ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡುವ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸುಳಿವು ನೀಡಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾತನಾಡಿರುವ ಅವರು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ, ಜಾರಿಗೊಳಿಸಲಾಗುತ್ತಿರುವ ಲಾಕ್ ಡೌನ್ ಅನ್ನು ಶಿವಮೊಗ್ಗದಲ್ಲಿಯೂ ವಿಸ್ತರಿಸಬೇಕೆಂಬ ಮನವಿ ಸಾರ್ವಜನಿಕರಿಂದ ಬಂದಿದೆ. ಈಗಾಗಲೇ, ನಗರದಲ್ಲಿನ ವರ್ತಕರ ಸಂಘದ ವತಿಯಿಂದ, ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಸ್ವಯಂ ನಿರ್ಬಂಧ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ.
ಸೋಂಕು ನಿಯಂತ್ರಣಕ್ಕೆ ಬರುವವರೆಗೂ, ನಾಗರೀಕರ ಆರೋಗ್ಯದ ದೃಷ್ಟಿಯಿಂದ, ಲಾಕ್ ಡೌನ್ ಅನಿವಾರ್ಯವಾಗಿದೆ. ಪ್ರಸ್ತುನ ನಗರದಾದ್ಯಂತ, ಸಮುದಾಯದಲ್ಲಿ ಸೋಂಕು ವ್ಯಾಪಿಸುತ್ತಿದ್ದು, ಈ ಎಲ್ಲಾ ಹಿನ್ನೆಲೆಯಲ್ಲಿ, ನಾಳೆ ಮಂಗಳವಾರ ಜಿಲ್ಲಾಡಳಿತದ ಜೊತೆ ಚರ್ಚಿಸಿ, ಲಾಕ್ ಡೌನ್ ಬೇಕೆ ಬೇಡವೇ ಎಂಬುದರ ಬಗ್ಗೆ ತೀರ್ಮಾನಿಸುವುದಾಗಿ ಅವರು ಹೇಳಿದ್ದಾರೆ.
ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಲಾಗಿದ್ದು, ಈಗಾಗಲೇ, ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡಲಾಗಿದೆ. ಅದೇ ರೀತಿ, ಕರ್ನಾಟಕದಲ್ಲಿ ಸಹ ಕೊರೋನಾ ಸೋಂಕು ಹೆಚ್ಚುತ್ತಿದೆ. ಶಿವಮೊಗ್ಗದಲ್ಲೂ ಕೂಡ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಹೀಗಾಗಿ, ಶಿವಮೊಗ್ಗದಲ್ಲಿ ವರ್ತಕರೇ ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದಿದ್ದಾರೆ.
ಈ ಬಗ್ಗೆ ಕೂಲಂಕುಷವಾಗಿ, ಶಿವಮೊಗ್ಗ ಜಿಲ್ಲೆ ಲಾಕ್ ಡೌನ್ ಕುರಿತು ನಾಳೆ ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆಸುತ್ತೇನೆ. ಚರ್ಚೆಯ ಬಳಿಕ ಲಾಕ್ ಡೌನ್ ಮಾಡಬೇಕೇ ಅಥವಾ ಬೇಡವೇ ಎಂಬುದರ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
Get In Touch With Us info@kalpa.news Whatsapp: 9481252093







Discussion about this post