ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮಂಡ್ಯ ಕೃಷಿ ವಿಶ್ವವಿದ್ಯಾಲಯದ #Mandya Agricultural Univeristy ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಛತ್ರಿಬುದ್ಧಿ ನನಗಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ #H D Kumaraswamy ಅವರು ತಿರುಗೇಟು ನೀಡಿದ್ದಾರೆ.
ಈ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಮಂಡ್ಯ ಕೃಷಿ ವಿಶ್ವವಿದ್ಯಾಲಯ ಕುರಿತು ನನ್ನ ಬಗ್ಗೆ ಹುಟ್ಟಿಕೊಂಡಿರುವ ಸಂದೇಹಾತ್ಮಕ, ರಾಜಕೀಯ ದುರುದ್ದೇಶದ ಅಪಪ್ರಚಾರದ ನಡವಳಿಕೆ ದುಃಖಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಕೃಷಿ ವಿವಿ ಸ್ಥಾಪನೆ ಬಗ್ಗೆ ನನ್ನ ಹೃದಯಪೂರ್ವಕ ಸ್ವಾಗತವಿದೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ನಾನೆಂದೂ ಬೆರೆಸಿಲ್ಲ, ಇದು ನನ್ನ ವ್ಯಕ್ತಿತ್ವಕ್ಕೆ ಸಲ್ಲದ ನಡವಳಿಕೆ. ವಿವಿ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಛತ್ರಿಬುದ್ಧಿ ನನಗಿಲ್ಲ ಎಂದು ಟೀಕಾಕಾರರಿಗೆ ಅವರು ಟಾಂಗ್ ನೀಡಿದ್ದಾರೆ.
Also read: ಹುಟ್ಟಿನಿಂದಲೇ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 9 ವರ್ಷದ ಬಾಲಕನಿಗೆ ಯಶಸ್ವಿ “ಹೃದಯ ಕಸಿ”
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವನು ನಾನು. ಮಂಡ್ಯ ಜಿಲ್ಲೆ ಹಿತಕ್ಕೆ ಸಂಬಂಧಿಸಿ ಅಲ್ಲಿನ ಜನಪ್ರತಿನಿಧಿಯಾಗಿ ನನ್ನದೂ ಹೊಣೆಗಾರಿಕೆ ಇದೆ. ಈ ಬಗ್ಗೆ ನನ್ನಲ್ಲಿ ಗೊಂದಲ ಇಲ್ಲ, ಇದು ಸ್ಪಷ್ಟ. ಮುಖ್ಯಮಂತ್ರಿಯಾಗಿ ಮಂಡ್ಯ ಜಿಲ್ಲೆಗೆ ನೀಡಿರುವ ಬಜೆಟ್ ಕೊಡುಗೆ ಬಗ್ಗೆ ನಾನು ಹೊಸದಾಗಿ ಹೇಳಬೇಕಿಲ್ಲ. ನನಗೆ ರಾಜಕೀಯವಾಗಿ ಶಕ್ತಿ ತುಂಬಿದ, ರಕ್ತಸಂಬಂಧಕ್ಕೂ ಮೀರಿ ಅವಿನಾಭಾವ ಬಾಂಧವ್ಯದ ದ್ಯೋತಕವಾಗಿರುವ ಮಂಡ್ಯ ಜನರ- ನನ್ನ ನಡುವೆ ಹುಳಿ ಹಿಂಡುವ ವ್ಯರ್ಥ ಪ್ರಯತ್ನ ಬೇಡ ಎಂದು ಅವರು ಕಿವಿಮಾತು ಹೇಳಿದ್ದಾರೆ.
ನನ್ನನ್ನು ಸಂಸದನನ್ನಾಗಿ ಆಯ್ಕೆ ಮಾಡಿರುವ ಮಂಡ್ಯ ಜನತೆಗೆ ನಾನೆಂದಿಗೂ ಆಭಾರಿ. ಅದಕ್ಕೆ ತಕ್ಕಂತೆ ಕ್ಷೇತ್ರದಲ್ಲಿ ಅನುಷ್ಠಾನಗೊಳ್ಳಬೇಕಿರುವ ಕಾರ್ಯಕ್ರಮ, ಯೋಜನೆಗಳ ಬಗ್ಗೆ ಅವಿರತವಾಗಿ ಕೆಲಸ ಮಾಡುತ್ತಿದ್ದೇನೆ. ಕೇಂದ್ರ ಸಚಿವನಾಗಿ ಇಡೀ ರಾಜ್ಯದ ಮತ್ತು ಸಂಸದನಾಗಿ ಮಂಡ್ಯದ ಆಶೋತ್ತರಗಳ ಈಡೇರಿಕೆಗೆ ನಾನು ಬದ್ಧ, ಅದರಲ್ಲಿ ರಾಜಿ ಪ್ರಶ್ನೆ ಇಲ್ಲ ಎಂದು ಕೇಂದ್ರ ಸಚಿವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವ ತಿಳಿಗೇಡಿಗಳು, ಅದಕ್ಕೆ ತುಪ್ಪ ಸುರಿಯುವ ಸೋಗಲಾಡಿಗಳು ಸತ್ಯ ಅರಿತುಕೊಳ್ಳಲಿ ಎಂದು ಆಶಿಸುತ್ತೇನೆ ಎಂದು ಅವರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post