ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಡ್ಯ: ಕೃಷಿ ಕೂಲಿಕಾರರ ಹಿತಕಾಪಾಡುವ ಸಮಗ್ರ ಕಾನೂನು ರಚನೆ ಹಾಗೂ ಕೃಷಿ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸುವ ನಿರ್ಧಾರವನ್ನು ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.
ಸಿಲ್ವರ್ ಜ್ಯುಬಿಲಿ ಪಾರ್ಕಿನಿಂದ ಕೃಷಿ ಕೂಲಿಕಾರರು ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿ ಮನವಿ ಸಲ್ಲಿಸಿದರು.

ಕೇರಳ, ತ್ರಿಪುರ, ತಮಿಳುನಾಡು ರಾಜ್ಯದಲ್ಲಿ ಕೃಷಿ ಕೂಲಿಕಾರರು ಗ್ರಾಮೀಣ ಪ್ರದೇಶದ ಕೆಲಸಗಾರರಿಗೆ ಕನಿಷ್ಠ ವೇತನ, ತುಟ್ಟಿಭತ್ಯೆ, ಭವಿಷ್ಯ ನಿಧಿ, ಇಎಸ್‌ಐ ಹಾಗೂ ನಿವೃತ್ತಿ ವೇತನ ನೀಡುವ ಸಮಗ್ರ ಕಾನೂನು ಜಾರಿಯಲ್ಲಿದ್ದು. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಕಾನೂನು ರೂಪಿಸಲು ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಕೂಲಿ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸಲು ಮುಂದಾಗಬೇಕು. ಅಲ್ಲಿಯವರೆಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೀಡಲಾಗುವ ಸೌಲಭ್ಯವನ್ನು ಕೃಷಿ ಕೂಲಿಕಾರರಿಗೆ ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಎಲ್ಲಾ ಗ್ರಾಮಗಳಿಗೆ ವಿಸ್ತರಿಸಿ ಭ್ರಷ್ಟಾಚಾರ ಮುಕ್ತವಾಗಿ ಅನುಷ್ಠಾನಗೊಳಿಸಬೇಕು. ಕೆಲಸ ನೀಡಲಾಗದ ದಿನಗಳಲ್ಲಿ ನಿರುದ್ಯೋಗ ಭತ್ಯೆ ನೀಡಬೇಕು. ವಾರ್ಷಿಕ 200 ದಿನ ಕೆಲಸ ನೀಡಿ ದಿನಕ್ಕೆ 600ರೂ. ವೇತನ ನೀಡಬೇಕು ಎಂದು ಒತ್ತಾಯಿಸಿದರು.

ವಸತಿ ರಹಿತ ಕೂಲಿ ಕಾರ್ಮಿಕರಿಗೆ ನಿವೇಶನ, ವಸತಿ ಕಲ್ಪಿಸಲು ಭೂಸ್ವಾಧೀನಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಬೇಕು. ಸರ್ಕಾರಿ ಜಾಗಗಳಲ್ಲಿ ಬಡ ಜನತೆ ನಿರ್ಮಾಣ ಮಾಡಿರುವ ಮನೆಗಳನ್ನು ಸಕ್ರಮಗೊಳಿಸಬೇಕು. ಕೃಷಿ ಕೂಲಿಕಾರ ಕುಟುಂಬಗಳಿಗೆ ಷರತ್ತು ವಿಧಿಸದೆ ಬಿಪಿಎಲ್ ಕಾರ್ಡ್ ವಿತರಿಸಬೇಕು. ಪಡಿತರದಲ್ಲಿ ಅಕ್ಕಿ ವಿತರಣೆ ಬದಲಾಗಿ ಹಣ ನೀಡುವ ಚಿಂತನೆ ಕೈಬಿಡಬೇಕು. ಅಕ್ಕಿ ಜೊತೆಗೆ ಜೋಳ, ರಾಗಿ, ಸೀಮೆ ಎಣ್ಣೆ, ಬೆಲ್ಲ ವಿತರಿಸಬೇಕು ಎಂದು ಆಗ್ರಹಿಸಿದರು.
ಕೃಷಿ ಕೂಲಿ ಕಾರರಿಗೆ ಉಪಕಸುಬುಗಾಗಿ ಸಬ್ಸಿಡಿ ಸಾಲವನ್ನು ಶೇ.೧ರಷ್ಟು ದರದಲ್ಲಿ ೨ ಲಕ್ಷರೂ. ಸಾಲ ನೀಡಬೇಕು. ವಸತಿಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು. 2000 ಮಾಸಿಕ ನಿವೃತ್ತಿ ವೇತನ ನೀಡಬೇಕು. ವಲಸೆ ಕಾರ್ಮಿಕರ ಕಾಯ್ದೆ ಪರಿಷ್ಕರಿಸಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅವರಿಗೆ ಸೂಕ್ತ ಪರಿಸರದಲ್ಲಿ ವಸತಿ ಸೌಲಭ್ಯ ಕಲ್ಪಿಸಬೇಕು. ಬಡವರ ಬಗರ್‌ಹುಕುಂ ಸಾಗುವಳಿ ಪ್ರಕರಣ ಸಕ್ರಮ ತ್ವರಿತಗೊಳಿಸಬೇಕು. ಐದು ಎಕರೆ ಒಳಗಿನ ಭೂರಹಿತ ಬಗರ್‌ಹುಕುಂ ಸಾಗುವಳಿದಾರರನ್ನು ಕಂದಾಯ ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸಬಾರದು ಎಂದು ಮನವಿ ಮಾಡಿದರು.
ಕೃಷಿ ಮಾಡಲು ಬಯಸುವ ದಲಿತರು ಹಾಗೂ ದೇವದಾಸಿ ಮಹಿಳೆಯರಿಗೆ ತಲಾ ಎರಡು ಎಕರೆ ಕೃಷಿ ಭೂಮಿ ನೀಡಬೇಕು. ಪ್ರತಿ ಹಳ್ಳಿಗಳಿಗೂ ಸ್ಮಶಾನ ಸೌಲಭ್ಯ ಕಲ್ಪಿಸಬೇಕು. ಕೃಷಿ ಕೂಲಿಕಾರರಿಗೆ ಕೋರೋನ ಲಸಿಕೆ. ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕು. ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಕೂಲಿಕಾರ ಮಕ್ಕಳ ಪ್ರವೇಶಕ್ಕೆ ಅನುಕೂಲವಾಗಲು ವಿದ್ಯಾರ್ಥಿ ನಿಲಯಗಳ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಂ ಪುಟ್ಟ ಮಾದು, ಪ್ರಧಾನ ಕಾರ್ಯದರ್ಶಿ ಬಿ. ಹನುಮೇಶ್, ಮುಖಂಡರಾದ ಕೆ. ಹನುಮೇಗೌಡ, ಬಿ.ಎಂ. ಶಿವ ಮಲ್ಲಯ್ಯ, ಸರೋಜಮ್ಮ, ಅನಿತಾ, ಅಜಯ್, ಕೆ ಆರ್. ರಾಮಣ್ಣ, ಕೆ. ಬಸವರಾಜು, ಎನ್. ಸುರೇಂದ್ರ, ಶಿವಮೂರ್ತಿ, ಅಮಾಸಯ್ಯ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















