ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ (Kannada) ಕೇವಲ ಒಂದು ಭಾಷೆ ಅಥವಾ ಪದವಲ್ಲ, ಅದು ನಮ್ಮ ಉಸಿರು ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿದೆ. ಕನ್ನಡ ನಮ್ಮ ಮಾತೃಭಾಷೆಯಾಗಿದ್ದು, ನಮ್ಮ ಜೀವನದ ಭಾಷೆಯೂ ಕನ್ನಡವಾಗಿರಬೇಕು. ಅನೇಕ ಭಾಷೆಗಳು ಬೆಳೆದು ಬಂದರೂ ಕನ್ನಡ ತನ್ನದೇ ಆದ ವೈಶಿಷ್ಟ್ಯ, ಸಾಹಿತ್ಯಿಕ ಶ್ರೀಮಂತಿಕೆ ಹಾಗೂ ಸಾಂಸ್ಕೃತಿಕ ಪರಂಪರೆಯಿಂದ ನಿರಂತರವಾಗಿ ಬೆಳೆಯುತ್ತಿದೆ. ಇದು ಕನ್ನಡಿಗರ ಶಕ್ತಿ ಹಾಗೂ ಕನ್ನಡ ಭಾಷೆಯ ತಾಕತ್ತನ್ನು ಪ್ರತಿಬಿಂಬಿಸುತ್ತದೆ ಎಂದು ಸಹ ಶಿಕ್ಷಕ ಜಿಯಾಯುಲ್ಲಾ ಹೇಳಿದರು. ನಗರದ ಕುಮದ್ವತಿ ಕೇಂದ್ರೀಯ ವಸತಿ ಶಾಲೆಯಲ್ಲಿ (Kumudvathi School) ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಯ ಹಿರಿಮೆ, ಸಾಹಿತ್ಯದ ಶ್ರೀಮಂತಿಕೆ ಹಾಗೂ ಶಿವಮೊಗ್ಗ ಜಿಲ್ಲೆಯ ವಿಶೇಷತೆಗಳನ್ನು ವಿವರಿಸಿದರು.
ಕನ್ನಡ ಸಾಹಿತ್ಯದ ಮೂಲಕ ಭಾಷೆಯ ಮಹತ್ವ ವಿಶ್ವದಾದ್ಯಂತ ಪಸರಿಸಿದೆ. ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಕವಿಗಳು ಹಾಗೂ ಸಾಹಿತಿಗಳಿಂದಾಗಿ ಕನ್ನಡ ಸಾಹಿತ್ಯ ಲೋಕ ಶ್ರೀಮಂತವಾಗಿದೆ. ಅಂತಹ ಅನೇಕ ಮಹಾನ್ ಕವಿಗಳನ್ನು ಕೊಡುಗೆಯಾಗಿ ನೀಡಿರುವ ಶಿವಮೊಗ್ಗ ಜಿಲ್ಲೆ ಕವಿಗಳ ನೆಲೆಬೀಡಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ರಾಷ್ಟ್ರಕವಿಯನ್ನು ನೀಡಿದ ಹೆಗ್ಗಳಿಕೆ ಈ ಜಿಲ್ಲೆಗಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಪ್ರಕೃತಿ ಸೌಂದರ್ಯ, ಐತಿಹಾಸಿಕ ಹಿನ್ನೆಲೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಉಲ್ಲೇಖಿಸಿದ ಅವರು, ಕನ್ನಡದ ಮೊದಲ ರಾಜವಂಶವೆಂದು ಗುರುತಿಸಲ್ಪಡುವ ಕದಂಬರ ಮಯೂರವರ್ಮನ ಇತಿಹಾಸ, ಶರಣರ ಪರಂಪರೆ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿರುವ ಈ ನಾಡಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕರ್ನಾಟಕ ಏಕೀಕರಣದ ಇತಿಹಾಸ ಸ್ಮರಣೆ
ಕಾರ್ಯಕ್ರಮದಲ್ಲಿ ಕನ್ನಡ ಶಿಕ್ಷಕಿ ಜಯಂತಿ ಮಾತನಾಡಿ, ಕರ್ನಾಟಕ ಏಕೀಕರಣಕ್ಕಾಗಿ ನಡೆದ ಹೋರಾಟ, ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸುವಲ್ಲಿ ನಡೆದ ಪ್ರಯತ್ನಗಳು ಹಾಗೂ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣಗೊಂಡ ಐತಿಹಾಸಿಕ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದರು. ಕನ್ನಡ ನಾಡಿನ ಏಕತೆ ಮತ್ತು ಭಾಷಾಭಿಮಾನವನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವನ್ನು ವಿವರಿಸಿದರು.
Also Read>> ಕುಮದ್ವತಿ ಕಾಲೇಜಿನಲ್ಲಿ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ
ನಾಡಿನ ಕಲೆ, ಸಂಸ್ಕೃತಿ ಪರಿಚಯ
ಶಾಲೆಯ ಕೋ-ಆರ್ಡಿನೇಟರ್ ಪ್ರಭು ಅವರು ಕನ್ನಡ ಭಾಷೆಯ ಮಹತ್ವದ ಕುರಿತು ಮಾತನಾಡಿ, ಕರ್ನಾಟಕದ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ, ನೆಲ ಮತ್ತು ಜಲದ ವೈಶಿಷ್ಟ್ಯಗಳನ್ನು ಪರಿಚಯಿಸಿದರು. ನಾಡಿನ ಪರಂಪರೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಅರಿತು ಗೌರವಿಸುವ ಮೂಲಕ ಕನ್ನಡ ನಾಡಿನ ಹೆಮ್ಮೆಯನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
Kumudvathi School: ಶಿಕ್ಷಕರು, ವಿದ್ಯಾರ್ಥಿಗಳ ಉಪಸ್ಥಿತಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಚಾರ್ಯ ಪ್ರಶಾಂತ್ ಎಚ್.ಡಿ. ವಹಿಸಿದ್ದರು. ವಿದ್ಯಾರ್ಥಿನಿ ಪ್ರಣವಿ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಕೋ-ಆರ್ಡಿನೇಟರ್ಗಳು, ಶಿಕ್ಷಕ ವೃಂದದವರು, ನಿಲಯಪಾಲಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಶಿಕ್ಷಕರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮಾಧ್ಯಮಿಕ ವಿಭಾಗದ ಸಂಯೋಜಕ ಗಿರೀಶ್ ಎಸ್. ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










