ಕೋಲಾರ ಜಿಲ್ಲೆಯ ಮುಳಬಾಗಿಲು ಸಮೀಪದಲ್ಲಿರುವ ತಂಬಿಹಳ್ಳಿಯಲ್ಲಿ ಶ್ರೀಮನ್ವಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀಮನ್ಮಾಧವ ತೀರ್ಥರ ಪರಂಪರೆಯ ಪ್ರಸ್ತುತ ಪೀಠಾಧಿಪತಿಗಳು ಶ್ರೀವಿದ್ಯಾಸಾಗರ ಮಾಧವ ತೀರ್ಥರು.
ಶ್ರೀಮನ್ವಧ್ವಾಚಾರ್ಯರ ಸಾಕ್ಷಾತ್ ಶಿಷ್ಯರು ನಾಲ್ಕು ವೇದಗಳಿಗೂ ಭಾಷ್ಯರಚನೆ ಮಾಡಿದ ಮಹಾನುಭಾವರೂ ಆದ ಶ್ರೀಮನ್ಮಾಧವ ತೀರ್ಥರ ಶ್ರೀಮಠ – ಪುರಾತನ ಇತಿಹಾಸವನ್ನು ಹೊಂದಿರುವ ಪಾವನ ತಾಣ. ಅನೇಕ ವಿದ್ವತ್ವಿಭೂತಿ ಪುರುಷರನ್ನು ನೀಡಿದ ಗರಿಮೆ ಇದರದು.
ಶ್ರೀಮಠದ ಪರಂಪರೆಯಲ್ಲಿ 25ನೆಯ ಪೀಠಾಧಿಪತಿಗಳಾದ ಶ್ರೀವಿದ್ಯಾಸಾಗರ ಮಾಧವ ತೀರ್ಥರು ಅಕ್ಷರಶಃ ವಿದ್ಯಾ ಸಾಗರರೇ.
ಶ್ರೀ ಪ್ರಸನ್ನ ಶೂರ ಮಾಧವ ತೀರ್ಥರ ಶಿಷ್ಯರಾಗಿ ಶ್ರೀಮಠದ ಶ್ರೇಯೋಭಿವೃದ್ದಿಗೆ ಕಂಕಣಬದ್ದರಾಗಿ ಅನೇಕ ಜನಪರ ಕಾರ್ಯಯೋಜನೆಗಳನ್ನು ಕೈಗೊಂಡ ಸರಳ ಸಂಯಮಿಗಳು.
ನಮ್ಮ ನಡುವಿರುವ ಯೋಗಿವರ್ಯರು ಪೂರ್ವಾಶ್ರಮದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಚರ್ತುಭಾಷಾ ಪಂಡಿತರೆನಿಸಿ ಸಾರಸ್ವತ ಕೈಂಕರ್ಯದಲ್ಲಿ ತೊಡಗಿಸಿಕೊಂಡ ಗುರುವರೇಣ್ಯರು. ಸಂಪ್ರದಾಯ ಪ್ರವರ್ತಕರಾದ ಪ್ರಸಿದ್ಧ ಕಂಬಾಲೂರು ರಾಮಚಂದ್ರತೀರ್ಥರ ವಂಶಸ್ಥರು, ಶ್ರೀಮದಾಚಾರ್ಯರ ಕರಾರ್ಚಿತ ಚೈತನ್ಯಮೂರ್ತಿ ಶ್ರೀಮೂಲ ವೀರರಾಮದೇವರ ಮಂದಹಾಸ ದರ್ಶನಾನುಭೂತಿ ಪಾತ್ರರಾಗಿ ಅದನ್ನೇ ಜ್ಞಾನಸಾಗರ ಮಾಧವಾಂಕಿತದಿಂದ ಕಾವ್ಯಮಾಲೆಯಾಗಿ ಪೋಣಿಸಿ ’ಐದು ತುಳಸಿದಳಗಳು’ ಎಂಬ ಸಂಕಲನವಾಗಿ ಪ್ರಕಟಿಸಿದ್ದಾರೆ.
Discussion about this post