ಕಲ್ಪ ಮೀಡಿಯಾ ಹೌಸ್ | ತುಮಕೂರು |
ಎಲ್‌ಐಸಿ ಪಾಲಿಸಿಯಿಂದ ಸಿಗುವ 30 ಲಕ್ಷ ರೂ. ಹಣದ ಆಸೆಗೆ ಅಣ್ಣನೇ ತನ್ನ ಸ್ವಂತ ತಮ್ಮನನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಬೈಕ್ ಅಪಘಾತವೆಂದು ಮೊದಲಿಗೆ ಕಂಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿ ನಿಜಾಂಶ ಬಹಿರಂಗಪಡಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, 35 ವರ್ಷದ ರಮೇಶ್ ಅವರನ್ನು ಅವರ ಅಣ್ಣ ಹನುಮಂತರಾಜು ಕೊಲೆ ಮಾಡಿ ಅದನ್ನು ರಸ್ತೆ ಅಪಘಾತವಾಗಿ ತೋರಿಸಲು ಯತ್ನಿಸಿದ್ದಾನೆ. ಮೃತ ರಮೇಶ್ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಕಳೆದ ಆರು ವರ್ಷಗಳಿಂದ ಬೆಂಗಳೂರಿನಲ್ಲಿ ಎಳನೀರು ವ್ಯಾಪಾರ ಹಾಗೂ ಮಂಡ್ಯದಲ್ಲಿ ಕಬ್ಬಿನ ರಸ ವ್ಯಾಪಾರ ಮಾಡುತ್ತಿದ್ದನು.
ತನ್ನ ಹೆಸರಲ್ಲಿ ಇರುವ ಎಲ್‌ಐಸಿ ಪಾಲಿಸಿಯಿಂದ ದೊಡ್ಡ ಮೊತ್ತದ ಹಣ ಸಿಗಲಿದೆ ಎಂಬ ಕಾರಣಕ್ಕೆ ಅಣ್ಣ ಸಂಚು ರೂಪಿಸಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿದ ಬಳಿಕ ಘಟನೆಗೆ ಅಪಘಾತದ ಬಣ್ಣ ಹಚ್ಚಲು ಆರೋಪಿಯು ನಾಟಕವಾಡಿದ್ದನು. ಆದರೆ ಪ್ರಕರಣದ ಪರಿಶೀಲನೆ ವೇಳೆ ಅನುಮಾನಾಸ್ಪದ ಅಂಶಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸುದೀರ್ಘ ತನಿಖೆ ನಡೆಸಿ ಸತ್ಯಾಂಶ ಪತ್ತೆಹಚ್ಚಿದ್ದಾರೆ.
ಪ್ರಾಥಮಿಕ ಮಾಹಿತಿಯಂತೆ, ಕುಟುಂಬದ ಒಳಗಿನ ಕಲಹ ಮತ್ತು ವೈಯಕ್ತಿಕ ವೈಷಮ್ಯವೂ ಈ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















