ಸಾಮಾನ್ಯವಾಗಿ ಒಬ್ಬ ಮಗುವಿಗೆ ಒಬ್ಬಳು ತಾಯಿ ಇರುತ್ತಾಳೆ. ಆದರೆ ಒಂದು ಮಗುವಿಗೆ ಇಬ್ಬರು ತಾಯಂದಿರು ಇರುವುದನ್ನು ನೋಡಿದ್ದೀರಾ? ಹೀಗೂ ಸಾಧ್ಯವೇ? ಅಂತ ಯೋಚಿಸಿ ತಲೆ ಕೆಡಿಸಿಕೊಳ್ಳಬೇಡಿ. ಏಕೆಂದರೆ ಆ ಮಗು ಬೇರೆ ಯಾರೂ ಅಲ್ಲ ಬದಲಾಗಿ ಬೆಣ್ಣೆ ಕಳ್ಳ ಶ್ರೀಕೃಷ್ಣ.
ಹೌದು ಕೃಷ್ಣನಿಗೆ ಇಬ್ಬರು ತಾಯಿಂದಿರು. ದೇವಕಿ ಕೃಷ್ಣನ ಜನ್ಮದಾತೆಯಾದರೆ ಯಶೋಧೆ ಶ್ರೀಕೃಷ್ಣನಿಗೆ ವಾತ್ಸಲ್ಯದಾತೆ. ಅರ್ಥಾತ್ ವಾತ್ಸಲ್ಯದಿಂದ ಸಾಕಿ ಬೆಳೆಸಿದ ತಾಯಿ.
ಮಥುರಾದ ಕಾರಾಗೃಹದಲ್ಲಿ ಮದ್ಯರಾತ್ರಿ ಜನಿಸಿದ ಶ್ರೀಕೃಷ್ಣನನ್ನು ತಂದೆ ವಸುದೇವ ಕಂಸನ ಭಯದಿಂದ ಗೋಕುಲಕ್ಕೆ ಬಿಟ್ಟು ಬರುತ್ತಾನೆ. ಅಲ್ಲಿ ಯಶೋದೆ ಕೃಷ್ಣನನ್ನ ಪ್ರೀತಿಯಿಂದ ಸಾಕುತ್ತಾಳೆ.
ಹೀಗೆ ಕೃಷ್ಣ ಜನಿಸಿದ ದಿನವೇ ಕೃಷ್ಣಾಷ್ಟಮಿ ಅಥವಾ ಗೋಕುಲಾಷ್ಠಮಿ. ಕೃಷ್ಣ ಜನ್ಮಾಷ್ಟಮಿಯನ್ನು ಎರಡು ರೀತಿಯಲ್ಲಿ ಆಚರಿಸುತ್ತಾರೆ. ಅದಕ್ಕೆ ಅವರವರು ಬಳಸುವ ಪದ್ದತಿ ಆಧಾರವಾಗಿರುತ್ತದೆ. ಅಂದರೆ ಸೌರಮಾನ ಪದ್ದತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಮತ್ತು ಚಾಂದ್ರಮಾನ ಪದ್ಧತಿಯ ಪ್ರಕಾರ ಶ್ರಾವಣ ಅಷ್ಟಮಿಯಂದು ಆಚರಿಸುತ್ತಾರೆ.
ಗೋಕುಲಾಷ್ಠಮಿಯನ್ನು ಮನೆ ಮತ್ತು ದೇವಸ್ಥಾನಗಳಲ್ಲಿ ಬೈಹಳ ಸುಂದರವಾಗಿ ಆಚರಣೆ ಮಾಡಲಾಗುತ್ತದೆ. ಅಂದು ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿ ಅವರ ಹೆಜ್ಜೆಗಳನ್ನು ಬಿಡಿಸಲಾಗುತ್ತದೆ. ಇದರರ್ಥ ಬಾಲಕೃಷ್ಣ ಮನೆಯೊಳಗೆ ಬರುತ್ತಾನೆ ಎಂದು. ಬಗೆ ಬಗೆಯ ಸಿಹಿಯನ್ನು ತಯಾರಿಸಿ ಕೃಷ್ಣನಿಗೆ ಅರ್ಪಿಸಲಾಗುತ್ತದೆ. ಇನ್ನೂ ಹಬ್ಬದ ಮುನ್ನಾದಿನ ಪೂರ್ಣ ಈಪವಾಸ ಇರುತ್ತಾರೆ. ಕೃಷ್ಣನ ವಿಗ್ರಹಗಳನ್ನು ಸುಂದರವಾಗಿ ಅಲಂಕಾರ ಮಾಡಲಾಗುತ್ತದೆ.
ಇನ್ನೂ ತುಳುನಾಡಿನಲ್ಲಿ ಇದರ ಆಚರಣೆ ಬಹು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಉಡುಪಿಯ ಅಷ್ಟಮಠಗಳಲ್ಲಿ ವಿಶೇಷ ಪೂಜಾ ಕೈಕಂರ್ಯಗಳು ನಡೆಯುತ್ತವೆ. ತುಳುನಾಡಿನ ಸೋಣ ತಿಂಗಳಿನಲ್ಲಿ ನಡೆಯುವ ಅಷ್ಟಮಿ ಹಬ್ಬ ಬಹು ವಿಶೇಷ. ಮನೆಯ ಯಜಮಾನ ಮಧ್ಯಾಹ್ನ ಉಪವಾಸ ಮಾಡಿ ಕೇವಲ ಎಳೆನೀರು ಕುಡಿದು ಒಂದಿಷ್ಟು ಫಲಹಾರ ಸೇವಿಸುತ್ತಾರೆ. ಇದಕ್ಕೆ ಅಷ್ಠಮಿ ಉಪವಾಸ ಎನ್ನಲಾಗಿದೆ.
ಈ ದಿನದ ವೃತ ಮಿಕ್ಕಿದ್ದೆಲ್ಲ ವೃತಗಳಿಗಿಂತ ಶ್ರೇಷ್ಠ ಎಂದು ಪುರಾಣ ಹೇಳುತ್ತದೆ. ಈ ದಿನ ಉಪವಾಸ ಮಾಡಿದರೆ ಮಹಾಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನ ಉಪವಾಸ ಮಾಡದಿದ್ದಲ್ಲಿ ಮೂರು ಲೋಕಗಳಲ್ಲಿನ ಪಾಪಕ್ಕೆ ಒಳಗಾಗುತ್ತಾನೆ. ಮಾತ್ರವಲ್ಲ ಸ್ತ್ರೀ ಹತ್ಯೆ ಬ್ರಹ್ಮ ಹತ್ಯೆ ಗೋಹತ್ಯೆ ಸುರಪಾನದಂತ ಪಾಪಗಳು ಅಂಟಿಕೊಳ್ಳುತ್ತವೆ ಎನ್ನುವುದು ಉಲ್ಲೇಖ.
ಈ ದಿನ ಬಡವರಿಗೆ ದಾನ ಮಾಡಿದರೆ ಶ್ರೇಷ್ಠ ಮತ್ತು ಈ ದಿನ ಕೃಷ್ಣನ ಕ್ಷೇತ್ರಕ್ಕೆ ಭೇಟಿ ನೀಡಿದರೆ ಕೃಷ್ಣನ ಪೂರ್ಣ ಕೃಪೆ ಸಿಗುತ್ತದೆ ಎನ್ನಲಾಗಿದೆ.
ಈ ದಿನ ಕೃಷ್ಣನನ್ನು ಭಕ್ತಿಯಿಂದ ಪೂಜಿಸಿ ಅವನ ಕೃಪೆಗೆ ಪಾತ್ರರಾಗೋಣ ಎನ್ನುತ್ತಾ ನನ್ನ ಲೇಖನ ಮುಗಿಸುತ್ತೇನೆ.
ಲೇಖನ: ರೋಹನ್ ಗೇರುಸೊಪ್ಪ
ಚಿತ್ರಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post