ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಳೆಗಾಲದ ಸಂದರ್ಭದಲ್ಲಿ ಚರಂಡಿ ತುಂಬಿ ಯಾವುದೇ ಕಾರಣಕ್ಕೂ ನೀರು ಹೊರಗೆ ಹರಿಯುವ ಪರಿಸ್ಥಿತಿ ಎಲ್ಲಿಯೂ ಕಾಣಿಸಬಾರದು. ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಕೃತಕ ನೆರೆ ಸೃಷ್ಟಿಯಾದರೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಯನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಅವರು ಇಂದು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಳೆಗಾಲದ ಪೂರ್ವಸಿದ್ಧತೆ ಪರೀಶೀಲನೆ ಸೇರಿದಂತೆ ಹಲವು ವಿಷಯಗಳ ಕುರಿತು ಸೂಚನೆಗಳನ್ನು ನೀಡಿದರು.
ಮಳೆ ನೀರು ಸರಾಗವಾಗಿ ಹರಿದು ಹೋಗಲು ಎಲ್ಲಾ ಚರಂಡಿಗಳ ಹೂಳು ತೆಗೆಯುವುದು ಸೇರಿದಂತೆ ಸ್ವಚ್ಛತಾ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಮಳೆಗಾಲದಲ್ಲಿ ಪ್ರವಾಹ ಸಾಧ್ಯತೆಯಿರುವ ಗ್ರಾಮಗಳನ್ನು ಗುರುತಿಸುವಂತೆ ಈಗಾಗಲೇ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ. ಅಂತಹ ಗ್ರಾಮಗಳ ಸಂಖ್ಯೆಗೆ ಅನುಗುಣವಾಗಿ ಪರಿಹಾರ ಕೇಂದ್ರಗಳಿಗೆ ಈಗಲೇ ಸ್ಥಳವನ್ನು ಗುರುತಿಸಿ ನೋಡಲ್ ಅಧಿಕಾರಿಯನ್ನು ಸಹ ನಿಯೋಜಿಸಬೇಕು. ಮಳೆಯಿಂದ ಕೆರೆ ಕಟ್ಟೆ, ನಾಲೆಗಳು ತುಂಬಿ ಅನಾಹುತ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸಬೇಕು. ಈ ಹಿಂದಿನ ಮಳೆಗಾಲದ ಅವಧಿಯಲ್ಲಿ ಒಡೆದು ಹೋಗಿ ದುರಸ್ತಿ ಮಾಡಲಾಗಿರುವ ಕೆರೆ ಕಟ್ಟೆಗಳನ್ನು ಈಗಲೇ ಪರಿಶೀಲನೆ ನಡೆಸಬೇಕು. ತುಂಗಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ಅವಕಾಶ ನೀಡಬಾರದು. ನೀರಿನ ಒಳ ಹರಿವಿನ ಮೇಲೆ ನಿರಂತರ ನಿಗಾ ಇರಿಸಿ, ಜಲಾಶಯದಿಂದ ನೀರು ಬಿಡುವ ಕುರಿತು ನಿರಂತರ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿರಬೇಕು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬ್ಲೀಚಿಂಗ್ ಪೌಡರ್ ಮತ್ತಿತರ ಸಾಮಾಗ್ರಿಗಳು ದಾಸ್ತಾನಿರಿಸಬೇಕು ಎಂದು ಹೇಳಿದರು.
ಬಿತ್ತನೆ ಬೀಜ
ಮುಂಗಾರು ಹಂಗಾಮಿಗೆ 26 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ ಅವಶ್ಯಕತೆಯಿದ್ದು, ಜಿಲ್ಲೆಯಲ್ಲಿ 29 ಸಾವಿರ ಕ್ವಿಂಟಾಲ್ ಲಭ್ಯವಿದೆ. ಇದೇ ರೀತಿ 86 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಯಿದ್ದು, ಈಗಾಗಲೇ ಸಾಕಷ್ಟು ದಾಸ್ತಾನಿರಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ಕುಮಾರ್ ತಿಳಿಸಿದರು.
ಮುಸುಕಿನ ಜೋಳ ಪರಿಹಾರ
ಮುಸುಕಿನ ಜೋಳ ಬೆಳೆ ಹಾನಿಗೆ ಪರಿಹಾರ ನೀಡುವ ಕುರಿತು ಮಾರ್ಗಸೂಚಿ ಬಂದಿದ್ದು, ಈಗಾಗಲೇ ಗ್ರಾಮ ಪಂಚಾಯತ್‌ವಾರು ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದನ್ನು ಪರಿಶೀಲಿಸಲು ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಫಲಾನುಭವಿಗಳ ಹೆಸರು ಬಿಟ್ಟು ಹೋಗಿದ್ದರೆ ಪರಿಶೀಲಿಸಿ ಸರಿಪಡಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಘನತ್ಯಾಜ್ಯ ವಿಲೇವಾರಿ
ಜಿಲ್ಲೆಯಲ್ಲಿ 190 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕ ಸ್ಥಾಪನೆಗೆ ಜಮೀನು ಗುರುತಿಸಿ ಪ್ರಸ್ತಾವನೆ ಸ್ವೀಕರಿಸಲಾಗಿದೆ. ಇನ್ನುಳಿದ ಗ್ರಾಮ ಪಂಚಾಯತ್‌ಗಳು ಸಹ ಆದಷ್ಟು ಬೇಗನೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಘಟಕ ನಿರ್ಮಾಣಕ್ಕೆ ಸರ್ಕಾರದಿಂದ ಪ್ರತಿ ಗ್ರಾಮ ಪಂಚಾಯತ್‌ಗಳಿಗೆ 20 ಲಕ್ಷ ರೂ. ನೆರವು ದೊರೆಯಲಿದೆ ಎಂದರು.
ಸೂಚನೆ
ಕೆಲವು ತಾಲೂಕುಗಳಲ್ಲಿ ಸರ್ಕಾರಿ ಜಮೀನು ಅತಿಕ್ರಮಣದ ಕುರಿತು ನಿರಂತರ ದೂರುಗಳು ಬರುತ್ತಿವೆ. ಗ್ರಾಮ ಸಹಾಯಕರು ಅಥವಾ ಇನ್ನಿತರ ಕಂದಾಯ ಸಿಬ್ಬಂದಿಗಳು ಇದರಲ್ಲಿ ಶಾಮೀಲಾಗಿದ್ದರೆ ಗಂಭೀರವಾಗಿ ಪರಿಗಣಿಸಲಾಗುವುದು. ಇನ್ನು ಮುಂದೆ ಪ್ರತಿ ತಿಂಗಳು ಗ್ರಾಮ ಮಟ್ಟದಲ್ಲಿ ಅತಿಕ್ರಮಣವಾಗಿರುವ ಸರ್ಕಾರಿ ಜಮೀನಿನ ವಿವರ ಹಾಗೂ ತೆರವುಗೊಳಿಸಿರುವ ವಿವರಗಳನ್ನು ಗ್ರಾಮ ಸಹಾಯಕರು ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು ಎಂದರು.
Get In Touch With Us info@kalpa.news Whatsapp: 9481252093
Discussion about this post