ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಗೃಹಲಕ್ಷ್ಮಿ, #Gruhalakshmi ಶಕ್ತಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಇವುಗಳನ್ನು ಬಳಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದಲ್ಲಿ ನಗರ ದಸರಾ #Dasara ಸಮಿತಿ ವತಿಯಿಂದ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ‘ಮಹಿಳಾ ದಸರಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆಯರು ರಾಜಕೀಯ, ಆರ್ಥಿಕ, ವಾಣಿಜ್ಯ, ಆಡಳಿತ, ಬಾಹ್ಯಾಕಾಶ, ಕ್ರೀಡೆ, ಸಿನಿಮಾ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ವೀಣಾ ಅಚ್ಚಯ್ಯ ಅವರು ಬಣ್ಣಿಸಿದರು.
ಪಟ್ಟಣ, ನಗರ ಮತ್ತು ಬೃಹತ್ ನಗರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದು, ಗ್ರಾಮೀಣ ಪ್ರದೇಶದ ಮಹಿಳೆಯರಿಗೂ ಅವಕಾಶಗಳು ಒದಗಬೇಕು ಎಂದು ವೀಣಾ ಅಚ್ಚಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಿಳಾ ದಸರಾವು #Mahila Dasara ಮಹಿಳೆಯರ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಆ ನಿಟ್ಟಿನಲ್ಲಿ ಅವಕಾಶಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯುವಂತಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯರು ಹೇಳಿದರು.
ಮಹಿಳೆಯರು ಸಾಮಾಜಿಕ ಹಾಗು ಸಾರ್ವಜನಿಕ ಕ್ಷೇತ್ರಗಳಲ್ಲಿ ಮತ್ತಷ್ಟು ತೊಡಗಿಸಿಕೊಂಡಲ್ಲಿ ಶ್ರೇಯೋಭಿವೃದ್ಧಿ ಮತ್ತಷ್ಟು ಹೆಚ್ಚಲಿದೆ. ರಾಷ್ಟ್ರದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಹೆಚ್ಚಿನದ್ದಾಗಿದೆ ಎಂದು ವೀಣಾ ಅಚ್ಚಯ್ಯ ಅವರು ನುಡಿದರು.
ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷರಾದ ಕೆ.ಪಿ.ಚಂದ್ರಕಲಾ ಅವರು ಮಾತನಾಡಿ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ.50ರಷ್ಟು ಮೀಸಲು ಶೀಘ್ರ ಜಾರಿಯಾಗಬೇಕು ಎಂದು ಅವರು ಒತ್ತಾಯಿಸಿದರು.
ಮಹಿಳಾ ಮತ್ತು ಪುರುಷ ಸಮಾನವಾಗಿ ಬದುಕಿದಾಗ ಸಮಾಜ ಅಭಿವೃದ್ಧಿ ಸಾಧ್ಯ ಎಂಬುದನ್ನು ಮರೆಯುವಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಗಂಡು-ಹೆಣ್ಣು ಸಮಾನರು ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಈ ಹಿಂದೆ ಸ್ತ್ರೀಶಕ್ತಿ ಸಂಘಗಳನ್ನು ಸ್ಥಾಪಿಸುವ ಮೂಲಕ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿತು ಎಂಬುದನ್ನು ಮರೆಯಬಾರದು ಎಂದು ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಮಹಿಳೆಯರು ಸಹಕಾರ ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕ, ಕುಟುಂಬ, ಸಾಮಾಜಿಕ, ಜೀವನ ನಿರ್ವಹಣೆ ಅರಿತು ಕೊಳ್ಳಬೇಕು. ಹೀಗಾದಾಗ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಕೆ.ಪಿ.ಚಂದ್ರಕಲಾ ಅವರು ಪ್ರತಿಪಾದಿಸಿದರು.
Also read: ಭದ್ರಾವತಿ | ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಭ್ರಷ್ಟಾಚಾರ ಆರೋಪ | ತನಿಖೆಗೆ ಆಗ್ರಹ
ಇಂದಿಗೂ ಸಹ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಸಂಕುಚಿತ ಮನೋಭಾವ ಹೊಂದಿದ್ದು, ಇದನ್ನು ಬಿಡಬೇಕು. ಎಲ್ಲರಂತೆ ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಕೆ.ಪಿ.ಚಂದ್ರಕಲಾ ಅವರು ಸಲಹೆ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರು ಮಾತನಾಡಿ ದಸರಾ ಸಂದರ್ಭದಲ್ಲಿಯೂ ದುರ್ಗೆ, ಚಾಮುಂಡಿ, ಹೆಸರಿನಲ್ಲಿ ದಸರಾವನ್ನು ಆಚರಿಸುವುದು ವಿಶೇಷವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಹಿಳೆಯರು ಎಲ್ಲಾ ರಂಗಗಳಲ್ಲೂ ಪ್ರಮುಖ ಪಾತ್ರ ವಹಿಸುತ್ತಾರೆ. ಸ್ತ್ರೀ ಎಂದರೆ ಆತ್ಮಶಕ್ತಿ, ಆದಿಶಕ್ತಿ ಎಂಬುದನ್ನು ಮರೆಯುವಂತಿಲ್ಲ ಎಂದು ಆರ್. ಐಶ್ವರ್ಯ ಅವರು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜು ಅವರು ಮಾತನಾಡಿ ಸರ್ಕಾರ ಮಹಿಳೆಯರು ಮತ್ತು ಮಕ್ಕಳಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಗ್ಯಾರಂಟಿ ಯೋಜನೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಮುಖವಾಗಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತೀ ತಿಂಗಳು 23 ಕೋಟಿ ರೂ. ಪಾವತಿಯಾಗುತ್ತಿದೆ. ಆರಂಭದಿಂದ ಇದುವರೆಗೆ 241 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮಾತೃ ವಂದನಾ, ಮಾತೃ ಪೂರ್ಣ, ಕ್ಷೀರಭಾಗ್ಯ ಹೀಗೆ ಹಲವು ಯೋಜನೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರೂಪಿಸಲಾಗಿದೆ ಎಂದು ನಟರಾಜು ಅವರು ವಿವರಿಸಿದರು.
ಮಹಿಳಾ ದಸರಾಗೆ ದಿವ್ಯ ಮಂತರ್ ಗೌಡ ಅವರು ಚಾಲನೆ ನೀಡಿದರು. ನಗರಸಭಾ ಸದಸ್ಯರಾದ ಅನಿತಾ ಪೂವಯ್ಯ, ಸವಿತಾ ರಾಕೇಶ್, ಚಿತ್ರಾವತಿ, ಕಲಾವತಿ, ಪ್ರಮುಖರಾದ ಜುಲೈಕಾಭಿ, ಲೀಲಾ ಶೇಷಮ್ಮ, ಸೂರಯ್ಯಾ ಅಬ್ರಾರ್, ಉಷಾ, ಎಚ್.ಎನ್.ಶಾರದ, ಸವಿತಾ, ಸೀತಾಲಕ್ಷ್ಮಿ, ರಜನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತರು ಇತರರು ಇದ್ದರು.
ಅನಿಲ್ ಎಚ್.ಟಿ. ಸ್ವಾಗತಿಸಿದರು. ಅನಿತಾ ನಿರೂಪಿಸಿದರು. ಮಹಿಳಾ ದಸರಾ ಸಂಚಾಲಕರಾದ ಕುಡೆಕಲ್ ಸವಿತಾ ಸಂತೋಷ್ ಅವರು ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post