ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸಂಸಾರದಲ್ಲಿ ಉಂಟಾದ ಭಿನ್ನಾಭಿಪ್ರಾಯ ಹಾಗೂ ಮಾನಸಿಕ ಬೇಸರದ ಹಿನ್ನೆಲೆಯಲ್ಲಿ 37 ವರ್ಷದ ವ್ಯಕ್ತಿಯೊಬ್ಬರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿಯ ದೇವರಾಜ ಅರಸು ಬಡಾವಣೆಯಲ್ಲಿ ನಡೆದಿದೆ.
ಮೃತರನ್ನು ಸುಶೀಲ್ ಕುಮಾರ್ (37) ಎಂದು ಗುರುತಿಸಲಾಗಿದ್ದು, ಅವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ, ಸುಶೀಲ್ ಕುಮಾರ್ ಅವರ ಪತ್ನಿ ಸರಳಾ ಸುಮಾರು ಐದು ತಿಂಗಳ ಹಿಂದೆ ಕುಟುಂಬದ ಮನಸ್ತಾಪದ ಹಿನ್ನೆಲೆಯಲ್ಲಿ ತಮ್ಮ ತವರು ಮನೆ ಸಕಲೇಶಪುರಕ್ಕೆ ತೆರಳಿದ್ದರು. ದೂರವಾಣಿ ಮೂಲಕ ಸಂಪರ್ಕದಲ್ಲಿದ್ದರೂ, ಪತ್ನಿ ದೂರವಾಗಿರುವ ವಿಚಾರವನ್ನು ಅವರು ಮನಸ್ಸಿಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಇದೇ ವೇಳೆ ಅವರು ಮದ್ಯಪಾನಕ್ಕೆ ಹೆಚ್ಚು ಒಳಗಾಗಿದ್ದು, ಕುಟುಂಬಸ್ಥರು ಹಲವು ಬಾರಿ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜುಲೈ 6ರಂದು ಸುಶೀಲ್ ಕುಮಾರ್ ಕೆಲಸಕ್ಕೆ ತೆರಳದೇ ಮನೆಯಲ್ಲೇ ಇದ್ದರು. ಸಂಜೆ ವೇಳೆ ಅವರ ತಾಯಿ ಸಂಬಂಧಿಕರೊಬ್ಬರನ್ನು ಆಸ್ಪತ್ರೆಗೆ ಭೇಟಿ ನೀಡಲು ತೆರಳಿ ಮರಳಿ ಮನೆಗೆ ಬಂದಾಗ, ಸುಶೀಲ್ ಕುಮಾರ್ ಕಾಣಿಸಿರಲಿಲ್ಲ. ಹುಡುಕಾಟ ನಡೆಸಿದಾಗ ಮಲಗುವ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ಬಟ್ಟೆಯಿಂದ ನೇಣು ಬಿಗಿದುಕೊಂಡಿರುವುದು ಪತ್ತೆಯಾಯಿತು.
ತಕ್ಷಣ ಅಕ್ಕಪಕ್ಕದವರ ನೆರವಿನಿಂದ ಅವರನ್ನು ಕೆಳಗಿಳಿಸಿ ಆಂಬುಲೆನ್ಸ್ ಮೂಲಕ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.
Also read: ಆಂಧ್ರಪ್ರದೇಶದಲ್ಲಿ ಹೀರೋ ಮೋಟೋಕಾರ್ಪ್ 3200+ ಕೋಟಿ ರೂ. ಹೂಡಿಕೆ
ಮೃತರ ತಂದೆ ಕೃಪಯ್ಯ ನೀಡಿದ ದೂರಿನಲ್ಲಿ, ಸಂಸಾರದ ಸಮಸ್ಯೆ, ಪತ್ನಿ ತವರು ಮನೆಗೆ ತೆರಳಿದ ಬೇಸರ ಅಥವಾ ಇತರ ವೈಯಕ್ತಿಕ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿಸಿದ್ದಾರೆ. ತಮ್ಮ ಮಗನ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲವೆಂದು ಸಹ ಸ್ಪಷ್ಟಪಡಿಸಿದ್ದಾರೆ.
ಘಟನೆ ಜುಲೈ 6ರಂದು ಸಂಜೆ 7.10ರಿಂದ 7.30ರ ಅವಧಿಯಲ್ಲಿ ನಡೆದಿದೆ ಎಂದು ದಾಖಲಾಗಿದ್ದು, ಜುಲೈ 7ರಂದು ಬೆಳಿಗ್ಗೆ ಲಿಖಿತ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








