ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಂಗೀತದ ಸೌಂದರ್ಯವನ್ನು ಸಮಾಜಮುಖಿ ಸೇವೆಯೊಂದಿಗೆ ಬೆಸೆಯುವ 21ನೇ ‘ಧ್ವನಿ’ ಹಿಂದೂಸ್ತಾನಿ ಸಂಗೀತೋತ್ಸವ (Hindustani Music) ಸೆಪ್ಟೆಂಬರ್ 26 ಮತ್ತು 27ರಂದು ಬೆಂಗಳೂರಿನ (Bengaluru) ಕೆ.ಆರ್. ರಸ್ತೆಯ ಗಾಯನ ಸಮಾಜದಲ್ಲಿ ನಡೆಯಲಿದೆ.
ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಅವರ ಸ್ಮರಣಾರ್ಥ ರಾಪ್ಸ್ರಿ (RAPSRI) ಮತ್ತು ಬೆಂಗಳೂರು ಕಿಡ್ನಿ ಫೌಂಡೇಶನ್ (BKF) ಸಹಯೋಗದಲ್ಲಿ ಈ ಸಂಗೀತೋತ್ಸವವನ್ನು ಆಯೋಜಿಸಲಾಗಿದೆ. ಉತ್ಸವದ ಮೂಲಕ ಆರ್ಥಿಕವಾಗಿ ಹಿಂದುಳಿದ ಮೂತ್ರಪಿಂಡ ರೋಗಿಗಳ ಡಯಾಲಿಸಿಸ್ ಚಿಕಿತ್ಸೆಗೆ ನೆರವು ನೀಡಲಾಗುತ್ತಿದೆ.
ಪಂಡಿತ್ ಪರಮೇಶ್ವರ ಹೆಗಡೆಗೆ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸ್ಮಾರಕ ಪ್ರಶಸ್ತಿ
ಈ ಸಾಲಿನ ಬಿಕೆಎಫ್ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸ್ಮಾರಕ ಪ್ರಶಸ್ತಿಯನ್ನು ಖ್ಯಾತ ಹಿಂದೂಸ್ತಾನಿ ಗಾಯಕ ಹಾಗೂ ಸಂಗೀತ ಗುರು ಪಂಡಿತ್ ಪರಮೇಶ್ವರ ಹೆಗಡೆ ಅವರಿಗೆ ಪ್ರದಾನ ಮಾಡಲಾಗುವುದು.
ಸೆಪ್ಟೆಂಬರ್ 26ರಂದು ಸಂಜೆ 7 ಗಂಟೆಗೆ ನಡೆಯುವ ಸಮಾರಂಭದಲ್ಲಿ ಕರ್ನಾಟಕದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಮುಖ್ಯ ಅತಿಥಿಯಾಗಿ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ. ಡಿ. ರಘುನಾಥ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದರಾಗಿರುವ ಪಂಡಿತ್ ಪರಮೇಶ್ವರ ಹೆಗಡೆ ಅವರು ದೇಶ-ವಿದೇಶಗಳಲ್ಲಿ ಹಲವು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕರ್ನಾಟಕ ಕಲಾಶ್ರೀ, ಗುರುಕೃಪಾ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಅವರು ಪಾತ್ರರಾಗಿದ್ದಾರೆ.
Bengaluru : ಎರಡು ದಿನಗಳ ಹಿಂದೂಸ್ತಾನಿ ಸಂಗೀತ ರಸದೌತಣ
ಸೆಪ್ಟೆಂಬರ್ 26ರಂದು ಸಂಜೆ 5 ಗಂಟೆಗೆ ಶ್ರೀ ವಿನಾಯಕ ಹೆಗಡೆ ಅವರ ಗಾಯನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪಂಡಿತ್ ಪರಮೇಶ್ವರ ಹೆಗಡೆ ಅವರ ಗಾಯನ ಕಾರ್ಯಕ್ರಮವೂ ಇರಲಿದೆ.
ಸೆಪ್ಟೆಂಬರ್ 27ರಂದು ಬೆಳಗ್ಗೆ 10.30ರಿಂದ ‘ಅಮೃತ ಮಾಲಾ–ಎನ್ಸೆಂಬಲ್’ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಕೌಶಿಕ್ ಐತಾಳ್, ಧನಂಜಯ ಹೆಗಡೆ ಮತ್ತು ಅನಿರುಧ್ ಐತಾಳ್ ಗಾಯನ ಪ್ರಸ್ತುತಪಡಿಸಲಿದ್ದಾರೆ.
ಭಾನುವಾರ ಸಂಜೆ ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ ಅವರ ಗಾಯನ ಹಾಗೂ ಪಂಡಿತ್ ಶುಭೇಂದ್ರ ರಾವ್ ಅವರ ಸಿತಾರ್ ವಾದನ ಸಂಗೀತಾಸಕ್ತರನ್ನು ರಂಜಿಸಲಿದೆ.
Also Read>> ಕೊಪ್ಪಳದಲ್ಲಿ ಕೋತಿಯ ಭೀಕರ ದಾಳಿ: ಕೆಳಗೆ ಬಿದ್ದು 91 ವರ್ಷದ ವೃದ್ಧೆ ಸಾವು; CCTVಯಲ್ಲಿ ದೃಶ್ಯ ಸೆರೆ
ಬಡರೋಗಿಗಳ ಡಯಾಲಿಸಿಸ್ ಚಿಕಿತ್ಸೆಗೆ ನೆರವು
ಕಳೆದ 21 ವರ್ಷಗಳಿಂದ ದಾನಿಗಳು, ಸಂಗೀತ ಕಲಾರಾಧಕರು ಹಾಗೂ ಸಮಾಜದ ಶ್ರೇಯೋಭಿಲಾಷಿಗಳು ನೀಡುತ್ತಿರುವ ಬೆಂಬಲದಿಂದ ಆರ್ಥಿಕವಾಗಿ ಹಿಂದುಳಿದ ಮೂತ್ರಪಿಂಡ ರೋಗಿಗಳ ಉಚಿತ ಡಯಾಲಿಸಿಸ್ ಚಿಕಿತ್ಸೆಗೆ ನೆರವು ದೊರೆಯುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಪಿ. ಶ್ರೀರಾಮ್ ತಿಳಿಸಿದ್ದಾರೆ.
ಸಂಗೀತೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಾಸಕ್ತರು ಭಾಗವಹಿಸುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ, ಬೆಂಗಳೂರು
ದಿನಾಂಕ: ಸೆಪ್ಟೆಂಬರ್ 26–27, 2026
ಸಂಪರ್ಕ: 9901788354
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










