ಭಗವಂತನ ದರ್ಶನ ಪಡೆಯಲಿಕ್ಕಾಗಿ ಭಕ್ತರು ದೇವಾಲಯಕ್ಕೆ ಹೋಗುತ್ತಾರೆ. ಇದು ವಾಡಿಕೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಸಾಂಸಾರಿಕ ಕಾರಣಗಳು, ಕಾಲಾನುಕೂಲ, ಅಥವಾ ಭಗವಂತನನ್ನು ನೋಡಬೇಕೆಂಬ ಆಸ್ಥೆಯ ಕೊರತೆ-ಇವುಗಳ ಕಾರಣದಿಂದಾಗಿ ಎಲ್ಲರಿಗೂ ಭಗವಂತನ ಸರ್ಶನ ಲಭ್ಯವಾಗುವುದಿಲ್ಲ. ಇಂಥವರಿಗಾಗಿ ಕರುಣಾಳುವಾದ ಭಗವಂತ ಸ್ವತಃ ತಾನೇ ಮಂದಿರದಿಂದ ಹೊರ ಬರುತ್ತಾನೆ. ಭಕ್ತರಿಗೆ ದರ್ಶನ ಒದಗಿಸುತ್ತಾನೆ. ಹೀಗೆ ಭಗವಂತ ಊರ ಬೀದಿಗಳಲ್ಲಿ ನಡೆಸುವ ಪರ್ಯಟನೆಯೇ ‘ರಥೋತ್ಸವ’. ದೇವಾಲಯಗಳ ನಾಡೆಂದೇ ಪ್ರಸಿದ್ಧವಾಗಿರುವ ಭಾರತದ ಕ್ಯಾಲೆಂಡರಿನಲ್ಲಿ ಪಟ್ಟಿ ಮಾಡಿದರೆ ಸರಾಸರಿ ತಿಂಗಳಿಗೆ ಇಪ್ಪತ್ತು ರಥೋತ್ಸವಗಳನ್ನು ಲೆಕ್ಕ ಹಾಕಬಹುದೆನೋ! ಅಷ್ಟರಮಟ್ಟಿಗೆ ಇದು ನಮ್ಮ ಸಂಸ್ಕøತಿಯಲ್ಲಿ ಹಾಸುಹೊಕ್ಕು. ದೇಶದ ಆದ ವಿಶಿಷ್ಟ ಸ್ಥಾನಮಾನಗಳಿವೆ.
ಪುರಿ ಜಗನ್ನಾಥ ರಥೋತ್ಸವವು ಭಾರತದ ಎಲ್ಲಾ ದೇವಾಲಯಗಳಲ್ಲಿ ನಡೆಯುವ ವೈವಿಧ್ಯಮಯ ಉತ್ಸವಗಳಲ್ಲಿ ಅಗ್ರಗಣ್ಯವಾದ, ಜನಾದರಣೆ ಪಡೆದ ಉತ್ಸವ. ಅಕ್ಷರಶಃ ಲಕ್ಷಾಂತರ ಜನ ಈ ಉತ್ಸವಗಳಲ್ಲಿ ಭಾಗವಹಿಸುತ್ತಾರೆ. ಜಗನ್ನಾಥಸ್ವಾಮಿಯ ರಥಯಾತ್ರೆಯ ಉಲ್ಲೇಖ ಪುರಾಣಗಳಲ್ಲಿ ವ್ಯಾಪಕವಾಗಿ ಪ್ರಸ್ತಾಪಿಸಲ್ಪಟ್ಟಿದೆ. ಬ್ರಹ್ಮ ಪುರಾಣಗಳಲ್ಲಿ ರಥಯಾತ್ರೆಯ ವೈಶಿಷ್ಟ್ಯಗಳನ್ನು, ಪ್ರಾಮುಖ್ಯವನ್ನು, ರಥದ ವರ್ಣನೆಯನ್ನೂ ಗಮನಿಸಬಹುದು.
ಒಡಿಶಾದ ಪುರಿಯ ಜಗನ್ನಾಥ ದೇವಲಯವು ವಿಶ್ವದಾದ್ಯಂತ ಹೆಸರು ಪಡೆದಿರುವ ಸಮುದ್ರ ದಂಡೆಯಲ್ಲಿರುವ ಈ ದೇವಾಲಯವು ಹಲವಾರು ವಿಶೇಷಗಳಿಂದ ಹೆಸರುವಾಸಿಯಾಗಿದೆ. ಇದರಲ್ಲಿ ಬಹಳ ಪ್ರಮುಖವಾದುದೆಂದರೆ, ಇಲ್ಲಿನ ಮೂರ್ತಿಗಳು ಕಟ್ಟಿಗೆ (ಮರ)ಯಲ್ಲಿ ನಿರ್ಮಾಣಗೊಂಡಿರುವುದು! ಸಾಮಾನ್ಯವಾಗಿ ಭಾರತದ ಯಾವುದೇ ದೇವಾಲಯಕ್ಕೆ ಹೋದರೂ ಅಲ್ಲಿನ ಪ್ರದಾನ ಮೂರ್ತಿ ಕಲ್ಲಿನದೇ ಆಗಿರುತ್ತದೆ. ಉತ್ಸವ ಮೂರ್ತಿಗಳು ಮರದಿಂದ ತಯಾರಿಸಲ್ಪಟ್ಟಿರುವುದು ಸಾಮಾನ್ಯ. ಕೆಲವು ಭಾಗದಲ್ಲಿ ಮರ-ಗಿಡಗಳನ್ನೇ ದೇವರೆಂದು ಪೂಜಿಸುವ ಪದ್ಧತಿಯೂ ಇದೆ ನಿಜ. ಆದರೆ ಪ್ರತಿಷ್ಠಾಪಿತ ಮೂರ್ತಿಯು ಮರದಿಂದಲೇ ನಿರ್ಮಾವಾಗಿರುವ ಸಂಗತಿ ಬಹು ವಿರಳ. ಅದರಲ್ಲೂ ಪುರಿಯಲ್ಲಿನ ಜಗನ್ನಾಥ ಮೂರ್ತಿಯನ್ನು 12 ಅಥವಾ 19 ವರ್ಷಗಳಿಗೊಮ್ಮೆ ಬದಲಾಯಿಸುವುದು (ಹೊಸದಾಗಿ ನಿರ್ಮಿಸುವುದು) ಇನ್ನೂ ವಿಶೇಷ.
ಇಲ್ಲಿ ಜಗನ್ನಾಥ ದೇವರು. ಬಲಭದ್ರ ದೇವರು ಮತ್ತು ಸುಭದ್ರ ದೇವತೆಯ ರಥೋತ್ಸವ ನಡೆಯುತ್ತದೆ. ಈ ದೇವಸ್ಥಾನವು ತನ್ನ ಭವ್ಯ ಸೆಳವಿನಿಂದ ಪ್ರಾಚೀನ ಯುಗವನ್ನು ನೆನಪಿಸುತ್ತದೆ. 65 ಅಡಿ ಎತ್ತರದ ಅದ್ಭುತ ಪಿರಮಿಡ್ ಮಾದರಿ ಕಟ್ಟಡ, ಪ್ರತಿ ಗೋಡೆಗಳು ಕೃಷ್ಣ ದೇವರ ಜೀವನವನ್ನು ಬಿಂಬಿಸುತ್ತವೆ. ದೇಶದ ಶ್ರದ್ಧಾವಂತರನ್ನು ಮಾತ್ರವಲ್ಲ, ಈ ರಥಯಾತ್ರೆಯು ಜಗತ್ತಿನ ಆಸಕ್ತರ ಗಮನವನ್ನು ಸೆಳೆಯುತ್ತದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರುವ ಉತ್ಸವವೆಂಬ ಹೆಗ್ಗಳಿಕೆ ಜಗನ್ನಾಥ ಸ್ವಾಮಿಯ ರಥೋತ್ಸವಕ್ಕಿದೆ.
ರಾಮಾಯಣದ ಉತ್ತರ ಕಾಂಡದಲ್ಲಿ ರಾಮನು ವಿಭೀಷಣನಿಗೆ ಜಗನ್ನಾಥನನ್ನು ಪೂಜಿಸುವಂತೆ ಸೂಚಿಸುವ ಉಲ್ಲೇಖವಿದೆ. ಹಾಗೆಯೇ ಕಿಷ್ಕಿಂದಾ ಕಾಂಡದಲ್ಲಿ ಅಲ್ಲಲ್ಲಿ ಜಗನ್ನಾಥನನ್ನು ಇತರ ದೇವತೆಗಳೊಂದಿಗೆ ಹೆಸರಿಸಲಾಗಿದೆ. ಮಹಾಭಾರತದಲ್ಲಿ ಜಗನ್ನಾಥ ಸ್ವಾಮಿಗೆ ಸಂಬಂಧಿಸಿದಂತೆ ಇಂದ್ರದ್ಯುಮ್ನ ರಾಜನ ಕತೆಯ ವಿವರಣೆ ಇದೆ.
ಪುರಾಣಗಳಲ್ಲಿಯೂ ಪುರಿ ಕ್ಷೇತ್ರದ, ಜಗನ್ನಾಥ ಸ್ವಾಮಿಯ ಹಾಗೂ ರಥಯಾತ್ರೆಯ ವಿವರಗಳು ಧಾರಳವಾಗಿ ಲಭ್ಯ. ಮತ್ಸ್ಯ ಪುರಾಣ, ವಿಷ್ಣು ಪುರಾಣ, ಅಗ್ನಿ ಪುರಾಣ, ಪದ್ಮ ಪುರಾಣ, ನಾರದ ಪುರಾಣ, ಬ್ರಹ್ಮ ಪುರಾಣ ಹಾಗೂ ಸ್ಕಂದ ಪುರಾಣಗಳಲ್ಲಿ ಇವನ್ನು ಕಾಣಬಹುದು. ಸ್ಕಾಂದ ಪುರಾಣದಲ್ಲಿ ಈ ರಥೋತ್ಸವದ ಮಹತ್ವವನ್ನು ಹೇಳಲಾಗಿದೆ. ‘(ಜಗನ್ನಾಥನ) ರಥಯಾತ್ರೆಯ (ಜಾತ್ರೆಯ) ಗುರಿಯಾದ ಗುಂಡೀಚಾ ಮಂದಿರದಲ್ಲಿ ಯಾರು ಉತ್ಸವ ಮೂರ್ತಿಗಳ ದರ್ಶನ ಪಡೆಯುತ್ತಾರೋ ಅವರಿಗೆ ಸಾವಿರ ಅಶ್ವಮೇಧ ಯಾಗಗಳ ಪುಣ್ಯ ಲಭಿಸುತ್ತದೆ’ ಎಂಬುದು ತಾತ್ಪರ್ಯ.
Rath Yatra of Lord Jagannath 2019 – LIVE from Puri later today https://t.co/yIovZUJkLJ
— Shashi Shekhar (@shashidigital) July 4, 2019
ಜಗನ್ನಾಥ ಪಂಥದ ಆರಂಭ ಕಾಲದ ಬಗ್ಗೆ ಇನ್ನೂ ಒಮ್ಮತವಿಲ್ಲ. ರಾಜಾ ಇಂದ್ರದ್ಯುಮ್ನನು ಈ ದೇವಾಲಯವನ್ನು ‘ಪುನನಿರ್ಮಿಸಿದನು’ ಎಂದು ಹೇಳಲಾಗುವುದರಿಂದ, ಮೊದಲ ನಿರ್ಮಾರ್ತೃ ಯಾರೆಂಬುದು ಇನ್ನೂ ನಿಗೂಢ. 5ನೇ ಶತಮಾನದಲ್ಲಿ ರಾಜಾ ಯಯಾತಿ ಕೇಸರಿ ಎನ್ನುವವನು ಇದನ್ನು ಎರಡನೇ ಬಾರಿಗೆ ಪುನರ್ನಿಮಾಣ ಮಾಡಿದನೆಂದು ದಾಖಲೆಗಳು ತಿಳಿಸುತ್ತವೆ. ಹನ್ನೆರಡನೇ ಶತಮಾನದಲ್ಲಿ ಗಂಗರಸರ ಆಳ್ವಿಕೆಯ ಕಾಲದಲ್ಲಿ ಪುರಿ ಕ್ಷೇತ್ರವು ಹೆಚ್ಚಿನ ಪ್ರಗತಿಯನ್ನು ಕಂಡಿತು. ರಾಜಾ ಆನಂತವರ್ಮ ಚೋಡ ಗಂಗದೇವ ಅಥವಾ ರಾಜಾ ಗಂಗೇಶ್ವರನು ಇಂದಿನ ಜಗನ್ನಾಥ ದೇಗುಲವನ್ನು ನಿರ್ಮಿಸಿದನು. ಹದಿನಾರನೇ ಶತಮಾನದಲ್ಲಿ ಬಂಗಾಳದ ಸುಲ್ತಾನನ ದುರಾಕ್ರಮಕ್ಕೆ ಸಿಲುಕಿ ಪುರಿ ದೇವಾಲಯ ಅವನತಿಯನ್ನು ಕಂಡಿತೆಂದೂ, ಸುಲ್ತಾನನ ಸೇನೆ ಜಗನ್ನಾಥ, ಬಲಭದ್ರ ಹಾಗೂ ಸುಭದ್ರೆಯರ ದಾರುಮೂರ್ತಿಗಳನ್ನು ಸುಟ್ಟು ಹಾಕಿತೆಂದೂ ಇತಿಹಾಸ ಹೇಳುತ್ತದೆ. ಇದಾದ ಕೆಲವೇ ದಶಕಗಳಲ್ಲಿ ವಶಕ್ಕೆ ತೆಗೆದುಕೊಂಡು, ದಾರುಶಿಲ್ಪಗಳ ಪುನರ್ ಪ್ರತಿಷ್ಠಾಪನೆ ಮಾಡಿ, ಜಗನ್ನಾಥ ಸ್ವಾಮಿ ದೇಗುಲದ ಪುನರುತ್ಥಾನಕ್ಕೆ ಕಾರಣನಾಗುತ್ತಾನೆ. ಅಲ್ಲಿಂದ ಮುಂದೆ ಉತ್ಕಲ ಹಾಗೂ ಗೌಡ ಪ್ರಾಂತಗಳಲ್ಲಿ ಜಗನ್ನಾಥ ಪಂಥವು ಉಚ್ಛ್ರಾಯವನ್ನು ತಲುಪುತ್ತದೆ.
ಚೀನಿ ಪ್ರವಾಸಿ ಫಾಹಿಯಾನನು ರಥಯಾತ್ರೆಯ ಉಲ್ಲೇಖವನ್ನು ವಿಶೇಷವಾಗಿ ಮಾಡಿದ್ದಾನೆ. ಪುರಿ ಜಗನ್ನಾಥ ರಥಯಾತ್ರೆ ಶತಮಾನಗಳಿಂದ ಸಂಸ್ಕøತ ಹಾಗೂ ದೇಶೀಯ ಭಾಷೆಯ ಎಲ್ಲ ಬಗೆಯ ಸಾಹಿತ್ಯ ಪ್ರಕಾರಗಳ ಮೇಲೂ ಪ್ರಭಾವ ಬೀರಿದೆ. ಒರಿಯ ಭಾಷೆಯ ಸಾಹಿತ್ಯದ ಮೇಲೆ ಸಹಜವಾಗಿಯೇ ವಿಶೇಷ ಫ್ರಭಾವ ಬೀರಿದೆ. ಕೊನಾರ್ಕ್ ರಥಯಾತ್ರೆ, ಭುವನೇಶ್ವರದ ರಥಯಾತ್ರೆ (ಪ್ರತಿಷ್ಠಾ ಮತ್ತು ದೇವ ದಾಮನ ರಥಗಳೆಂದು ಇವು ಪ್ರಖ್ಯಾತಿ ಪಡೆದಿವೆ)ಗಳು ಸಹ ಶತಮಾನಗಳಿಂದ ಜರುಗುತ್ತಿದ್ದು, ಸಹಸ್ರಾರು ಜನರನ್ನು ಆಕರ್ಷಿಸುತ್ತವೆ. ಈ ರಥಯಾತ್ರೆಗಳಿಗೂ ಪುರಿಯ ಜಗನ್ನಾಥಸ್ವಾಮಿ ರಥಯಾತ್ರೆಯೇ ಪ್ರೇರಣೆಯಾಗಿದೆಯೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಕಪಿಲಮುನಿಯ ಕಪಿಲ ಸಂಹಿತದಲ್ಲಿ, ಹಲಾಧರ ಮಿಶ್ರನ ವಸಂತೋತ್ಸವ ಕಾವ್ಯದಲ್ಲಿ, ಚಕ್ರರಾಣಿ ಪಟ್ನಾಯಕ ಗುಂಡೇಷ ಚಂಪೂವಿನಲ್ಲಿ, ಭಾಗವತ ವರ್ಣನೆಗಳಿವೆ. ಈ ಎಲ್ಲಾ ಉಲ್ಲೇಖಗಳು, ರಥಯಾತ್ರೆಯ ಸಂದರ್ಭದಲ್ಲಿ ಆರು ರಥಗಳಿದ್ದವೆಂದು ತಿಳಿಸುತ್ತವೆ.
ಉತ್ಸವ ವೈಶಿಷ್ಟ್ಯ
ಪುರಿ ರಥೋತ್ಸವದಲ್ಲಿ ಅಣ್ಣಂದಿರು ಹಾಗೂ ತಂಗಿಯ ಉತ್ಸವ ಮೂರ್ತಿಗಳು ರಥದಲ್ಲಿ ಪ್ರತಿಷ್ಠಾಪನೆಗೊಳ್ಳುವುದು ವಿಶೇಷ. ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ತನ್ನ ಬಾಲ್ಯವನ್ನು ಕಳೆದ ವೃಂದಾವನಕ್ಕೆ ಬಲರಾಮ ಹಾಗೂ ಸುಭದ್ರೆಯರೊಂದಿಗೆ ರಥದಲ್ಲಿ ತೆರಳುತ್ತಾನೆ. ಈ ಸಂದಂರ್ಭದಲ್ಲಿ ವೃಂದಾವನದ ಗೋಪಿಕೆಯರೆಲ್ಲರೂ ಹರ್ಷೋಲ್ಲಾಸದಿಂದ ಮೈಮರೆತು ಸಾಯುಜ್ಯವನ್ನೆ ಪಡೆದುಬಿಡುತ್ತಾರೆ. ಈ ಘಟನೆಯ ಸಂಸ್ಮರಣೆಯ ಆಚರಣೆಗೆಂದೇ ಪುರಿ ರಥೋತ್ಸವಕ್ಕೆ ಚಾಲನೆ ದೊರೆಯಿತು ಎನ್ನುತ್ತವೆ ಐತಿಹ್ಯಗಳು.
ಪ್ರತಿ ವರ್ಷ ಆಷಾಢ ಮಾಸ ಶುದ್ಧ ಬಿದಿಗೆಯಂದು ರಥೋತ್ಸವ ಆರಂಭಗೊಳ್ಳುತ್ತದೆ. ದೇಗುಲದಿಂದ ಸ್ವಾಮಿ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯರ ಉತ್ಸವ ಮೂರ್ತಿಗಳನ್ನು ತಂದು ಮೂರು ಪ್ರತ್ಯೇಕ ಅಲಂಕೃತ ರಥಗಳಲ್ಲಿ ಕೂರಿಸಲಾಗುತ್ತದೆ. ಆನಂತರ ಸಾವಿರಾರು ಭಕ್ತರು ಸೇರಿ ಸುಮಾರು ಮೂರು ಕಿ. ಮೀ. ಅಂತರದಲ್ಲಿರುವ ಗುಂಡೀಚಾ ದೇಗುಲದವರೆಗೆ ರಥವನ್ನು ಎಳೆಯುತ್ತಾರೆ. 9 ದಿನಗಳ ಬಳಿಕ ಮರಳಿ ಜಗನ್ನಾಥ ದೇಗುಲದತ್ತಳೆಯಲಾಗುತ್ತದೆ. ಇದನ್ನು ‘ಬಹುಧಾ ಉತ್ಸವ’ ಎಂದು ಕರೆಯಲಾಗುತ್ತದೆ. ಉತ್ಸವಕ್ಕೆಂದೇ ಪ್ರತಿ ವರ್ಷ ಶಾಸ್ತ್ರಗಳಲ್ಲಿ ಸೂಚಿಸಿದಂತೆ ನಿರ್ದಿಷ್ಟಮರದಿಂದ ರಥಗಳನ್ನು ಹನ್ನೆರಡು ವರ್ಷಗಳಿಗೊಮ್ಮೆ ಶಾಸ್ತ್ರ ನಿರ್ದೇಶಿತ ಮರದಿಂದ, ಅದರಲ್ಲಿ ಸೂಚಿಸಿರುವ ವಿಧಿ ವಿಧಾನಗಳನ್ನು ಅನುಸರಿಸಿ ಹೊಸತಾಗಿ ತಯಾರಿಸಲಾಗುತ್ತದೆ ಮತ್ತು ಹಳೆಯ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ.
ಜಗನ್ನಾಥ ಸ್ವಾಮಿಯ ರಥವನ್ನು ನಂದಿಘೋಷ ಎಂದು ಕರೆಯಲಾಗುತ್ತದೆ. ಇದು 16 ಚಕ್ರಗಳನ್ನು ಹೊಂದಿದ್ದು, 44 ಅಡಿ 2 ಇಂಚುಗಳಷ್ಟು ಎತ್ತರವಿರುತ್ತದೆ. ಬಲಭದ್ರಸ್ವಾಮಿಯ ರಥವು ತಾಲದ್ವಜವೆಂದು ಹೆಸರು ಪಡೆದಿದ್ದು, 14 ಚಕ್ರಗಳನ್ನು ಹೊಂದಿರುತ್ತದೆ. ಈ ರಥದ ಎತ್ತರ 43 ಅಡಿ 3 ಇಂಚುಗಳಷ್ಟು, ಸುಭದ್ರಾ ದೇವಿಯ ರಥವನ್ನು ದರ್ಪದಲನ ಎಂದು ಕರೆಯಲಾಗುತ್ತದೆ. ಇದರ ಎತ್ತರ 42 ಅಡಿ 3 ಇಂಚುಗಳಷ್ಟಿದ್ದು, 12 ಚಕ್ರಗಳನ್ನು ಹೊಂದಿರುತ್ತದೆ. ಈ ಮೂರೂ ರಥಗಳಿಗೂ ವಿಬಿನ್ನ ಬಣ್ಣ ಹಾಗೂ ಚಿಹ್ನೆಗಳನ್ನು ಬಳಸಲಾಗುತ್ತದೆ. ಇವುಗಳಿಗೆ ಬಳಸುವ ಮರದ ತುಂಡುಗಳ ಸಂಖ್ಯೆಯೂ ಶಾಸ್ತ್ರೋಕವಾಗಿಯೇ ಇರುತ್ತವೆ. ಪ್ರತಿ ವರ್ಷ ಮಹಾನದಿಯಲ್ಲಿ ತೇಲಿ ಬರುವ ಫಾಸಿ,ಧೌಸ ಮೊದಲಾದ ಜಾತಿಯ ಮರದ ದಿಮ್ಮಿಗಳನ್ನು ಆಯ್ದು, ನಿರ್ದೇಶಿತ ಲಕ್ಷಣಗಳನ್ನು ಹೊಂದಿರುವಂಥವನ್ನು ಗುರುತಿಸಿ, ಅವುಗಳಿಂದಲೇ ರಥಗಳನ್ನೂ ದೇವತಾ ವಿಗ್ರಹಗಳನ್ನೂ ತಯಾರಿಸಲಾಗುತ್ತದೆ. ಈ ಕಾರ್ಯಕ್ಕಾಗಿಯೇ ನಿರ್ದಿಷ್ಟ ವಂಶವೊಂದು ಶತಶತಮಾನಗಳಿಂದ ನಿಯೋಜನೆಗೊಂಡಿದೆ.ಜಗನ್ನಾಥನ ರಥಯಾತ್ರೆ ವಿಶ್ವದಲ್ಲಿಯೇ ಅದ್ವಿತೀಯ ರಥಯಾತ್ರೆ.
ಪ್ರತಿವರ್ಷವೂ ನಡೆಯುವ ರಥಯಾತ್ರೆಗಾಗಿ ನೂತನ ರಥವನ್ನು ನಿರ್ಮಿಸಲಾಗುತ್ತದೆ. ನೂರಾರು ಸಂಖ್ಯೆಯಲ್ಲಿ ಮರದ ಕೆತ್ತನೆ ಮಾಡುವವರು, ಅವರಿಗೆ ನೂರಾರು ಸಹಾಯಕರು. ನೂರಾರು ಗಜ ಪರಿಮಾಣದ ಬಟ್ಟೆಯನ್ನು ಈ ರಥಕ್ಕೆ ಸಿಂಗರಿಸುತ್ತಾರೆ. ಆ ರಥವು ಸಾಗುವ ಮೂರು ಕಿಲೋಮೀಟರ ಅಂತರವನ್ನು ತಲುಪಿಸಲು ನೂರಾರು ಅಡಿಗಳ ದೊಡ್ಡ ಹಗ್ಗವಿರುತ್ತದೆ. ಬೃಹತ್ ಗಾತ್ರದ ರಥ ಹಾಗೂ ಲಕ್ಷಾಂತರ ಭಕ್ತರು ನೆರೆಯುವ ಈ ರಥೋತ್ಸವವನ್ನು ವಿದೇಶಿಗರು ಬೆರಗು ಭಯಗಳಿಂದ ನೋಡುತ್ತಾರೆ. ಈ ಕಾರಣದಿಂದಾಗಿಯೇ ಜಗನ್ನಾಥ ರಥೋತ್ಸವದ ಬಗ್ಗೆ ಹೊರ ದೇಶಗಳಲ್ಲಿ ಅನೇಕ ಮಿಧ್ಯೆಗಳು ಹುಟ್ಟಿಕೊಂಡಿದ್ದು, ಅಲ್ಲಿನವರ ಕುತೂಹಲಕ್ಕೆ ಒಳಗಾಗಿದೆ. ನಮ್ಮಲ್ಲಿ ಜಗನ್ನಾಥ ಸ್ವಾಮಿಯ ರಥೋತ್ಸವವು ಪ್ರತಿಯೊಬ್ಬ ಶ್ರದ್ಧಾವಂತ ಹಿಂದುವೂ ಪಾಲ್ಗೊಳ್ಳಲೇಬೇಕಾದ ಪವಿತ್ರ ಆಚರಣೆಯೆಂದು ಮನ್ನಣೆ ಪಡೆದಿದೆ.
-ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಯುವ ಸಂಸ್ಕೃತಿ ಚಿಂತಕರು
Discussion about this post