ಮಂಗಳೂರು: ಹಿಂದೂಗಳ ಐಕಾನ್ ಆಗಿ ಪರಿವರ್ತಿತವಾದ ವೀರ ಹನುಮಾನ್ ಚಿತ್ರ, ರಾವಣನನ್ನು ಸಂಹರಿಸುವ ಸಂದರ್ಭದಲ್ಲಿನ ತನ್ನ ಮನದೊಳಗಿನ ಭಾವವನ್ನು ವ್ಯಕ್ತಪಡಿಸುವ ಶ್ರೀ ರಾಮದೇವರ ಚಿತ್ರ ಹಾಗೂ ಯಕ್ಷಗಾನ ರೂಪದ ಹನುಮಾನ್ ಚಿತ್ರಗಳನ್ನು ರಚಿಸಿದ ಕರಣ್ ಆಚಾರ್ಯರ ಕಲಾಕುಂಚದಲ್ಲಿ ಈಗ ಮತ್ತೊಂದು ವಿಭಿನ್ನ ಹಾಗೂ ಅಪರೂಪದ ಮೂಡಿ ಬಂದಿದೆ.
ಹೌದು… ಕರಣ್ ಆಚಾರ್ಯ ಈಗ ಯಾರಿಗೆ ಗೊತ್ತಿಲ್ಲ ಹೇಳಿ? ತಮ್ಮ ಮನದಾಳದ ಭಾವನೆಯನ್ನು ಕುಂಚದಲ್ಲಿ ತಥಾವತ್ ರೂಪಿಸುವ ಸಾಮರ್ಥ್ಯವುಳ್ಳ ಈ ಕಲಾವಿದನ ಕಲ್ಪನೆಯಲ್ಲಿ ಈಗ ಗಣೇಶ ಚತುರ್ಥಿಗೆ ಕೊಡುಗೆಯಾಗಿ ಮೂಡಿ ಬಂದಿರುವುದೇ ಗಣೇಶನ ಚಿತ್ರ.
ಕ್ಯಾನ್‌ವಾಸ್ ಮೇಲೆ ಅಕ್ರಿಲಿಕ್ ಬಣ್ಣವನ್ನು ಬಳಸಿ ರೂಪಿಸಲಾಗಿರುವ ಈ ವಿಶಿಷ್ಟ ಚಿತ್ರ ಮೂರು ಅಡಿ ಎತ್ತರ ಹಾಗೂ ಎರಡು ಅಡಿ ಅಗಲವನ್ನು ಹೊಂದಿದೆ.
ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ: ಮರಿ ಆನೆಯ ಮುಖವನ್ನು ತಥಾವತ್ ಚಿತ್ರಿಸಲಾಗಿದ್ದು, ದೇಹ ಮಾತ್ರ ಗಣಪತಿಯದ್ದಾಗಿದೆ. ಸಾಮಾನ್ಯವಾಗಿ ಗಣೇಶನ ಚಿತ್ರದಲ್ಲಿ ಅಥವಾ ಮೂರ್ತಿಯಲ್ಲಿ ಆನೆಯ ಮುಖವಿರುತ್ತದೆ. ಆದರೆ, ಕರಣ್ ಆಚಾರ್ಯರ ಕಲ್ಪನೆಯಲ್ಲಿ ಮರಿ ಆನೆಯ ಮುಖ ಕ್ಯಾನ್‌ವಾಸ್ ಮೇಲೆ ಮೂಡಿ ಬಂದಿದೆ.
ಈಗಾಗಲೇ ಹೇಳಿದಂತೆ ಕ್ಯಾನ್‌ವಾಸ್ ಮೇಲೆ ಈ ಚಿತ್ರ ರಚಿತವಾಗಿರುವುದರಿಂದ ಮರಿ ಆನೆಯ ಮುಖ ಎಷ್ಟು ಸ್ಪಷ್ಟವಾಗಿ ಮೂಡಿಬಂದಿದೆ ಎಂದರೆ, ನಿಜವಾದ ಮರಿ ಆನೆಯ ಮುಖವೇ ಎಂಬಷ್ಟು ಸ್ಪಷ್ಟತೆ ವ್ಯಕ್ತವಾಗಿದೆ.
ಕರಣ್ ಆಚಾರ್ಯ ಹೇಳುವಂತೆ ತಮ್ಮ ಸ್ನೇಹಿತರು ಹಾಗೂ ಹಿತೈಷಿಗಳಿಗೆ ಗಣೇಶ ಚತುರ್ಥಿಗೆ ಶುಭ ಕೋರಲು ಈ ಚಿತ್ರವನ್ನು ಅವರು ರೂಪಿಸಿದ್ದು. ಆದರೆ, ಇದು ಕಲಾಭಿಮಾನಿಗಳಿಗೆ ಹಾಗೂ ಕಲಾ ಲೋಕಕ್ಕೆ ಒಂದು ಅದ್ಬುತ ಕೊಡುಗೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು, ಕರಣ್ ಆಚಾರ್ಯ ಅವರ ಅದ್ಬುತ ರಚನೆಯ ಈ ಕ್ಯಾನ್‌ವಾಸ್ ಚಿತ್ರ ನಿಮಗೂ ಬೇಕಿದ್ದರೆ ಈ ಕೆಳಗಿನ ಮೇಲ್ ಐಡಿಗೆ ಸಂಪರ್ಕಿಸಿ:
Discussion about this post