ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕುಂದಾಪುರ: ಪ್ರಧಾನಿ ನರೇಂದ್ರ ಮೋದಿಯವರ ಪರೀಕ್ಷಾ ಪೆ ಚರ್ಚಾ ಎನ್ನುವ ವಿದ್ಯಾರ್ಥಿ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಯ ಅಲ್ಪಾಡಿ-ಆರ್ಡಿಯ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅನುಷಾ ಆಯ್ಕೆಯಾಗಿದ್ದಾರೆ.
ದೇಶಾದ್ಯಂತ ಒಟ್ಟು 10.39 ಲಕ್ಷ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದ್ದರು. ಅವುಗಳಲ್ಲಿ 1,500 ಅರ್ಜಿಗಳು ಅಂತಿಮ ಸುತ್ತಿನ ಆಯ್ಕೆಗೆ ತೆಗೆದುಕೊಳ್ಳಲಾಗಿದ್ದು, ಈ ಪೈಕಿ 30 ಮಂದಿ ಪ್ರಧಾನ ಮಂತ್ರಿಗಳೊಂದಿಗೆ ನೇರವಾಗಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ದೇಶಾದ್ಯಂತ 30 ಶಾಲೆಗಳ ಪೈಕಿ ರಾಜ್ಯದಿಂದ ಎರಡು ಶಾಲೆಗಳು ಆಯ್ಕೆಯಾಗಿವೆ. ಬೆಂಗಳೂರಿನ ಒಂದು ಶಾಲೆ ಹೊರತಾಗಿ ಕುಂದಾಪುರದ ಆರ್ಡಿ ಶಾಲೆಯು ಸಹ ಈ ವಿಶೇಷ ಕಾರ್ಯಕ್ರಮಕ್ಕೆ ಆಯ್ಕೆಯಾಗಿದೆ ಎನ್ನುವುದು ಗಮನಾರ್ಹ.
ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಮಾಡಿದ ‘ಪರೀಕ್ಷಾ ಪೆ ಚರ್ಚಾ’ ಎಂಬ ಪ್ರಚಾರ ವಿಡಿಯೋವನ್ನು ಪ್ರಧಾನಿ ವೀಕ್ಷಿಸಲಿದ್ದಾರೆ. ಸಂವಾದದ ಸಮಯದಲ್ಲಿ, ಈ ವೀಡಿಯೊವನ್ನು ಸಹ ಅವರಿಗೆ ರವಾನಿಸಲಾಗುವುದು ಇದಕ್ಕಾಗಿ ದೆಹಲಿಯ ತಂಡವೊಂದು ಶಾಲೆಗೆ ಭೇಟಿ ನೀಡಲಿದೆ. ಸಂವಾದದ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ.
ಅನುಷಾ ಅಲ್ಬಾಡಿ-ಅರ್ಡಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಗುಡ್ಡೆಂಗಡಿಯ ಕೃಷ್ಣ ಕುಲಾಲ್-ಜಯಲಕ್ಷ್ಮಿ ದಂಪತಿಗಳ ಪುತ್ರಿ. ಮುಂದೆ ತಾನು ಎಂಜಿನಿಯರಿಂಗ್ ಶಿಕ್ಷಣ ಪಡೆಯುವ ಕನಸು ಹೊಂದಿರುವ ಅನುಷಾ ಪ್ರಧಾನ ಮಂತ್ರಿಯೊಂದಿಗೆ ಸಂವಾದ ನಡೆಸಲು ಇಡೀ ದೇಶದ 30 ವಿದ್ಯಾರ್ಥಿಗಳ ಪೈಕಿ ಒಬ್ಬರಾಗಿ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಶಾಲೆಯ ವಿದ್ಯಾರ್ಥಿನಿಯಾಗಿರುವುದಕ್ಕೆ ನಾನು ಅದೃಷ್ಟ ಮಾಡಿದ್ದೇನೆ. ನನಗೆ ಇಂತಹಾ ಅಪೂರ್ವ ಅವಕಾಶ ಸಿಕ್ಕಿದೆ ಎಂದು ನಂಬುವುದು ಕಷ್ಟವಾಗುತ್ತಿದೆ ಎಂದು ಅನುಷಾ ಹೇಳಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ್ ಮರಕಾಲ ಹಾಗೂ ಮತ್ತಿತರ ಶಿಕ್ಷಕರಿಗೆ ತನಗೆ ಪ್ರೋತ್ಸಾಹ ನೀಡಿದುದಕ್ಕಾಗಿ ಅನುಷಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post