ಭದ್ರಾವತಿ: ಚಲನ ಚಿತ್ರ ನಟ ಅಂಬರೀಶ್ ಕೇಂದ್ರ ಸಚಿವರಾಗಿದ್ದ ಕಾವೇರಿ ನೀರಿಗಾಗಿ ರಾಜೀನಾಮೆ ನೀಡಿದಂತೆ ವಿಐಎಸ್‍ಎಲ್ ಕಾರ್ಖಾನೆ ಉಳಿಸಲು ಬಿ.ವೈ. ರಾಘವೇಂದ್ರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕೇಂದ್ರ ಸರಕಾರವನ್ನು ಒತ್ತಾಯಿಸಲಿ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಒತ್ತಾಯಿಸಿದರು.
ಸೋಮವಾರ ವಿಐಎಸ್‍ಎಲ್ ಕಾರ್ಖಾನೆ ಮುಖ್ಯದ್ವಾರ ಮುಂಭಾಗ ಕಾರ್ಮಿಕ ಸಂಘ ಹಮ್ಮಿಕೊಂಡಿರುವ ಕಾರ್ಖಾನೆ ಉಳಿಸಿ ಹೋರಾಟದಲ್ಲಿ ಪಾಲ್ಗೊಂಡು ಕಾರ್ಮಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಹಿಂದೆ ಮತದಾರರು ಜನಪ್ರತಿನಿಧಿಗಳ ರಾಜೀನಾಮೆಗೆ ಒತ್ತಾಯಿಸಿದರೆ ಹೆದರುತ್ತಿದ್ದರು. ಆದರೀಗ ಜನಪ್ರತಿನಿಧಿಗಳು ಬಂಡವಾಳ ಶಾಹಿ ಮತ್ತು ಕಾರ್ಪೋರೇಟ್ ಸಂಸ್ಥೆಗಳ ಕೈಗೊಂಬೆಗಳಾಗಿ ಮತದಾರರಿಂದ ಮತ ಪಡೆದು ಮೋಸ ಮಾಡುವುದನ್ನು ಕಾಯಕ ಮಾಡಿಕೊಂಡು ಲಕ್ಷ್ಮಿ ಮಿತ್ತಲ್, ಮುಖೇಶ್ ಅಂಬಾನಿ, ಬಾಬಾ ರಾಮದೇವ್ ರಂತಹ ಕಾರ್ಪೋರೇಟ್ ಸಂಸ್ಥೆಗಳ ಒತ್ತಡಕ್ಕೆ ತಕ್ಕಂತೆ ಕೇಂದ್ರ ಸರಕಾರ ಆಡಳಿತ ನಡೆಸುತ್ತಿದೆ. ಇಂದು ರಾಜ್ಯದಲ್ಲಿ ಶಾಸಕರು ನೀಡಿರುವ ರಾಜೀನಾಮೆ ಕೇವಲ ತಮ್ಮ ವೈಯಕ್ತಿಕ ಲಾಭದ ವಿಚಾರಗಳಿಗೆ ನೀಡಿದ್ದಾರೆ ವಿನಃ ಯಾವುದೋ ಕಂಪನಿ ಅಥವಾ ಕ್ಷೇತ್ರಾಭಿವೃದ್ದಿಗಾಗಿ ಅಲ್ಲ. ಇಲ್ಲಿನ ಕಾರ್ಮಿಕರು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಹಾಕಿದ ಮತಗಳಿಂದ ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿ ಕಾರಿದರು.
ದೇಶದೆಲ್ಲೆಡೆಯ ಸಾರ್ವಜನಿಕ ವಲಯಗಳಾದ ರೈಲ್ವೇ, ಕೆಎಸ್‍ಆರ್‍ಟಿಸಿ, ಬಿಎಸ್‍ಎನ್‍ಎಲ್ ಮುಂತಾದವುಗಳನ್ನು ಖಾಸಗೀಕರಣ ಮತ್ತು ಮಾರಾಟ ಮಾಡುತ್ತಾ ದೇಶ ಪ್ರೇಮದ ಕುರಿತು ಮಾತನಾಡುತ್ತಿರುವುದು ದುರಂತವಾಗಿದೆ. ಇಂತಹ ಪಕ್ಷಗಳಿಂದ ದೇಶಾಭಿವೃದ್ದಿ ಅಸಾಧ್ಯ. ಕೇಂದ್ರ ಸರಕಾರವು ಕಾರ್ಖಾನೆಗಳನ್ನು ನಡೆಸುವುದು ಬೇಡವೆಂಬ ತೀರ್ಮಾನ ಕೈಗೊಂಡು ಕೇವಲ ಆರೋಗ್ಯ, ಆಹಾರ ಇತ್ಯಾದಿಗಳಿಗೆ ಮಾತ್ರ ನಡೆಸಲು ಮುಂದಾಗಿದೆ. ವ್ಯವಹಾರ ಮತ್ತು ಉದ್ದಿಮೆಗಳು ಬೇಡವೆಂದ ಮೇಲೆ ಪಾರ್ಲಿಮೆಂಟ್ ಮತ್ತು ವಿಧಾನಸಭೆ ಏಕೆ ಬೇಕು ಎಂದು ಪ್ರಶ್ನೆ ಮಾಡಬೇಕಾಗಿದೆ. ಅದ್ದರಿಂದ ಸಾರ್ವಜನಿಕ ಉದ್ದಿಮೆಗಳನ್ನು ಉಳಿಸಿಕೊಳ್ಳುವಲ್ಲಿ ಕಾರ್ಮಿಕರು ಹೆದರದೆ, ಒಗ್ಗೂಡಿ ಹೋರಾಟ ಮಾಡಬೇಕು. ಗೋಲಿಬಾರ್, ಲಾಟಿ ಚಾರ್ಜ್‍ಗೂ ಹೆದರದೆ ಪ್ರಾಣ ತ್ಯಾಗಕ್ಕೂ ಮುಂದಾಗಿ ಇತಿಹಾಸ ನಿರ್ಮಿಸಬೇಕು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿವೇಶನದಲ್ಲಿ ವಿಐಎಸ್‍ಎಲ್ ಖಾಸಗೀಕರಣದ ವಿರುದ್ದ ಠರಾವು ಮಾಡಿ ಕೇಂದ್ರಕ್ಕೆ ಎಚ್ಚರಿಸಬೇಕೆಂದರು.
ಕೇಂದ್ರದ ನೀತಿ ಆಯೋಗವು ಅಂಬಾನಿ, ಲಕ್ಷ್ಮಿ ಮಿತ್ತಲ್, ಬಾಬಾರಾಮದೇವ್ ಮುಂತಾದ ಬಂಡವಾಳ ಶಾಹಿಗಳ ಮಾತು ಕೇಳಿ ಉದ್ದಿಮೆಗಳನ್ನು ಖಾಸಗೀಕರಣ ಮಾಡಲು ಹೊರಟಿವೆ ವಿನಃ ಈ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತು ಪ್ರಧಾನಿ ನರೇಂದ್ರ ಮೋದಿರವರ ಮಾತುಗಳು ನಡೆಯುವುದಿಲ್ಲ ಎಂದು ಲೇವಡಿ ಮಾಡಿದರು. ವಿಐಎಸ್‍ಎಲ್ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಸಕರು ಒಂದಾಗಬೇಕು. 24 ಸಾವಿರ ಟನ್ ಉಕ್ಕು ಉತ್ಪಾಧನೆ ಇತಿಹಾಸ ಹಾಗು ಅಪಾರ ಆಸ್ತಿ ಹೊಂದಿರುವ ಈ ಕಾರ್ಖಾನೆಯನ್ನು ಉಳಿಸಲು ರಾಜ್ಯದ ಸಂಸದರು ಒಗ್ಗೂಡಿ ಕೇಂದ್ರಕ್ಕೆ ಒತ್ತಡ ಹೇರಬೇಕು. ಸಿಐಟಿಯು ರಾಷ್ಟ್ರ ಮಟ್ಟದಲ್ಲಿ ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರ ಮತ್ತು ಕುಟುಂಬಗಳ ಹಿತ ಕಾಯಲು ಹೋರಾಟ ರೂಪಿಸುತ್ತಿದೆ. ಅದಕ್ಕೆ ಕಾರ್ಮಿಕರೆಲ್ಲರು ಬೆಂಬಲ ವ್ಯಕ್ತಪಡಿಸಬೇಕೆಂದರು.
ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಮಾತನಾಡಿ, ನೀಡಿದ ಭರವಸೆಯನ್ನು ನಂಬಿ ಕಾರ್ಮಿಕರು ಒಗ್ಗೂಡಿ ಸಂಸದರ ಸ್ಥಾನಕ್ಕೆ ಬೆಂಬಲಿಸಿ ಠೇವಣಿಯ ಹಣ ನೀಡಿ ಗೆಲ್ಲಿಸಿದ್ದಕ್ಕೆ ಪ್ರತಿಫಲವಾಗಿ ಕಾರ್ಮಿಕರನ್ನು ಬೀದಿ ಪಾಲು ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಸಂಸದರು ನೀಡಿದ ಭರವಸೆ ಪೊಳ್ಳಾಗಿದೆ. ಇದರ ವಿರುದ್ದ ಅರೆ ಬೆತ್ತಲೆ ಸೇರಿದಂತೆ ಹಲವು ಮಾರ್ಗದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ರವರ ಭೇಟಿ ಮಾಡುವುದಕ್ಕು ತೀರ್ಮಾನಿಸಿದ್ದೇವೆ ಎಂದರು.
ಪ್ರಧಾನ ಕಾರ್ಯದರ್ಶಿ ಬಸಂತಕುಮಾರ್ ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘದ ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು, ನಿವೃತ್ತ ಕಾರ್ಮಿಕ ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post