ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ. ವಿವಿಧ ರೀತಿಯ ಗಣಪನ ಮೂರ್ತಿಗಳು ಕಂಗೊಳಿಸುತ್ತಿವೆ. ಅಂಗೈ ಅಗಲದ ಪುಟ್ಟ ಮೂರ್ತಿಯಿಂದ ಹಿಡಿದು ಆಳೆತ್ತರದ ದೊಡ್ಡ ವಿಗ್ರಹಗಳು ಸಾಲುಸಾಲಾಗಿ ಮಾರಾಟಕ್ಕಿದೆ. ಬೇರೆ ಬೇರೆ ವರ್ಣಾಲಂಕಾರಗಳಲ್ಲಿ ರಾರಾಜಿಸುತ್ತಿರುವ ವಿನಾಯಕನ ಮೂರ್ತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ
ತಿಂಗಳ ಹಿಂದೆ ಪೀಠದಲ್ಲಿಟ್ಟ ಹಿಡಿ ಮಣ್ಣು ಬೆಳೆಯುತ್ತಾ ಹೋಗಿ ಪಾದಗಳಾಗಿ, ಉದರವಾಗಿ, ಸೊಂಡಿಲಾಗಿ, ಕಿರೀಟವಾಗಿ, ಈಗ ಪೂರ್ಣ ಗಣೇಶನಾಗಿ ಮೈದೆಳೆದಿದೆ. ಶಿಲ್ಪಿಗಳು ಈ ಮೂರ್ತಿಗಳ ಹುಬ್ಬುಗಳನ್ನು ತೀಡಿ ಎಡಗೆನ್ನೆಯಲ್ಲೊಂದು ದೃಷ್ಟಿಬೊಟ್ಟು ಇಟ್ಟು ಕೆಲಸ ಪೂರ್ಣಗೊಳಿಸಿ ಕುಳಿತಿದ್ದಾರೆ.
ಚೌತಿಯಂದು ಮಣ್ಣಿನ ಗಣಪನ್ನು ಮನೆ ಮನೆಗಳಲ್ಲಿ ಕೂರಿಸುವುದು ಸಹಜ. ಆದರೆ 10 ವರ್ಷದ ಕೆಳಗೆ ಮಣ್ಣಿನ ಗಣಪನನ್ನು ತಯಾರಿಸುವುದರಲ್ಲಿ ತೋರುತ್ತಿದ್ದ ಕಲಾತ್ಮಕತೆ ಈಗ ಇಲ್ಲ. ಸಿದ್ಧ ಮಾದರಿಯಲ್ಲಿರುತ್ತಿದ್ದ ಗಣಪ ಈಗ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದಾನೆ. ಅರ್ಥಾತ್ ಕಮರ್ಷಿಯಲ್ ಆಗುತ್ತಿದ್ದಾನೆ.
ಜೇಡಿಮಣ್ಣಿನ ಗಣೇಶನ ವಿಗ್ರಹಗಳೆಂದರೆ ಈ ಹಿಂದೆ ಶ್ರೇಷ್ಟ ಭಾವನೆ ಇತ್ತು. ಆಮದು ನೀತಿ ಇವರನ್ನು ಸಂಕಷ್ಟಕ್ಕೆ ತಳ್ಳಿದೆ. ಹೊರ ರಾಜ್ಯಗಳಿಂದ ದೌಡಾಯಿಸಿ ಬರುತ್ತಿರುವ ಗಣೇಶನ ಮೂರ್ತಿಗಳಿಂದಾಗಿ ಈಗ ಸ್ಥಳಿಯರಿಗೆ ಕೈತುಂಬ ಕೆಲಸವು ಇಲ್ಲ. ನಿರೀಕ್ಷಿಸಿದಷ್ಟು ಹಣವೂ ಸಿಗುತ್ತಿಲ್ಲ. ಇವರು ಸೃಷ್ಟಿಸಿದ ಅಷ್ಟೂ ಗಣಪ ಹಬ್ಬದ ವೇಳೆಗೆ ಖರ್ಚಾದರೆ ಮಾತ್ರ ಇವರಿಗೆ ಲಾಭ ಇಲ್ಲವಾದರೆ ನಷ್ಟ.
ರಾಜ್ಯಕ್ಕೆ ಆಮದಾಗುವ ಗಣೇಶನ ವಿಗ್ರಹಗಳು ನೋಡಲು ಆಕರ್ಷಕವಾಗಿ, ಅತಿ ರಂಜಿತ ಬಣ್ಣಗಳಿಂದ ಕೂಡಿರುತ್ತವೆ. ವಾಸ್ತವದಲ್ಲಿ ಅವು ಪರಿಸರಕ್ಕೆ ಮಾರಕ ಎಂಬುದು ಅನೇಕರಿಗೆ ಗೊತ್ತಿಲ್ಲ.
ಒಂದು ಕಾಲಕ್ಕೆ ಕರ್ನಾಟಕದಲ್ಲಿ ತಯಾರಾಗುತ್ತಿದ್ದ ಗಣಪನಿಗೆ ಹೊರ ರಾಜ್ಯದಲ್ಲಿ ಭಾರೀ ಬೇಡಿಕೆ ಇತ್ತು. ಆದರೆ ಇತ್ತೀಚೆಗೆ ದೂರದ ಕೋಲ್ಕತ್ತದಿಂದ ಗಣಪನನ್ನು ತಯಾರಿಸುವ ಶಿಲ್ಪಿಗಳು ಇಲ್ಲಿಗೆ ಗುಳೆ ಬರುತ್ತಿದ್ದಾರೆ. ಆಧುನಿಕ ಸಲಕರಣೆಗಳಿಂದ ಗಣಪನನ್ನು ಸೃಷ್ಟಸಿ ಇಲ್ಲಿ ಮಾರುಕಟ್ಟೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ.
ಆಧುನಿಕತೆಯ ಪ್ರವೇಶದಿಂದ ಎಲ್ಲಾ ಗುಡಿಕೈಗಾರಿಕೆಗಳು ಒಕ್ಕಲೇಳುತ್ತಿರುವ ಹೊತ್ತಿನಲ್ಲಿ ಗಣಪನನ್ನು ತಯಾರಿಸುವ ಕುಂಬಾರರು ಕೂಡ ಕಷ್ಟದಿಂದಲೇ ಮುಖ ಮಾಡುತ್ತಿದ್ದಾರೆ.
ಶುದ್ಧ ಜೇಡಿಮಣ್ಣು ಬಳಸಿ ಗಣೇಶನನ್ನು ತಯಾರಿಸಲು ಮಣ್ಣಿಗೂ ಬರ ಬಂದುಬಿಟ್ಟಿದೆ. ಬಿಡದಿ ಹತ್ತಿರದ ಹೂಳು ತುಂಬಿದ ಕೆರೆಯಲ್ಲಿ ಬೇಸಿಗೆ ಕಾಲದಲ್ಲಿ ಹೆಕ್ಕಿ ತರುತ್ತಿದ್ದೆವು. ಇತ್ತೀಚೆಗೆ ಕೆರೆಯಲ್ಲಿ ಮಣ್ಣು ತೆಗೆಯಲು ಜನರು ಬಿಡುವುದಿಲ್ಲ. ಹೀಗಾಗಿ ಜೇಡಿ ಮಣ್ಣಿಗಾಗಿ ಕಲಾವಿದರು ದೂರದ ಊರುಗಳಿಗೆ ಹೋಗಬೇಕಾದ ಸ್ಥಿತಿ ಇದೆ. ಈ ಕುಲಕಸುಬನ್ನು ಮೂಲ ಸ್ವರೂಪದಲ್ಲಿ ಉಳಿಸಿಕೊಳ್ಳುವುದೇ ದೊಡ್ಡ ಸಾಹಸದ ಕೆಲಸ ಎಂದು ವಿಷಾದಿಸುತ್ತಾರೆ. ನಗರದ ಬನಶಂಕರಿ 1 ನೇ ಹಂತದ ಶ್ರೀನಿವಾಸನಗರ ಮುಖ್ಯರಸ್ತೆಯ ಬ್ರಹ್ಮ ಚೈತನ್ಯ ಮಂದಿರದ ಬಳಿ ಇರುವ ಕಲಾವಿದರಾದ ನಾಗರಾಜಪ್ಪ ಹಾಗೂ ಕರಿಬಸಪ್ಪ ಸಹೋದರರು.
ಗಣೇಶ ಮೂರ್ತಿಗಳು ಹೈಟೆಕ್ ಆಗುತ್ತಿವೆ. ಜೇಡಿ ಮಣ್ಣಿನಿಂದ ಮಾಡಿದ ಗಣಪರು ಕಣ್ಮರೆಯಾಗಿ ಬಹುವರ್ಣದ ಗಣಪಗಳು ರಾರಾಜಿಸುತ್ತಿವೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಇತರೆ ವಸ್ತುಗಳಿಂದ ಗಣಪನನ್ನು ತಯಾರಿಸಲಾಗುತ್ತಿದೆ. ಗಣೇಶನ ಅಲಂಕರಕ್ಕೆ ಸಾವಯವ ಬಣ್ಣಗಳನ್ನು ಉಪಯೋಗಿಸುವಷ್ಟರ ಮಟ್ಟಿಗೆ ಪರಿಸರ ಪ್ರಜ್ಞೆ ಜನರಲ್ಲಿ ಮೂಡುತ್ತಿದೆ.
ಹಬ್ಬಗಳು ಹಿಂದಿನ ‘ಖದರ್’ ಕಳೆದು ಕೊಂಡಿರಬಹುದು. ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಸಮಕಾಲೀನ ವಿದ್ಯಮಾನಗಳಿಗೆ ಗಣೇಶ ಸ್ಪಂದಿಸುವ ಆಶಯ ಮೆರೆದಿದೆ. ಗಣೇಶ ವಿಗ್ರಹ ರಚಿಸುವ ಕಲಾಕಾರರ, ಗಣೇಶೋತ್ಸವ ವ್ಯವಸ್ಥಾಪಕರ ಕಲ್ಪನಾ ವಿಲಾಸ ವೈವಿಧ್ಯಮಯ.
ಮಾರುಕಟ್ಟೆಯಲ್ಲಿ ಜನರ ಕೈಗೆ ಅತ್ಯಲ್ಪ ಮೊತ್ತಕ್ಕೆ ಸುಲಭವಾಗಿ ಸಿಗುವ ಒಂದೊಂದು ಗಣೇಶನ ವಿಗ್ರಹವನ್ನು ಸೃಷ್ಟಿಸುವಾಗ ಅದರ ಹಿಂದೆ ಕಲಾವಿದನೊಬ್ಬನ ಅಪಾರ ಶ್ರಮವಿರುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ? ಆದರೂ ಗಣೇಶನನ್ನು ಅಚ್ಚಿನಲ್ಲಿ ಸೃಷ್ಟಿಸಿ ಬಿಡುತ್ತಾರೆ ಎಂಬ ಭ್ರಮೆ ಇದೆ.
ಸಗಟು ವ್ಯಾಪಾರಿಗಳ ಮೂಲಕ ಮನೆಮನೆಗಳಲ್ಲಿಯೂ ಅಲಂಕೃತಗೊಂಡು ನೀರಿನಲ್ಲಿ ಮುಳುಗಿ ಬಿಡುತ್ತದೆ. ಕೆರೆಯ ಮಣ್ಣಿನಿಂದ ಹುಟ್ಟಿ, ರಾಸಾಯನಿಕಗಳನ್ನು ಮೈಗೆ ಹಚ್ಚಿಕೊಂಡು ‘ಗಣಪ’ ತನ್ನಪ್ಪ ‘ಬೂದಿ ಶಿವಪ್ಪ”ನಿಗಿಂತ ಆಧುನಿಕತೆಗೆ ತೆರೆದುಕಂಡಂತೆ ಕಾಣುತ್ತದೆ. ಈ ಅಲಂಕಾರವೇ ಈ ಭುವಿಯ ಕೋಟ್ಯಾಂತರ ಜೀವಿಯ ಮಾರಣ ಹೋಮಕ್ಕೂ, ಪರಿಸರ ನಾಶಕ್ಕೂ ಕಾರಣವಾಗುತ್ತದೆ ಎಂಬ ಆತಂಕ ಇಲ್ಲಿ ಕಾಣುತ್ತಲೇ ಇಲ್ಲ.
ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಪರಿಸರಕ್ಕೆ ಧಕ್ಕೆಯಾಗಬಾರದು. ಈ ಉದಾತ್ತ ಧ್ಯೇಯೋದ್ಧೇಶಕ್ಕೆ ನಾವು ಕೈ ಜೋಡಿಸಿದರೆ ಮಾತ್ರ ಪರಿಸರ ಹಾನಿ ತಪ್ಪಿಸಲು ಸಾಧ್ಯ. ಪರಿಸರಕ್ಕೆ ಹಾನಿಕಾರಕವಲ್ಲದ ಮೂರ್ತಿಗಳನ್ನು ಖರೀದಿಸಿ, ಪೂಜಿಸುವ ಮೂಲಕ ಪರಿಸರ ಸಂರಕ್ಷಣೆಗೆ ಜವಾಬ್ದಾರಿ ಮೆರೆಯಿರಿ.
ಗಣೇಶನ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಇದೇ ಲೇಖಕರ ‘ನೂತನ ಕೃತಿ – ವಿಶ್ವವಂದಿತ ವಿನಾಯಕ’ ನೋಡಬಹುದು
www.vishwavinayaka108.blogspot.com
Discussion about this post