ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಹೆಚ್ಚಿನ ಒತ್ತು ನೀಡಿ ಎರಡು ವಿಷಯವನ್ನು ಸಮಾನವಾಗಿ ಸ್ವೀಕರಿಸಿ ಎಂದು ಭಾರತ ಮಹಿಳಾ ಹಾಕಿ ತಂಡದ ತರಬೇತುದಾರರು ಮತ್ತು ಕಾಲೇಜಿನ ಹಳೆಯ ವಿದ್ಯಾರ್ಥಿನಿ ಅಂಕಿತಾ ಸುರೇಶ್ ಅವರು ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಕಾಲೇಜು ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿ ಸಂಘದ ಸಮಾರೋಪ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆ ಮತ್ತು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಇದ್ದಲ್ಲಿ ಹೆಚ್ಚಿನ ಸಾಧನೆ ಮಾಡಬಹುದು. ಆ ನಿಟ್ಟಿನಲ್ಲಿ ಎರಡೂ ಕ್ಷೇತ್ರದಲ್ಲಿಯೂ ಹೆಚ್ಚಿನ ಗಮನಹರಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ಕಾಲೇಜಿನ ಹೆಸರನ್ನು ವಿದ್ಯಾರ್ಥಿಗಳು ದೇಶ ವಿದೇಶದಲ್ಲೂ ಪಸರಿಸುವಂತೆ ಸಾಧನೆ ಮಾಡಬೇಕು. ತಾವು ಓದಿದ ಕಾಲೇಜಿನ ಹಿರಿಮೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಎಲ್ಲರ ಪಾತ್ರ ಅತಿ ಮುಖ್ಯ ಎಂದು ಹೇಳಿದರು. ಈ ಸಂದರ್ಭ ತಾನು ಕಾಲೇಜಿನಲ್ಲಿ ಕಳೆದಂತ ನೆನಪುಗಳನ್ನು ಅಂಕಿತಾ ಸುರೇಶ್ ಅವರು ಮೆಲುಕು ಹಾಕಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪುಟ್ಟರಾಜು ಅವರು ಮಾತನಾಡಿ ಕಾಲೇಜಿನಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅವಕಾಶಗಳನ್ನು ಬಳಸಿಕೊಂಡು ತಮ್ಮ ಗುರಿ ತಲುಪಬೇಕು ಎಂದರು.

ಆಕಾಶವಾಣಿಯ ಸುಬ್ರಾಯ ಸಂಪಾಚೆ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು ಅತಿ ಮುಖ್ಯ. ವಿದ್ಯಾರ್ಥಿಯನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರ ಅತಿಮುಖ್ಯವಾದುದ್ದು ಎಂದು ಹೇಳಿದರು.
Also read: ಬಳ್ಳಾರಿ: ಜ.4ರಂದು 500 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಿಎಂ ಚಾಲನೆ
ವಿದ್ಯಾರ್ಥಿಗಳು ತಮ್ಮ ಬದುಕಿಗೆ ಬೇಕಾದ ಬೇಕು/ಬೇಡಗಳನ್ನು ತಾವೇ ನಿರ್ಧರಿಸಿಕೊಳ್ಳಬೇಕು. ಒಳ್ಳೆಯ ವಿಷಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ತಮ್ಮ ಜೀವನ ರೂಪುಗೊಳ್ಳುವಲ್ಲಿ ಒಳ್ಳೆಯ ರೀತಿ, ನೀತಿಯನ್ನು ಅಳವಡಿಸಿಕೊಂಡು ಸಾಧನೆ ಮಾಡುವಂತಾಗಲಿ ಎಂದರು. ಯಾವುದೇ ವಿಷಯದಲ್ಲಾದರೂ ಆಸಕ್ತಿಯನ್ನು ಬೆಳೆಸಿಕೊಂಡು ಸತ್ಯ, ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಿಯಾಂಕ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಪಿ.ಆರ್. ವಿಜಯ ಸ್ವಾಗತಿಸಿದರು. ಕೆ.ಬಿ. ಗೌರಿ ನಿರೂಪಿಸಿದರು.












Discussion about this post