ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಅವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಅಧಿಕಾರಿಗಳು, ಅವರನ್ನು ಕೇಂದ್ರ ಕಚೇರಿಗೆ ಕರೆಯೊಯ್ದು ವಿಚಾರಣೆ ನಡೆಸಲಿದ್ದಾರೆ.
ಇಂದು ಮುಂಜಾನೆ ನಟಿಗೆ ಶಾಕ್ ನೀಡಿರುವ ಸಿಸಿಬಿ ಅಧಿಕಾರಿಗಳು ಯಲಹಂಕದಲ್ಲಿರುವ ರಾಗಿಣಿ ಅವರ ನಿವಾಸಕ್ಕೆ ಸರ್ಚ್ ವಾರೆಂಟ್ ಸಹಿತ ದಾಳಿ ನಡೆಸಿ, ಮನೆಯನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಮಹತ್ವದ ದಾಖಲೆಗಳು ದೊರೆತಿವೆ ಎಂದು ಹೇಳಲಾಗಿದ್ದು, ಅವುಗಳ ಸಹಿತ ರಾಗಿಣಿ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು, ಸಿಸಿಬಿ ಕೇಂದ್ರ ಕಚೇರಿಗೆ ಕರೆದೊಯ್ದಿದ್ದಾರೆ.
ಮಾದಕ ವಸ್ತು ಮಾರಾಟ ದಂಧೆ ಪ್ರಕರಣದಲ್ಲಿ ಖ್ಯಾತ ನಟಿ ರಾಗಿಣಿ ಗೆಳೆಯ ಹಾಗೂ ಸಾರಿಗೆ ಇಲಾಖೆ ದ್ವಿತೀಯ ದರ್ಜೆ ಸಹಾಯಕ ರವಿ ಶಂಕರ್ ನನ್ನು ಸಿಸಿಬಿ ಪೊಲೀಸರು ನಿನ್ನೆಯಷ್ಟೇ ಬಂಧನಕ್ಕೊಳಪಡಿಸಿದ್ದರು. ಇದರ ಬೆನ್ನಲ್ಲೇ ಇಂದು ರಾಗಿಣಿ ಅವರನ್ನು ಸಿಸಿಬಿ ವಶಕ್ಕೆ ಪಡೆದಿದೆ.
ಪ್ರಕರಣ ಸಂಬಂಧ ನೋಟಿಸ್ ಜಾರಿ ಮಾಡಿದ್ದರೂ ಸಹ ಗುರುವಾರ ರಾಗಿಣಿಯವರು ವಿಚಾರಣೆಗೆ ಗೈರಾಗಿದ್ದರು. ವೈಯಕ್ತಿಕ ಕಾರಣ ನೀಡಿ ಗೈರಾಗಿರುವ ನಟಿ, ಸೋಮವಾರ ವಿಚಾರಣೆಗೆ ಬರಲು ಬದ್ಧರಾಗಿರುವುದಾಗಿ ಹೇಳಿಕೊಂಡಿದ್ದರು. ಆದರೆ, ಇದಕ್ಕೆ ಒಪ್ಪದ ಸಿಸಿಬಿ ಪೊಲೀಸರು, 2ನೇ ಬಾರಿ ನೋಟಿಸ್ ನೀಡಿದ್ದು, ಮತ್ತೆ ಗೈರಾದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದೆ ಎಂದು ಹೇಳಲಾಗುತ್ತಿದೆ.
Get In Touch With Us info@kalpa.news Whatsapp: 9481252093
Discussion about this post