ಕರಾವಳಿ ಅಥವಾ ತುಳುನಾಡು ಪ್ರದೇಶದ ನಾಗದೇವರ ಕಲ್ಪನೆಯೇ ವಿಶಿಷ್ಟ. ನಿಜ ಹೇಳಬೇಕೆಂದರೆ ಕರಾವಳಿಯಲ್ಲಿ ನಾಗ ಬನದ ಹೆಸರಿನಲ್ಲಿ ಅಲ್ಪಸ್ವಲ್ಪ ಪರಿಸರ ಕಾಣಬಹುದು.
ಅದರಲ್ಲೂ ಅದು ಸಸ್ಯ ಸಂಪತ್ತು ಹಾಗೂ ವನ್ಯಜೀವಿಗಳ ಬೀಡು. ಅಮೂಲ್ಯ ಜೀವಿಗಳು ಮತ್ತು ಗಿಡಮೂಲಿಕೆಗಳ ಆಗರ. ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಆಧುನಿಕ ಮೋಹಕ್ಕೆ ಒಳಗಾಗಿ ನಾಗಬನಕ್ಕೆ ಚ್ಯುತಿ ತರುವುದು ಬೇಡ.
ಗಿಡಮರಗಳು, ಗಿಡಮೂಲಿಕೆಗಳು, ಪ್ರಾಣಿಪಕ್ಷಿಗಳು ಹಾಗೂ ಶೇಷ ದೇವರ ಅವಾಸತಾಣವಾಗಿರುವ ಈ ಹುತ್ತಗಳನ್ನು ರಕ್ಷಿಸಲು ಗಿಡಮರಗಳು ಅಲ್ಲಿ ಹೆಚ್ಚು ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳೋಣ.
ಅದರಲ್ಲಿಯೂ ಹೂಬಿಡುವ ಸಸ್ಯಗಳು, ಮಲ್ಲಿಗೆ, ನಾಗ ಸಂಪಿಗೆ, ಅರಳಿ(ಅಶ್ವತ್ಥ), ಬಳ್ಳಿಗಳು, ಸುದೀರ್ಘ ಅವಧಿಯವರೆಗೆ ಬೆಳೆಯುವ ಗಿಡಮರಗಳನ್ನು ಬೆಳೆಸಲು ಮುಂದಾಗೋಣ.
ಈ ಮೂಲಕ ನಮ್ಮ ಕರಾವಳಿಯ ನಾಗದೇವರ ಭೂಪ್ರದೇಶವನ್ನು ಚಿರಂತನವಾಗಿ ಕಾಪಾಡಿಕೊಂಡು ಹೋಗೋಣ. ಭವಿಷ್ಯದಲ್ಲಿಯೂ ಈ ಹುತ್ತಗಳಲ್ಲಿ ಸಸ್ಯ ಶಾಮಲೆ ಸಮೃದ್ಧಿಗೊಂಡು ಹಾವು, ಸರಿಸೃಪಗಳು, ಪ್ರಾಣಿಪಕ್ಷಿಗಳ ನೆಲೆಯನ್ನಾಗಿ ಜೋಪಾನವಾಗಿ ನೋಡಿಕೊಂಡು ಹೋಗಲು ಪಣ ತೊಡೋಣ.
ನಾಗರ ಪಂಚಮಿಯಂದೇ ವಿಧಿವತ್ತಾಗಿ ಹುತ್ತದ ನಾಗದೇವರ ಕಲ್ಲಿಗೆ ಪೂಜೆ ನಡೆಯುತ್ತದೆ. ತನ್ನದೇ ಆದ ಪಾವಿತ್ರ್ಯತೆ ಕಾಪಾಡಿಕೊಂಡು ಬಂದಿರುವ ಹಿನ್ನೆಲೆಯಲ್ಲಿ *ನಾಗರ ಪಂಚಮಿಯಂದು ಪೂಜೆಗೆ ಬರುವ ಅರ್ಚಕರಿಗೆ ಸಾಧ್ಯವಾದಷ್ಟು ಗಿಡ ಕೊಟ್ಟು ಹುತ್ತದಲ್ಲಿ ನೆಡಲು ಹೇಳಿ ನಾಗಬನವನ್ನು ಶಾಶ್ವತವಾಗಿ ಉಳಿಸಿಕೊಂಡು ಹೋಗುವಲ್ಲಿ ನಮ್ಮ ಕಾಣಿಕೆಯನ್ನು ಸಲ್ಲಿಸೋಣ.
ಲೇಖನ: ಎ.ಕೆ. ಉದಯಶಂಕರ್
Discussion about this post