ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾದಂತೆ, ಕಂಟೈನ್ಮೆಂಟ್ ಝೋನ್’ಗಳ ಸಂಖ್ಯೆ ಅಧಿಕವಾದ ಹಿನ್ನೆಲೆಯಲ್ಲಿ ಹಳೆಯ ಶಿವಮೊಗ್ಗ ಭಾಗವನ್ನು ಸೀಲ್ ಡೌನ್ ಮಾಡಲಾಗಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಹಳೆಯ ಶಿವಮೊಗ್ಗ ಭಾಗದಲ್ಲಿ ಇಂದಿನಿಂದ ಜುಲೈ 29ರವರೆಗೂ ಸೀಲ್ ಡೌನ್ ಮಾಡಲಾಗಿದ್ದು, ನಿಗದಿತ ಸಮಯ ಹೊರತುಪಡಿಸಿ ಉಳಿದಂತೆ ಜನರ ಓಡಾಟ, ವಾಹನ ಸಂಚಾರ ಹಾಗೂ ವ್ಯಾಪಾರ ವ್ಯವಹಾರಗಳನ್ನು ನಿರ್ಬಂಧಿಸಲಾಗಿದೆ. ಆದರೆ, ಈ ಕ್ರಮಕ್ಕೆ ಹಳೆಯ ಶಿವಮೊಗ್ಗ ಭಾಗದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸೋಂಕಿತರ ನಿವಾಸವನ್ನು ಮಾತ್ರ ಸೀಲ್ ಡೌನ್ ಮಾಡಿ, ಅವರ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಬೇಕು. ಅಲ್ಲದೇ, ಸೋಂಕು ಕಂಡು ಬಂದಿರುವ ಪ್ರದೇಶವನ್ನು ನಿಯಮಿತವಾಗಿ ಸ್ಯಾನಿಟೈಸ್ ಮಾಡಲಿ. ಆದರೆ, ಇಡಿಯ ಹಳೆಯ ಶಿವಮೊಗ್ಗ ಭಾಗವನ್ನೇ ಸೀಲ್ ಡೌನ್ ಮಾಡುವುದರಿಂದ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯ ಈ ಭಾಗದಲ್ಲಿ ಕೇಳಿಬರುತ್ತಿದೆ.
ಇನ್ನು, ಈ ಭಾಗದಲ್ಲಿ ಇಂದು ನಾಗರಿಕರು ಪ್ರತಿಭಟನೆಯನ್ನೂ ಸಹ ನಡೆಸಿದ ಕುರಿತಾಗಿ ವರದಿಯಾಗಿದೆ.
ಈ ಕುರಿತಂತೆ ಈ ಭಾಗದಲ್ಲಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜೊತೆಯಲ್ಲಿ ಕೆಲವು ಸ್ಥಳೀಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಅದರಲ್ಲಿ ಕೆಲವು ಈ ಕೆಳಗಿನಂತಿವೆ.
ಈಗಾಗಲೇ ಲಾಕ್ ಡೌನ್’ನಿಂದಾಗಿ ಜನರು ಬಹಳಷ್ಟು ನಷ್ಟ ಹಾಗೂ ತೊಂದರೆ ಅನುಭವಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಒಂದು ವಾರ ಸೀಲ್ ಡೌನ್ ಎಂದರೆ ಜನ ಜೀವನದ ಪಾಡೇನು? ಕೊರೋನಾ ಪಾಸಿಟಿವ್ ಬಂದಿರುವ ವ್ಯಕ್ತಿಗಳ ನಿವಾಸವನ್ನು ಮಾತ್ರ ಸೀಲ್ ಡೌನ್ ಮಾಡಿ, ಇಡಿಯ ಪ್ರದೇಶವನ್ನು ಸ್ಯಾನಿಟೈಸ್ ಮಾಡಿ. ಇದರ ಜೊತೆಯಲ್ಲಿ ಸೋಂಕು ಹರಡದಂತೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ವಚ್ಛತೆ ಕಾಪಾಡುವುದು ಸೇರಿದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಜಿಲ್ಲಾಡಳಿತ ಹಾಗೂ ಪಾಲಿಕೆ ಮಾಡಲಿ. ಹೀಗಾಗಿ, ನಮ್ಮ ಮನವಿಯನ್ನು ಜಿಲ್ಲಾಡಳಿತ ಹಾಗೂ ಪಾಲಿಕೆ ಪರಿಗಣಿಸಿ, ಸೀಲ್ ಡೌನ್ ತೆರವುಗೊಳಿಸಬೇಕು ಎಂದು ವಿನಂತಿ.
-ಮಾಧವಾಚಾರ್, ರಾಯಲ್ ಪ್ರಿಂಟರ್ರ್ಸ್, ಶಿವಮೊಗ್ಗ
ಕೊರೋನಾದೊಂದಿಗೇ ಬದುಕು ನಡೆಸಬೇಕು ಎಂದು ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ಜೊತೆಯಲ್ಲಿ ರಾಜ್ಯದಲ್ಲಿ ಎಲ್ಲೂ ಲಾಕ್ ಡೌನ್ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೂ ಸಹ ಘೋಷಿಸಿದ್ದಾರೆ. ಆದರೆ, ಹಳೆಯ ಶಿವಮೊಗ್ಗ ಭಾಗದಲ್ಲಿ ಮಾತ್ರ ಸೀಲ್ ಡೌನ್ ಹೆಸರಿನಲ್ಲಿ ಜನರ ಓಡಾಟ ಹಾಗೂ ವ್ಯಾಪಾರಕ್ಕೆ ನಿರ್ಬಂಧ ಹೇರಿದರೆ ಜನ ಬದುಕುವುದು ಹೇಗೆ? ಈ ಭಾಗದ ಬಡವರ ಜೀವನದ ಪಾಡೇನು? ದಯಮಾಡಿ ಈಗ ಜಾರಿಗೊಳಿಸಿರುವ ಸೀಲ್ ಡೌನ್ ಅನ್ನು ಪಾಲಿಕೆ ತೆರವುಗೊಳಿಸಬೇಕು.
-ಎಸ್.ಜಿ. ಸತ್ಯನಾರಾಯಣ, ಭೈರೇಶ್ವರ ಸಮಿತಿ
ಇದು ಇಡಿಯ ಹಳೆಯ ಶಿವಮೊಗ್ಗ ಭಾಗದ ಜನರ ಸಮಸ್ಯೆಯ ವಿಚಾರ. ಯಾರಿಗೆ ಕೊರೋನಾ ಸೋಂಕು ದೃಢಪಟ್ಟಿದೆಯೋ ಅವರ ನಿವಾಸವನ್ನು ಮಾತ್ರ ಸೀಲ್ ಡೌನ್ ಮಾಡಿ. ಜೊತೆಯಲ್ಲಿ ಇಡಿಯ ಬಡಾವಣೆಯನ್ನು ಸ್ಯಾನಿಟೈಸ್ ಮಾಡಿ. ಬದಲಾಗಿ, ಸಂಪೂರ್ಣ ಪ್ರದೇಶವನ್ನೇ ಸೀಲ್ ಡೌನ್ ಮಾಡಿದರೆ, ಅಂದು ದುಡಿದು ಅಂದೇ ತಿನ್ನುವ ಪರಿಸ್ಥಿತಿಯಿರುವ ಬಡ ಕೂಲಿ ಕಾರ್ಮಿಕರ ಪಾಡೇನು? ಅಲ್ಲದೇ, ಈಗಾಗಲೇ ವ್ಯಾಪಾರವಿಲ್ಲದೇ ವ್ಯಾವಹಾರಸ್ಥರು ಬಹಳಷ್ಟು ತೊಂದರೆ ಅನುಭವಿಸಿದ್ದಾರೆ. ಹೀಗಿರುವಾಗ, ಈ ಭಾಗದ ವ್ಯಾಪಾರಸ್ಥರು ಮತ್ತಷ್ಟು ತೊಂದರೆ ಅನುಭವಿಸುತ್ತಾರೆ. ಜನರ ಓಡಾಟ ಹಾಗೂ ದೈನಂದಿನ ಜೀವನದ ಮೇಲೂ ಸಹ ಇದು ಪರಿಣಾಮ ಬೀರುತ್ತದೆ. ಹೀಗಾಗಿ, ಪಾಲಿಕೆ ಇದನ್ನು ಪರಿಗಣಿಸಿ, ಸೀಲ್ ಡೌನ್ ತೆರವುಗೊಳಿಸಬೇಕು.
-ರುದ್ರೇಶ್, 30ನೆಯ ವಾರ್ಡ್ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರು
ಲಾಕ್ ಡೌನ್ ಅವಧಿಯಲ್ಲಿ ಕೆಲಸವಿಲ್ಲದೇ ಅವರಿವರು ಕೊಟ್ಟಿದ್ದನ್ನು ತಿಂದು ಬದುಕಿದ್ದಾಯಿತು. ಈಗ ಮತ್ತೆ ಒಂದು ವಾರ ಹೊರಕ್ಕೆ ಬರಬೇಡಿ ಎಂದರೆ ನಮ್ಮ ಪಾಡೇನು? ನಾವು ಕೂಲಿ ಮಾಡಿ ಬದುಕುವ ಜನ. ಕೊರೋನಾ ಬರದಂತೆ ತಡೆಯಲು ಪಾಲಿಕೆ ಬೇರೆ ಬೇಕಾದ್ದು ಕ್ರಮ ತೆಗೆದುಕೊಳ್ಳಲಿ. ಆದರೆ, ಜನರ ಜೀವನಕ್ಕೆ ತೊಂದರೆಯಾಗುವ ಸೀಲ್ ಡೌನ್ ಮಾಡಿದರೆ ನಮ್ಮಗಳ ಗೋಳು ಕೇಳುವವರು ಯಾರು?
-ರಾಮಣ್ಣ, ಕೂಲಿ ಕಾರ್ಮಿಕ, ಸೀಗೆಹಟ್ಟಿ
Get In Touch With Us info@kalpa.news Whatsapp: 9481252093
Discussion about this post