ಪ್ರಪಂಚ ಸ್ವಾರ್ಥಿಗಳಿಂದ ತುಂಬಿದೆ ನಿಜ. ಆದರೆ ಈ ಸ್ವಾರ್ಥಿಗಳಿಂದ ತುಂಬಿದ ಪ್ರಪಂಚ ನಾಶವಾಗದಂತೆ ಕಾಪಾಡಲು ನಿಸ್ವಾರ್ಥ ಮನೋಭಾವನೆಯಿಂದ ಪರರ ಸುಖಕ್ಕಾಗಿ, ತತ್ವಕ್ಕಾಗಿ, ಧ್ಯೇಯನಿಷ್ಠೆಗಾಗಿ, ತನ್ನ ಪರಂಪರೆಯ ಹೆಸರುಳಿಸುವುದಕ್ಕಾಗಿ ಪ್ರಾಣವನ್ನೂ ಲೆಕ್ಕಿಸದೇ ಹೋರಾಡುವ ಒಂದಷ್ಟು ಜನ ಇತಿಹಾಸದಲ್ಲಿ ಸದಾ ಕಾಲ ಇದ್ದೇ ಇರುತ್ತಾರೆ. ನಿರ್ಣಾಯಕ ಸಮಯದಲ್ಲಿ ಆಶ್ಚರ್ಯಕರವಾದ ತೀರ್ಮಾನಗಳನ್ನು ತೆಗೆದುಕೊಳ್ಳುವ ಇಂಥವರು ಇತಿಹಾಸದಲ್ಲಿ ತಮ್ಮ ಹೆಸರನ್ನು ಅಜರಾಮರವಾಗಿ ಉಳಿಸಿ ಹೋಗುತ್ತಾರೆ. ಹಾಗೆ ತಾವು ನಂಬಿದ ಒಂದು ಸಿದ್ಧಾಂತಕ್ಕೋಸ್ಕರ, ಉದಾತ್ತ ಆದರ್ಶಕ್ಕೋಸ್ಕರ, ಧ್ಯೇಯಸಾಧನೆಗೋಸ್ಕರ ದಿಟ್ಟತನದಿಂದ ಹೋರಾಡುತ್ತಾ ತಮ್ಮ ಪ್ರಾಣವನ್ನೇ ಬಲಿದಾನ ಮಾಡುವ ಭಾರತೀಯ ಸೈನಿಕರ ಶ್ರೇಷ್ಠತಮವಾದ ಕಥೆಗಳಲ್ಲೊಂದು ಕೇಸರಿ.
ಅಂದಿನ ಅಖಂಡ ಭಾರತದ, ಇಂದಿನ ಪಾಕಿಸ್ತಾನದ ಸಾರಾಗಡಿ ಕೋಟೆಯಲ್ಲಿ 1897 ರ ಸೆಪ್ಟೆಂಬರ್ 12 ರಂದು ಬ್ರಿಟಿಷ್ ಸೈನ್ಯದ ಭಾರತೀಯ ಸಿಖ್ ಸೈನಿಕರಿಗೂ ಮತ್ತು ಆಫ್ಘನ್ ಸೈನ್ಯಕ್ಕೂ ನಡುವೆ ನಡೆದ ಭೀಕರ ಯುದ್ಧದ ಸತ್ಯ ಘಟನೆಗಳ ಮೇಲೆ ಕೇಸರಿ ಚಿತ್ರ ಹೆಣೆಯಲ್ಪಟ್ಟಿದೆ. 10,000 ಕ್ಕೂ ಹೆಚ್ಚು ಸಂಖ್ಯಾಬಲದ ಆಫ್ಘನ್ ಬುಡಕಟ್ಟು ಸೈನ್ಯದ ವಿರುದ್ಧ ಕೇವಲ 21 ಭಾರತೀಯ ಸಿಖ್ ಸೈನಿಕರ ಒಂದು ತುಕಡಿ ಸತತ ಏಳು ಗಂಟೆಗಳ ಕಾಲ ಅವಿರತವಾಗಿ ಹೋರಾಡಿ 600 ಶತ್ರುಗಳನ್ನು ಕೊಂದು ಹುತಾತ್ಮರಾಗುವ ಅಮೋಘ ಬಲಿದಾನದ ಘಟನೆ ಅದು. ಬ್ರಿಟೀಷ್ ಮತ್ತು ಕಮ್ಯುನಿಸ್ಟ್ ಪ್ರಣೀತ ಭಾರತೀಯ ಇತಿಹಾಸದಲ್ಲಿ ಮರೆತುಹೋದ ಈ ಘಟನೆ ಇಡೀ ಜಗತ್ತಿನಲ್ಲೇ ನಡೆದ ಅತ್ಯಂತ ಶ್ರೇಷ್ಠ ಹೋರಾಟಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಇಂಥಾ ರೋಚಕ ಕಥೆಯನ್ನಿಟ್ಟುಕೊಂಡ, ಅಕ್ಷಯ್ ಕುಮಾರ್ ಅಭಿನಯದ ಈ ಹಿಂದಿ ಚಿತ್ರ ಬಿಡುಗಡೆಯಾದ ಮೊದಲ ವಾರವೇ ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸಿದೆ ಮಾತ್ರವಲ್ಲ ಭಾರತೀಯರು ಹೇಡಿಗಳು ಎಂಬ ಮೆಕಾಲೆ ಪ್ರಣೀತ ಶಿಕ್ಷಣದಿಂದ ಉತ್ಪನ್ನವಾದ ಸುಳ್ಳಿಗೆ ಸವಾಲೆಸೆದು ನಿಂತಿದೆ.
ಹಾಗಿದ್ದರೆ ಏನಿದು ಸಾರಾಗಢಿ ಯುದ್ಧ? ಅಲ್ಲಿ ಅಂದು ನಡೆದದ್ದಾದರೂ ಏನು? ಯಾಕೆ ಈ ಯುದ್ಧಕ್ಕೆ ಅಷ್ಟು ಮಹತ್ವ?? ಹೇಳುತ್ತೇನೆ ಕೇಳಿ.
ಅದು 1897 ನೇ ಇಸವಿ. ಭಾರತ ಬ್ರಿಟಿಷರ ಕಪಿಮುಷ್ಠಿಯಲ್ಲಿ ಸಿಲುಕಿತ್ತು. ನಮ್ಮದೇ ದೇಶದ ಜನರನ್ನು ಸೈನಿಕರನ್ನಾಗಿಸಿ ತಮ್ಮ ಸೇನೆಯಲ್ಲಿಟ್ಟುಕೊಂಡು ನಮ್ಮನ್ನೇ ಆಳ್ವಿಕೆ ಮಾಡುತ್ತಿದ್ದರು ಬಿಳಿಯರು. ಆಫ್ಘಾನಿಸ್ತಾನದ ಭಾಗದಲ್ಲಿ ತನ್ನ ಹಿಡಿತವನ್ನು ಗಟ್ಟಿ ಮಾಡಲು ಬ್ರಿಟನ್ ಗುಲಿಸ್ತಾನ್ ಮತ್ತು ಫೋಕಾರ್ಟ್ ಎಂಬ ಜಾಗದಲ್ಲಿ ಎರಡು ಕೋಟೆಗಳನ್ನು ಕಟ್ಟಿತ್ತು. ಈ ಎರಡು ಕೋಟೆಗಳ ನಡುವಿನ ಅಂತರ ಬಹಳ ದೂರವಿದ್ದುದರಿಂದ ಕನ್ನಡಿಯನ್ನು ಉಪಯೋಗಿಸಿ ಕಳುಹಿಸುತ್ತಿದ್ದ (ಸಿಗ್ನಲ್) ಸಂದೇಶದ ಉಪಾಯ ಫಲಿಸದಾಗಿತ್ತು. ಹೀಗಾಗಿ ಒಂದು ಕೋಟೆಯಿಂದ ಸಂದೇಶವನ್ನು ಪಡೆದು ಇನ್ನೊಂದಕ್ಕೆ ಕಳುಹಿಸುವ ಸಲುವಾಗಿ ಈ ಎರಡು ಕೋಟೆಯ ಮಧ್ಯ ಇದ್ದ ಸಾರಾಗಡಿ ಎಂಬ ಬೆಟ್ಟದ ಹಳ್ಳಿಯ ಮೇಲೆ ಸಣ್ಣ ಕೋಟೆಯೊಂದನ್ನು ಕಟ್ಟಿ ಅದನ್ನು ನೋಡಿಕೊಳ್ಳಲು 21 ಸಿಖ್ ಸೈನಿಕರನ್ನು ನೇಮಿಸಿರುತ್ತಾರೆ.
ಇತ್ತ ಬ್ರಿಟಿಷರ ಆಡಳಿತವನ್ನು ಒಪ್ಪದ ಅಫ್ಘನ್ ಬುಡಕಟ್ಟು ಜನರು ಈ ಕೋಟೆಯನ್ನು ವಶಪಡಿಸಿಕೊಳ್ಳಲು ಸರಿಯಾದ ಸಮಯಕ್ಕಾಗಿ ಹೊಂಚು ಹಾಕುತ್ತಿರುತ್ತಾರೆ. ಒಂದು ದಿನ ಅವರೆಲ್ಲರೂ ಜಿಹಾದ್ ಹೆಸರಿನಲ್ಲಿ ಒಗ್ಗಟ್ಟಾಗಿ ಸುಮಾರು 10,000 ರಷ್ಟು ಜನ ಏಕಾಏಕಿ ಶಸ್ತ್ರಾಸ್ತ್ರಗಳ ಸಮೇತ ಸಾರಾಗಡಿಯತ್ತ ಮುನ್ನುಗ್ಗುತ್ತಾರೆ. ಸಾಧ್ಯವಾದಷ್ಟು ಬೇಗ ಈ ಕೋಟೆಯನ್ನು ವಶಪಡಿಸಿಕೊಂಡು ಸಂಜೆಯ ವೇಳೆಗೆ ಉಳಿದ ಎರಡು ಕೋಟೆಗಳನ್ನೂ ವಶಪಡಿಸಿಕೊಂಡು ಬ್ರಿಟೀಷರ ಮಗ್ಗಲು ಮುರಿಯುವ ಇರಾದೆ ಅವರದ್ದಾಗಿರುತ್ತದೆ.
ಬೃಹತ್ ಸೈನ್ಯವೊಂದು ತಮ್ಮ ಬಳಿಗೆ ಧಾವಿಸುತ್ತಿರುವುದನ್ನು ದೂರದಿಂದಲೇ ಗಮನಿಸಿದ ಸಿಗ್ನಲ್ ಮ್ಯಾನ್ ಆಗಿದ್ದ 19 ವರ್ಷದ ಗುರುಮುಖ್ ಸಿಂಗ್ ತನ್ನ ತುಕಡಿಯ ನಾಯಕ ಹವಿಲ್ದಾರ್ ಇಶಾರ್ ಸಿಂಗ್ ಗೆ ಸುದ್ದಿ ತಿಳಿಸುತ್ತಾನೆ. ಅವನ ಆಣತಿಯಂತೆ ಅಕ್ಕ ಪಕ್ಕದ ಎರಡು ಕೋಟೆಯ ಪ್ರಮುಖರಿಗೆ ತುರ್ತಾಗಿ ಹೆಚ್ಚುವರಿ ಸೈನ್ಯ ಕಳುಹಿಸುವಂತೆ ಸಂದೇಶ ಕಳುಹಿಸುತ್ತಾನೆ. ಆದರೆ ಆ ಕೋಟೆಗಳಲ್ಲೂ ಸಾಕಷ್ಟು ಹೆಚ್ಚುವರ ಸೈನ್ಯದ ಕೊರತೆಯಿದ್ದ ಕಾರಣದಿಂದಾಗಿ ತಕ್ಷಣಕ್ಕೆ ಸಹಾಯ ಲಭಿಸುವುದು ಅಸಾಧ್ಯವಾಗಿರುತ್ತದೆ. ಹೀಗಾಗಿ ಸಾರಾಗಢಿಯ ಸೈನಿಕರು ಹೊರಗಿನಿಂದ ಸಹಾಯ ಪಡೆಯಲು ಕನಿಷ್ಠ ಮರುದಿನ ಬೆಳಿಗ್ಗೆಯವರೆಗಾದರೂ ಕಾಯಬೇಕಾಗುತ್ತಿತ್ತು.
ಇತ್ತ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದ ಶತ್ರು ಸೈನ್ಯವನ್ನು ಮರುದಿನದವರೆಗಿರಲಿ ಅರ್ಧಗಂಟೆಯೂ ತಡೆಹಿಡಿಯುವಷ್ಟು ಸಂಖ್ಯಾಬಲ ಸಾರಾಗಡಿಯಲ್ಲಿರಲಿಲ್ಲ. ಹೀಗಾಗಿ ಮೇಲಧಿಕಾರಿಗಳು ಸೈನಿಕರಿಗೆ ಅಲ್ಲಿಂದ ತಪ್ಪಿಸಿಕೊಂಡು ಬರಲು ಸಿಗ್ನಲ್ ಮೂಲಕ ಸೂಚನೆ ನೀಡುತ್ತಾರೆ. ಆದರೆ ಶತ್ರುಗಳಿಗೆ ಹೆದರಿ ಓಡಿಹೋಗುವುದನ್ನು ಅವಮಾನವೆಂದು ಭಾವಿಸಿ, ತಮ್ಮ ಶೌರ್ಯ ಪರಾಕ್ರಮಗಳನ್ನು ಜಗತ್ತಿಗೆ ತೋರಿಸಲು ಇದೊಂದು ಸದವಕಾಶವೆಂದು ಬಗೆದು ಅಲ್ಲಿದ್ದ 21 ಜನ ಸಿಖ್ಖರೂ ಹೋರಾಡುತ್ತಾ ವೀರಮರಣವನ್ನು ಅಪ್ಪಲು ನಿರ್ಧರಿಸುತ್ತಾರೆ.
ಆಗ ಶುರುವಾಯಿತು ಭೀಕರ ಕದನ. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಈ ಯುದ್ಧದಲ್ಲಿ ಕೇವಲ 21 ಜನ ಸೈನಿಕರು 10,000 ಜನರೆದುರು ಅದ್ವಿತೀಯವಾಗಿ ಹೋರಾಡುತ್ತಾ ಸಂಜೆ 6 ಗಂಟೆಯವರೆಗೂ ಕೋಟೆಯನ್ನು ರಕ್ಷಿಸುತ್ತಾರೆ. ಆದರೆ ಅಪಾರ ಸಂಖ್ಯೆಯಲ್ಲಿದ್ದ ಶತ್ರುಗಳು ಕೊನೆಗೂ ಕೋಟೆಯ ಗೋಡೆ ಒಡೆದು ಒಳಬಂದೇಬಿಡುತ್ತಾರೆ. ಅದುವರೆಗೂ ಬಂದೂಕಿನಿಂದ ಯುದ್ಧ ಮಾಡುತ್ತಿದ್ದ ಸಿಖ್ಖರು ಈಗ ಖಡ್ಗ ಹಿಡಿದು ರಣರಂಗಕ್ಕಿಳಿಯುತ್ತಾರೆ. “ಜೋ ಬೋಲೇ ಸೋ ನಿಹಾಲ್ ಸತ್ ಶ್ರೀ ಅಕಾಲ್” ಎಂಬ ಯುದ್ಧ ಘೋಷವನ್ನು ಮಾಡುತ್ತಾ ವೀರಾವೇಶದಿಂದ ಶತ್ರುಗಳ ರುಂಡಗಳನ್ನು ಚೆಂಡಾಡಲಾರಂಭಿಸುತ್ತಾರೆ.
ಸಿಖ್ ಸೈನಿಕರಲ್ಲಿ ಒಬ್ಬೊಬ್ಬನೂ ಹತ್ತಿಪ್ಪತ್ತು ಸಂಖ್ಯೆಯಲ್ಲಿ ಶತ್ರುಗಳನ್ನು ಕೊಂದು ಕೊನೆಗೆ ತಾವೂ ಹುತಾತ್ಮರಾಗುತ್ತಾರೆ. ಕೊನೆಯಲ್ಲಿ ಗೋಪುರದ ಮೇಲಿದ್ದ ಸಿಗ್ನಲ್ ರೂಮ್ ನಲ್ಲಿ ಏಕಾಂಗಿಯಾಗಿ ಉಳಿದಿದ್ದ 19 ವರ್ಷದ ಗುರುಮುಖ ಸಿಂಗ್ ನಡೆಯುತ್ತಿದ್ದ ಘಟನೆಯ ಮಾಹಿತಿಯನ್ನು ಸಿಗ್ನಲ್ ಮೂಲಕ ಬ್ರಿಟಿಷ್ ಅಧಿಕಾರಿಗಳಿಗೆ ಮುಟ್ಟಿಸುತ್ತಾ ಕೊನೆಯದಾಗಿ ತಾನು ಬಂದೂಕು ಹಿಡಿಯಲು ಅನುಮತಿ ಕೇಳಿ ಪಡೆಯುತ್ತಾನೆ. ದಾಳಿಕೋರರು ಗುರುಮುಖ್ ಸಿಂಗ್ ಇದ್ದ ಸಿಗ್ನಲ್ ಕೊಠಡಿಗೆ ಬೆಂಕಿ ಹಚ್ಚುತ್ತಾರೆ. ಆದರೆ ಅಂಥಾ ಸ್ಥಿತಿಯಲ್ಲೂ ಅದ್ಭುತ ಹೋರಾಟ ನಡೆಸಿದ ಆ ಹುಡುಗ “ಜೋ ಬೋಲೇ ಸೋ ನಿಹಾಲ್ ಸತ್ ಶ್ರೀ ಅಕಾಲ್” ಘೋಷಣೆ ಕೂಗುತ್ತಾ 20ಕ್ಕೂ ಹೆಚ್ಚು ಶತ್ರುಗಳನ್ನು ಕೊಂದು ತಾನೂ ಹುತಾತ್ಮನಾಗುತ್ತಾನೆ.
ದಾಳಿಕೋರರು ಆ ಕೋಟೆಯನ್ನು ಗೆದ್ದುಕೊಂಡರೂ ಸಹಾ ಕೇವಲ 21 ಜನರ ಎದುರು ತಮ್ಮ ಪಕ್ಷದ 500 ರಿಂದ 600 ಜನರನ್ನು ಕಳೆದುಕೊಂಡ ಕಾರಣದಿಂದ ಗೆದ್ದೂ ಸೋತಂತಾಗುತ್ತಾರೆ. ಇತ್ತ ಕೋಟೆಯನ್ನು ಉಳಿಸಲು ಹೋರಾಡಿ ಪ್ರಾಣ ಕೊಟ್ಟ ಸಿಕ್ಖರು ಸೋಲಿನಲ್ಲೂ ಗೆಲುವು ಕಾಣುತ್ತಾರೆ. ಸಾಲದ್ದಕ್ಕೆ ಒಂದೇ ದಿನದಲ್ಲಿ ಮೂರು ಕೋಟೆಗಳನ್ನು ಗೆಲ್ಲುವ ಶತ್ರುಗಳ ಯೋಜನೆ ಸಿಖ್ಖರ ಈ ಬಲವಾದ ಪ್ರತಿರೋಧದ ಕಾರಣ ವಿಫಲವಾಗುತ್ತದೆ. ಉಳಿದ ಎರಡೂ ಕೋಟೆಗಳಿಗೂ ಹೆಚ್ಚುವರಿ ಸೈನ್ಯ ರವಾನಿಸಲು ಸಮಯ ಸಿಕ್ಕಿದ್ದರಿಂದಾಗಿ ಬ್ರಿಟಿಷರು ಎರಡೂ ಕೋಟೆಗಳನ್ನು ಉಳಿಸಿಕೊಂಡಿದ್ದಲ್ಲದೇ ಮರುದಿನ ಸಾರಾಗಡಿಯನ್ನೂ ಮರುವಶಪಡಿಸಿಕೊಳ್ಳುತ್ತಾರೆ. ಒಂದು ವೇಳೆ ಸಿಖ್ ಸೈನಿಕರು ಸಾರಾಗಡಿ ಯುದ್ಧವನ್ನು ಸಂಜೆಯವರೆಗೂ ನಡೆಸದೇ ಹೋಗಿದ್ದರೆ ಸಾರಾಗಡಿಯ ಜೊತೆ ಉಳಿದ ಎರಡೂ ಕೋಟೆಗಳನ್ನು ಬ್ರಿಟಿಷ್ ಸೈನ್ಯ ಕಳೆದುಕೊಳ್ಳಬೇಕಾಗಿ ಬರುತ್ತಿತ್ತು. ಆದರೆ ಬೆಳಗಿನಿಂದ ಸಂಜೆಯವರೆಗೂ ಅವುಡುಗಚ್ಚಿ ಹೋರಾಡಿದ ವೀರ ಭಾರತೀಯ ಸಿಖ್ಖರು ಕೋಟೆಯನ್ನು ಉಳಿಸುತ್ತಾರೆ.
ಮರುದಿನ ಬ್ರಿಟಿಷ್ ಸೈನ್ಯ ಸಾರಾಗಡಿಯನ್ನು ಮರುವಶ ಮಾಡಿಕೊಳ್ಳುವ ಸಂದರ್ಭದಲ್ಲಿ ಕೋಟೆಯೊಳಗೆ ಬಿದ್ದಿದ್ದ ಶತ್ರುಗಳ ಹೆಣದ ರಾಶಿಯನ್ನು ಕಂಡು ನೆನ್ನೆ ನಡೆದಿರಬಹುದಾದ ಭೀಕರ ಕದನದ ಚಿತ್ರಣವನ್ನು ಕಲ್ಪಿಸಿಕೊಳ್ಳುತ್ತಾರೆ. ಕೇವಲ 21 ಜನ ಭಾರತೀಯರು ಮಾಡಿದ ಈ ಅದ್ಭುತ ಹೋರಾಟ ಅವರೆಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ. ಹುತಾತ್ಮರಿಗೆ ಮರಣೋತ್ತರವಾಗಿ ಬ್ರಿಟನ್ ಸೈನ್ಯದ ಪರಮೋಚ್ಛ ಪುರಸ್ಕಾರ ವಿಕ್ಟೋರಿಯಾ ಕ್ರಾಸ್ ಅನ್ನು ನೀಡಿ ಗೌರವಿಸಲಾಗುತ್ತದೆ. ಬ್ರಿಟಿಷ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಯುದ್ಧವೊಂದರಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ವಿಕ್ಟೋರಿಯಾ ಕ್ರಾಸ್ ಅನ್ನು ಪ್ರಧಾನ ಮಾಡಿದ ಏಕೈಕ ಘಟನೆ ಇದೆಂದು ತಿಳಿದಾಗ ಈ ಯುದ್ಧದ ಮಹತ್ವ ನಮಗೆ ಅರ್ಥವಾಗುತ್ತದೆ. ಈ ಯುದ್ಧ ಭಾರತೀಯರು ಹೇಡಿಗಳೆಂಬ ಬ್ರಿಟೀಷರ ಊಹೆಯನ್ನು ಶಾಶ್ವತವಾಗಿ ಅಳಿಸಿಹಾಕಿದ್ದಷ್ಟೇ ಅಲ್ಲದೇ ಭಾರತೀಯರು ಕೆರಳಿದರೆ ನರಶಾರ್ದೂಲಗಳು ಎಂಬ ಸತ್ಯವನ್ನು ಜಗತ್ತಿಗೆ ತಿಳಿಸುತ್ತದೆ.
ಚಿತ್ರದ ನಾಯಕ ಅಕ್ಷಯ್ ಕುಮಾರ್ ಹವಿಲ್ದಾರ್ ಇಷಾರ್ ಸಿಂಗ್ ಪಾತ್ರದಲ್ಲಿ ಹೇಳಿರುವ ಸಂಭಾಷಣೆಯೊಂದು ಹೀಗಿದೆ.
“””ಒಬ್ಬ ಬಿಳಿಯ ಅಧಿಕಾರಿ ನನಗೆ ಹೇಳಿದ. “ನೀನೊಬ್ಬ ಗುಲಾಮ. ನಿನ್ನ ದೇಶದ ಈ ಮಣ್ಣಿನಲ್ಲೇ ಏನೋ ಸಮಸ್ಯೆ ಇದೆ. ಅದಕ್ಕೇ ಹಿಂದೂಸ್ಥಾನದಲ್ಲಿ ಕೇವಲ ಹೇಡಿಗಳು ಮಾತ್ರ ಹುಟ್ಟುತ್ತಾರೆ.” ಅಂತ. ಇಂದು ಅದಕ್ಕೆ ಉತ್ತರ ಕೊಡುವ ಸಮಯ ಇಂದು ಬಂದಿದೆ. ಸೋದರರೇ, ಬನ್ನಿ ಸರಿಯಾದ ಉತ್ತರ ಕೊಡೋಣ. ನಮ್ಮ ಪರಂಪರೆಯ ಶಕ್ತಿ ತೋರಿಸೋಣ.”””
ಆತ್ಮಾಭಿಮಾನ, ದೇಶಾಭಿಮಾನ, ಧರ್ಮಾಭಿಮಾನ ಹೊಂದಿರುವ ಪ್ರತಿಯೊಬ್ಬರಿಗೂ ಇಡೀ ಚಿತ್ರದಲ್ಲಿ ಪದೇ ಪದೇ ನೆನಪಾಗುವ ಸಂಭಾಷಣೆ ಇದು. ಯಾಕೆಂದರೆ ಇಡೀ ಚಿತ್ರದ ಕಥೆಯೇ ಬ್ರಿಟೀಷರ ಸೈನ್ಯದಲ್ಲಿ ಹವಾಲ್ದಾರ್ ಆಗಿದ್ದ ನಾಯಕ ಇಶಾರ್ ಸಿಂಗ್ ತಾನು ಕೇಳಬೇಕಾಗಿ ಬಂದ ಈ ಅವಮಾನಕರ ಆರೋಪಕ್ಕೆ ತಕ್ಕ ಉತ್ತರ ಕೊಡುವ ಸಂಗತಿಯ ಆಧಾರದ ಮೇಲೇ ನಿಂತಿದೆ. ಇದಲ್ಲದೇ “ಚಲ್ ಝೂಟಾ!” “ಕೇಸರೀ ಕಾ ಮತ್ಲಬ್” ಎಂಬ ಸಂಭಾಷಣೆಗಳಂತೂ ಯುವಕರ ಹೃದಯದೊಳಗೆ ಲಗ್ಗೆಯಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿವೆ. ಶತ್ರುಗಳಿಗೆ ಸಾಯುವ ಕಾಲದಲ್ಲಿ ನೀರು ಕುಡಿಸುವಂತೆ ತನ್ನ ಸಹಾಯಕನಿಗೆ ಆಜ್ಞಾಪಿಸುವ ಇಶಾರ್ ಸಿಂಗ್ ನನ್ನು ಭಾರತೀಯರ ಸಂಸ್ಕೃತಿಯನ್ನು ಪ್ರತಿಬಿಂಬಿಸಿದರೆ, ಹಾಗೆ ನೀರು ಕೊಡುತ್ತಿದ್ದ ಮನುಷ್ಯನನ್ನೇ ಖಡ್ಗದಿಂದ ತುಂಡರಿಸುವ ಆಕ್ರಮಣಕಾರಿಗಳ ನಾಯಕ ಜಿಹಾದಿ ಭಯೋತ್ಪಾದಕರ ವಿಕೃತ ಮನಸ್ಥಿತಿಯ ಪ್ರತಿಬಿಂಬವಾಗಿ ತೋರುತ್ತಾನೆ. ಇದಲ್ಲದೇ ಪ್ರತಿಯೊಬ್ಬ ಸಿಖ್ ಸೈನಿಕರೂ ಸಾಯುವಾಗ ತನ್ನ ಮನೆಯವರನ್ನೋ ಮಕ್ಕಳನ್ನೋ ನೆನಪಿಸಿಕೊಳ್ಳುವಾಗ ಭಾವನಾತ್ಮಕ ಸನ್ನಿವೇಶ ನಿರ್ಮಾಣವಾಗುತ್ತದೆ.
ಸಾರಾಗಢಿ ಯುದ್ಧದಂಥಾ ಅದ್ಭುತ ನೈಜ ಘಟನೆಯನ್ನು ಆಧರಿಸಿ ಚಿತ್ರವೊಂದನ್ನು ನಿರ್ಮಿಸಿದ ನಿರ್ಮಾಪಕ ನಿರ್ದೇಶಕರ ಧೈರ್ಯವನ್ನು ನಿಜಕ್ಕೂ ಮೆಚ್ಚಲೇಬೇಕು. ಕಥೆಯೇ ಚಿತ್ರದ ಜೀವಾಳ. ಸಾವಿರಾರು ಜನ ಸೈನಿಕರ ಪಾತ್ರಧಾರಿಗಳನ್ನು ಸೇರಿಸಿ ಚಿತ್ರೀಕರಿಸಿರುವ ಯುದ್ಧದ ದೃಶ್ಯಗಳು ಮೈಜುಮ್ಮೆನಿಸುವಂತಿವೆ. ಹಾಗೆಯೇ ಚಿತ್ರವನ್ನು ನಿರ್ಮಿಸಿರುವ ಸ್ಥಳಗಳು ಭಾರತೀಯ ಪ್ರೇಕ್ಷಕರಿಗೆ ಹೊಚ್ಚ ಹೊಸದಾಗಿ ಕಾಣುತ್ತವೆ. ಅಕ್ಷಯ್ ಕುಮಾರ್ ಅಭಿನಯ ಮತ್ತು ಸಂಭಾಷಣೆ ಅದ್ಭುತ. ಉಳಿದ ಸಹನಟರ ಅಭಿನಯವೂ ಅಷ್ಟೇ ಸೊಗಸಾಗಿದೆ. ಹೇಳಿಕೊಳ್ಳುವಷ್ಟು ಸಂಖ್ಯೆಯಲ್ಲಿ ಹಾಡುಗಳಿಲ್ಲದಿದ್ದರೂ ಇರುವ ಎರಡು ಹಾಡುಗಳು ಮನೋಜ್ಞವಾಗಿವೆ. ಕೊನೆಯ ದೃಶ್ಯಕ್ಕೆ ಪೂರಕವಾಗಿ ಮೂಡಿಬರುವ ಸಂಗೀತವಂತೂ ಮೈಯ್ಯಲ್ಲಿ ಮುಳ್ಳುಗಳೇಳಿಸುತ್ತದೆ.
ಕೊನೆಯ ದೃಶ್ಯದಲ್ಲಿ ಯುದ್ಧವೆಂದರೆ ಮೊದಲಿನಿಂದಲೂ ಹೆದರಿ ನಡುಗುತ್ತಿದ್ದ 19 ವರ್ಷದ ಸಿಗ್ನಲ್ ಮ್ಯಾನ್ ಗುರುಮುಖ ಸಿಂಗ್ ತನ್ನ ಜೊತೆಯವರನ್ನೆಲ್ಲಾ ಕಳೆದುಕೊಂಡು ಏಕಾಂಗಿಯಾದಾಗ ತೋರುವ ಅದ್ವಿತೀಯ ಧೈರ್ಯ ಸಾಹಸಗಳು ಪ್ರೇಕ್ಷಕರ ಕಣ್ಣುಗಳಲ್ಲಿ ನೀರು ಜಿನುಗುವಂತೆ ಮಾಡುತ್ತದೆ. ಮೈಮೇಲೆ ಉರಿಯುತ್ತಿರುವ ಬೆಂಕಿಯನ್ನೂ ಲೆಕ್ಕಿಸದೇ ಧೀರೋದ್ಧಾತ್ತವಾಗಿ ಗಂಭೀರವಾದ ಹೆಜ್ಜೆಗಳನ್ನಿಡುತ್ತಾ ಸತ್ ಶ್ರೀ ಅಕಾಲ್ ಎಂಬ ಸಿಖ್ಖರ ಯುದ್ಧ ಘೋಷಣೆಯನ್ನು ಕೂಗುತ್ತಾ ಶತ್ರುಗಳನ್ನು ಬಲಿತೆಗೆದುಕೊಳ್ಳುವ ಸನ್ನಿವೇಶ ಕುಳಿತಿರುವ ಪ್ರೇಕ್ಷಕನಿಗೆ ಹೆಮ್ಮೆಯಿಂದ ಎದೆ ಉಬ್ಬುವಂತೆ ಮಾಡುತ್ತದೆ. ಮೈಮರೆತ ಪ್ರೇಕ್ಷಕರು ಹೋ! ಓಹ್! ಎಂಬ ಉದ್ಗಾರಗಳನ್ನು ತೆಗೆಯುತ್ತಾರೆ. ಅವರಿಗರಿವಿಲ್ಲದೇ ಹೆಮ್ಮೆಯ ಚಪ್ಪಾಳೆ ಹೊಡೆಯುತ್ತಾರೆ.
ಭಾರತದ ಮೇಲೆ ಘಜ್ನಿ ದಾಳಿ ಮಾಡಿದ, ಘೋರಿ ದಾಳಿ ಮಾಡಿದ ಎಂಬ ಆಕ್ರಮಣದ ಇತಿಹಾಸವನ್ನೇ ಓದಿರುವ ನಮಗೆ ಭಾರತದ ಇತಿಹಾಸ ಹೇಡಿಗಳದ್ದಲ್ಲ ವೀರರದ್ದು ಎಂಬ ಅರಿವು ಮೂಡಿಸುವ ಈ ಚಿತ್ರ ದೇಶದ್ರೋಹಿಗಳಿಗೆ ಹೊಟ್ಟೆ ಉರಿ ತರಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅದಕ್ಕೆಂದೇ ಪ್ರಜಾವಾಣಿಯಂಥಾ ಎಡಬಿಡಂಗಿ ಪತ್ರಿಕೆಗಳು ಇಡೀ ದೇಶವೇ ಮೆಚ್ಚಿರುವ ಕೇಸರಿ ಚಿತ್ರದ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿವೆ. ಒಂದು ವೇಳೆ ಪ್ರಜಾವಾಣಿ ಪತ್ರಿಕೆಯು ತನ್ನ ಓದುಗರಿಗೆ ಇದೇ ರೀತಿಯ ದೇಶದ್ರೋಹಿ ಚಿಂತನೆಗಳನ್ನು ಇನ್ನು ಮುಂದೆಯೂ ನೀಡುತ್ತಾ ಹೋದರೆ ಇನ್ನು ಕೆಲವೇ ದಿನಗಳಲ್ಲಿ ಆ ಪತ್ರಿಕೆಯನ್ನು ಜನ ಟಾಯ್ಲೆಟ್ ನಲ್ಲಿ ಟಿಶ್ಯೂ ಪೇಪರ್ ನ ಬದಲು ಉಪಯೋಗಿಸುತ್ತಾರೆ ಬಿಡಿ. ಆದರೆ ನಾವೂ ನೀವೂ ಇಂಥವರ ಹೊಟ್ಟೆಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉರಿಸಲು ಆದಷ್ಟು ಬೇಗ ಚಿತ್ರಮಂದಿರಕ್ಕೆ ಹೋಗಿ ಸ್ನೇಹಿತರೊಡನೆ ಕೇಸರಿ ವೀಕ್ಷಿಸಬೇಕಾಗಿದೆ. ಖಂಡಿತಾ ಹೋಗ್ತೀರಲ್ಲಾ?! ನಮಸ್ಕಾರ.
✍🏻 ನಿತ್ಯಾನಂದ ವಿವೇಕವಂಶಿ
Discussion about this post