ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: 18ನೆಯ ಶತಮಾನದವರೆಗೂ ಪಾಶ್ಚಿಮಾತ್ಯರು ಭಾರತದ ಕುರಿತಾಗಿ ಹೊಂದಿದ್ದ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು ಎಂದು ಜೆಪಿಎನ್ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ.ಎಸ್. ದಿಲೀಪ್ ಕುಮಾರ್ ಪಾಂಡೆ ಅಭಿಪ್ರಾಯಪಟ್ಟರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 157ನೆಯ ಜನ್ಮದಿನದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು 21ನೆಯ ಶತಮಾನದ ಯುವಜನತೆಗೆ ಸ್ವಾಮಿ ವಿವೇಕಾನಂದರ ಸಂದೇಶ ಎಂಬ ವಿಷಯದ ಕುರಿತು ಮಾತನಾಡಿದರು.
ಸ್ವಾಮಿ ವಿವೇಕಾನಂದರು ವಿಶ್ವಮಾನವ. ಅವರು ಪ್ರತಿಪಾದಿಸಿದ ವಿಚಾರಗಳು ಲೋಕೋಪಯೋಗಿತ್ವದ ಗುಣ ವಿಶೇಷಗಳಿಗೆ ಹೆಸರಾಗಿವೆ. ಪಾಶ್ಚಿಮಾತ್ಯರು ಭಾರತವನ್ನು 18ನೇ ಶತಮಾನದವರೆಗೂ ನಿಕೃಷ್ಠವಾಗಿ ಕಾಣುತ್ತಿದ್ದರು. ಭಾರತ ಭಿಕ್ಷುಕರ ದೇಶ, ಹಾವಾಡಿಗರ ದೇಶ, ನರಹತ್ಯೆ ಮಾಡುವವರು, ಮೂಢ ನಂಬಿಕೆಗಳನ್ನು ಪಾಲಿಸುವವರು ಎಂದೆಲ್ಲಾ ತಪ್ಪು ಕಲ್ಪನೆಗಳನ್ನು ಇಟ್ಟುಕೊಂಡಿದ್ದರು. ಆದರೆ, 1893ರಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೋನಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನಕ್ಕೆ ತೆರಳಿ ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸುವ ಮೂಲಕ ಭಾರತದಂತಹ ಪ್ರಭುದ್ದ ರಾಷ್ಟ್ರದ ಬಗ್ಗೆ ಅವರಿಗಿದ್ದ ಕಲ್ಪನೆಯೇ ಬದಲಾಯಿತು ಎಂದರು.
ಜ್ಞಾನಿಯಾಗು ಅಜ್ಞಾನಿಯಾಗಬೇಡ ಎಂಬ ವಿವೇಕಾನಂದರ ಸಂದೇಶವನ್ನು ಯುವಜನತೆ ಪಾಲಿಸಬೇಕು. ತಮ್ಮ ಜೀವನದ ಉದ್ದಕ್ಕೂ ವಿವೇಕಾನಂದರು ಭಾರತದ ಸಂಸ್ಕೃತಿ-ಪರಂಪರೆಯ ಬಗ್ಗೆ ವಿಶ್ವಕ್ಕೆ ಸಾರುತ್ತಾ ಸಾಗಿದರು. ಸ್ವಾಮಿ ವಿವೇಕಾನಂದರು ಕೇವಲ ತಮ್ಮ ಬಹುಮುಖ ವ್ಯಕ್ತಿತ್ವಕ್ಕಷ್ಟೇ ಖ್ಯಾತರಾಗದೇ ಬಹುದೊಡ್ಡ ದೂರದರ್ಶಿತ್ವಕ್ಕೆ ಹೆಸರಾಗಿದ್ದರು. ಅವರ ಅದ್ಭುತ ಸಮಾಜ ಸುಧಾರಣಾ ತತ್ವ, ರಾಷ್ಟ್ರ ತತ್ವ ಮತ್ತು ನಿರ್ವಹಣಾ ಕೌಶಲ್ಯದ ವಿಧಾನಗಳು ಹೆಸರುವಾಸಿ ಎಂದರು.
ಸ್ವಾಮಿ ವಿವೇಕಾನಂದರ ತಂದೆ ಶ್ರೀಮಂತ ವಕೀಲರಾಗಿದ್ದರು. ಶ್ರೀಮಂತಿಕೆಯಲ್ಲಿ ಬೆಳೆದಿದ್ದರೂ ವಿವೇಕಾನಂದರಿಗೆ ಅವರ ತಾಯಿ ಸಂಸ್ಕಾರದಲ್ಲಿ ಯಾವುದೇ ಕೊರತೆ ಉಂಟು ಮಾಡಿರಲಿಲ್ಲ. ಬಾಲ್ಯದಿಂದಲೇ ತಾಯಿಯ ಮಾತುಗಳಿಂದ ಪ್ರೇರಿತರಾದ ವಿವೇಕಾನಂದರು ಆಧ್ಯಾತ್ಮದೆಡೆಗೆ ತಮ್ಮ ಒಲವನ್ನು ತೋರಿಸುತ್ತಿದ್ದರು. ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಮೊದಲ ಭೇಟಿಯಲ್ಲೇ ಪ್ರೀತಿಪಾತ್ರರಾದರು. ಆಧ್ಯಾತ್ಮದ ಆತ್ಮ ಭಾರತ ಎನ್ನುವುದನ್ನು ವಿಶ್ವ ವ್ಯಾಪಿ ಪಸರಿಸಿದರು ಎಂದು ಸ್ಮರಿಸಿದರು.
ಭಾರತವು ವಿವೇಕಾನಂದರನ್ನು ಅಮೆರಿಕಾಕ್ಕೆ ಪರಿಚಯಿಸಿತು. ಆದರೆ ಚಿಕಾಗೋ ಸರ್ವಧರ್ಮ ಸಮ್ಮೇಳನದ ನಂತರ ಸ್ವಾಮಿ ವಿವೇಕಾನಂದರನ್ನು ಅಮೆರಿಕ ಜಗತ್ತಿಗೇ ಪರಿಚಯಿಸಿತು. ಸ್ವಾಮಿ ವಿವೇಕಾನಂದರ ಮಾತುಗಳನ್ನು ಕೇಳಿ ಹಿಂದೂ ಧರ್ಮದೆಡೆ ಹಲವರು ಪ್ರೇರಿತರಾದರು. ಅವರಲ್ಲಿ ಸೋದರಿ ನಿವೇದಿತಾ, ಅನಿಬೆಸೆಂಟ್ ಅವರಂತಹ ಅನೇಕ ಸಮಾಜ ಸುಧಾರಕರಿದ್ದಾರೆ. ಇಂದಿನ ಯುವಜನತೆ ಸ್ವಾಮಿ ವಿವೇಕಾನಂದರ ಜೀವನ ಶೈಲಿಯನ್ನು ಮೈಗೂಡಿಸಿಕೊಳ್ಳಬೇಕು. ಅವರ ಜೀವನ ಚರಿತ್ರೆಯನ್ನು ಒಮ್ಮೆಯಾದರೂ ಓದಬೇಕು. ಸ್ವಾಮಿ ವಿವೇಕಾನಂದರು ಈ ಜಗತ್ತಿನಲ್ಲಿ ಬದುಕಿದ್ದು ಕೇವಲ 39 ವರ್ಷ. ಆದರೆ ಮಾನವ ಭೂಮಿಯ ಮೇಲೆ ಇರುವರೆಗೂ ಅವರ ಸಂದೇಶಗಳು ಜಗತ್ತಿಗೆ ಶಾಶ್ವತ ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದ ಇಎನ್’ಟಿ ವಿಭಾಗದ ಮುಖ್ಯಸ್ಥ ಡಾ. ಎಸ್. ಶ್ರೀಧರ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ. ಎಸ್. ನಾಗೇಂದ್ರ, ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಲತಾ ನಾಗೇಂದ್ರ, ಡಾ. ವಿನಯಾ ಶ್ರೀನಿವಾಸ್, ವಿಶ್ವನಾಥ್, ಡಾ. ಪುಷ್ಪಲತಾ ವಿಶ್ವನಾಥ್, ಪ್ರಾಂಶುಪಾಲ ಡಾ. ಎಸ್.ಎಂ. ಕಟ್ಟಿ, ಡಾ. ಬಿ.ಎಸ್. ಸುರೇಶ್, ಡಾ. ಆರ್.ಪಿ. ಪೈ ಇನ್ನಿತರರು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post