ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ನ.7ರಿಂದ ಆರಂಭಗೊಂಡಿದ್ದ ಕೃಷಿ ಮತ್ತು ತೋಟಗಾರಿಕೆ ಮೇಳ 2025ಕ್ಕೆ ನಿನ್ನೆ ತೆರೆ ಬಿದ್ದಿದ್ದು, ಗಣ್ಯಾತಿಗಣ್ಯರೂ ಸೇರಿದಂತೆ ಲಕ್ಷಾಂತರ ಮಂದಿ ಭೇಟಿ ನೀಡುವ ಮೂಲಕ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ.
ಮೊದಲ ದಿನದಂತೆಯೇ ಕೃಷಿ ಮತ್ತು ತೋಟದ ಮೇಳದ ಕೊನೆಯ ದಿನ ಸಹ ರೈತರು ಮತ್ತು ಸಾರ್ವಜನಿಕರು ತುಂಬಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೃಷಿ ಮೇಳದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

ನಿನ್ನೆ ಒಂದೇ ದಿನ ಸುಮಾರು ಒಂದೂರವರೆ ಲಕ್ಷಕ್ಕೂ ಅಧಿಕ ರೈತರು ಹಾಗೂ ಸಾರ್ವಜನಿಕರು ಭೇಟಿ ನೀಡಿದ್ದು, ಮಳಿಗೆಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ವಿವಿ ಮಾಹಿತಿಯಂತೆ, ಅತ್ಯಂತ ಪ್ರಮುಖವಾಗಿ, ನಾಲ್ಕು ದಿನಗಳ ಮೇಳ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಒಟ್ಟಾರೆಯಾಗಿ ಸುಮಾರು ಮೂರು ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆದಿದೆ.

ನಮ್ಮ ಕರ್ನಾಟಕ ರಾಜ್ಯದಲ್ಲಿ ಕೇವಲ ಕರಾವಳಿ ಪ್ರದೇಶಕ್ಕೆ ಸೀಮಿತವಾಗಿದ್ದ ಗೋಡಂಬಿ ಬೆಳೆಯ ವಿಸ್ತೀರ್ಣ ಇತ್ತೀಚಿನ ದಿನಗಳಲ್ಲಿ ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶಗಳಾದ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಗೋಡಂಬಿ ಬೆಳೆಯ ವಿಸ್ತೀರ್ಣ ವ್ಯಾಪಕವಾಗಿ ಹೆಚ್ಚಾಗುತ್ತಿದೆ.
ಬೆಳೆಯ ಮಾಹಿತಿಯನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಗೋಡಂಬಿ ತಂತ್ರಜ್ಞಾನ ಕೇಂದ್ರವು ಕೃಷಿ ಮತ್ತು ತೋಟಗಾರಿಕೆ ಮೇಳದಲ್ಲಿ ಒಂದೇ ಸೂರಿನ ಅಡಿಯಲ್ಲಿ ಗೋಡಂಬಿ ಸಸಿಗಳ ಉತ್ಪಾದನೆ, ವಿವಿಧ ತಳಿಗಳ ಹಾಗೂ ತಿರುಳುಗಳ ಪ್ರದರ್ಶನ ಮತ್ತು ಮಾರಾಟ ನಡೆದಿದೆ.

ಅಲ್ಲದೇ, ಗೋಡಂಬಿ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಮಾಹಿತಿ ಮತ್ತು ಮಾರಾಟ, ಗೃಹ ಮಟ್ಟದ ಗೋಡಂಬಿ ಸಂಸ್ಕರಣೆ ಘಟಕದ ಪ್ರದರ್ಶನ ಗೋಡಂಬಿಯಲ್ಲಿ ಆರಂಭಿಕ ವರ್ಷಗಳಲ್ಲಿ ರೈತರಿಗೆ ಆದಾಯವನ್ನು ಹೆಚ್ಚಿಸಲು ಗೋಡಂಬಿ ಬೆಳೆಯಲ್ಲಿ ಅಂತರ ಬೆಳೆಗಳ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದು ವಿಶೇಷವಾಗಿತ್ತು.
ಕೃಷಿ ಮೇಳದ ಅಂತಿಮ ದಿನವಾದ ನಿನ್ನೆ ಸಂಶೋಧನೆ ವಿಭಾಗ, ವಿಸ್ತರಣೆ ವಿಭಾಗ, ವಿಶ್ವವಿದ್ಯಾಲಯದ ವಿಭಾಗ ಹೀಗೆ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಕೊಟ್ಟ ಪ್ರಾತ್ಯಕ್ಷಿಕ ತಾಕುಗಳಿಗೆ ಹಾಗೂ ಮಳಿಗೆಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಗೋಡಂಬಿ ವಿಭಾಗಕ್ಕೆ ಪ್ರಥಮ
ಕೃಷಿ ಮೇಳದಲ್ಲಿ ಸಂಶೋಧನಾ ವಿಭಾಗದಲ್ಲಿ ಗೋಡಂಬಿ ಕೃಷಿ ತಂತ್ರಜ್ಞಾನ ವಿಭಾಗದ ಮಳಿಗೆಗೆ ಪ್ರಥಮ ಪ್ರಶಸ್ತಿ ಲಭಿಸಿರುತ್ತದೆ. ಇದರೊಟ್ಟಿಗೆ ಸಮಾನವಾಗಿ ಪೈಪೋಟಿ ನೀಡಿದ ಅಡಿಕೆ ಸಂಶೋಧನಾ ಕೇಂದ್ರಕ್ಕೂ ಸಹ ಪ್ರಥಮ ಸ್ಥಾನ ಲಭಿಸಿದೆ.
ವಿಸ್ತರಣೆ ವಿಭಾಗದಲ್ಲಿ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಆಯೋಜಿಸಲಾಗಿದ್ದ ಮಳಿಗೆಗಳಿಗೆ ಪ್ರಥಮ ಸ್ಥಾನ ದೊರಕಿದೆ. ಹಾಗೆಯೇ ಕೃಷಿ ವಿಜ್ಞಾನ ಕೇಂದ್ರದಿಂದ ಆಯೋಜಿಸಲ್ಪಟ್ಟ ಕೃಷಿ ತಾಲೂಕುಗಳೂ ಸಹ ಪ್ರಥಮ ಸ್ಥಾನ ಗಳಿಸದೆ.
ಕೊನೆಯ ದಿನ ಶಾಸಕರ ಭೇಟಿ
ಕೃಷಿ ಮೇಳಕ್ಕೆ ನಿನ್ನೆ ಶಿವಮೊಗ್ಗ ಶಾಸಕ ಚನ್ನಬಸಪ್ಪ ಭೇಟಿ ನೀಡಿದ್ದರು.
ಅದ್ಬುತವಾಗಿ ಆಯೋಜನೆಗೊಂಡಿರುವ ಕೃಷಿ ಮೇಳವನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಇನ್ನು, ನಾಲ್ಕು ದಿನಗಳ ಬೃಹತ್ ಕೃಷಿ ಮೇಳವನ್ನು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆ ಮಾಡಿತ್ತು. ಮಳಿಗೆಗಳ ಮೂಲಕ ಕೃಷಿ ಸಂಬಂಧಿತವಾಗಿ ರೈತರು ಹಾಗೂ ಸಾರ್ವಜನಿಕರಿಗೆ ಜ್ಞಾನ ನೀಡುವ ಜೊತೆಯಲ್ಲಿ ಮನೋರಂರಜನೆಗೂ ಸಹ ಆದ್ಯತೆ ನೀಡಿದ್ದು, ಅಚ್ಚುಕಟ್ಟಾದ ಆಯೋಜನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post