ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಗಣೇಶ ಚತುರ್ಥಿ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ತಿಳಿಸಿದ್ದಾರೆ.
ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಅವರು,ಗಣೇಶ ಹಬ್ಬವನ್ನು ಸರಳ ರೀತಿಯಲ್ಲಿ ದೇವಸ್ಥಾನದಲ್ಲಿ ಅಥವಾ ತಮ್ಮ ಮನೆಯಲ್ಲಿಯೇ ಆಚರಿಸಬಹುದಾಗಿದೆ. ಮಾರ್ಗಸೂಚಿ ಪ್ರಕಾರ ಯಾವುದೇ ಕಾರಣಕ್ಕೂ ಸಾರ್ವಜನಿಕ ನದಿ, ಕೊಳ, ಬಾವಿ ಮತ್ತು ಕಲ್ಯಾಣಿಗಳಲ್ಲಿ ಮೂರ್ತಿಯನ್ನು ವಿಸರ್ಜನೆ ಮಾಡುವಂತಿಲ್ಲ. ಗಣೇಶೋತ್ಸವದ ಯಾವುದೇ ಸಂದರ್ಭಗಳಲ್ಲಿ ಮೆರವಣಿಗೆ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗಣೇಶ ಹಬ್ಬ ಆಚರಿಸುವ ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಸೇಷನ್ ಮಾಡಬೇಕು. ಸಾರ್ವಜನಿಕ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ದರ್ಶನಕ್ಕಾಗಿ ಬರುವ ಭಕ್ತರಿಗೆ ಕನಿಷ್ಠ 6 ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು ಹಾಗೂ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳತಕ್ಕದ್ದು. ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕೆಂದು ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೇ ಇಲಾಖೆಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಜವಾಬ್ಧಾರಿಯು ನಾಗರೀಕರು ಕಡ್ಡಾಯವಾಗಿ ಪಾಲಿಸಬೇಕೆಂದು ಆಯುಕ್ತರು ತಿಳಿಸಿರುತ್ತಾರೆ.
ಹಬ್ಬಹರಿದಿನಗಳನ್ನು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯಗಳನ್ನು ಕಾಪಾಡಲು ಆಚರಿಸುವುದರಿಂದ ಗಣೇಶೋತ್ಸವ ಹಬ್ಬವನ್ನು ಅದೇ ರೀತಿಯಲ್ಲಿ ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಕಾಪಾಡುವುದು ಅಗತ್ಯ. ಸಾರ್ವಜನಿಕರು ಜಿಲ್ಲಾಡಳಿತದ ಈ ಆದೇಶ/ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸುವಂತೆ ಆಯುಕ್ತರು ಕೋರಿದ್ದಾರೆ ಹಾಗೂ ಕಾನೂನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005 ರನ್ವಯ ಹಾಗೂ ಭಾರತೀಯ ದಂಡ ಸಂಹಿತೆ ಸೆ. 188ರ ಅಡಿಯಲ್ಲಿ ಶಿಸ್ತಿನ/ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post