ನವದೆಹಲಿ: ತಮ್ಮ ಜೀವಿತಾವಧಿಯಲ್ಲಿ ಮೂರು ಬಾರಿ ಮಲೇರಿಯಾಗೆ ತುತ್ತಾಗಿದ್ದ ಮಹಾತ್ಮ ಗಾಂಧೀಜಿ ಅವರಿಗೆ ಎರಡು ಬಾರಿ ಜೀವಕ್ಕೇ ಅಪಾಯವಾಗುವಷ್ಟು ಅಧಿಕ ರಕ್ತದೊತ್ತಡ ಕಾಣಿಸಿಕೊಂಡಿತ್ತು ಎಂಬ ಗೌಪ್ಯ ಮಾಹಿತಿ ಈಗ ಬಹಿರಂಗಗೊಂಡಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ವತಿಯಿಂದ ಪ್ರಕಟ ಮಾಡಿರುವ ಗಾಂಧಿ ಅಂಡ್ ಹೆಲ್ತ್ @150 ಪುಸ್ತಕದಲ್ಲಿ ಈ ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ.
ಮಹಾತ್ಮ ಗಾಂಧಿಯವರು ಸಸ್ಯಾಹಾರಿ ಪಥ್ಯವನ್ನು ದೃಢವಾಗಿ ಅನುಸರಿಸುತ್ತಿದ್ದರು. ಮನಸ್ಸು ಮತ್ತು ಮೂಳೆಗಳಿಗೆ ಆಹಾರ, ಮನಸ್ಸು, ಮೂಳೆಗಳು ಮತ್ತು ಮಾಂಸದಂತೆಯೇ ವ್ಯಾಯಾಮ ಅಗತ್ಯವೆಂದು ಅವರು ನಂಬಿದ್ದರು ಎಂದು ಉಲ್ಲೇಖಿಸಲಾಗಿದೆ.
ಆಹಾರ ಪಥ್ಯ ಹಾಗೂ ವ್ಯಾಯಾಮದಿಂದಲೇ ಆರೋಗ್ಯವನ್ನು ಸ್ಥಿರವಾಗಿಟ್ಟುಕೊಳ್ಳುತ್ತೇನೆ ಎಂದು ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದ್ದ ಗಾಂಧೀಜಿ, ಔಷಧೋಪಚಾರ ಹಾಗೂ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿರಾಕರಿಸುತ್ತಿದ್ದರು. ಆದರೆ, ಇದೇ ಪ್ರಯತ್ನದಿಂದಾಗಿ ಕೆಲವೊಂದು ಬಾರಿ ಜೀವಕ್ಕೆ ಆಪತ್ತು ಎದುರಾಗುವಂತಹ ಸನ್ನಿವೇಶವೂ ಸಹ ಎದುರಾಗಿತ್ತು ಎನ್ನಲಾಗಿದೆ.
ಮಹಾತ್ಮ ಗಾಂಧೀಜಿಯವರ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ರಾಷ್ಟ್ರೀಯ ಗಾಂಧಿ ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದ್ದು, ಇದರ ಮಾಹಿತಿಯಂತೆ ಕೆಲವು ಬಾರಿ ಗಾಂಧೀಜಿ ಸಾವಿನ ಸನಿಹಕ್ಕೆ ತೆರಳಿ ಹಿಂದಿರುಗಿದ್ದರು ಎನ್ನಲಾಗಿದೆ.
ತಮ್ಮ ಜೀವನದಲ್ಲಿ ಕಟ್ಟುನಿಟ್ಟಿನ ಆಹಾರ ಪದ್ದತಿ ಹಾಗೂ ವ್ಯಾಯಾಮ ಅಳವಡಿಸಿಕೊಂಡಿದ್ದರೂ ಸಹ ಮಲಬದ್ದತೆ ಹಾಗೂ ಪಾರ್ಶ್ವಶೂಲೆಯಿಂದ ಬಳಲುತ್ತಿದ್ದರು. 1925, 1936, 1944ರಲ್ಲಿ ಮಲೇರಿಯಾಗೆ ಅವರ ತುತ್ತಾಗಿದ್ದರು. ಅಲ್ಲದೇ 1919ರಲ್ಲಿ ಪೈಲ್ಸ್ ಶಸ್ತ್ರಚಿಕಿತ್ಸೆ ಹಾಗೂ 1924ರಲ್ಲಿ ಅಪೈಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಿದ್ದರು ಎನ್ನಲಾಗಿದೆ.
46.7 ಕೆಜಿ ತೂಕವಿದ್ದ ಗಾಂಧೀಜಿ ಅವರ 70ನೆಯ ವಯಸ್ಸಿನಲ್ಲಿ ಬಾಡಿ ಮಾಸ್ ಇಂಡೆಕ್ಸ್ 17.1 ಇದ್ದು, ನಿಗದಿತ ತೂಕಕ್ಕಿಂತಲೂ ಕಡಿಮೆಯಿತ್ತು ಎಂದು ವರದಿಯಾಗಿದೆ.
ಅಲ್ಲದೇ, 1924-47ರ ಅವಧಿಯಲ್ಲಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಗಾಂಧೀಜಿಯವರಿಗೆ 1937ರ ಅಕ್ಟೋಬರ್ 26ರಂದು 194/130 ಹಾಗೂ 1940ರ ಫೆಬ್ರುವರಿ 19ರಂದು 220/110 ಅಂಶಗಳಷ್ಟು ಅಧಿಕ ರಕ್ತದೊತ್ತಡವಿತ್ತು ಎಂದು ಪುಸ್ತಕದಲ್ಲಿ ಉಲ್ಲೇಖವಾಗಿದೆ ಎಂದು ವರದಿಯಾಗಿದೆ.
Discussion about this post