ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ | ವಿಶೇಷ ಲೇಖನ |
ವೀಣೆಯು ಅಧ್ಯಾತ್ಮಿಕತೆಯ ಅನುಭವವನ್ನು ಸ್ಫುರಣಗೊಳಿಸುವ ಪ್ರಮುಖ ಭಾರತೀಯ ವಾದ್ಯವೂ ಹೌದು. ನೈಜತೆ, ಸಹಜತೆ, ಸಂಪ್ರದಾಯದ ನಿರಂತರತೆಯಲ್ಲಿ ಕಲಾತ್ಮಕ ಗಟ್ಟಿತನ ಉಳಿಯಲು, ಶಾಸೀಯ ಸಂಗೀತದ ಉದ್ದೇಶ ಸಖ್ಯವಾಗಿರಲು ಪೂರಕವಾದ ವಾದ್ಯವೂ ಹೌದು. ವೀಣೆಯನ್ನು ಕುರಿತು, ಸಪ್ತಾಹ ಕಾರ್ಯಕ್ರಮವನ್ನು ಕಳೆದ 17 ವರ್ಷಗಳಿಂದ ಅರ್ಥಪೂರ್ಣವಾಗಿ ನಡೆದಿರುವುದು, ನಡೆಯುತ್ತಿರುವುದಕ್ಕೆ ಶಾಸ್ತ್ರೀಯ ಪರಂಪರೆಯಲ್ಲಿ ಮಲೆನಾಡಿನ ತವರು ಶಿವಮೊಗ್ಗ ಒಂದು ದಾಖಲೆಯನ್ನೇ ನಿರ್ಮಿಸಿದೆ. 4 ದಶಕಗಳಿಂದ ಕರ್ನಾಟಕ-ಹಿಂದುಸ್ಥಾನಿ ಸೇರಿ ಶಾಸ್ತ್ರೀಯ ಸಂಗೀತದ ವಿವಿಧ ಪ್ರಾಕಾರಗಳಿಗೆ ಆಶ್ರಯ-ಅಪೂರ್ವ ವೇದಿಕೆ ನೀಡಿದ ಅಗ್ರಗಣ್ಯ ಸಂಸ್ಥೆ, ಶ್ರೋತೃಪರಂಪರೆ ಪಾಲನೆಗೆ ಮಹೋನ್ನತ ಕೊಡುಗೆ ನೀಡಿದ ಶ್ರೀ ಗುರುಗುಹ ವಾಗ್ಗೇಯ ಪ್ರತಿಷ್ಠಾನ ಮತ್ತು ಗುರುಗುಹ ಸಂಗೀತ ಮಹಾವಿದ್ಯಾಲಯ ಬಹು ಅಪರೂಪದ ‘ಮಾರ್ಗಶಿರ ವೀಣಾ ರಾಷ್ಟ್ರೀಯ ಮಹೋತ್ಸವ’ವನ್ನು ಪ್ರತಿ ವರ್ಷ ಆಯೋಜಿಸುತ್ತದೆ.
ಇದೀಗ ಶಿವಮೊಗ್ಗೆಯ ರಾಷ್ಟ್ರೀಯ ವೀಣಾ ಉತ್ಸವಕ್ಕೆ 18ರ ಹರೆಯ. ಸಾಂಸ್ಕೃತಿಕ, ಅಧ್ಯಾತ್ಮಿಕ ಮತ್ತು ಕಲಾತ್ಮಕವಾಗಿಯೂ ತನ್ನದೇ ಆದ ಕೊಡುಗೆಯನ್ನು ಭಾರತೀಯ ಶುದ್ಧ ಶಾಸೀಯ ಸಂಗೀತಕ್ಕೆ ಕೊಡುಗೆಯಾಗಿ ನೀಡಿದ ವೀಣೆ- ಮತ್ತು ವೀಣಾನಾದ ಸಪ್ತಾಹ ಈ ಬಾರಿ ಶಿವಮೊಗ್ಗದ ರವೀಂದ್ರನಗರದ ಗಣಪತಿ ದೇವಾಲಯದ ಆವರಣದಲ್ಲಿ ಡಿ.14-20 ರವರೆಗೆ ವಿಜೃಂಭಿಸಲಿದೆ.
ಸಾಹಿತಿ ವಿಜಯಾ ಶ್ರೀಧರ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಖ್ಯಾತ ವೈದ್ಯ ಗುರುದತ್, ಪ್ರಖ್ಯಾತ ವಿದುಷಿ ರೇವತಿ ಕಾಮತ್, ಉತ್ಸವದ ಪ್ರಮುಖ ರೂವಾರಿ ವಿದ್ವಾನ್ ಎಚ್.ಎಸ್. ನಾಗರಾಜ್ ಉಪಸ್ಥಿತರಿರಲಿದ್ದಾರೆ. 20ರಂದು ಸಂಜೆ 6ಕ್ಕೆ ಭಾರತೀಯ ವಿದ್ಯಾಭವನದ ಉಪಾಧ್ಯಕ್ಷ ದಿವಾಕರ ರಾವ್ ಸಮಾರೋಪ ಭಾಷಣ ಮಾಡಲಿದ್ದಾರೆ.
ಭರತವರ್ಷದ ಸಂಸ್ಕೃತಿಯ ಪ್ರತೀಕ
ಭಾರತೀಯ ಇತಿಹಾಸ, ಸಂಸ್ಕೃತಿ, ಸಂಗೀತ ಮತ್ತು ಸಂಪತ್ತಿನಲ್ಲಿ ವೀಣೆಯದು ಬಹಳ ಭದ್ರ ಹೆಜ್ಜೆ. ವೀಣಾವಾದ್ಯ ಭರತವರ್ಷದ ಸಂಸ್ಕೃತಿಯ ಚಿಹ್ನೆ ಕೂಡ. ವೀಣೆ ವೇದಕಾಲದಿಂದಲೂ ಕಂಡು, ಬೆಳೆದು ಬಂದಿರುವ ತಂತಿ ವಾದ್ಯ. ಬಹುತೇಕ ಪ್ರಕೃತಿದತ್ತ ಪರಿಕರದಿಂದಲೇ ರೂಪುಗೊಂಡು, ಮಾನವ ದೇಹಾಕೃತಿಗೆ ಅತಿ ಸಮೀಪದ ಆಕೃತಿಯನ್ನೂ ಪಡೆದ ವಾದ್ಯವಾಗಿರುವುದರಿಂದಲೇ ಇದರೊಂದಿಗಿನ ಅವಿನಾಭಾವ ಸಂಬಂಧ, ಅನುಸಂಧಾನ, ಅನನ್ಯನಂಟು ಅದ್ವಿತೀಯ. ವಿದ್ಯಾ ದೇವತೆ ಸರಸ್ವತಿ ವೀಣಾಪಾಣಿಯಾಗಿರುವುದು ಈ ಎಲ್ಲ ಸಂಗತಿಗಳಿಗೆ ದೈವಿಕ ಭಾವದೀಪಿಕೆಯಾಗಿದೆ.
ಅಧ್ಯಾತ್ಮಿಕತೆ ಸ್ಫುರಣ
ಸುಂದರ ಸಾಹಿತ್ಯ, ಕಲೆಯ ಲಾಲಿತ್ಯ ಪ್ರಕಟಗೊಳಿಸುವ, ಸುದೀರ್ಘ ಅಧ್ಯಾತ್ಮಿಕತೆಯ ಅನುಭವವನ್ನು ಸ್ಫುರಣಗೊಳಿಸುವ ಪ್ರಮುಖ ಭಾರತೀಯ ವಾದ್ಯವಾದ ವೀಣೆ ಸನಾತನ ಪರಂಪರೆಯಲ್ಲಿ ಹಾಸುಹೊಕ್ಕಾದ ಯಾಗ, ಹೋಮ ಹವನ, ಹಬ್ಬ- ಹರಿದಿನ, ಅರ್ಚನೆ, ಆರಾಧನೆ- ಹೀಗೆ ಎಲ್ಲ ವಿಧದಲ್ಲೂ ಅನಿವಾರ‌್ಯವಾಗಿದ್ದ ಕಾಲವೊಂದಿತ್ತು. ಗರ್ಭಿಣಿಯರಿಗೆ ನಿರತಂತರವಾಗಿ ವೀಣಾವಾದನ ಕೇಳಿಸುವ ಪರಿಪಾಠವೂ ಭಾರತೀಯ ಸಂಪ್ರದಾಯದಲ್ಲಿತ್ತು. ಆಧುನಿಕ ಮತ್ತು ಅವಸರದ ಬದುಕಿನ ಕಾಲ ಚಕ್ರಕ್ಕೆ ಸಿಲುಕಿ ಈ ಪರಂಪರೆ ಮರೆತುಹೋಗುವ ಮುನ್ನ ಮಾರ್ಗಶಿರ ಮಾಸದ ಮಾಗಿ ಚಳಿಯ ನಡುವೆ ಮಾಸಸೋಲ್ಲಾಸ ನೀಡುವ ಮಹೋತ್ಸವ ಪ್ರತಿ ವರ್ಷ ಸಂಪನ್ನಗೊಳ್ಳುತ್ತದೆ. ಮಲೆನಾಡಿನ ತವರು ಇದಕ್ಕೆ ಮುಖ್ಯ ಭೂಮಿಕೆಯಾಗಿ ಸಪ್ತಾಹದ ರೂಪದಲ್ಲಿ ಸರ್ವಜನರಿಗೂ ಸದಭಿರುಚಿಯ ನಾದಲಹರಿಯ ದರ್ಶನ ಮಾಡಿಸಲಿದೆ.
ಸುಲಭ ಮಾರ್ಗ
ಸಾವಿರಾರು ವರ್ಷಗಳಿಂದ ಚತುರ್ವಿಧ ಪುರುಷಾರ್ಥಗಳಿಗೆ ವೀಣೆ ಸುಲಭ ಮಾರ್ಗಿಯಾಗಿತ್ತು ಎಂಬ ಅರಿವನ್ನು ಹೊಸ ಪೀಳಿಗೆಗೆ ವಿಸ್ತರಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತ ಪಾತ್ರ ವಹಿಸಲಿರುವ ಇದುವೇ ‘ಮಾರ್ಗಶಿರ ವೀಣಾ ರಾಷ್ಟ್ರೀಯ ಮಹೋತ್ಸವ’. ಭಾರತೀಯ ಸಂಗೀತದ ನೈಜತೆ, ಸಹಜತೆ, ಸಂಪ್ರದಾಯದ ನಿರಂತರತೆಯಲ್ಲಿ ಗಟ್ಟಿತನ ಉಳಿಯಲು, ಸಮಾಧಾನದ ಸಂಗೀತಕ್ಕೆ ಮತ್ತು ಸಂಗೀತದ ಉದ್ದೇಶ ಸಖ್ಯವಾಗಿರಲು ವೀಣಾವಾದನ ಕೇಳುವಿಕೆ ಅತೀ ಅವಶ್ಯ.
ರಂಜನೆಯೇ ಮುಖ್ಯವಲ್ಲ
ಇತ್ತೀಚಿನ ದಿನಗಳಲ್ಲಿ ವಿಶ್ವದ ಎಲ್ಲ ರೀತಿಯ ಸಂಗೀತ ಕೇಳ್ಮೆ ಸುಲಭವಾಗಿರುವುದರಿಂದ ಆನಂದ, ತನ್ಮಯತೆಗಿಂತ ಕೇವಲ ರಂಜನೆಯೇ ಮುಖ್ಯವಾಗುತ್ತಿರುವ ಕಾಲದಲ್ಲಿ ನಮ್ಮತನ ಕಾಪಾಡಿಕೊಳ್ಳಲು ಪರಂಪರಾಗತವಾಗಿ ಹಿರಿಯರು ನೀಡಿದ ಮೂಲ್ಯ ಸಂಗೀತ ಪರಂಪರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವೀಣಾವಾದನ ಉತ್ಸವಗಳು ಬಹಳ ಮಹತ್ವದ್ದೆನಿಸುತ್ತವೆ.
ಪ್ರಧಾನ ವಾದ್ಯ
ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನಕ್ಕೆ ಸಿಕ್ಕಷ್ಟು ಸಮೃದ್ಧ ವೇದಿಕೆಗಳು ವೀಣಾವಾದನಕ್ಕೆ ಅಷ್ಟಾಗಿ ದೊರಕುತ್ತಿಲ್ಲ. ಪ್ರಮುಖ ಕಚೇರಿಗಳಲ್ಲಿ ಪಕ್ಕವಾದ್ಯವಾಗಿ ಮಾತ್ರ ಬಳಕೆಯಾಗುತ್ತಿದೆ. ಇದಕ್ಕಾಗಿಯೇ ಉತ್ಸವಗಳನ್ನು ಆಯೋಜಿಸುವುದು ವಿರಳವಾಗಿ ವಾದ್ಯದಲ್ಲಿ ಪರಿಣತರ ಸಂಖ್ಯೆ ಕೂಡ ಮುಂದಿನ ದಿನಮಾನಗಳಲ್ಲಿ ಕಡಿಮೆಯಾಗುವ ಆತಂಕವೂ ಇದೆ. ಈ ಎಲ್ಲ ಒತ್ತಟ್ಟಿನ ಚಿಂತನೆಯಿಂದ, ಹಿಂದಿನ ಆದ್ಯತೆ- ಮಾನ್ಯಗೆ ಪಡೆಯುವ ದೃಷ್ಟಿಯಿಂದ ಪ್ರಸ್ತುತ ೧೮ನೆಯ ವರ್ಷದ ವೀಣಾ ಮಹೋತ್ಸವ ರಾಷ್ಟ್ರೀಯ ಸಪ್ತಾಹ ವೀಣಾ ವಿದ್ವಾಂಸರ-ಕಲಾ ರಸಿಕರ ಮತ್ತು ಕಲಿಕಾರ್ಥಿಗಳ ನಡುವೆ ಹೊಸ ಸೇತುವೆಯೊಂದನ್ನು ನಿರ್ಮಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.
ವಿದ್ವನ್ಮಣಿಗಳ ಪಾಂಡಿತ್ಯ ಅನಾವರಣ
ಅಂತಾರಾಷ್ಟ್ರೀಯ ಖ್ಯಾತಿಯ ವಿನ್ಯಾಸಗಾರ್ತಿ ಮತ್ತು ವೀಣಾ ವಿದುಷಿ ರೇವತಿ ಕಾಮತ್ ಕಛೇರಿ ವೀಣಾ ಉತ್ಸವಕ್ಕೆ ಡಿ. 14ರಂದು ಮುನ್ನುಡಿ ಬರೆಯಲಿದೆ. ನಂತರ ಪ್ರತಿದಿನ ಸಂಜೆ 6ಕ್ಕೆ ವಿದ್ವನ್ಮಣಿಗಳಾದ ರಕ್ಷಿತಾ ರಮೇಶ್, ನಿಟ್ಟೂರು ಶ್ರೀಕಾಂತ್, ಪ್ರಶಾಂತ್ ಎಸ್. ಅಯ್ಯಂಗಾರ್, ಜೋತ್ಸ್ನಾ ಹೆಬ್ಬಾರ್, ವಿಜಯಲಕ್ಷ್ಮೀ ರಾಘು, ಮೈಸೂರು ಆರ್.ಕೆ. ಪದ್ಮನಾಭ ಅವರು ಈ ಬಾರಿಯ ಉತ್ಸವದಲ್ಲಿ ತಮ್ಮ ಅಪೂರ್ವ ವಿದ್ವತ್ತನ್ನು ಬಿಂಬಿಸಲಿದ್ದಾರೆ.
ವೀಣಾ ನಾದ ಧ್ಯಾನ ಯಜ್ಞ
ರಾಷ್ಟೀಯ ವೀಣಾ ಉತ್ಸವದ ವೇದಿಕೆಗಳಲ್ಲಿ ಕಲಾಪ್ರೌಢಿಮೆ ಮೆರೆದ ಕಲಾವಿದರ ಆಪ್ತ ನುಡಿಸಾಣಿಕೆಯನ್ನೂ ಶ್ರೋತೃ ಆಸ್ವಾದಿಸಬೇಕು ಎಂಬುದು ಉತ್ಸವದ ಮುಖ್ಯ ರುವಾರಿ ವಿದ್ವಾನ್ ಎಚ್.ಎಸ್. ನಾಗರಾಜರ ಆಶಯ. ಅದಕ್ಕೆಂದೇ ಉತ್ಸವದಲ್ಲಿ ಈ ಬಾರಿ ಡಿ. 19ರ ಮುಂಜಾನೆ 6ರಿಂದ 8ರ ವರೆಗೆ ‘ವೀಣಾ ನಾದ ಧ್ಯಾನ ಯಜ್ಞ ’ ಸಂಪನ್ನಗೊಳ್ಳಲಿದೆ. ಯಾವುದೇ ಕೃತಕ ಸಾಧನಗಳ ಗೊಡವೆ ಇಲ್ಲದೆ (ಮೈಕ್‌ಲೆಸ್) ಆಸಕ್ತ ಶ್ರೋತೃ ಸಮುದಾಯಕ್ಕೆ ವಿಶೇಷ ಪೂಜಾ ಕೈಂಕರ‌್ಯದೊಂದಿಗೆ ಆಪ್ತವಾಗಿ ವೀಣಾವಾದನ ಕೇಳಿಸುವ ಯಜ್ಞವೂ ಆಯೋಜನೆಗೊಂಡಿದೆ. ಬ್ರಾಹ್ಮೀ ಮುಹೂರ್ತದಲ್ಲಿ ವೀಣೆ ಮತ್ತು ಸರಸ್ವತಿ ಪೂಜೆಯೊಂದಿಗೆ ಆರಂಭವಾಗುವ ಯಜ್ಞ (ಮೈಕು, ಚಪ್ಪಾಳೆ, ಪಕ್ಕವಾದ್ಯ ರಹಿತ) ಆಸಕ್ತ ಶ್ರೋತೃಗಳಿಗೆ ಸಂಗೀತದ ಸಖ್ಯವನ್ನು ನೀಡುವುದಲ್ಲದೇ ಮನದಲ್ಲಿ ಶುದ್ಧ ಸಂಗೀತದ ಪ್ರತಿಷ್ಠಾಪನೆಗೆ ಅನುವು ಮಾಡಿಕೊಡಲಿದೆ. ಆಳವಾದ ಧ್ಯಾನದಿಂದ ಪಡೆಯುವ ಸ್ಥಿತಿಯೇ ವೀಣಾನಾದ ಆಲಿಸುವುದರಿಂದಲೂ ಲಭ್ಯವಾಗಲಿದೆ.
ಭಾರತೀಯ ಸಂಗೀತದ ರಾಗಗಳು ನಿರ್ಣಯಗೊಂಡಿರುವುದೇ ವೀಣೆಯಿಂದ. 72 ಮೇಳಕರ್ತ ರಾಗಗಳು ವೀಣೆಯಲ್ಲಿರುವ 72 ಮೇಳಗಳಿಂದ ಆವಿರ್ಭವಿಸಿವೆ. ವೀಣಾನಾದದಿಂದ ನಮ್ಮ ದೇಹದ 72 ಸಾವಿರ ನಾಡಿಗಳೂ ಚೇತನಗೊಳ್ಳಲಿವೆ. ವೀಣೆಯ 24 ಮೆಟ್ಟಿಲುಗಳು ಮಾನವನ ಬೆನ್ನುಹುರಿಯ 24 ಮಣಿಗಳ ಪ್ರತೀಕವಾಗಿದೆ- ಹೀಗೆ ವೀಣೆ ಕಲೆ, ರಾಗಾರಾಧನೆಗೆ ಮಾತ್ರವಲ್ಲದೇ ಮಾನವನ ಆಕಾರದ ಪ್ರತೀಕವಾಗಿದ್ದು ದೈಹಿಕ-ಮಾನಸಿಕ ಆರೋಗ್ಯವೃದ್ಧಿಯೊಂದಿಗೂ ಅವಿನಾ ಸಂಬಂಧ ಹೊಂದಿರುವ ವಿಶ್ವದ ಏಕೈಕ ತಂತಿ ವಾದ್ಯವಾಗಿದೆ.
ಅಬ್ಬರ-ಆಡಂಬರ ರಹಿತ
ಬಹುತೇಕ ನಾವು ಇಂದು ಕೇಳುತ್ತಿರುವ ಸಂಗೀತ, ಅಬ್ಬರ, ಚಮತ್ಕಾರ, ಓಟ, ಗಲಾಟಾ, ಚಪ್ಪಾಳೆಯ ಮುಖವಾಡದ್ದು. ಇದೇ ನಿಜವಾದ ಶಾಸ್ತ್ರೀಯ ಸಂಗೀತ ಎಂದು ನಂಬುವಂತಾಗಿದೆ. ಆದರೆ ಅಬ್ಬರ ರಹಿತವಾದ ರಂಜನೆ ಹಾಗೂ ಆನಂದದ ಅನುಭವ ನೀಡುವ ಸಂಗೀತ ಆಲಿಸುವ ಶೈಲಿಗೆ ಪುನ: ಶೋತೃಗಳನ್ನು ಅಣಿಗೊಳಿಸುವ ಕೆಲಸ ವೀಣಾ ಉತ್ಸವದ ಮೂಲಕ ಸಾಕಾರಗೊಳ್ಳುತ್ತಿದೆ.
ವಿವರಗಳಿಗೆ ಸಂಪರ್ಕ: ವಿದ್ವಾನ್ ಎಚ್‌ಎಸ್. ನಾಗರಾಜ್: 9448241149
ಲೇಖನ: ವಾರುಣಿ ರಾಮ್, ಶಿವಮೊಗ್ಗ
Discussion about this post