ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯಮ ಆರಂಭಿಸಲು ಇರುವ ಅವಕಾಶಗಳನ್ನು ವಿದ್ಯಾರ್ಥಿ ದೆಸೆಯಲ್ಲೇ ಯುವಸಮೂಹವು ಅಧ್ಯಯನಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಔದ್ಯೋಗಿಕ ಕೇಂದ್ರದ ಜಂಟಿನಿರ್ದೇಶಕ ಡಿ. ಸಿದ್ಧರಾಜು ವಿದ್ಯಾರ್ಥಿಗಳಿಗೆ ಸಲಹೆಯಿತ್ತರು.
ಕುವೆಂಪು ವಿವಿಯ ವಾಣಿಜ್ಯ ವಿಜ್ಞಾನ, ನಿರ್ವಹಣಾ ವಿಜ್ಞಾನ ಮತ್ತು ಪ್ರವಾಸೋದ್ಯಮ ಅಧ್ಯಯನ ವಿಭಾಗಗಳು ಚಿಕ್ಕಮಗಳೂರು ಜಿಲ್ಲಾ ಔದ್ಯೋಗಿಕ ಕೇಂದ್ರ ಮತ್ತು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ವಿವಿಯ ಬಸವ ಸಭಾಭವನದಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಉದ್ಯಮ ಸ್ಥಾಪಿಸಲು ಇರುವ ಅವಕಾಶಗಳು’ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಮುದಾಯವು ಪದವಿ, ಸ್ನಾತಕೋತ್ತರ ಪದವಿಗಳನ್ನು ಅಭ್ಯಸಿಸುತ್ತಿರುವಾಗಲೇ ಪ್ರಾದೇಶಿಕ ವೈಶಿಷ್ಟ್ಯತೆಗಳನ್ನು ಅರಿತುಕೊಂಡು ಮೌಲ್ಯಯುತವಾದ ನವ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗಬೇಕು. ವಿಶೇಷವಾಗಿ ಇದಕ್ಕಾಗಿ ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಕುರಿತು ಸಂಶೋಧನೆ ಕೈಗೊಂಡಲ್ಲಿ ಖಂಡಿತ ಯಶಸ್ಸು ಕಾಣಬಹುದು ಎಂದರು.
ಉದ್ಯಮ ಸ್ಥಾಪನೆ ಕೇವಲ ಒಬ್ಬರ ಲಾಭಕ್ಕಾಗಿ ಅಲ್ಲ. ಉದ್ಯಮಗಳು ದೇಶದ ಆರ್ಥಿಕತೆಯ ನಡೆಸುತ್ತಿರುವ ಚಾಲಕ ಶಕ್ತಿಗಳು. ಸರ್ಕಾರವು ನವೋದ್ಯಮ, ಸ್ಟಾರ್ಟಪ್ ಗಳನ್ನು ಸ್ಥಾಪಿಸಲು ಹತ್ತಾರು ಯೋಜನೆಗಳನ್ನು, ಪ್ರೋತ್ಸಾಹದಾಯಕ ಕ್ರಮಗಳನ್ನು ಪರಿಚಯಿಸಿದೆ. ಇವುಗಳನ್ನು ಸಮರ್ಥವಾಗಿ ಅರಿತು ಬಳಸಿಕೊಂಡಲ್ಲಿ ಹೊಸ ಉದ್ಯಮಗಳನ್ನು ಸ್ಥಾಪಿಸಿ ಜನರಿಗೆ ಉದ್ಯೋಗ ನೀಡಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಅಧ್ಯಕ್ಷ ಪ್ರೊ. ಎಸ್ ವೆಂಕಟೇಶ್ ಅಧ್ಯಕ್ಷೀಯ ನುಡಿಗಳನ್ನು ಹಾಗೂ ನಿರ್ವಹಣಾ ವಿಭಾಗದ ಪ್ರೊ. ಹೆಚ್. ಎನ್. ರಮೇಶ್, ಸಹ ಪ್ರಾಧ್ಯಾಪಕ ಡಾ. ಕೆ ಆರ್. ಮಂಜುನಾಥ್, ಮಾತನಾಡಿದರು. ವಿಭಾಗದ ಪ್ರೊ. ಆರ್. ಹಿರೇಮಣಿನಾಯ್ಕ್, ಲೀಡ್ ಬ್ಯಾಂಕ್‌ನ ಸುರೇಶ್, ಪ್ರವಾಸೋಧ್ಯಮ ಇಲಾಖೆಯ ನಾಗರಾಜ್, ರವೀಶ್ ಪ್ರಸಾದ್ ಹಾಗೂ ಎಲ್ಲ ವಿಭಾಗಗಳ ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post