ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: ಡಾ. ಬಾಬು ಜಗಜೀವನ್ ರಾಮ್ ಅವರ ತತ್ವಾದರ್ಶ ಮತ್ತು ರಾಜಕೀಯ ಚಿಂತನೆ ಹಿಂದೆಂದಿಗಿಂತಲೂ ಪ್ರಸ್ತುತವಾಗಿದ್ದು, ಆಡಳಿತ ಯಂತ್ರದ ನಿರ್ವಹಣೆಯಲ್ಲಿ ಮತ್ತು ಸರ್ಕಾರದ ನೀತಿ ನಿರೂಪಣೆಯಲ್ಲಿ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸಬೇಕಿದೆ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಸ್.ಎಸ್. ಪಾಟೀಲ್ ಹೇಳಿದರು.
ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬಾಬು ಜಗಜೀವನ್ ರಾಮ್ ಅವರ 114ನೆಯ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಬು ಜಗಜೀವನ್ರಾಮ್ ಅವರು ತಮ್ಮ ಸುಧೀರ್ಘ ರಾಜಕೀಯ ಜೀವನದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿ ಸಮರ್ಥವಾಗಿ ನಿಭಾಯಿಸಿದ್ದಾರೆ. 1971ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಯುದ್ಧದಲ್ಲಿ ರಕ್ಷಣಾ ಸಚಿವರಾಗಿ ಇಡೀ ಭಾರತೀಯ ಸೇನೆಯನ್ನು ತಮ್ಮ ನಿರ್ಣಾಯಕ ನಾಯಕತ್ವದ ಮೂಲಕ ಮುನ್ನೆಡಿಸಿ ಭಾರತದ ವಿಜಯಕ್ಕೆ ಕಾರಣರಾದರು ಜಗಜೀವನ್ ರಾಮ್. ತಮ್ಮ ಆಡಳಿತಾವಧಿಯಲ್ಲಿ ಹಲವಾರು ಐತಿಹಾಸಿಕ ಮೈಲುಗಲ್ಲುಗಳನ್ನು ಸ್ಥಾಪಿಸಿದ ಅವರು, ನಾಲ್ಕು ಬಾರಿ ಕಾರ್ಮಿಕ ಮಂತ್ರಿಯಾಗಿ ಸೇವೆ ಸಲ್ಲಿಸಿ ಕಾರ್ಮಿಕ ಸಂಘಟನೆಗಳಿಗೆ ಕೊಟ್ಟ ಕೊಡುಗೆ ಮತ್ತು ಸಹಕಾರ ಅಪ್ರತಿಮವಾದದ್ದು. ಎಪ್ಪತ್ತರ ದಶಕದಲ್ಲಿ ಎರಡು ಅವಧಿಗೆ ಕೃಷಿ ಸಚಿವರಾಗಿದ್ದ ಅವರು ಆಹಾರ ಕೊರತೆಯಂತಹ ಸಂಕಷ್ಟದ ಸಮಯದಲ್ಲಿ ಹಸಿರುಕ್ರಾಂತಿಗೆ ಕಾರಣರಾದವರು ಎಂದು ಶ್ಲಾಘಿಸಿದರು.
ಡಾ. ಬಾಬು ಜಗಜೀವನ್ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಚಾಲಕರಾದ ಪ್ರೊ. ಎ. ಷಣ್ಮುಖ ಮಾತನಾಡಿ, ಅಶ್ಪಸ್ಯತೆಯನ್ನು ಹೋಗಲಾಡಿಸುವಲ್ಲಿ ಜಗಜೀವನ್ ರಾಮ್ ಅವರ ಚಿಂತನೆಗಳ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯತೆ ಇದೆ ಎಂದರು. ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ. ಉದಗಟ್ಟಿ ವೆಂಕಟೇಶ್, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post