ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಮನೆಯ ಮುಂದೆ ನಿಂತಿದ್ದ 91 ವರ್ಷದ ವೃದ್ಧೆಯೊಬ್ಬರ ಮೇಲೆ (Monkey) ಕೋತಿಯೊಂದು ಏಕಾಏಕಿ ದಾಳಿ ನಡೆಸಿ ತಳ್ಳಿದ ಪರಿಣಾಮ, ವೃದ್ಧೆ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ (Koppal) ಕೊಪ್ಪಳ ನಗರದ ಬಿ.ಟಿ. ಪಾಟೀಲ್ ನಗರದಲ್ಲಿ ನಡೆದಿದೆ.
ಮೃತರನ್ನು ನಜಮುನಿಸಾ ಬೇಗಂ (91) ಎಂದು ಗುರುತಿಸಲಾಗಿದೆ. ನಜಮುನಿಸಾ ಬೇಗಂ ಅವರು ತಮ್ಮ ಮನೆಯ ಮುಂದೆ ನಿಂತಿದ್ದ ವೇಳೆ ಏಕಾಏಕಿ ಎಲ್ಲಿಂದಲೋ ಬಂದ ಕೋತಿಯೊಂದು ಅವರ ಮೇಲೆ ಎರಗಿ ದಾಳಿ ನಡೆಸಿದೆ. ಕೋತಿ ತಳ್ಳಿದ ರಭಸಕ್ಕೆ ವೃದ್ಧೆಗೆ ಸಮತೋಲನ ತಪ್ಪಿದ್ದು, ಅವರು ನೆಲಕ್ಕೆ ಬಿದ್ದಿದ್ದಾರೆ.
ನೆಲಕ್ಕೆ ಬೀಳುವ ಸಂದರ್ಭದಲ್ಲಿ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಗಂಭೀರ ಗಾಯದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗಿದೆ. ಸ್ಥಳೀಯರ ಪ್ರಕಾರ, ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ನಜಮುನಿಸಾ ಬೇಗಂ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಕ್ಷಿಸಲು ಬಂದ ಮಹಿಳೆಯ ಮೇಲೂ ದಾಳಿ
ವೃದ್ಧೆ ನೆಲಕ್ಕೆ ಬಿದ್ದಿರುವುದನ್ನು ಕಂಡು ಅವರನ್ನು ರಕ್ಷಿಸಲು ಹಾಗೂ ಎಬ್ಬಿಸಲು ಮತ್ತೊಬ್ಬ ಮಹಿಳೆ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಆಕೆಯ ಮೇಲೂ ಕೋತಿ ದಾಳಿ ನಡೆಸಲು ಮುಂದಾಗಿದ್ದು, ಕಚ್ಚಲು ಯತ್ನಿಸಿದೆ ಎನ್ನಲಾಗಿದೆ.
ಘಟನೆಯ ಭೀಕರ ದೃಶ್ಯಗಳು ಅಲ್ಲಿನ CCTV ಕ್ಯಾಮೆರಾದಲ್ಲಿ ಸೆರೆಯಾಗಿವೆ. ವೃದ್ಧೆಯ ಮೇಲೆ ಕೋತಿ ಏಕಾಏಕಿ ಎರಗುವುದು, ಅವರನ್ನು ತಳ್ಳಿದ ಬಳಿಕ ಅವರು ನೆಲಕ್ಕೆ ಬೀಳುವುದು ಹಾಗೂ ಬಳಿಕ ಮತ್ತೊಬ್ಬ ಮಹಿಳೆಯ ಮೇಲೂ ಕೋತಿ ದಾಳಿ ನಡೆಸಲು ಮುಂದಾಗಿರುವ ದೃಶ್ಯಗಳು ಕ್ಯಾಮೆರಾದಲ್ಲಿ ದಾಖಲಾಗಿವೆ ಎನ್ನಲಾಗಿದೆ.
Koppal : ನಿವಾಸಿಗಳಲ್ಲಿ ಆತಂಕ
ಈ ಘಟನೆಯ ಬಳಿಕ ಬಿ.ಟಿ. ಪಾಟೀಲ್ ನಗರದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Also Read>> ಸೆ. 24ರಿಂದ ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿ
ವಿಶೇಷವಾಗಿ ವೃದ್ಧರು, ಮಕ್ಕಳು ಹಾಗೂ ಮಹಿಳೆಯರು ಓಡಾಡುವ ಪ್ರದೇಶಗಳಲ್ಲಿ ಕೋತಿಗಳ ಉಪಟಳದಿಂದ ಅಪಾಯ ಎದುರಾಗುತ್ತಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕೋತಿಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಮೂಲಕ ಸಾರ್ವಜನಿಕರ ಭದ್ರತೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸಂಪೂರ್ಣ ಮಾಹಿತಿ ಹಾಗೂ CCTV ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ಕೋತಿಯ ದಾಳಿಯಿಂದ ವೃದ್ಧೆ ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕೋತಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಗಮನಾರ್ಹವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











