ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನವದೆಹಲಿಯ ಡಿಎಲ್‌ಟಿಎ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ 30ನೇ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕರ್ನಾಟಕದ ಸೋಹಾ ಸಾದಿಕ್ ಅವರು ಸೆಮಿಫೈನಲ್ ತಲುಪುವ ಮೂಲಕ ತನ್ನ ಗೆಲುವಿನ ಕುದುರೆ ಸವಾರಿಯನ್ನು ಮುಂದುವರಿಸಿದ್ದಾರೆ.
ಕೋರ್ಟ್ 6 ರಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, 4 ನೇ ಶ್ರೇಯಾಂಕದ ಆಟಗಾರ್ತಿ ಭಾರತದ ಅದಿತಿ ರಾವತ್ ವಿರುದ್ಧ 6-3, 6-2 ಅಂತರದಲ್ಲಿ ಜಯಗಳಿಸಿದರು. ಆಟಗಾರ್ತಿ ಹಲವು ಅವಡುಗಚ್ಚುವ ಪಂದ್ಯಗಳಲ್ಲಿ ಕಠಿಣ ಪರಿಶ್ರಮ ವಹಿಸಿ 1 ಗಂಟೆ 35 ನಿಮಿಷಗಳಲ್ಲಿ ಪಂದ್ಯವನ್ನು ಮುಗಿಸಿ ಸೆಮಿಫೈನಲ್ ಪ್ರವೇಶಿಸಿದರು.
ಡಿಸಿಎಂ ಶ್ರೀರಾಮ್ ಲಿಮಿಟೆಡ್ ಸಹಯೋಗದೊಂದಿಗೆ, ಆಲ್ ಇಂಡಿಯಾ ಟೆನಿಸ್ ಅಸೋಸಿಯೇಷನ್ (ಎಐಟಿಎ) ಮತ್ತು ದೆಹಲಿ ಲಾನ್ ಟೆನಿಸ್ ಅಸೋಸಿಯೇಷನ್ (ಡಿಎಲ್‌ಟಿಎ) ಆಶ್ರಯದಲ್ಲಿ ನಡೆಯುತ್ತಿರುವ ಫೆನೆಸ್ಟಾ ಓಪನ್ ಭಾರತದ ಅತಿದೊಡ್ಡ ದೇಶೀಯ ಟೆನಿಸ್ ಚಾಂಪಿಯನ್‌ಶಿಪ್ ಆಗಿದ್ದು, ದೇಶಾದ್ಯಂತದ ಉನ್ನತ ಸ್ಪರ್ಧಿಗಳಿಗೆ ತಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಲು ಕೈಬೀಸಿ ಕರೆಯುತ್ತಿದೆ.
ಏತನ್ಮಧ್ಯೆ, ಪುರುಷರ ಕ್ವಾರ್ಟರ್ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಇಶಾಕ್ ಎಕ್ಬಾಲ್ ಏಳನೇ ಶ್ರೇಯಾಂಕದ ಅಜಯ್ ಮಲಿಕ್ ಅವರನ್ನು 6-1, 6-2 ಸೆಟ್‌ಗಳಿಂದ ಸೋಲಿಸಿ ಕೊನೆಯ ನಾಲ್ಕಕ್ಕೆ ಪ್ರವೇಶಿಸಿದರು.
ತಮಿಳುನಾಡಿನ ಮನೀಶ್ ಸುರೇಶ್‌ಕುಮಾರ್ ಕೂಡ ನಿತಿನ್ ಕುಮಾರ್ ಸಿನ್ಹಾ ಅವರೊಂದಿಗೆ ಮೂರು ಸೆಟ್‌ಗಳ ಕುತೂಹಲಕಾರಿ ಹೋರಾಟದ ನಂತರ ಮುನ್ನಡೆ ಸಾಧಿಸಿದರೆ, ಅಗ್ರ ಶ್ರೇಯಾಂಕದ ಮಹಾರಾಷ್ಟ್ರದ ವೈಷ್ಣವಿ ಅಡ್ಕರ್ ಅವರು ಪಂಜಾಬ್‌ನ ಸಾಹಿರಾ ಸಿಂಗ್ ಅವರನ್ನು 6-3, 6-1 ರಿಂದ ಸೋಲಿಸುವ ಮೂಲಕ ಮಹಿಳೆಯರ ವಿಭಾಗದಲ್ಲಿ ತಮ್ಮ ಉತ್ತಮ ಫಾರ್ಮ್ ಮುಂದುವರಿಸಿದರು.
18 ವರ್ಷದೊಳಗಿನವರ ಕ್ವಾರ್ಟರ್ ಫೈನಲ್‌ನಲ್ಲಿ, ಸ್ನಿಗ್ಧಾ ಕಾಂತಿತಾ (ಕರ್ನಾಟಕ) ಬಾಲಕಿಯರ ವಿಭಾಗದಲ್ಲಿ ದಿಯಾ ರಮೇಶ್ (ತಮಿಳುನಾಡು) ಅವರನ್ನು 6-3, 6-3 ಸೆಟ್‌ಗಳಿಂದ ಸೋಲಿಸಿದರೆ, ಹೃತಿಕ್ ಕಟಕಮ್ (ಜಾರ್ಖಂಡ್) ಬಾಲಕರ ವಿಭಾಗದಲ್ಲಿ ಎಂ. ಕಂಧವೇಲ್ (ತಮಿಳುನಾಡು) ಅವರನ್ನು 2-6, 6-1, 6-1 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದರು.ಪ್ರಮುಖ ಪ್ರಶಸ್ತಿಗಳ ಹೊರತಾಗಿ, ವಿಜೇತರು ಒಟ್ಟು 21.55 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಡೆಯಲಿದ್ದಾರೆ. ಜೂನಿಯರ್ ಆಟಗಾರರಿಗೆ ಕಿಟ್ ಭತ್ಯೆಗಳು ಸಹ ಸಿಗಲಿವೆ. U16 ಮತ್ತು U14 ಸಿಂಗಲ್ಸ್ ಸ್ಪರ್ಧೆಗಳಲ್ಲಿ ವಿಜೇತರು ಮತ್ತು ರನ್ನರ್ ಅಪ್ ಆದವರಿಗೆ ತಲಾ ₹25,000 ಟೆನಿಸ್ ವಿದ್ಯಾರ್ಥಿವೇತನ ದೊರೆಯಲಿದೆ.
16 ವರ್ಷದೊಳಗಿನ ಮತ್ತು 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದ ಅರ್ಹತಾ ಸುತ್ತಿನ ಮತ್ತು ಮುಖ್ಯ ಸುತ್ತಿನ ಪಂದ್ಯಗಳು ಅಕ್ಟೋಬರ್ 5 ರಿಂದ ಅಕ್ಟೋಬರ್ 11 ರವರೆಗೆ ನಡೆಯಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post