ಕಲ್ಪ ಮೀಡಿಯಾ ಹೌಸ್
ಆಧುನಿಕತೆ ಹಾಗೂ ತಂತ್ರಜ್ಞಾನಗಳ ಉಪಯೋಗದ ಭರಾಟೆಯಲ್ಲಿ ಮಾನವ ಅದೆಷ್ಟು ದಾಪುಗಾಲಿಡುತ್ತಿದ್ದಾನೋ, ನಮ್ಮನ್ನಾಳುತ್ತಿರುವ ಆಡಳಿತ ವ್ಯವಸ್ಥೆಯೂ ಅದರ ದುಪ್ಪಟ್ಟು ವೇಗದಲ್ಲಿ ಹೆಜ್ಜೆಯನ್ನಿರಿಸುತ್ತಿದೆ. ಕೆಲವೇ ವರ್ಷಗಳ ಅಂತರದಲ್ಲಿ ಶಿವಮೊಗ್ಗ ಕಂಡುಕೇಳರಿಯದ ಅಭಿವೃದ್ಧಿಯ ದೆಸೆಯನ್ನು ಪಡೆದು ಈಗ ಮತ್ತಷ್ಟು ಸ್ಮಾರ್ಟ್ ಆಗ ಹೊರಟಿರುವುದು ಅಭಿವೃದ್ಧಿ ಹೊಂದಿದ ನಗರಗಳನ್ನೂ ನಾಚಿಸುವಂತಿದೆ. ಇಂತಹ ಸ್ಮಾರ್ಟ್ ಯೋಜನೆಯ ಬಹುಮುಖ್ಯ ಅಂಗವೇ ಶಿವಮೊಗ್ಗೆಯ ವಿಮಾನ ನಿಲ್ದಾಣ. ಇದೇ ಒಂದು ದಶಕದ ಹಿಂದೆ ಸನ್ಮಾನ್ಯ ಯಡಿಯೂರಪ್ಪನವರು ಉಪಮುಖ್ಯಮಂತ್ರಿಗಳಾಗುತ್ತಿದ್ದಂತೆಯೇ ಶಿವಮೊಗ್ಗೆಯ ಭಾಗ್ಯ ಬದಲಾಯಿತು. ಆಗಾಗ ವಿಮಾನ ಸದ್ದು ಬಂತೆಂದರೆ ಆಕಾಶದತ್ತ ತಲೆಯೆತ್ತುತ್ತಿದ್ದ ಜನ ಇನ್ನು ಮುಂದೆ ಮತ್ತೆ ಮತ್ತೆ ತಲೆಯೆತ್ತಿ ನೋಡುವ ಘಟನೆ ಕೆಲವೇ ತಿಂಗಳಿನಲ್ಲಿ ಘಟಿಸಲಿದೆ.ನಗರದಿಂದ 12 ಕಿಮೀ ದೂರದಲ್ಲಿರುವ ಸೋಗಾನೆಯಲ್ಲಿ ಈ ಹಿಂದೆ ಆರಂಭಗೊಂಡ ಶ್ರೀಯುತ ಯಡಿಯೂರಪ್ಪನವರ ಮಹತ್ವಾಕಾಂಕ್ಷಿ ಯೋಜನೆಯಾದ ವಿಮಾನ ನಿಲ್ದಾಣದ ಕಾಮಗಾರಿ ಸರ್ಕಾರದ ಬದಲಾವಣೆಯಿಂದಾಗಿ ನಿಂತಿತ್ತು. ತಮ್ಮ ಚಾಣಾಕ್ಷಮತಿ ವ್ಯಕ್ತಿತ್ವದಿಂದ ಬಿ.ವೈ. ರಾಘವೇಂದ್ರರವರು ಮತ್ತೆ ಆ ಕಾರ್ಯಗಳಿಗೆ ಪುನಶ್ಚೇತನ ನೀಡುವಲ್ಲಿ ಸಫಲರಾದರು. ಹಿಂದಿನಿಂದಲೂ ಸಂಸದರು ಎಂದರೆ ಸಾಮಾನ್ಯರಿಗೆ ನಿಲುಕದ ನಕ್ಷತ್ರ ಎಂಬುದು ಪ್ರತೀತಿ.
ಕೇಂದ್ರದಲ್ಲಿನ ಯೋಜನೆಗಳು ಜನಸಾಮಾನ್ಯರ ಮಟ್ಟದಲ್ಲಿ ತಲುಪಲಾರದ ಸಂಗತಿಯೆಂದೇ ಜನ ಪರಿಭಾವಿಸಿದ್ದರು. ಈಗ ಹಠಾತ್ತನೆ ಅಂತಹ ಎಲ್ಲಾ ಊಹಾಪೂಹಗಳಿಗೆ ತಿಲಾಂಜಲಿ ಇಟ್ಟು ನಮ್ಮ ರಾಘಣ್ಣನೆಂದೇ ಪ್ರಖ್ಯಾತಿ ಪಡೆಯುತ್ತಾ, ಶ್ರೀಸಾಮಾನ್ಯರೆಲ್ಲರನ್ನೂ ಅತ್ಯಂತ ಆತ್ಮೀಯತೆ ಹಾಗೂ ಗೌರವಾದರಗಳಿಂದ ಮಾತನಾಡಿಸುತ್ತಾ, ಎಲ್ಲಾ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು-ಅವರ ವಿಶ್ವಾಸವನ್ನು ಗಳಿಸಿಕೊಂಡು, ಸಂಘಟನೆಯ ಹಾಗೂ ಪಕ್ಷದ ಹಿರಿಯರ ಸಲಹೆಗಳನ್ನು ಸ್ವೀಕರಿಸಿ; ಅನುಷ್ಠಾನಗೊಳಿಸುತ್ತಾ ತಮ್ಮ ಕಾರ್ಯದ ಹಾದಿಯಲ್ಲಿ ಗಜನಡಿಗೆಯನ್ನಿಡುತ್ತಿದ್ದಾರೆ. ಹಿಂದಿನವರ ನಿರ್ಲಕ್ಷ್ಯ ಧೋರಣೆಯಿಂದ ಅಭಿವೃದ್ಧಿಯಲ್ಲಿ ಬಡವಾಗಿದ್ದ ಶಿವಮೊಗ್ಗ ಜಿಲ್ಲೆಗೆ ಕೇಂದ್ರದ ಹಲವಾರು ಯೋಜನೆಗಳನ್ನು ತಂದು ಅದನ್ನು ಅಸಮಾನ್ಯ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ 40 ಕೋಟಿ ಮೂಲ ವೆಚ್ಚದಲ್ಲಿ ಈ ಕಾಮಗಾರಿ ಪುನರಾರಂಭವಾಗಿ, ಮೊದಲು ಸಣ್ಣ ವಿಮಾನ ಸಂಚಾರವನ್ನು ನಡೆಸಲು 220 ಕೋಟಿಯ ಅಂದಾಜು ವೆಚ್ಚದಲ್ಲಿ ಕಡಿಮೆ ವೆಚ್ಚದ ಪ್ರಾದೇಶಿಕ ವಾಹಕಗಳಿಗೆ ನಿರ್ಮಾಣ ಮಾಡುವ ಯೋಜನೆ ಇತ್ತು. ಆದಾಗ್ಯೂ, ಯಡಿಯೂರಪ್ಪನವರು ವಿಮಾನ ನಿಲ್ದಾಣವನ್ನು ಎಲ್ಲಾ ಹವಾಮಾನ, ರಾತ್ರಿ ಸಮಯ ಮತ್ತು ಏರ್ಬಸ್ ಎ -320 ಕಾರ್ಯಾಚರಣೆಗಳಿಗೆ ಕಾರ್ಯಸಾಧ್ಯವಾಗುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿ ವೆಚ್ಚವನ್ನು ಗಮನಾರ್ಹವಾಗಿ 340 ಕೋಟಿಗೆ ಏರಿಸಿದರು. ಈ ಸುಸಜ್ಜಿತ ವ್ಯವಸ್ಥೆಗೆ ತಮ್ಮ ತಂದೆಯವರಿಗೆ ಪುಷ್ಟಿ ಕೊಟ್ಟವರೇ ನಮ್ಮ ಕ್ರಿಯಾಶೀಲ, ದೂರದೃಷ್ಟಿ ವ್ಯಕ್ತಿತ್ವದ ಸಂಸದರಾದ ಬಿ.ವೈ. ರಾಘವೇಂದ್ರರವರು.
ಯಡಿಯೂರಪ್ಪ ಹಾಗೂ ರಾಘವೇಂದ್ರರವರು ಜೊತೆ ಗೂಡಿ ಹಗಲಿರುಳೆನ್ನದೆ ತಮ್ಮ ಕನಸಿನ ಕೂಸೆಂಬಂತೆ ಕಾಮಗಾರಿಯ ಪರಿವೀಕ್ಷಣೆಗೈಯುತ್ತಾ ತ್ವರಿತವಾಗಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೈಯಲು ಕಟಿಬದ್ಧರಾಗಿ ನಿಂತಿದ್ದಾರೆ.
ಯೂಟ್ಯೂಬ್ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾದಲ್ಲಿ ಕೆಂಬಾವಿ ಆರ್ಕಿಟೆಕ್ಚರ್ ಫೌಂಡೇಷನ್ ರೂಪಿಸಿರುವ ನೀಲನಕ್ಷೆ, ನಮ್ಮ ರಾಷ್ಟ್ರ ಪುಷ್ಪವಾದ ಕಮಲದಾಕೃತಿಯ ವಿಮಾನ ನಿಲ್ದಾಣದ ವೀಡಿಯೋ ಹಾಗೂ ಚಿತ್ರಗಳು ನೋಡುಗರ ಕಣ್ಮನವನ್ನು ಸೆಳೆಯುತ್ತಿದೆ. ಕಮಲದ ದಳಗಳೇ ಎದ್ದುನಿಂತು ಸ್ವಾಗತಗೈಯುತ್ತಿವೆಯೇನೋ ಎಂಬಂತೆ ಭಾಸವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಮುಖ್ಯದ್ವಾರದ ಮುಂಭಾಗದಲ್ಲಿ, ವಾಹನ ಸಂಚರಿಸುವ ಹಾದಿಗೆ ಹೊಂದಿಕೊಂಡು ಬೃಹತ್ ತಾವರೆಯ ಕೊಳವನ್ನೇ ನಿರ್ಮಿಸಲಾಗುತ್ತಿದೆ. ಕಣ್ಣು ಕೋರೈಸುವ ವರ್ಣರಂಜಿತ ದೀಪಾಲಂಕಾರದ ಪ್ರಭೆಯಿಂದ ಕಮಲದ ಕೊಳ ಮತ್ತಷ್ಟು ಝಗಝಗಿಸುತ್ತಿದೆ. ಈ 3ಡಿ ವಿಡಿಯೋ ಹಾಗೂ ಚಿತ್ರಗಳು ನೋಡುಗರ ಎದೆಯಲ್ಲಿ ಸಂಚಲನ ಮೂಡಿಸುತ್ತಿರುವುದಲ್ಲದೆ ವಿದೇಶಿಗರ ಗಮನವನ್ನೂ ಸೆಳೆಯುವಲ್ಲಿ ಸಫಲವಾಗಲಿದೆ.
ಮೊದಲ ಹಂತದ ಕಾರ್ಯಗಳಲ್ಲಿ ವಿಮಾನ ನಿಲ್ದಾಣದ ಓಡುದಾರಿ, ಟ್ಯಾಕ್ಸಿ ಹಾದಿ, ಏಪ್ರನ್, ಸಮೀಪಿಸುವ ರಸ್ತೆಗಳು, ಬಾಹ್ಯ ರಸ್ತೆಗಳು ಮತ್ತು ಕಾಂಪೌಂಡ್ ಗೋಡೆಗಳು ನಿರ್ಮಾಣವಾಗುತ್ತಿದ್ದು, ಮುಂದಿನ ಪ್ಯಾಕೇಜ್‌ನಲ್ಲಿ ಎಟಿಸಿ ಟವರ್, ಎಲೆಕ್ಟ್ರೋ-ಮೆಕ್ಯಾನಿಕಲ್ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ವಿಮಾನ ನಿಲ್ದಾಣವು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ ಎಂಬುದು ಸರ್ಕಾರದ ಆಶಯ.ಪೂರ್ವನಿಯೋಜನೆಯಂತೆ ಡಿಸೆಂಬರ್’ನಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಕೋವಿಡ್’ನಿಂದಾಗಿ ಮುಂದಿನ ಜೂನ್’ನಲ್ಲಿ ಸರ್ವಸನ್ನದ್ಧವಾಗಿ ವಿಮಲಮಯ ವಿಮಾನಗಳ ಹಾರಾಟ ನಮ್ಮ ಬಾನಂಗಳದಲ್ಲಿ ಹಾರಾಡುವುದಕ್ಕೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ. ಇದಕ್ಕೆ ನಮ್ಮ ಮಾನ್ಯ ಮುಖ್ಯಮಂತ್ರಿಗಳಿಗೂ ಹಾಗೂ ಶಿವಮೊಗ್ಗೆಯ ಹೆಮ್ಮೆಯ ಪ್ರತೀಕವಾದ ಸಂಸದರಿಗೂ ನಮ್ಮ ಧನ್ಯವಾದ ಸಲ್ಲಲೇಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post