ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-5 |
ಭಾರತೀಯ ಮತ್ತು ಭಾರತೀಯ ಎಂಬ ವಿಷಯ ಬಹಳ ಆಳವಾದದ್ದು. ಈ ವಿಷಯದ ಆಕೃತಿ ದೊರೆತದ್ದು ಲಂಡನ್ ನಗರ ಎಂಬ ಪಾಠದ ಪ್ರವೇಶಕ್ಕಾಗಿ ಮಾಡಿದ ಚರ್ಚೆಯಿಂದ. ಅಂದು ಮಾಡಿದ ಚರ್ಚೆ ಎಲ್ಲರನ್ನೂ ಚಿಂತೆಗೆ ಒಳಪಡಿಸಿತು. ಚರ್ಚೆ ಮಾಡುವ ಸಂದರ್ಭದಲ್ಲಿ ಬಹಳಷ್ಟು ಅಂಶಗಳು ನಮ್ಮ ಮನಸ್ಸನ್ನು ಆವರಿಸಿದವು. ಯಾವ ಯಾವ ಅಂಶಗಳು ಸರಿ? ಯಾವುವು ತಪ್ಪು? ಯಾವ ಅಂಶವನ್ನು ಸ್ವೀಕರಿಸಬಹುದು? ಅಥವಾ ಸ್ವೀಕರಿಸಬಾರದು? ಎಂದು ಯೋಚಿಸಲು ಸಾಧ್ಯವಾಗಲಿಲ್ಲ. ಆದರೆ ಮರುದಿನ ಸಮಾಧಾನದಿಂದ ಕುಳಿತುಕೊಂಡು ಯೋಚಿಸಿದಾಗ, ನಿಧಾನವಾಗಿ ಅವುಗಳನ್ನು ಪಟ್ಟಿ ಮಾಡಿದಾಗ ಅವುಗಳ ನಡುವಿನ ಅಂತರ ಹೀಗೆ ಕಾಣಿಸಿತು.
ಭಾರತೀಯ ಜೀವನ ದೃಷ್ಟಿ
1. ಆತ್ಮ ತತ್ವ
2. ಪ್ರಕೃತಿಯನ್ನು ಗೌರವಿಸುವುದು ಹಾಗೂ ಪೂಜಿಸುವುದು
3. ಸಮಗ್ರತೆಯ ದೃಷ್ಟಿ
4. ಸಮಾನತೆ
5. ಶಿಕ್ಷಣದ ಉದ್ದೇಶ ಜ್ಞಾನಾಧಾರಿತವಾಗಿದ್ದು ಸರ್ವತೋಮುಖ ಬೆಳವಣಿಗೆಯನ್ನು ಹೊಂದುವುದು ಮತ್ತು ಹಿತಚಿಂತನೆ
6. ಸಮಸ್ಯೆಯ ಮೂಲವನ್ನು ಹುಡುಕಿ ಪರಿಹಾರವನ್ನು ಕಂಡುಕೊಳ್ಳುವುದು
7. ಪಾತ್ರ ಕರ್ತವ್ಯ ಹಾಗೂ ಸಂಬಂಧಗಳು
ಅ ಭಾರತೀಯ ಜೀವನ ದೃಷ್ಟಿ
1. ಎಲ್ಲವನ್ನು ಬೌದ್ಧಿಕ ವಸ್ತು ಎಂದು ಕಾಣುವುದು.
2. ಎಲ್ಲವನ್ನು ಕಂಡ ತುಂಡವಾಗಿ ಕಾಣುವುದು
3. ತಾರತಮ್ಯ
4. ಶಿಕ್ಷಣವು ಆದಾಯದ ಮೂಲವಾಗಿರುವುದು
5. ಸ್ಪರ್ಧೆ
6. ಆ ಕ್ಷಣಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು
7. ಸ್ವಾರ್ಥ ಹಾಗೂ ತೋರಿಕೆ, ಆಡಂಬರ
ಹೀಗೆ ಇನ್ನೂ ಅನೇಕ ಅಂಶಗಳು ಚರ್ಚೆಯಲ್ಲಿ ಬೆಳಕಿಗೆ ಬಂದವು.
ಮೊದಲನೆಯ ಅಂಶವನ್ನು ನೋಡುವುದಾದರೆ ಭಾರತೀಯರು ಎಲ್ಲದರಲ್ಲೂ ಆತ್ಮ ತತ್ವವನ್ನು ಕಾಣುತ್ತಾರೆ. ಆತ್ಮ ತತ್ವವೆಂದರೆ ಎಲ್ಲದರಲ್ಲೂ ದೇವರನ್ನು ಕಾಣುವುದು. ಸಜೀವ ವಸ್ತುವೇ ಆಗಿರಲಿ ಅಥವಾ ಜಡ ವಸ್ತುವೇ ಆಗಿರಲಿ ಅದರಲ್ಲಿ ಆತ್ಮ ತತ್ವವನ್ನು ಕಾಣುವವರು ನಾವು ಭಾರತೀಯರು.
ಪ್ರಮುಖವಾಗಿ, ಪ್ರಕೃತಿಯು ಅದರಲ್ಲಿ ಒಂದು ಭಾಗವಾಗಿದ್ದು, ಭಾರತೀಯರು ಪ್ರಕೃತಿಯನ್ನು ಗೌರವಿಸುತ್ತಾರೆ, ಪೂಜಿಸುತ್ತಾರೆ. ಉದಾಹರಣೆಗೆ, ವಟಸಾವಿತ್ರಿ ಹಬ್ಬದ ದಿನ ವಟವೃಕ್ಷವನ್ನು ಪೂಜಿಸುವುದು, ಪ್ರತಿದಿನ ತುಳಸಿ ಗಿಡಕ್ಕೆ ಪೂಜೆ ಹಾಗೂ ಪ್ರದಕ್ಷಿಣೆಗಳನ್ನು ಸಮರ್ಪಿಸುವುದು, ಸೂರ್ಯನಿಗೆ ವಂದಿಸುವುದು ಇತ್ಯಾದಿ.
ಅದೇ ಅ-ಭಾರತೀಯರು ಇವೆಲ್ಲವನ್ನೂ ಕೇವಲ ಭೌತಿಕ ವಸ್ತುವಿನ ರೀತಿಯಲ್ಲಿ ಎಲ್ಲವನ್ನೂ ಪರಿಗಣಿಸುತ್ತಾರೆ. ಗಿಡ ಮರಗಳನ್ನಾಗಲೀ ಪಂಚಭೂತಗಳನ್ನಾಗಲೀ ಪೂಜಿಸುವ ಅಥವಾ ಗೌರವಿಸುವ ಪರಂಪರೆಯನ್ನು ನಾವು ಅವರಲ್ಲಿ ಕಾಣಲು ಸಾಧ್ಯವಿಲ್ಲ. ಇನ್ನು ಮುಂದಿನ ಅಂಶಗಳನ್ನು ನೋಡುವುದಾದರೆ, ಭಾರತೀಯರಲ್ಲಿ ನಾವು ಸಮಗ್ರತೆಯ ಚಿಂತನೆಯನ್ನು ಕಾಣಬಹುದು.
ವಿವಿಧತೆಯಲ್ಲಿ ಏಕತೆ, ಈ ವಾಕ್ಯವನ್ನು ಬಹುಪಾಲು ಎಲ್ಲರೂ ಕೇಳಿರುತ್ತಾರೆ. ಬೇರೆ ಬೇರೆ ಸಂಸ್ಕೃತಿ ಸಂಪ್ರದಾಯಗಳಿದ್ದರೂ ಅವರಲ್ಲಿ ನಾವು ಏಕತೆಯನ್ನು ಕಾಣಬಹುದು. ಸಮಗ್ರತೆಯನ್ನು ಗುರುತಿಸುವಲ್ಲಿ ನಾವು ಆಯುರ್ವೇದದ ಉದಾಹರಣೆಯನ್ನು ನೋಡುವುದಾದರೆ, ಆಯುರ್ವೇದದಲ್ಲಿ ಆಂಗ್ಲ ಔಷಧೀ ವಿಧಾನದಲ್ಲಿ ಕಂಡಂತೆ ಹೃದಯ ರೋಗ, ಕಣ್ಣು, ಕಿವಿ ಮೂಗು ರೋಗ ಇತ್ಯಾದಿ ರೋಗಾಧಾರಿತವಾದ ಬೇರೆ ಬೇರೆ ಭಾಗಗಳನ್ನು ಕಾಣಲು ಸಾಧ್ಯವಿಲ್ಲ. ಬದಲಾಗಿ ಮನುಷ್ಯನ ದೇಹದ ಪ್ರಕೃತಿಯ ಆಧಾರದ ಮೇಲೆ ಚಿಕಿತ್ಸೆ ಕೊಡುವಂತಹ ವಿದ್ಯೆಯನ್ನು ಆಯುರ್ವೇದ ಕಲಿತ ಎಲ್ಲರೂ ಎಲ್ಲಾ ರೀತಿಯಾದ ಚಿಕಿತ್ಸೆಗಳನ್ನು ಕಲಿತಿರುತ್ತಿದ್ದರು. ಸಮಸ್ಯೆಯ ಮೂಲ ಹುಡುಕಿ ಪರಿಹಾರ ನೀಡುವ ರೀತಿ ಇದರ ವಿಶೇಷತೆ ಎಂಬುದು ಬಹಳ ಮುಖ್ಯವಾದದ್ದು. ಅ-ಭಾರತೀಯರು ಎಲ್ಲಾ ವಿಷಯಗಳನ್ನು ತುಂಡು ತುಂಡಾಗಿ ಅಧ್ಯಯನ ಮಾಡಿ, ಸಮಸ್ಯೆಯ ಮೂಲವನ್ನು ಹುಡುಕದೇ ಆ ಕ್ಷಣಕ್ಕಾಗಿ ಮಾತ್ರ ಪರಿಹಾರವನ್ನು ನೀಡುವುದನ್ನು ನಾವು ಗಮನಿಸಬಹುದು.
ಮುಂದಿನ ಅಂಶ, ಸಮಾನತೆ ಹಾಗೂ ತಾರತಮ್ಯ ಭಾರತೀಯರು ಎಂತಹ ಸಂದರ್ಭದಲ್ಲಿಯೂ ಒಗ್ಗಟ್ಟಿನಿಂದ ಇದ್ದುದನ್ನು ಅನೇಕ ಉದಾಹರಣೆಗಳ ಮೂಲಕ ಕಾಣಬಹುದು. ವರ್ಣಾಶ್ರಮದ ವ್ಯವಸ್ಥೆಯನ್ನು ನೋಡುವುದಾದರೆ, ಅವರು ಮೇಲು ಕೀಳು ಎಂಬ ಭಾವನೆ ಇಲ್ಲದೇ ಹೊಂದಾಣಿಕೆಯಿಂದ ಕೆಲಸಗಳನ್ನು ನಿಭಾಯಿಸಿದ್ದನ್ನು ಕಾಣಬಹುದು. ಬಣ್ಣ, ಅಂತಸ್ತು, ಶಿಕ್ಷಣ ಹೀಗೇ ಎಲ್ಲ ವಿಷಯಗಳಲ್ಲೂ ಮೇಲುಕೀಳು ಎಂಬ ಸ್ತರಗಳನ್ನು ಅ-ಭಾರತೀಯರಲ್ಲಿ ಕಾಣಬಹುದು. ಯಾರ ಹತ್ತಿರ ಹಣವಿದೆಯೋ ಅವರು ಮೇಲು, ಯಾರ ಹತ್ತಿರ ಹಣ ಇರುವುದಿಲ್ಲವೋ ಅವರು ಕೀಳು ಎಂದು ಕಾಣುವಾಗ ಅ-ಭಾರತೀಯರ ತಾರತಮ್ಯ ಭಾವವನ್ನು ಕಾಣಬಹುದಾಗಿದೆ.
ಶಿಕ್ಷಣವು ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ, ಜ್ಞಾನ ಆಧಾರಿತ ಬೆಳವಣಿಗೆಗಾಗಿ ಹಾಗೂ ಹಿತ ಚಿಂತನೆಗಾಗಿಯೇ ಹೊರತು ಆದಾಯ ಅಥವಾ ಸ್ಪರ್ಧೆಗಾಗಿ ಅಲ್ಲ. ಇದನ್ನು ಅರಿತಿದ್ದ ನಮ್ಮ ಪೂರ್ವಜರು ಕುಟುಂಬ – ಗುರುಕುಲ ತನ್ಮೂಲಕ ಸಮಾಜದ ಅಭಿವೃದ್ಧಿ ಎಂಬ ಸರಿಯಾದ ಹಾದಿಯಲ್ಲಿ ನಡೆಯುತ್ತಿದ್ದರು. ಆದರೆ ಅ-ಭಾರತೀಯರ ಜೀವನ ದೃಷ್ಟಿಯು ಕಾಲಾಂತರದಲ್ಲಿ ನಮ್ಮ ಮೇಲೆ ಪ್ರಭಾವ ಬೀರಿ, ಶಿಕ್ಷಣ ಆದಾಯದ ಮೂಲ ಹಾಗೂ ಸ್ಪರ್ಧೆಗಾಗಿ ಎಂದು ತಿಳಿದು ತಪ್ಪು ದಾರಿಯನ್ನು ಹಿಡಿಯುವಂತಾಗಿದ್ದು ಬಹಳ ಬೇಸರದ ಸಂಗತಿ.
ನಾವು ಜ್ಞಾನ ಸಂಪಾದನೆಯನ್ನು ನಮಗಾಗಿ ಮಾಡಬೇಕೇ ಹೊರತು ಬೇರೆಯವರಿಗಾಗಿ ಅಲ್ಲ, ಸ್ಪರ್ಧೆಗಾಗಿ ಅಲ್ಲ. ಜೀವನವು ಸಾಧನೆಗಾಗಿಯೇ ಹೊರತು ಪ್ರಸಿದ್ಧಿಗಾಗಿ ಅಲ್ಲ, ನಮ್ಮ ಸಾಮರ್ಥ್ಯ ಸೇವೆಗಾಗಿಯೇ ಹೊರತು, ದರ್ಪ ಮೆರೆಯುವುದಕ್ಕಾಗಿ ಅಲ್ಲ ಎಂಬಿತ್ಯಾದಿ ವಿಷಯಗಳನ್ನು ಮನಗಂಡರು. ಭಾರತೀಯ ಹಾಗೂ ಅ-ಭಾರತೀಯ ಜೀವನ ಶೈಲಿಯಲ್ಲಿ ವ್ಯತ್ಯಾಸವನ್ನು ಗುರುತಿಸಿ, ಭಾರತೀಯ ಜೀವನ ದೃಷ್ಟಿಯು ಅನೇಕ ವಿಷಯಗಳಲ್ಲಿ ಎತ್ತರದಲ್ಲಿ ನಿಲ್ಲುತ್ತದೆ ಎಂಬುದನ್ನು ಕಂಡುಕೊಂಡು, ಭಾರತೀಯರಾದ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿದು, ಗೌರವಪೂರ್ವಕವಾಗಿ, ಪ್ರೀತಿಯಿಂದ ಅವುಗಳನ್ನು ಅಳವಡಿಸಿಕೊಂಡು ನಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ವಿಶ್ವಗುರುವಾಗುವತ್ತ ಭಾರತವನ್ನು ಕರೆದೊಯ್ಯಬೇಕಿರುವುದು ನಮ್ಮೆಲ್ಲರ ಮಹತ್ತರವಾದ ಜವಾಬ್ದಾರಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post