ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಸವಣ್ಣನವರನ್ನು #Basavanna ಸಾಂಸ್ಕೃತಿಕ ನಾಯಕ ಅಥವಾ ರಾಯಭಾರಿಯನ್ನಾಗಿಸಬೇಕು ಎನ್ನುವ ಒಕ್ಕೊರಲ ಒತ್ತಾಯವನ್ನು ಗೌರವಿಸುತ್ತೇನೆ. ವೈಯುಕ್ತಿಕವಾಗಿ ನನಗೆ ಈ ಘೋಷಣೆ ಬಗ್ಗೆ ತಕರಾರಿಲ್ಲ. ಆದರೆ, ಇದು ಕ್ಯಾಬಿನೆಟ್’ನಲ್ಲಿ ಇಟ್ಟು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಚನ ಚಳವಳಿಯ ಅಣ್ಣ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತೆ ಒತ್ತಾಯಿಸಿ ತರಳಬಾಳು #Taralabalu ಜಗದ್ಗುರುಗಳು ಮತ್ತು ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ನೇತೃತ್ವದ ಲಿಂಗಾಯತ #Lingayata ಸ್ವಾಮೀಜಿಗಳು, ಪ್ರಗತಿಪರ ಸ್ವಾಮೀಜಿಗಳು, ಪ್ರಗತಿಪರ ಚಿಂತಕರು ಮತ್ತು ದಲಿತ, ರೈತ, ಕಾರ್ಮಿಕ, ಮಹಿಳಾ ಚಳವಳಿಗಳ ಮುಖಂಡರುಗಳ ನಿಯೋಗದ ಜತೆ ಚರ್ಚಿಸಿದ ಬಳಿಕ ಮಾತನಾಡಿದರು.
ಬಸವಾದಿ ಶರಣರ ಆಶಯಗಳೆಲ್ಲಾ ನಮ್ಮ ಸಂವಿಧಾನದಲ್ಲಿವೆ. ವಚನ ಮತ್ತು ಸಂವಿಧಾನದ ಧ್ಯೇಯೋದ್ದೇಶಗಳು ಒಂದೇ ಆಗಿವೆ. ಆದ್ದರಿಂದ ಈ ಮಹತ್ವದ ಸಂಗತಿಯನ್ನು ಕ್ಯಾಬಿನೆಟ್ ಮುಂದೆ ಇಟ್ಟು ತೀರ್ಮಾನಿಸಲಾಗುವುದು ಎಂದರು.
ನಿಯೋಗದಲ್ಲಿ ಶ್ರೀಶೈಲ ಜಗದ್ಗುರುಗಳು, ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಡಾ.ರಾಜಶೇಖರ ಶಿವಾಚಾರ್ಯರು, ಡಾ.ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ, ಶ್ರೀ ವೀರಭದ್ರ ಶಿವಾ ಕಡಕಂಚಿ, ಅಕ್ಕ ಅನ್ನಪೂರ್ಣತಾಯಿ, ಜ್ಞಾನ ಪ್ರಕಾಶ ಸ್ವಾಮೀಜಿ, ಡಾ.ಗಂಗಾಬಿಕೆ ಅಕ್ಕ, ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿ 48 ಮಂದಿ ಸ್ವಾಮೀಜಿಗಳು, ಶರಣರು ನಿಯೋಗದಲ್ಲಿದ್ದ ಪ್ರಮುಖರು.
ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ ಮತ್ತು ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್ ಅವರು ನಿಯೋಗದ ಜತೆಗಿದ್ದರು.
ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ವಲಯದಿಂದ ಎಸ್.ಜಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಎಚ್.ಎಲ್. ಪುಷ್ಪ, ಮಾವಳ್ಳಿ ಶಂಕರ್, ವಸುಂಧರ ಭೂಪತಿ, ಕೆ.ಷರೀಫಾ, ಎಲ್.ಮುಕುಂದರಾಜು, ಜಾಗೃತ ಕರ್ನಾಟಕದ ಬಿ.ಸಿ. ಬಸವರಾಜು, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಹೋರಾಟಗಾರ್ತಿ ಸೌಮ್ಯ, ಅಖಿಲ, ಸೇರಿ ಹಲವು ಪ್ರಮುಖರು ನಿಯೋಗದ ಜತೆಗಿದ್ದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post