ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ತ್ರೀಸಬಲೀಕರಣವನ್ನು ಪ್ರತಿಬಿಂಬಿಸುವ ‘ನಾರಿ ಶಕ್ತಿ’ ಸ್ತಬ್ಧಚಿತ್ರವು Nari Shakthi Tableau ಸಿದ್ಧಗೊಂಡಿದೆ.
ನಾಡಿನ ಹೆಮ್ಮೆಯ ಪ್ರತೀಕವಾಗಿರುವ ಸ್ತಬ್ಧಚಿತ್ರವು ಜ.26 ರಂದು ರಾಜಧಾನಿಯ ಕರ್ತವ್ಯ ಪಥದಲ್ಲಿ (ರಾಜ್ಪಥ್) ಸಾಗುವುದರೊಂದಿಗೆ ಕರ್ನಾಟಕ ಹಿರಿಮೆಯ ಕೀರ್ತಿ ಪತಾಕೆ ಹಾರಿಸಲಿದೆ. ಇದರೊಂದಿಗೆ ಸತತವಾಗಿ ಹದಿನಾಲ್ಕು ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ದೇಶದ ಏಕೈಕ ರಾಜ್ಯವೆಂಬ ಶ್ರೇಯವನ್ನು ಕರ್ನಾಟಕ ತನ್ನದಾಗಿಸಿಕೊಳ್ಳಲಿದೆ.

Also read: ಗಮನಿಸಿ! ಜೂನ್ 30ರವರೆಗೂ ಶಿವಮೊಗ್ಗದ ಈ ಮಾರ್ಗದಲ್ಲಿ ಸಂಚಾರ ಬದಲಾವಣೆಯಾಗಿದೆ!
‘ವಾರ್ತಾ ಇಲಾಖೆಯು ದೆಹಲಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಪರವಾಗಿ ಸ್ತಬ್ಧಚಿತ್ರದೊಂದಿಗೆ ಪ್ರತಿ ಬಾರಿಯೂ ಪಾಲ್ಗೊಳ್ಳುತ್ತದೆ. ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರದಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಇಲಾಖೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಅಲ್ಲದೆ, ಇಲಾಖೆಯು ಕಳೆದ 14 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳುತ್ತಿದೆ. ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ, ಐಪಿಎಸ್ ಅವರು ತಮ್ಮ ಹರ್ಷ ಹಂಚಿಕೊಂಡರು.

‘ಆಜಾದಿ ಕ ಅಮೃತ ಮಹೋತ್ಸವʼದ ಅಂಗವಾಗಿ ಸೂಲಗಿತ್ತಿ ನರಸಮ್ಮ, ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಮತ್ತು ಸಾಲುಮರದ ತಿಮ್ಮಕ್ಕ ಅವರುಗಳ ಸಾಧನೆಗಳನ್ನು ‘ನಾರಿ ಶಕ್ತಿ’ (ವುಮನ್ ಪವರ್) ಹೆಸರಿನಲ್ಲಿ ರಾಜ್ಯವು 2023 ರ ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ ಪ್ರಸ್ತುತ ಪಡಿಸಿದೆ. ಇವರುಗಳು ಸಮಾಜಕ್ಕೆ ನೀಡಿದ ನಿಸ್ವಾರ್ಥ ಕೊಡುಗೆಗಾಗಿ ಕೇಂದ್ರ ಸರ್ಕಾರ ‘ಪದ್ಮಶ್ರೀ’ ಪುರಸ್ಕಾರದಿಂದ ಗೌರವಿಸಿದೆ. ಕರ್ನಾಟಕದ ಅತಿ ಹಿಂದುಳಿದ ಹಳ್ಳಿಗಳಲ್ಲಿ, ಸಾಮಾನ್ಯ ಕುಟುಂಬಗಳಲ್ಲಿ ಹುಟ್ಟಿ ಬೆಳೆದರೂ ಇವರುಗಳ ಸಾಧನೆಗೆ ಅವರ ಹುಟ್ಟು, ಜಾತಿ, ಅಂತಸ್ತು ಯಾವುದು ಅಡ್ಡ ಬಂದಿಲ್ಲ. ತಮ್ಮ ಸಾಧನೆಗಳ ಮೂಲಕವೇ ಜಾಗತಿಕವಾಗಿ ಗಮನ ಸೆಳೆದವರು. ಇವರ ಸಾಧನೆಗಾಗಿ ಕರ್ನಾಟಕ ಮತ್ತು ದೇಶವೇ ಹೆಮ್ಮೆಪಡುತ್ತದೆ. ಇದನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸ್ತಬ್ಧಚಿತ್ರವನ್ನು ರೂಪಿಸಿದೆ ಎಂದು ಅವರು ನುಡಿದರು.











Discussion about this post