ಜೀವನವೆಂಬ ಮೈದಾನದಲಿ ಹುಟ್ಟೆಂಬ ಚೆಂಡಾಗಿ ಅವರಿವರ ಎಸೆತಕ್ಕೆ ಅಲ್ಲಿಂದಿಲ್ಲ ಹೊರಳಾಡಿ, ನೊಂದು ಕೆಲವೊಮ್ಮೆ ಚೂರಾಗಿ ಕಸದ ಪಾಲಾದರೂ ಸರಿಯೇ ನಿರಾಸೆಯೆಂಬುದ ಮರೆತು ಬದುಕಿ ಬಿಡೋಣವೇ.
ನಿರಾಸೆ ಬಯಸದೆ ಜನುಮತಾಳಿ ಕನಸೆಂಬ ಜೀವಹೊತ್ತು ಅರ್ಥವಿಲ್ಲದೆ ಆಸೆಪಟ್ಟು ಭಾವನೆಗಳ ಬದಿಗಿಟ್ಟು ವ್ಯರ್ಥವಾದರೂ ಸರಿಯೇ ಬದುಕಿ ಬಿಡೋಣವೇ ಯಾರಿಲ್ಲದಿದ್ದರೇನು, ಬದುಕುವ ಗುರಿ ಚೂರಾದರೇನು ನಿನ್ನಾರು ಅರಿಯದಾದರೇನು ಯಾಕಂದರೆ ಮೊದಲು ನಿನ್ನನ್ನೇ ನೀ ಅರಿತಿಲ್ಲ ಒಬ್ಬಂಟಿಯಾಗಿ ನಿಂತರೂ ಸರಿಯೇ ಅದಕೆ ಜಂಟಿಯಾಗಿ ಬದುಕಿ ಬಿಡೋಣವೇ.
ನೋಯಿಸಿದವರ ಕ್ಷಮಿಸಿ ಬಿಡು, ಮೋಸ ಮಾಡಿದವರ ಮರೆತು ಬಿಡು ದ್ರೋಹಿಗಳ ದೂರವಿಡು ನಿನ್ನರಿತವರಿಗಾಗಿ ಪ್ರಾಣಕೊಡು ಒಟ್ಟಾರೆ ಹೇಗಾದರೂ ಸರಿ, ಬಾಳೆಂಬ ಸಂತೆಯಲಿ ನನ್ನವರು ನಿನ್ನವರೆಂದು ನೆನೆಯದೆ ನನಗಾಗಿ ನನ್ನದು ಎಂದು ನಂಬಿ ಕೊರಗದೆ ಚಾಟಿ ಅವನು ಬೀಸುತಿಹನು ಬುಗುರಿಯಂತೆ ಸುತ್ತುತ್ತಾ ನಮ್ಮವರು ಯಾರಿಲ್ಲ ನಮ್ಮದೆಂದೂ ಏನಿಲ್ಲ ನಾನೆಂಬುದೇ ಸ್ಥಿರವಲ್ಲ ಹುಟ್ಟು ಸಾವು ನಮ್ಮ ಕೈಲಿಲ್ಲ. ಯಾವುದೂ ನಿನ್ನಿಚ್ಛೆಯಂತೆ ಅಲ್ಲದಿರುವಾಗ ಅವನಿಚ್ಛೆಯಂತೆ ಬದುಕಿ ಬಿಡೋಣವೇ…
ಆಡಂಭರಿಕೆ ಬೇಕಿಲ್ಲ, ಬಡತನವು ನಿರಂತರವಲ್ಲ, ಸಂತೋಷದಲ್ಲೇ ತೇಲಬೇಕಿಲ್ಲ, ದುಃಖ ದೂರಾಗುವುದಿಲ್ಲ, ಆದರೂ ಯಾವುದೋ ಪುಟ್ಟ ನಂಬಿಕೆಯ ಮೇಲೆ ಎಲ್ಲವನ್ನು ಹೊಟ್ಟೆಗೆ ಹಾಕಿಕೊಂಡು ಬದುಕಿ ಬಿಡೊಣವೇ? ನಾನೆಂಬುದು ನಿರಂತರವಲ್ಲವೆಂದಾದಾಗ, ಈ ದೇಹ ನನ್ನದಾಗುವುದೇ? ಒಳಗಿರುವ ಉಸಿರು ನಿಲ್ಲಲೇಬೇಕು. ಬಾಡಿಗೆಯೇ ಎಲ್ಲ ಇಲ್ಲಿ ಕಡೆಗೆ ನಾವು ಹೊತ್ತು ತಿರುಗಿದ ದೇಹ ಉಸಿರು ಎಲ್ಲಾ ಬಾಡಿಗೆಯದೇ ಸ್ವಂತವೆಂದು ಏನಿಲ್ಲ ಇಲ್ಲಿ ಆದರೂ ಇರೋ ಅಷ್ಟು ದಿನ ಕೆಡುಕು ಬಯಸದೆ..
ಉಪಯೋಗಿ ಆಗದಿದ್ದರೂ ಚಿಂತೆಯಿಲ್ಲ ಅಪಕಾರಿಯಾಗದಿರು ಕಟುಕ ನೀನಾದರೂ ಸರಿಯೇ ಮನಸಾಕ್ಷಿಗೆ ವಂಚನೆ ನೀ ಮಾಡದಿರು ಪಾಪದ ಮೂಟೆ ತುಂಬಿದರೂ ಸರಿಯೇ, ಸೋತೆನೆಂದು ಕೊರಗಬೇಡ ಗೆದ್ದೆನೆಂದು ಹಿಗ್ಗಬೇಡ ಸೋಲು ಗೆಲುವು ಬಾಳ ಲೆಕ್ಕಾಚಾರ ಅದುವು ನಮ್ಮದಾಗುವುದಿಲ್ಲ ನಿನ್ನ ಹುಟ್ಟೆ ಮಾಯೆ ಇಲ್ಲಿ ಏನೇ ಆಗಲಿ ಯಾರೇ ಹೋಗಲಿ ಜೀವನ ಮುಗಿಯಲಿ ಜೀವವು ತೊರೆಯಲಿ ಅಲ್ಲಿಯವರೆಗೂ ಬಾಳೆಂಬ ನೌಕೆಯಲಿ ಮಸಣದ ಹಾದಿ ಕೈ ಬೀಸಿ ಕರೆವವರೆಗೂ ಬಂದುದನೆಲ್ಲ ಮನಸಾರೆ ಸ್ವೀಕರಿಸಿ ಆದಷ್ಟು ಎಲ್ಲರಿಗೂ ನೆರವಾಗಿ ನೋವ ನುಂಗಿದರೂ ಸರಿಯೇ ನೋವ ಕೊಟ್ಟರೂ ಸರಿಯೇ ಬದುಕಿ ಬಿಡೋಣವೇ?


















