ಬೆಂಗಳೂರು: ದೇವರನ್ನು ನಂಬಿದವರಿಗೆ, ದೊರೆಯೂ ಏನು ಮಾಡಲಾಗದು, ಇಂದ್ರ ತನ್ನ ಅಹಂಕಾರದಿಂದ ಗೋವು ಹಾಗೂ ಗೋಪಾಲಕರ ಮೇಲೆ ದಾಳಿ ಮಾಡಿದ. ಆದರೆ ಅವರು ಕೃಷ್ಣನನ್ನು ನಂಬಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ ಎಂದು ‘ಕೃಷ್ಣಕಥಾ’ದಲ್ಲಿ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗಿರಿನಗರದಲ್ಲಿರುವ ಶ್ರೀಮಠದ ಶಾಖಾಮಠದಲ್ಲಿ ನಡೆಯುತ್ತಿರುವ ಗೋಸ್ವರ್ಗ ಚಾತುರ್ಮಾಸ್ಯದ ‘ಕೃಷ್ಣಕಥಾ’ ಸಪ್ತಾಹದ ಕೊನೇ ದಿನ ಪ್ರವಚನವನ್ನು ಅನುಗ್ರಹಿಸಿದ ಶ್ರೀಗಳು, ಗೋಪಾಲಕರು ಇಂದ್ರನ ಪೂಜೆಯ ಬದಲು ; ಗೋವರ್ಧನ ಗಿರಿಧಾರಿಯ ಪೂಜೆ ಮಾಡಿದಾಗ, ತಾನು ಮೂರು ಲೋಕದ ಅಧಿಪತಿ ಎಂದು ಇಂದ್ರ ಅಹಂಕಾರದಿಂದ ವರ್ತಿಸಿದ ಎಂಬುದನ್ನು ಉದಾಹರಿಸಿದ ಶ್ರೀಗಳು, ಅಧಿಕಾರದ ಮದ ಹಾಗೂ ಅಹಂಕಾರಗಳು ಮನುಷ್ಯ ಹಾಳಾಗಲು ಕಾರಣವಾಗುತ್ತವೆ. ಅಧಿಕಾರ ಬಂದಾಗ ಬೀಗದೇ ಸಮಚಿತ್ತನಾಗಿ ಉಳಿಯುವವನು ನಿಜವಾದ ಮಹಾತ್ಮ ಎಂದು ಅಭಿಪ್ರಾಯಪಟ್ಟರು.
ಕಣ್ಣಿಗೆ ಕಾಣುವ ದೇವರುಗಳಾದ ತಂದೆ – ತಾಯಿ – ಗುರುಗಳನ್ನು ಪೂಜಿಸಿ, ಆನಂತರ ಕಾಣದ ದೇವರನ್ನು ಪೂಜಿಸಿವುದು ಸರ್ವೋತ್ಕೃಷ್ಟವಾದದ್ದು ಎಂದು ರಾಮಾಯಣದಲ್ಲಿ ಹೇಳಲಾಗಿದೆ, ಹಾಗೆಯೇ ಕೃಷ್ಣನೂ ಗೋವರ್ಧನ ಗಿರಿಧಾರೆ ಪೂಜೆಯ ವಿಚಾರದ ಸಂದರ್ಭದಲ್ಲಿ ಕಣ್ಣಿಗೆ ಕಾಣುವ ದೇವರಾದ ಹಾಗೂ ಗೋಪಾಲಕರ ಜೀವನಾಧಾರವಾದ ಗೋವಿನ ಪೂಜೆ ಮಾಡಬೇಕು ಎಂದು ಕೃಷ್ಣ ಪ್ರತಿಪಾದಿಸುತ್ತಾನೆ ಎಂದರು. ಇಂತಹ ತತ್ತ್ವಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದರು.
ಕೃಷ್ಣನವೃಂದಾವನ – ಗೋಸ್ವರ್ಗ:
ಕೃಷ್ಣನಿದ್ದ ಗೋಪಾಲರ ವೃಂದಾವನ ನಂದನವನವಾಗಿತ್ತು, ಗೋವುಗಳ ಪಾಲಿಗೆ ಅದು ಸ್ವರ್ಗಸದೃಶವಾಗಿತ್ತು ಎಂದು ಭಾಗವತದಲ್ಲಿರುವ ವಿಚಾರವನ್ನು ಶ್ರೀಗಳು ಪ್ರವಚನದಲ್ಲಿ ಉಲ್ಲೇಖಿಸಿದರು. “ಗೋಸ್ವರ್ಗ” ಹಾಗೂ “ವೃಂದಾವನ” ಗಳನ್ನು ಹೋಲಿಕೆ ಮಾಡಿ ರಾಮಕಥಾ ಕವಿ ಡಾ. ಗಜಾನನ ಶರ್ಮರು ರಚಿಸಿದ ಹಾಡು ಗೋಪ್ರೇಮಿಗಳ ಪ್ರಶಂಸೆಗೆ ಪಾತ್ರವಾಯಿತು.
ಪ್ರವಚನದ ಜೊತೆಗೆ ಗಾಯನ – ವಾಚನ – ಚಿತ್ರ – ರೂಪಕಗಳ ಮೂಲಕ ಶ್ರೀಕೃಷ್ಣನನ್ನು ಜನ ಮಾನಸಕ್ಕೆ ತಲುಪಿಸಲಾಯಿತು. ಗೋಸ್ವರ್ಗ ಚಾತುರ್ಮಾಸ್ಯ ಸಮಿತಿಯ ಪರವಾಗಿ ಪೂಜ್ಯ ಶ್ರೀಗಳಿಗೆ ಫಲಸಮರ್ಪಣೆ ಮಾಡಲಾಯಿತು. ಕಥಾ ಸಂಚಾಲಕಾರ ಡಾ. ಗಜಾನನ ಶರ್ಮರು ಕೃಷ್ಣಕಥಾ ಕುರಿತು ಮಾತನಾಡಿ, ಸಪ್ತಾಹದಲ್ಲಿ ಪಾಲ್ಗೊಂಡ ಕಲಾವಿದರು ಹಾಗೂ ಸಹಕರಿಸಿದ ಎಲ್ಲರಿಗೆ ಧನ್ಯವಾದ ಸಮರ್ಪಿಸಿದರು.
Discussion about this post