್ಯಭಾಮಾವಿಲಾಸ, ನಾರಾಯಣಪಂಚಕ, ಸಮಸ್ತ ನಾಮಮಣಿಗಣ ಪಚ್ಚರಣ ಪದ್ಯಮಾಲಾ, ಭೇದಮುಕ್ತಾವಲೀ, ನಾರದ ಕೊರವಂಜಿ, ಕೃಷ್ಣಪಾರಿಜಾತ, ಭಾಗವತದ ದಶಾಮಸ್ಕಂದ ಕೃಷ್ಣಲೀಲೆಯನ್ನು ಸೊಗಸಾಗಿ ಕನ್ನಡದಲ್ಲಿ ಅನುವಾದ ಮಾಡಿರುವುದು ಇವರ ಅಸಾಧಾರಣ ಪಾಂಡಿತ್ಯಕ್ಕೆ ಸಾಕ್ಷಿ. ಇವರು ಸಂಗೀತಶಾಸ್ತ್ರಕೋವಿದರೂ ಆಗಿದ್ದರೆಂಬುದು ಇವರ ಕೃತಿಗಳಿಂದಲೇ ತಿಳಿಯುತ್ತದೆ. ಭಿನ್ನ ಭಿನ್ನ ರಸಗಳಿಗೆ ಅನುರೂಪವಾಗಿ ಭಿನ್ನ ಭಿನ್ನ ರಾಗಗಳನ್ನು ಪದಸಂಯೋಜನೆ ಮಾಡಿರುವಂತೆ ತೋರುತ್ತದೆ.
ಅವರ ಪದಲಾಲಿತ್ಯವು ಮಧುರವಾಗಿದೆ. ಇವಲ್ಲದೆ ಹಳ್ಳಿ ಜನರು ಹೇಳುವ ರಾಗದಲ್ಲಿ ಪರಸನ್ನ ವೆಂಕಟ, ಪರಸನ್ನ ಕೃಷ್ಣ ಎಂಬ ಮುದ್ರಿಕೆಯಿಂದ ಸುವ್ವಾಲೆ, ಜೋಗುಳಗಳನ್ನು ಬರೆದಿದ್ದಾರೆ. ಉತ್ತರ ಕರ್ನಾಟಕದ ಜನತೆಯಲ್ಲಿ ಸಾಕಷ್ಟು ಪ್ರಭಾವ ಬೀರಿದ ದಾಸರು ಭಾವುಕರ ಹೃದಯದಲ್ಲಿ ಅಚ್ಚೋತ್ತಿ ತುಂಬು ಬಾಳನ್ನು ನಡೆಸಿ, ಬಾದಾಮಿಯಲ್ಲಿ ಕೊನೆಯ ದಿನಗಳನ್ನು ಕಳೆದರು. ಭಾದ್ರಪದ ಶುದ್ಧ ದ್ವಾದಶೀಯಂದು ವೈಕುಂಠವಾಸಿಗಳಾದರೆಂದು ತಿಳಿಯುತ್ತದೆ. ಬಾದಾಮಿಯ ಪೂರ್ವಕ್ಕೆ ಇರುವ ಗುಡ್ಡದ ಕೆಳಗೆ ಒಂದು ಹೊಂಡವಿದ್ದು ಅದರ ದಡದ ಮೇಲೆ ಅವರ ವಂಶಜರಾದ ಅಣ್ಣಯ್ಯಾಚಾರ್ಯರು ದಾಸರ ಸ್ಮಾರಕವಾಗಿ ಕಟ್ಟೆಯೊಂದನ್ನು ಕಟ್ಟಿರುತ್ತಾರೆ.
ಕಳೆದ ಶತಮಾನದ ಆದಿಭಾಗದಲ್ಲಿ (1915-1925) ಶ್ರೀಪ್ರಸನ್ನ ವೆಂಕಟದಾಸರ ಬಗೆಗೆ ಆಳವಾದ ಅಧ್ಯಯನ ಹಾಗೂ ಗ್ರಂಥಸಂಪಾದನೆ ನಡೆಸಿದವರು ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರು ಮತ್ತು ಮಿತ್ರರು. ವಿಶ್ವವಿದ್ಯಾನಿಲಯದಲ್ಲಿ ಮೊದಲ ಬಾರಿಗೆ ದಾಸರ ಜೀವನ ದರ್ಶನ ಕುರಿತು ಪ್ರೌಢ ಸಂಶೋಧನೆ ಮತ್ತು ಅಧ್ಯಯನ ನಡೆಸಿರುವರು ದಾಸಸಾಹಿತ್ಯ ತಜ್ಞ ಡಾ. ಆನಂತರಾವಟಿ ಪಾಟೀಲ (1957).
ಇದೇ ಆಸುಪಾಸಿನ ಅವಧಿಯಲ್ಲಿ ಖ್ಯಾತ ಸಂಶೋಧಕ ಬೇಲೂರು ಕೇಶವ ದಾಸರು ಮತ್ತು ಇತಿಹಾಸಜ್ಞ ಶ್ರೀ ಆದ್ಯ ರಾಮಾಚಾರ್ಯರು ದಾಸರ ಕೊಡುಗೆಯನ್ನು ಕುರಿತು ಮಾಹಿತಿ ನೀಡಿ ದಾಸಸಾಹಿತ್ಯಾಭಿಮಾನಿಗಳ ಆಸಕ್ತಿಯನ್ನು ಪೋಷಿಸಿದರು. ಇತ್ತೀಚೆಗೆ (2003) ಕರ್ನಾಟಕ ಸರಕಾರ ಹೊರತಂದ ಸಮಗ್ರ ದಾಸಸಾಹಿತ್ಯ ಸಂಪುಟ- 8 ಮಾಲಿಕೆಯಲ್ಲಿ ಸಂಶೋಧಕಿ ಶ್ರೀಮತಿ ಟಿ.ಕೆ. ಇಂದಿರಾಬಾಯಿ ಅತ್ಯುತ್ತಮ ಆಕರ ಗ್ರಂಥವನ್ನು ಸಂಪಾದಿಸಿದ್ದಾರೆ.
ಸಾಹಿತ್ಯ ಶ್ರೀಮಂತಿಕೆಯಿಂದ ಕನ್ನಡಕ್ಕೆ ಕಸ್ತೂರಿ ತಿಲಕವಿಟ್ಟವರು
ಭಗವಂತನನ್ನು ಒಳಗಣ್ಣಿನಿಂದ ನೋಡಲು ಬಯಸುವ ಸಾಧಕರಿಗೆ ಭಾಗವತ ನಿರೂಪಿಸಿದ ನವವಿಧ ಭಕುತಿಗಳಲ್ಲಿ `ದಾಸ್ಯ’ವೂ ಒಂದಾಗಿದೆ. `ದಾಸೋಹಂ ಕೌಸಲೇಂದ್ರಸ್ಯ’ (ನಾನು ಶ್ರೀರಾಮನ ದಾಸ) ಎನ್ನುವ ಮೂಲಕ ಭಗವಂತ ಈಶ, ಮಿಕ್ಕವರೆಲ್ಲ ಅವನ ದಾಸರು ಎಂಬ ತತ್ತ್ವವನ್ನು ಹನುಮಂತ ದೇವರೂ ಪ್ರತಿಪಾದಿಸಿದ್ದಾರೆ. ಮುಂದೆ ಮಧ್ವಾಚಾರ್ಯರು, ಅವರ ನಂತರ ಅವತರಿಸಿ ಬಂದ ಯತಿವರೇಣ್ಯರು ಕೂಡ ಬದುಕಿನುದ್ದಕ್ಕೂ ಭಗವಂತನ ಸರ್ವೋತ್ತಮತ್ವ ಸಾರಿದ್ದಾರೆ. ಭಕ್ತಿಗೆ ಹೆಚ್ಚಿನ ಪ್ರಾಧಾನ್ಯ ನೀಡಿ ಕನ್ನಡ ಕೀರ್ತನೆಗಳಿಂದ ದೇವರನ್ನು ಸ್ತುತಿಸಿದ ಹರಿದಾಸರು ಕೂಡ `ದಾಸನ ಮಾಡಿಕೊ ಎನ್ನ’, `ಏಸು ಜನ್ಮ ಬಂದರೇನು ದಾಸನಲ್ಲವೇನು ನಾನು..’ ಎನ್ನುವ ಮೂಲಕ ತಾವೂ ಭಗವಂತನ ದಾಸರು ಎಂದು ಹೆಮ್ಮೆಯಿಂದ ಹಾಡಿ ಕುಣಿದಿದ್ದಾರೆ. ಅಂತಹ ಹರಿದಾಸರಲ್ಲಿ ಬಾಗಲಕೋಟೆ ಪ್ರಸನ್ನವೆಂಕಟದಾಸರೂ ಒಬ್ಬರು.
ಅಂತರಂಗ ಭಕ್ತಿ
ಮಹಾತ್ಮಪೂರ್ವಕವಾದ ಜ್ಞಾನದಿಂದ ಅನನ್ಯ ಭಕ್ತಿ. ಅದರಿಂದ ಭಗವಂತನ ಸಾಕ್ಷಾತ್ಕಾರ ಎಂಬ ಮಾತು ಸತ್ಯ. ಆದರೆ ಪ್ರಸನ್ನವೆಂಕಟದಾಸರ ಬದುಕಿನಲ್ಲಿ ಮೊದಲಿನಿಂದಲೂ ಇದ್ದದ್ದು ಅಂತರಂಗ ಭಕ್ತಿ, ನಂತರ ಭಗವಂತನ ಸಾಕ್ಷಾತ್ಕಾರ, ಅದರಿಂದ ಅಪರೋಕ್ಷ ಜ್ಞಾನ ಉಂಟಾಯಿತು ಎಂಬುದು ತಿಳಿದು ಬರುತ್ತದೆ. ಬಾಲ್ಯದಲ್ಲೇ ತಂದೆ, ತಾಯಿಯನ್ನು ಕಳೆದುಕೊಂಡು ಬಡತನ, ನಿಂದನೆಗಳಿಂದ ಬಳಲಿದ ದಾಸರು ಮನೆಬಿಟ್ಟು ಬಂದಾಗ ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಆದರೆ ಅದ್ಯಾವುದೂ ದಾಸರ ಅವತಾರದ ಉದ್ದೇಶ, ಸಾಧನೆಗೆ ಧಕ್ಕೆಯುಂಟುಮಾಡಲಿಲ್ಲ. `ಬಡತನವು ಬರಲದುವೆ ಭಗವದ್ಭಜನೆ ಯೋಗ’ ಎಂಬ ವಿಜಯದಾಸರ ಮಾತಿನಂತೆ ಕಷ್ಟದಲ್ಲೂ ನಾಮಸ್ಮರಣೆಯೊಂದಿಗೆ ದಾಸರು ಭಗವಂತನ ಬೆನ್ನು ಹತ್ತಿದರು. ಅವರ ಅಂತರಂಗ ಪರಿಶುದ್ಧ ಧವಳಗಂಗೆಯಂತೆ ಕಂಗೋಳಿಸಿದಾಗ ವೈಕುಂಠದಿಂದ ಇಳಿದು ಬಂದ ಶ್ರೀನಿವಾಸ `ಪ್ರಸನ್ನವೆಂಕಟ’ ಎಂಬ ಅಂಕಿತ ನೀಡಿ ಉದ್ಧರಿಸಿದ. `ವೈಕುಂಠಂ ವಾಪರೀತ್ಯಕ್ಷೆನ ಭಕ್ತಾನ್ ತ್ಯಕ್ತುಮುತ್ಸಹಂ’ (ವೈಕುಂಠವನ್ನಾದರೂ ಬಿಟ್ಟೇನು, ನನ್ನ ಭಕ್ತರನ್ನು ಬಿಡುವುದಿಲ್ಲ) ಎಂಬ ಮಾತನ್ನು ಸತ್ಯಗೊಳಿಸಿದ.
ಕೀರ್ತನೆ.. ಭಜನೆ..
ಜಗದ ಅಘಹರ, ತ್ರಿಗುಣಾತೀತ, ಭಯಶಮನ ಎಂದು ಭಗವಂತನನ್ನು ಕೀರ್ತನೆಗಳಿಂದ ಹಾಡಿ ಹೊಗಳಲು ಆರಂಭಿಸಿದ ದಾಸರು ನಾದೋಪಾಸನೆಯಲ್ಲಿ ಮೈಮರೆತು ನೂರಾರು ಪದ, ಸುಳಾದಿ, ಉಗಾಭೋಗಗಳನ್ನು ರಚಿಸಿದರು. ಪುರಾಣ ಉಪನಿಷತ್‍ಗಳ ಸಾರವನ್ನು ತಿಳಿಗನ್ನಡದಲ್ಲಿ ಸಾರಿದರು. ನವವಿಧ ಭಕ್ತಿಯ ಪದ್ಯಗಳು, ನಾರದ ಕೊರವಂಜಿ ವೇಷ ತಾಳಿದ ಚರಿತ್ರೆ, ಸಮಸ್ತ ನಾಮ ಮಣಿ ಷಟ್‍ಚರಣ ಪದ್ಯಮಾಲಾ, ನಾರಯಣ ಪಂಜರ ಮತ್ತಿತರ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿದರು. ಇವರು ರಚಿಸಿದ `ಶ್ರೀಮದ್ದಶಾಮ ಸ್ಕಂದ ಭಾಗವತ ಭೂಮಿಪ ಪರೀಕ್ಷಿತನು ಧೀಮಜ್ಜನ ಗುರು ಶುಕ ಮುನಿಗೆ ನಮಿಸಿ ಪ್ರೇಮದಿ ಕೇಳಿದನು’ ಎಂಬ ಕೀರ್ತನೆಯಿಂದ ‘ ಈ ದಶಮಸ್ಕಂದ ಭಾಗವತ ಪೂರ್ವಾರ್ಧವು ಮೇದಿನಿಯಲಿ ಹೇಳಿ ಕೇಳಿದುರ್ಗೆ ಯಾದವ ಕುಲರತ್ನ ಸರ್ವಪುರುಷಾರ್ಥವ ಸಾಧಿಸಿಕೊಡುವ ಸತ್ಯವು ನಿತ್ಯ’ ಎಂಬ 60ಕ್ಕೂ ಹೆಚ್ಚು ಕೃತಿಗಳನ್ನು ಒಟ್ಟುಗೂಡಿಸಿದರೆ ವೇದವ್ಯಾಸರ ಭಾಗವತ ದಶಮಸ್ಕಂದದ ಪೂರ್ವಾರ್ಧವನ್ನೇ ಕನ್ನಡಕ್ಕಿಳಿಸಿದಂತಿದೆ.
ಹರಿಕಥೆಗೆ ಬೇಸತ್ತು ಹರಟಿಯನು ಕೇಳುವವ, ಹರಿಯ ಗುಣ ಹೊಗಳದೊಣ ಪಂಟು ಬಡಿವವ.. ಕಲು ಗುಂಡಿನಂತೆ ಕಟ್ಟೆದೆ ತೊಯ್ಯದು.., ಈ ದೇಹ ಮನವೇ ಘಾಳಿ ದೀಪಾ.. ನಚ್ಚತ್ಲ ತೋಲೆ, ಚಂದಮಾಮನ ಇತ್ತಿತ್ತ ಕಲೆತಾಲೆ.. ಎಂಬ ಕೃತಿಗಳಲ್ಲಂತೂ ಉತ್ತರ ಕರ್ನಾಟಕದ ಆಡು ಭಾಷೆ ಸ್ಫುಟವಾಗಿ ಕಾಣುತ್ತದೆ.
ಅಂಗರು ಹಂಗಳು ಅಂಗನಂತಗಡ, ಮಂಗಳ ಪಾಂಗ ವಿಶ್ವಂಗಳ ಮಂಗಳ |
ಶಿಂಗರದಂಗುಟ ಸಂಗದ ಗಂಗಜ, ಗಂಗಳ ಘಂಗಳ ಹಿಂಗಿ ಪಳಾಂಗಾ !! ಎಂಬ
ಕೀರ್ತನೆ ಕನ್ನಡ ಭಾಷೆಯ ಮೇಲೆ ದಾಸರಿಗಿದ್ದ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ.
ಹೇಳಿದ ಯಮ ತನ್ನೂಳಿದವರಿಗೆ ಖೂಳ ದುರಾತ್ಮರಾಗಿ ಬಾಳುವವರನು ತರ ! ಗುರುಹಿರಿಯರೊಳಗೆ ಪ್ರತ್ಯುತ್ತರ ಕೊಡುವವರ, ಪರನಾರೇರ ನಾಳು ದುರುಳರ ಕಟ್ಟಿ ತರ ಎಂಬ ನೀತಿ ಪದಗಳ ಮೂಲಕ ಸಮಾಜ ತಿದ್ದುವ ಕೆಲಸಕ್ಕೂ ಮುಂದಾದ ಪ್ರಸನ್ನವೆಂಕಟ ದಾಸರ ಕಾರ್ಯ ಸ್ತುತ್ಯರ್ಹ. ಅಂದಾಜು ಏಳು ದಶಕಗಳ ಕಾಲ ಭುವಿಯಲ್ಲಿದ್ದು, ಬಾದಾಮಿಯಲ್ಲಿ ದಾಸರು ಅವತಾರ ಸಮಾಪ್ತಿಗೊಳಿಸಿದ ಸ್ಥಳದಲ್ಲಿ ಇಂದಿಗೂ ಒಂದು ಕಟ್ಟೆಯಿದೆ. ಬಾಗಲಕೋಟೆಯಲ್ಲಿ ದಾಸರು ಆಡಿ ಬೆಳೆದ ಮನೆ ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಿದ್ದು, ಆ ಸ್ಥಳದಲ್ಲೂ ಈಗ ಕಟ್ಟೆ ನಿರ್ಮಿಸಲಾಗಿದೆ ದಾಸರು ಭಗವಂತನಿಂದಲೇ ಪಡೆದು ಪೂಜಿಸಿದ ಶ್ರೀ ಭೂದೇವಿ ಸಹಿತ ಶ್ರೀನಿವಾಸ ದೇವರು, ಕೀರ್ತನೆಗಳೊಂದಿಗೆ ಹಾಡಿ ಕುಣಿಯುತ್ತಿದ್ದಾಗ ಬಳಸುತ್ತಿದ್ದ ತಂಬೂರಿ, ಚಿಪ್ಪಳಿ, ಗೋಪಾಳಬುಟ್ಟಿ ಇಂದಿಗೂ ಬಾಗಲಕೋಟೆಯ ದಾಸರ ವಂಶಸ್ಥರ ಮನೆಯಲ್ಲಿ ಇವೆ.
Discussion about this post