ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಭದ್ರಾವತಿಯ ವಿಎಸ್‍ಐಎಲ್ ಆಕ್ಸಿಜನ್ ತಯಾರಕಾ ಘಟಕದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.
ಅವರು ಶುಕ್ರವಾರ ವಿಎಸ್‍ಐಎಲ್ ಆಕ್ಸಿಜನ್ ತಯಾರಕಾ ಘಟಕಕ್ಕೆ ಭೇಟಿ ನೀಡಿ ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು.
ಪ್ರಸ್ತುತ ವಿಎಸ್‍ಐಎಲ್‍ನಲ್ಲಿ ಸ್ಥಳೀಯ ಬಳಕೆಗಾಗಿ ಆಕ್ಸಿಜನ್ ಉತ್ಪಾದಿಸಲಾಗುತ್ತಿದೆ. ವೈದ್ಯಕೀಯ ಬಳಕೆಗೆ ಸೂಕ್ತವಾದ ಆಕ್ಸಿಜನ್ ಇಲ್ಲಿ ಉತ್ಪಾದಿಸಲಾಗುತ್ತಿದ್ದು, ಶಿವಮೊಗ್ಗ ನಗರದ ಆಸ್ಪತ್ರೆಗಳಿಗೆ ಇಲ್ಲಿಂದ ಆಕ್ಸಿಜನ್ ಪೂರೈಕೆ ಮಾಡಲು ಸರ್ಕಾರದಿಂದ ಪರವಾನಿಗೆ ಒದಗಿಸಲಾಗುವುದು. ಶಿವಮೊಗ್ಗ ನಗರದ ಆಸ್ಪತ್ರೆಗಳ ಶೇ.30ರಷ್ಟು ಆಕ್ಸಿಜನ್ ಬೇಡಿಕೆಯನ್ನು ಈ ಒಂದೇ ಘಟಕದಿಂದ ಪೂರೈಕೆ ಮಾಡಲು ಸಾಧ್ಯವಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಆಸ್ಪತ್ರೆಗಳಿಗೆ ಅಗತ್ಯವಿರುವ ಆಕ್ಸಿಜನ್ ಲಭ್ಯವಿರುವ ಕಡೆಗಳಿಂದ ತರಿಸಲು ಕ್ರಮ ಕೈಗೊಳ್ಳಲಾಗಿದೆ. ಆಕ್ಸಿಜನ್ ಸಾಗಾಟ ಮಾಡಲು ಟ್ಯಾಂಕರ್‍ಗಳ ಕೊರತೆ ಕಂಡು ಬಂದಿದ್ದು, ಉನ್ನತ ಮಟ್ಟದಲ್ಲಿ ಸಮಾಲೋಚನೆ ನಡೆಸಿ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು. ವಿಎಸ್‍ಐಎಲ್ ಘಟಕದಲ್ಲಿ 300ಗ್ಯಾಸ್ ಸಿಲಿಂಡರ್‍ಗಳು ಸಹ ಲಭ್ಯವಿದ್ದು, ಇದನ್ನು ಸಹ ಜಿಲ್ಲೆಯ ಉಪಯೋಗಕ್ಕಾಗಿ ಬಳಸಿಕೊಳ್ಳಲಾಗುವುದು. ಇಲ್ಲಿ ಆಕ್ಸಿಜನ್ ಆನಿಲ ರೂಪದಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದು, ಅದನ್ನು ದ್ರವ ರೂಪಕ್ಕೆ ರೂಪಾಂತರ ಮಾಡುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಲು ಸೂಚಿಸಿದರು.
ಯಾವುದೇ ಕಾರಣಕ್ಕೂ ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಕರೋನಾ ಪಾಸಿಟಿವ್ ವ್ಯಕ್ತಿಗಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಕುರಿತು ಯಾವುದೇ ದೂರು ಬಂದಿಲ್ಲ. ಆದರೆ ಕರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಎಲ್ಲಾ ಮೂಲಗಳಿಂದ ಆಕ್ಸಿಜನ್ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಮೆಗ್ಗಾನ್ ಆವರಣದಲ್ಲಿ 12ಕೆಎಲ್ ಸಾಮಥ್ರ್ಯದ ಆಕ್ಸಿಜನ್ ಸಂಗ್ರಹಣಾ ಘಟಕವನ್ನು ಅಳವಡಿಸಲಾಗುತ್ತಿದ್ದು ಕೆಲವೇ ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಖಾಸಗಿ ಆಕ್ಸಿಜನ್ ಸಾಗಾಟದಾರರ ನೆರವಿನಿಂದ ಪ್ರಸ್ತುತ ಬಳ್ಳಾರಿಯಿಂದ ವೈದ್ಯಕೀಯ ಸೇವೆಗೆ ಅಗತ್ಯವಾದ ಆಕ್ಸಿಜನ್ ಬಳ್ಳಾರಿಯಿಂದ ತರಿಸಲಾಗುತ್ತಿದೆ. ಈಗ ಅಗತ್ಯಕ್ಕೆ ತಕ್ಕ ಆಕ್ಸಿಜನ್ ಜಿಲ್ಲೆಗೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಅಗತ್ಯ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಎಸ್‍ಐಎಲ್ ಘಟಕದಿಂದ ಆಕ್ಸಿಜನ್ ಪಡೆಯಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ವಿಎಸ್‍ಐಎಲ್ ಘಟಕದ ಹಿರಿಯ ಅಧಿಕಾರಿಗಳು, ಖಾಸಗಿ ಪೂರೈಕೆದಾರರು ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post