ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ #Kirloskar Ferrous Industries Limited ವತಿಯಿಂದ ಕಾರ್ಖಾನೆ ಆವರಣದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಖಾನೆಯ ವ್ಯವಸ್ಥಾಪಕ ನಿರ್ಧೇಶಕ ಆರ್. ವಿ. ಗುಮಾಸ್ತೆ ಸಂಪ್ರದಾಯಬದ್ಧವಾಗಿ ಧ್ವಜಾರೋಹಣ ನೆರವೇರಿಸಿದರು.
ಕನ್ನಡ ರಾಜ್ಯೋತ್ಸವ #Kannada Rajyothsava ನಿಮಿತ್ತ ಸಂಸ್ಥೆಯ ಉದ್ಯೋಗಿಗಳಿಗೆ ವಿಶೇಷ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಕ್ರಿಕೆಟ್, ಫುಟ್‌ಬಾಲ್, ಕೇರಂ, ಚೆಸ್ ಹಾಗೂ ಕನ್ನಡ ರಸಪ್ರಶ್ನೆ ಮೊದಲಾದ ಹಲವಾರು ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ಕಾರ್ಖಾನೆಯ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹಭರಿತವಾಗಿ ಭಾಗವಹಿಸಿದ್ದರು.
ಸ್ಪರ್ಧೆಗಳಲ್ಲಿ ವಿಜೇತರಾದ ಉದ್ಯೋಗಿಗಳಿಗೆ ಕಾರ್ಖಾನೆಯ ಸಭಾಂಗಣದಲ್ಲಿ (ಆಡಿಟೋರಿಯಂ) ಬಹುಮಾನ ವಿತರಿಸಲಾಯಿತು.
ವೀರಕನ್ನಡಿಗ ಶರಣಪ್ಪ ಹೂಗಾರ್ ಜೀ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಬೀಡು ಕಬ್ಬಿಣ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಎಂ.ಜಿ. ನಾಗರಾಜ್ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು.
ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ. ನಾರಾಯಣ ಹಾಗೂ ಕಿರ್ಲೋಸ್ಕರ್ ಫೆರಸ್ ಕಾರ್ಮಿಕ ಸಂಘದ ಉಪಾಧ್ಯಕ್ಷ ಶರಣಪ್ಪ ಮತ್ತು 2025ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೀಮವ್ವ ದೂಡ್ಡಬಾಳಪ್ಪ ಶಿಳ್ಳೇಕ್ಯಾತರ್ (ಬೆಟಗೇರಿ, ಕೋಪ್ಪಳ) ಅವರನ್ನು ವಿಷೇಷವಾಗಿ ಆಹ್ವಾನಿಸಲಾಗಿತ್ತು ಮತ್ತು ವೇದಿಕೆಯಲ್ಲಿ ಭೀಮವ್ವ ದೂಡ್ಡಬಾಳಪ್ಪ ಶಿಳ್ಳೇಕ್ಯಾತರ್ ಅವರನ್ನು ಸನ್ಮಾನಿಸಲಾಯಿತು. ಪುರಾತನ ತೋಗಲುಗೋಂಬೆ ಕಲೆ ಪ್ರೋತ್ಸಾಹಕ್ಕಾಗಿ ಕಾರ್ಖಾನೆಯ ವತಿಯಿಂದ ಸಹಾಯಧನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಎಫ್.ಐ.ಎಲ್ ಮಹಿಳಾ ಉದ್ಯೋಗಿ ಕುಮಾರಿ ಕೆ. ಸುನಂದ ಕನ್ನಡದ ಭಾವಗೀತೆ ಹಾಡಿ ಮನಸೆಳೆದರು. ಅತಿಥಿಗಳು ಹಾಗೂ ಲೇಡೀಸ್ ಕ್ಲಬ್ ಸದಸ್ಯರಿಂದ ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿಶೇಷ ಅತಿಥಿ ಶ್ರೀ ಶರಣಪ್ಪ ಹೂಗಾರ್ ಅವರು ಮಾತನಾಡಿ ಕಾರ್ಖಾನೆಯಲ್ಲಿ ಕನ್ನಡದ ಬಳಕೆಯ ಮಹತ್ವವನ್ನು ಶ್ಲಾಘಿಸಿದರು. ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ. ನಾರಾಯಣ ಅವರು ತಮ್ಮ ಕನ್ನಡದ ಅನುಭವ ಮತ್ತು ಬಳಕೆಯನ್ನು ಹಂಚಿಕೊಂಡರು. ಎಂ.ಜಿ. ನಾಗರಾಜ್ ಅವರು ಸಂಸ್ಥೆಯ ಅಭಿವೃದ್ಧಿ, ಉದ್ಯೋಗಿಗಳ ಕೊಡುಗೆ ಮತ್ತು ಕನ್ನಡ ಸಂಸ್ಕೃತಿಗೆ ನೀಡಲಾಗುತ್ತಿರುವ ಪ್ರೋತ್ಸಾಹವನ್ನು ವಿವರಿಸಿದರು.
ಸುರಕ್ಷತಾ ವಿಭಾಗದ ಮ್ಯಾನೇಜರ್ ಮುರುಳೀಧರ್ ನಾಡಿಗೇರ್ ಅವರು ಕಾರ್ಯಕ್ರಮ ನಿರೂಪಣೆ ನೆರವೇರಿಸಿದರು. ಕಾರ್ಯಕ್ರಮಕ್ಕೆ ವಿವಿಧ ವಿಭಾಗಗಳ ಅಧಿಕಾರಿ–ಉದ್ಯೋಗಿಗಳು, ಕಾರ್ಮಿಕರು ಹಾಗೂ ಲೇಡೀಸ್ ಕ್ಲಬ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು.
ವರದಿ: ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















