ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ವಿವಿಧ ರಾಷ್ಟ್ರೀಯ ಸಂಸ್ಥೆಗಳ ರ್ಯಾಂಕಿಂಗ್ ಮಾನದಂಡದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಮತ್ತು ವಿದ್ಯಾರ್ಥಿ ಕೇಂದ್ರಿತ ವ್ಯವಸ್ಥೆ ರೂಪಿಸಲು ವಿವಿಯ ಬೋಧಕ ಮತ್ತು ಬೋಧಕೇತರ ವರ್ಗದವರಕೊಡುಗೆ ಸಮಾನವಾಗಿದೆ. ಬೋಧಕ ವರ್ಗದ ಸಂಶೋಧನಾಚಟುವಟಿಕೆ ಮತ್ತು ಬೋಧಕೇತರ ವರ್ಗದ ಸ್ಪಷ್ಟ ಆಡಳಿತ ಹಾಗೂ ಶೈಕ್ಷಣಿಕ ಕಾರ್ಯಚಟುವಟಿಕೆಗಳು ವಿವಿಗೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಕುವೆಂಪು ವಿವಿ ಅಧ್ಯಾಪಕೇತರ ನೌಕರರ ಸಂಘ ಆಯೋಜಿಸಿದ್ದ, ಕಳೆದ ಸಾಲಿನಲ್ಲಿ ನಿವೃತ್ತಿಗೊಂಡ 14 ಅಧ್ಯಾಪಕೇತರ ಸಿಬ್ಬಂದಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ದಾಖಲಾತಿ, ಶಿಷ್ಯವೇತನ ನಿರ್ವಹಣೆ, ಪತ್ರಗಳ ನಿರ್ವಹಣೆ ಮತ್ತು ರವಾನೆ, ಇತರ ಹತ್ತು ಹಲವು ಚಟುವಟಿಕೆಗಳನ್ನು ನಿರ್ವಹಿಸುವ ಜವಾಬ್ದಾರಿ ಇವರ ಮೇಲಿದ್ದು ಇದನ್ನು ಸಮರ್ಥವಾಗಿ ತೆರೆಮರೆಯಲ್ಲಿಯೇ ನಿಭಾಯಿಸುತ್ತಿದ್ದಾರೆ. ಕಳೆದೆರಡು ದಶಕಗಳಿಂದ ಎನ್‌ಐಆರ್‌ಎಫ್ ಪಟ್ಟಿಯಲ್ಲಿ ನೂರರ ಓಳಗೆ ಸ್ಥಾನ ಪಡೆದಿರುವುದು, ನ್ಯಾಕ್ ನಿಂದ ಎ ಗ್ರೇಡ್ ಪಡೆದಿರುವುದು, ಕೆಎಸ್‌ಯುಆರ್‌ಎಫ್’ನಲ್ಲಿ ಮೂರನೆಯ ಸ್ಥಾನ ಪಡೆದಿರುವುದು, ಅಂತಾರಾಷ್ಟ್ರೀಯ ಸಂಸ್ಥೆಗಳಾದ ಕ್ಯೂಎಸ್, ಸೈಮಾಗೋ ಅಂತಹ ಜಾಗತಿಕ ಸಂಸ್ಥೆಗಳಿಂದ ಪ್ರಶಂಸೆ ಪಡೆದಿರುವುದರ ಹಿಂದೆ ಬೋಧಕ ಮತ್ತು ಬೋಧಕೇತರ ವರ್ಗದ ಕೊಡುಗೆಯಿದೆ ಎಂದರು.
ಕುಲಸಚಿವ ಪ್ರೊ.ಎಸ್.ಎಸ್. ಪಾಟೀಲ್ ಮಾತನಾಡಿ, ಕೋವಿಡ್-19 ಕಠಿಣ ಪರಿಸ್ಥಿತಿಯಲ್ಲಿ, ಸಾರಿಗೆ ವ್ಯವಸ್ಥೆ ವಿರಳವಾಗಿದ್ದ ಸಂದರ್ಭದಲ್ಲಿಯೂ ಅಧ್ಯಾಪಕೇತರ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಆನ್‌ಲೈನ್ ಪ್ರವೇಶಾತಿ, ಕಡತಗಳ ಆನ್‌ಲೈನ್ ನಿರ್ವಹಣೆ, ಆನ್‌ಲೈನ್ ಫಲಿತಾಂಶ ಮುಂತಾದವುಗಳಿಗೆ ಸಂಬಂಧಪಟ್ಟಂತೆ ಕಾಗದ ವ್ಯವಸ್ಥೆಯಿಂದ ಕಾಗದರಹಿತ ಡಿಜಿಟಲ್ ವ್ಯವಸ್ಥೆಯ ಕಡೆಗಿನ ತ್ವರಿತವಾದ ಬದಲಾವಣೆಯಲ್ಲಿ ಇವರ ಪಾತ್ರ ಪ್ರಮುಖವಾದದು ಎಂದರು.
ನಿವೃತ್ತಿ ಹೊಂದಿದವರು
ಅಂಜುಮ್ ಅಹಮದ್, ರಂಗನಾಥ್, ಎನ್. ಕರಿಯಪ್ಪ, ಕೆ. ಹೊನ್ನಪ್ಪ, ಶಿವಾನಂದಪ್ಪ, ವೈ.ಎಚ್.ಜಗನ್ನಾಥ್, ಡಿ.ವಿ.ಗಾಯಿತ್ರಿ, ಡಿ.ಎಂ. ಕೊಟ್ರೇಶಪ್ಪ, ಎ. ಉಶಾದೇವಿ, ನೀಲಕಂಠಪ್ಪ, ಶಂಕರ್, ಕೆ.ವಿ. ಸರಸ್ವತಿ, ಎಚ್.ಸಿ ಜಯರಾಮ್, ಜಯಬಹದ್ದೂರ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಪಿಎಚ್’ಡಿ ಪುರಸ್ಕೃತರು:
ಡಾ. ಅಣ್ಣಯ್ಯ, ಡಾ. ಆರ್. ಮಂಜುನಾಥ್, ಡಾ. ಎನ್.ಜಿ. ಪಾಲಾಕ್ಷನಾಯ್ಕ, ಡಾ. ಕೆ.ಎನ್. ಶ್ರೀಕಾಂತ್, ಡಾ. ಸಂಗಪ್ಪ ಬಿರದಾರ್, ಡಾ. ಎಚ್. ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ವಿವಿಯ ಹಣಕಾಸು ಅಧಿಕಾರಿ ರಾಮಕೃಷ್ಣ, ಅಧ್ಯಾಪಕೇತರ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಹಾಗೂ ಅಧ್ಯಾಪಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post