ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಕಾನೂನು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಕೊಯನಾಡು ಬಳಿಯ ಕಿಂಡಿ ಆಣೆಕಟ್ಟು, ಚೆಂಬು ಗ್ರಾಮದ ಊರುಬೈಲು ಕಿಂಡಿ ಆಣೆಕಟ್ಟು, ಮಾರ್ಪಡ್ಕ ಸೇತುವೆ, ಆನೆಹಳ್ಳದ ಕಿಂಡಿ ಆಣೆಕಟ್ಟು, ಬಾಲಂಬಿ ಬಳಿಯ ಸೇತುವೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮಳೆಯಿಂದ ಉಂಟಾಗಿರುವ ಹಾನಿ ಬಗ್ಗೆ ಗ್ರಾಮದ ಪ್ರಮುಖರಾದ ಸುಬ್ರಮಣ್ಯ ಉಪಾಧ್ಯಾಯ ಮತ್ತು ಎಂಜಿನಿಯರ್ ಅವರಿಂದ ಮಾಹಿತಿ ಪಡೆದರು.

Also read: ಆ.12-14ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ
ಈ ಸಂದರ್ಭದಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್ ಮಳೆಯಿಂದ ಉಂಟಾಗಿರುವ ಹಾನಿ ಮತ್ತಿತರ ಬಗ್ಗೆ ಸಚಿವರ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ಕಿಂಡಿ ಆಣೆಕಟ್ಟು ನಿರ್ಮಾಣದಿಂದ ಯಾವುದೇ ರೀತಿಯ ತೊಂದರೆ ಆಗಿಲ್ಲ, ನೀರು ಸರಾಗವಾಗಿ ಹರಿಯತ್ತಿದೆ. ಕಿಂಡಿ ಆಣೆಕಟ್ಟು ಯೋಜನೆ ಉಡುಪಿ ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಕೈಗೊಳ್ಳಲಾಗುತ್ತಿದೆ. ಚೆಕ್ ಡ್ಯಾಮ್ ನಿರ್ಮಾಣದಿಂದ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಮತ್ತು ನೀರಾವರಿಗೆ ಅನುಕೂಲ ಆಗಲಿದೆ ಎಂದು ಸಣ್ಣ ನೀರಾವರಿ ಸಚಿವರು ಹೇಳಿದರು.

ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ಆಲೂರು ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಗುತ್ತಿಯಲ್ಲಿ ಸುಮಾರು ರೂ.7 ಕೋಟಿ ರೂ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದು 20 ವರ್ಷಗಳ ಬೇಡಿಕೆ ಆಗಿತ್ತು ಎಂದು ಅವರು ವಿವರಿಸಿದರು.

ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ತಹಶೀಲ್ದಾರ ಮಹೇಶ್, ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್, ಮುಖ್ಯ ಎಂಜಿನಿಯರ್ ರಾಘವನ್, ಇಇ ಗೋಕುಲ್ ದಾಸ್, ಎಇಇ ಕುಮಾರಸ್ವಾಮಿ, ಕಂದಾಯ ಪರಿವೀಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಿಗರು, ಸಣ್ಣ ನೀರಾವರಿ ಇಲಾಖೆ ಎಂಜಿನೀಯರ್ ಇತರರು ಇದ್ದರು.
ಹೆದ್ದಾರಿ ಮಣ್ಣು ಕುಸಿಯುತ್ತಿರುವ ಪ್ರದೇಶಕ್ಕೆ ಶಾಸಕರ ಭೇಟಿ: ಮಡಿಕೇರಿ-ಸಂಪಾಜೆ ಮಾರ್ಗದ ಮದೆ ಗ್ರಾಮದ ಹೆದ್ದಾರಿ ಬಳಿ ಮಣ್ಣು ಕುಸಿತ ಉಂಟಾಗುತ್ತಿರುವ ಪ್ರದೇಶಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಭೇಟಿ ನೀಡಿ ವೀಕ್ಷಿಸಿದರು.
ಹೆದ್ದಾರಿ ಬಳಿ ಮಣ್ಣು ಕುಸಿಯುವ ಸಾಧ್ಯತೆ ಇದ್ದು, ಈ ಸಂಬಂಧ ಮುನ್ನೆಚ್ಚರ ವಹಿಸಬೇಕಿದೆ. ಆ ನಿಟ್ಟಿನಲ್ಲಿ ವಿದ್ಯುತ್ ಮಾರ್ಗ ಬದಲಿಸಲಾಗುತ್ತಿದೆ ಎಂದರು.
ಹೆದ್ದಾರಿಯಲ್ಲಿ ಮಣ್ಣು ಕುಸಿದರೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಾರಿಗೆ ಸಂಪರ್ಕಕ್ಕೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಮುನ್ನೆಚ್ಚರ ವಹಿಸಬೇಕಿದೆ ಎಂದು ಶಾಸಕರು ಹೇಳಿದರು.
ಮಳೆಯ ನಡುವೆಯೂ ಸೆಸ್ಕ್ ಇಲಾಖೆಯ ಸಿಬ್ಬಂದಿಗಳು ವಿದ್ಯುತ್ ಮಾರ್ಗವನ್ನು ಬದಲಿಸುತ್ತಿದ್ದು ಕಂಡುಬಂದಿತು. ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್, ಹೆದ್ದಾರಿ ವಿಭಾಗದ ಸಹಾಯಕ ಎಂಜಿನಿಯರ್ ಮುರುಗೇಶ್ ಇತರರು ಇದ್ದರು.










Discussion about this post