ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡು ಹಾಗೂ ಕರಾವಳಿಯಲ್ಲಿ ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ #Agumbeghat ಸುರಂಗ ಮಾರ್ಗ(ಟನಲ್) ನಿರ್ಮಾಣಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅವರು ಮನವಿ ಸಲ್ಲಿಸಿದ್ದು, ಶೀಘ್ರ ಪರಿಶೀಲಿಸಿ, ಅನುಮೋದನೆ ನೀಡಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ #NitinGadkari ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಕಾರ ಮತ್ತು ಲೋಕೋಪಯೋಗಿ ಇಲಾಖೆಗಳ ಸಹಯೋಗದಲ್ಲಿ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಆರಗ ಜ್ಞಾನೇಂದ್ರ #AragaJnanendra ಅವರು ಆಗುಂಬೆ ಘಾಟಿಯಲ್ಲಿ ಆಗುತ್ತಿರುವ ಸಮಸ್ಯೆ ಹಾಗೂ ಅಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲು ಅವಕಾಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ. ನಂತರ ಸುರಂಗ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿವಮೊಗ್ಗದಲ್ಲಿ #Shivamogga ಹೊಸ ರಸ್ತೆಗಳಿಂದಾಗಿ ವ್ಯಾಪಾರ, ಕೈಗಾರಿಕೆ, ಶಿಕ್ಷಣ ಸೇರಿದಂತೆ ಸಮಗ್ರ ಕಲ್ಯಾಣ ಆಗಲಿದೆ. ಕರ್ನಾಟಕ ರಾಜ್ಯ ಪ್ರಗತಿಶೀಲ, ಸಮೃದ್ದ ರಾಜ್ಯವಾಗಿದ್ದು, ಸ್ವಾಭಾವಿಕ ಸಂಪತ್ತಿನಿಂದ ಹಿಡಿದು ಐಟಿ ವಲಯದವರೆಗೆ ವಿಕಾಸ ಹೊಂದುತ್ತಿದೆ. ಈ ವಿಕಾಸದ ವೇಗ ಹೆಚ್ಚಿದಷ್ಟು ದೇಶದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ. ನಮ್ಮ ರಾಷ್ಟ್ರವು ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಬೇಕೆಂಬುದು ನಮ್ಮ ಪ್ರಧಾನಿಯವರ ಕನಸಾಗಿದ್ದು ಆತ್ಮ ನಿರ್ಭರ ಭಾರತ ನಮ್ಮೆಲ್ಲರ ಗುರಿಯಾಗಬೇಕು ಎಂದರು.
ಸಂಸದರಾದ ಬಿ.ವೈ. ರಾಘವೇಂದ್ರರವರು #BYRaghavendra ಜಿಲ್ಲೆಗೆ ಅವಶ್ಯಕವಾದ ಕೆಲಸಗಳ ಕುರಿತು ನಿರಂತರವಾಗಿ ತಮ್ಮ ಸಂಪರ್ಕದಲ್ಲಿದ್ದು ಕಾಮಗಾರಿಗಳನ್ನು ತಂದಿದ್ದಾರೆ. ಶಿವಮೊಗ್ಗದಲ್ಲಿ ಹೊಸ ರಸ್ತೆಗಳಿಂದ ವ್ಯಾಪಾರ, ಕೈಗಾರಿಕೆ ಸೇರಿದಂತೆ ಸಮಗ್ರ ಅಭಿವೃದ್ದಿ ಆಗಲಿದೆ.
ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಲು ಹಾಗೂ ಹೊಸ ರಸ್ತೆ, ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದ್ದು ಭೂ ಸ್ವಾಧೀನ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆದು ವೇಗದಲ್ಲಿ ಕೆಲಸಗಳು ಆಗಬೇಕು. ಸಾಗರ-ಮರಕುಟುಕ ವೆರೆಗೆ ರಸ್ತೆ ಅಗಲೀಕರಣಕ್ಕೆ ಮಂಜೂರಾತಿ ನೀಡಲಾಗಿದೆ. ರಾ.ಹೆ 169 ಎ ರ ಆಗುಂಬೆಯಲ್ಲಿ ಟನಲ್ ನಿರ್ಮಾಣಕ್ಕೆ ಕೋರಿದ್ದು ಇದನ್ನು ಪರಿಶೀಲಿಸಿ ಮಂಜೂರಾತಿ ನೀಡಲಾಗುವುದು. 3 ಕಡೆ ಹೈಮಾಸ್ಟ್ ಲೈಟ್’ಗಳನ್ನು ಕೇಳಿದ್ದು ಆದೇಶ ನೀಡಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಮಾತನಾಡಿ, ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸಮಗ್ರ ಅಭಿವೃದ್ಧಿಗೊಳಿಸುವುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕನಸಾಗಿದೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ದಕ್ಷಿಣ ವಲಯಕ್ಕೆ ರೂ.6200 ಕೋಟಿ ಕಾಮಗಾರಿಗಳು ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ವಿಷಯ. ಅಭಿವೃದ್ದಿಗೆ ರಸ್ತೆಗಳು ಬಹು ಮುಖ್ಯ ಎಂದರು.
ಕಳೆದ 10 ವರ್ಷಗಳಲ್ಲಿ ನಿತಿನ್ ಗಡ್ಕರಿಯವರು ವಿಶೇಷ ಪ್ರಯತ್ನ ಮಾಡಿ ರಸ್ತೆಗಳನ್ನು ಅಭಿವೃದ್ದಿಪಡಿಸಿದ್ದಾರೆ. ರಾಜ್ಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು 5 ಬಾರಿ ಸಚಿವರನ್ನು ಭೇಟಿ ಮಾಡಿದ್ದು 12 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ. ಸ್ಥಳೀಯ ಶಾಸಕರು ಜಿಲ್ಲೆಯ 3 ರಸ್ತಗಳ ಉನ್ನತೀಕರಣಕ್ಕೆ ಮನವಿ ಮಾಡಿದ್ದು 1 ರಸ್ತೆಗೆ ಮಂಜೂರಾತಿ ನೀಡಿದ್ದು ಇನ್ನುಳಿದ 2 ನ್ನು ಹೊಸ ಬಜೆಟ್’ನಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿದರು. ಬಳ್ಳಾರಿ ಸಂಸದರಾದ ದೇವೇಂದ್ರಪ್ಪ, ವಿಧಾನ ಪರಿಷತ್ ಶಾಸಕರಾದ ರುದ್ರೇಗೌಡ, ಇತರೆ ಜನಪ್ರತಿನಿಧಿಗಳು, ಪಿಡಬ್ಲುö್ಯಡಿ ಮುಖ್ಯ ಇಂಜಿನಿಯರ್ ರವೀಂದ್ರ, ಜಿಲ್ಲಾಧಿಕಾರಿ ಗುರುರಾಜ ಹೆಗಡೆ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಇತರೆ ಅಧಿಕಾರಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post